‘ಪವಿತ್ರ ಕುರ್ ಆನ್’ ಸೂಚಿಸಿದ ಮಾನವೀಯ ಮೌಲ್ಯಗಳನು ಮೈಗೂಡಿಸಿ ಕೊಳ್ಳುವಂತೆ ಪ್ರೇರೇಪಿಸುವ ಹಬ್ಬವೇ ರಂಜಾನ್ – ✍️ಡಿ.ಶಬ್ರಿನಾ ಮಹಮದ್ ಅಲಿ.

ಚಳ್ಳಕೆರೆ ಮಾ.22

ಸತ್ಯ, ಶಾಂತಿ, ತ್ಯಾಗ, ಪ್ರೀತಿ, ವಿಶ್ವಾಸ, ಸ್ನೇಹ, ಕರುಣೆ, ಮಮತೆ, ಸಹಬಾಳ್ವೆ, ನಿಸ್ವಾರ್ಥ, ಸಮಾನತೆ ಈ ಮೌಲ್ಯಗಳೆಲ್ಲವೂ ಬುದ್ಧಿ ಜೀವಿ ಮಾನವ ಬದುಕಿನ ಜೀವಾಳ! ಅವುಗಳ ಹೊರತಾಗಿ ನಾವು ಜೀವಿಸುತಿದ್ದೇವೆ ಯಾದರೆ ಆ ಬದುಕಿಗೆ ಅರ್ಥವೇ ಇಲ್ಲ ಎಂಬುದು ನನ್ನ ಮನದಾಳದ ಮಾತು!

ಪ್ರಿಯ ಓದುಗರೇ, ಇತಿಹಾಸದಲ್ಲಿನ ಎಲ್ಲಾ ಪ್ರವಾದಿಗಳು, ದಾರ್ಶನಿಕರು, ಸಂತರು, ಶರಣರು ಸಾರಿದ್ದು ಬದುಕಿನ ಇದೇ ಮೌಲ್ಯಗಳನ್ನ ಎಂಬುದು ನಾವೆಲ್ಲರೂ ಒಪ್ಪಲೇ ಬೇಕಾದ ಸಂಗತಿ.

ಈ ನಿಟ್ಟಿನಲ್ಲಿ ಪ್ರವಾದಿ ಮುಹಮ್ಮದ್ (ಸ) ರು ಮಾನವನ ಸುಂದರ ಬದುಕಿಗಾಗಿ ಮೌಲ್ಯಗಳಿಂದ ಕೂಡಿದ ‘ಪವಿತ್ರ ಕುರ್ ಆನ್’ ಅನ್ನು ಸೃಷ್ಟಿಕರ್ತನ ಅನುಗ್ರಹದಿಂದ ನಮಗೆ ದಯೆ ಪಾಲಿಸಿದ್ದಾರೆ. ಆ ಮೌಲ್ಯಗಳನ್ನು ಹಬ್ಬ-ಆಚರಣೆಗಳ ಮೂಲಕ ಇಸ್ಲಾಂ ಅನುಯಾಯಿಗಳಿಗೆ ತಿಳಿಸಲಾಗುತ್ತದೆ. ಅಂತಹ ಆಚರಣೆಯಲ್ಲಿ ರಂಜಾನ್ ಹಬ್ಬ ಅತ್ಯಂತ ಪವಿತ್ರವಾದುದ್ದಾಗಿದೆ.

ಈದ್-ಎ-ರಂಜಾನ್, ಕುತಬ್-ಎ-ರಂಜಾನ್, ಈದುಲ್ ಫಿತರ್ ಮೊದಲಾದ ಹೆಸರುಗಳಿಂದ ಪ್ರಸಿದ್ಧವಾದ ರಂಜಾನ್ ಹಬ್ಬವು ಮುಸ್ಲಿಮರ ದೊಡ್ಡ ಹಬ್ಬವಾಗಿದ್ದು,ಹಿಜರಿ ಶಕೆಯ ಒಂಬತ್ತನೇ ತಿಂಗಳು ರಂಜಾನ್ ಆಗಿದೆ.ಈ ತಿಂಗಳಲ್ಲಿ ಮುಸ್ಲಿಮರು ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ಈ ತಿಂಗಳಲಿ ದೈನಂದಿನ ಉಪವಾಸವನ್ನು ಆಚರಿಸುವುದು ಇಸ್ಲಾಂನ ಐದು ಸ್ತಂಭಗಳಲ್ಲಿ ಒಂದಾಗಿದೆ.

೧. ದಿನಕ್ಕೆ ಐದು ಹೊತ್ತಿನ ಪ್ರಾರ್ಥನೆಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು,

೨.’ಕುರ್ ಆನ್’ ನ ಕಲ್ಮಾ ಅಂದರೆ ಕಡ್ಡಾಯವಾಗಿ ಅನುಸರಿಸ ಬೇಕಾದ ವಿಧಿಗಳನ್ನು ಜೀವನ ಪರ್ಯಂತ ಅನುಸರಿಸುವುದು,

೩.ರಂಜಾನ್ ತಿಂಗಳ ರೋಜಾ ಅನುಸರಿಸುವುದು,

೪.ವರ್ಷಕ್ಕೊಂದು ಬಾರಿ ಕಡ್ಡಾಯದಾನ (ಝಕಾತ್) ನೀಡುವುದು

೫.ಕನಿಷ್ಟ ಜೀವಮಾನದಲ್ಲೊಮ್ಮೆ ಹಜ್ ಯಾತ್ರೆ ನಿರ್ವಹಿಸುವುದು)

ಇಸ್ಲಾಮಿಕ್ ಕ್ಯಾಲೆಂಡರ್ ಚಾಂದ್ರಮಾನವಾಗಿದ್ದು, ತಿಂಗಳುಗಳು ಅರ್ಧ ಚಂದ್ರನ ದರ್ಶನದೊಂದಿಗೆ ಪ್ರಾರಂಭವಾಗುತ್ತವೆ. ರಂಜಾನ್ ಮತ್ತು ಈದ್ ಎರಡೂ ಈ ದರ್ಶನವನ್ನು ಅವಲಂಬಿಸಿರುತ್ತದೆ.

ರಂಜಾನ್ ಹಬ್ಬದ ಪ್ರಮುಖ ಆಚರಣೆಗಳು

೧)ಉಪವಾಸ (ರೋಜಾ)

೨’)ಕುರ್ ಆನ್’ ಪಠಣ

೩)ಝಕಾತ್(ದಾನ/ಫಿತ್ರಾ)

೪)ಆತ್ಮಾವಲೋಕನ

೫)ಈದ್ ಉಲ್ ಫಿತರ್

೧)ಉಪವಾಸ:-

ಉಪವಾಸದ ಬಗ್ಗೆ ರೂಮಿ ಬರೆದ ಒಂದು ಅತೀಂದ್ರಿಯ ಕವಿತೆ ಹೀಗಿದೆ,

‘ಈ ಹೊಟ್ಟೆಯ ಖಾಲಿತನದಲ್ಲಿ ಎಂತಹ ಗುಪ್ತ ಮಾಧುರ್ಯವಿದೆ! ಮನುಷ್ಯನು ಖಂಡಿತವಾಗಿಯೂ ವೀಣೆಯಂತೆ, ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ,ಉದಾಹರಣೆಗೆ, ವೀಣೆಯ ಹೊಟ್ಟೆ ತುಂಬಿದರೆ, ಆ ಪೂರ್ಣ ವೀಣೆಯಿಂದ ಯಾವುದೇ ಉನ್ನತ ಅಥವಾ ಕೆಳಮಟ್ಟದ ದುಃಖವು ಉದ್ಭವಿಸುವುದಿಲ್ಲ’

— ಎಜೆ ಅರ್ಬೆರಿಯವರಿಂದ ಅನುವಾದಿಸಲಾಗಿದೆ. ಖಾಲಿ ಜೇಬು, ಖಾಲಿ ಹೊಟ್ಟೆ ಕಲಿಸುವ ಜೀವನ ಪಾಠಗಳು ಯಾವ ವಿಶ್ವವಿದ್ಯಾಲಯಗಳು ಕಲಿಸಲಾರವು ಎಂಬ ಮಾತು ಅಕ್ಷರಶಃ ಸತ್ಯ!

ರಂಜಾನ್ ತಿಂಗಳಲ್ಲಿ ಮುಸ್ಲಿಮರು ಸೂರ್ಯೋದಯ ( ಫಜ್ರ್) ದಿಂದ ಸೂರ್ಯಾಸ್ತದವರೆಗೆ (ಮಗ್ರಿಬ್) ಆಹಾರ ಮತ್ತು ಪಾನೀಯಗಳನ್ನು ತ್ಯಜಿಸಿ ಉಪವಾಸ ಆಚರಿಸುತ್ತಾರೆ, ಆದರೆ ರಾತ್ರಿಯ ಸಮಯದಲ್ಲಿ ತಿನ್ನಲು ಮತ್ತು ಕುಡಿಯಲು ಅನುಮತಿಸಲಾಗಿದೆ. “ಬೆಳಗಿನ ರಾತ್ರಿಯ ಕತ್ತಲೆಯ ದಾರದಿಂದ ಬೆಳಕಿನ ಬಿಳಿ ದಾರವು ಪ್ರತ್ಯೇಕಿಸಲ್ಪಡುವವರೆಗೆ” (2:187) ಮಾತ್ರ ತಿನ್ನುವುದು ಮತ್ತು ಕುಡಿಯುವುದನ್ನು ಅನುಮತಿಸಲಾಗಿದೆ ಎಂದು ‘ಪವಿತ್ರ ಕುರ್ ಆನ್’ ಸೂಚಿಸುತ್ತದೆ.

ಈ ಉಪವಾಸದಲ್ಲಿ ಸಹ್ರಿ ಮತ್ತು ಇಫ್ತಾರ್ ಎಂಬ ಎರಡು ಹಂತಗಳಿವೆ. ಸಹ್ರಿ (ಅಥವಾ ಸುಹೂರ್) ಎಂಬುದು ದಿನದ ಉಪವಾಸ ಪ್ರಾರಂಭವಾಗುವ ಮೊದಲು ಬೆಳಗಿನ ಜಾವದ ಭೋಜನವಾಗಿದೆ.

ಇಫ್ತಾರ್ ಎಂದರೆ ಸೂರ್ಯಾಸ್ತದ ನಂತರ ಉಪವಾಸ ಮುರಿಯಲು ಸೇವಿಸುವ ಊಟ, ಸಾಂಪ್ರದಾಯಿಕವಾಗಿ ಇದು ಖರ್ಜೂರದಿಂದ ಪ್ರಾರಂಭವಾಗುತ್ತದೆ.

ಉಪವಾಸ ಮುರಿಯಲು ಖರ್ಜೂರವೇ ಏಕೆ?

ವೈಜ್ಞಾನಿಕ ರೀತಿಯಲ್ಲಿ ನೋಡುವುದಾದರೆ ಖರ್ಜೂರದಲ್ಲಿ ಪ್ರೋಟೀನ್, ವಿವಿಧ ಜೀವಸತ್ವಗಳು ಹಾಗೂ ಖನಿಜಾಂಶಗಳು ಅಗಾಧ ಪ್ರಮಾಣದಲ್ಲಿ ಇರುತ್ತದೆ. ಖರ್ಜೂರದಲ್ಲಿ ಪಾಲಿಫಿನಾಲ್, ಮ್ಯಾಂಗನೀಸ್, ಪೊಟ್ಯಾಷಿಯಂ ಹಾಗೂ ಕಬ್ಬಿಣಾಂಶ ಕೂಡ ಇದೆ. ದಿನವಿಡೀ ಖಾಲಿ ಹೊಟ್ಟೆಯಿಂದ ಇರುವವರು ಒಮ್ಮೆಲೆ ಸಿಕ್ಕಿದ್ದೆಲ್ಲ ತಿಂದರೆ ಅಜೀರ್ಣ ಹಾಗೂ ಆಸಿಡಿಟಿ ಸಮಸ್ಯೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಖರ್ಜೂರ ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಯಾವುದೇ ರೀತಿಯ ಆರೋಗ್ಯ ಸಮಸ್ಯೆಯನ್ನು ನೀಡದೆಯೇ ದೇಹಕ್ಕೆ ಹೆಚ್ಚಿನ ಶಕ್ತಿ ಕೊಡುತ್ತದೆ. ಆದ್ದರಿಂದ ಮುಸ್ಲಿಂಮರು ಖರ್ಜೂರ ಸೇವಿಸುವ ಮೂಲಕ ರಂಜಾನ್ ಉಪವಾಸ ಮುರಿಯುತ್ತಾರೆ.

ರಂಜಾನ್ ಉಪವಾಸದಿಂದ ಇವರಿಗೆ ವಿನಾಯಿತಿ:-

ರಂಜಾನ್‌‌ನ ಉಪವಾಸ ಎಲ್ಲಾ ವಯಸ್ಕರಿಗೆ ಮತ್ತು ಆರೋಗ್ಯವಂತರಿಗೆ ಕಡ್ಡಾಯವಾಗಿದೆ. ಆದರೆ ದೈಹಿಕವಾಗಿ ಸಬಲರಲ್ಲದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಗರ್ಭಿಣಿಯರು, ಮಾನಸಿಕ ಸ್ಥಿಮಿತವಿಲ್ಲದಿರುವವರು, ದೈಹಿಕವಾಗಿ ಉಪವಾಸವಿರಲು ಅಸಮರ್ಥರಾಗಿರುವವರು, ಬಾಣಂತಿಯರಿಗೆ ವಿನಾಯಿತಿ ಇದೆ. ಇನ್ನೂ ಪ್ರೌಢಾವಸ್ಥೆಯನ್ನು ತಲುಪಿಲ್ಲದ ಮಕ್ಕಳಿಗೂ ಉಪವಾಸ ಕಡ್ಡಾಯವಲ್ಲ. ಆದರೆ ಚಿಕ್ಕವಯಸ್ಸಿನಿಂದಲೇ ಸಾಧ್ಯವಾದಷ್ಟು ಹೆಚ್ಚು ಉಪವಾಸಗಳನ್ನು ಹಿಡಿಯುವ ಮೂಲಕ ಮುಂದಿನ ದಿನಗಳಲ್ಲಿ ಉಪವಾಸವಿರಲು ತರಬೇತಿ ಪಡೆಯುವುದನ್ನು ಇಸ್ಲಾಂ ಬೆಂಬಲಿಸುತ್ತದೆ. ಕಾಯಿಲೆಯಿಂದ ಬಳಲುತ್ತಿರುವವರು, ಪ್ರಯಾಣದಲ್ಲಿರುವವರು ಹಾಗೂ ತಿಂಗಳ ರಜಾದಿನಗಳಲ್ಲಿರುವ ಮಹಿಳೆಯರಿಗೆ ಆ ದಿನಗಳಲ್ಲಿ ಉಪವಾಸ ನಿರ್ವಹಿಸಲು ಅಸಾಧ್ಯವಾದುದರಿಂದ ಈದ್ ದಿನದ ನಂತರದ ಯಾವುದೇ ಸೂಕ್ತವಾದ ದಿನಗಳಲ್ಲಿ ಇದನ್ನು ನಿರ್ವಹಿಸುವುದು ಕಡ್ಡಾಯವಾಗಿದೆ.

೨)’ಕುರ್ ಆನ್’ ಪಠಣ:-

ಇಸ್ಲಾಂ ಕ್ಯಾಲೆಂಡರ್‌ನಲ್ಲಿ ರಂಜಾನ್ ಮಾಸಕ್ಕೇಕೆ ಇಷ್ಟು ಮಹತ್ವ ನೀಡಲಾಗಿದೆ ಎಂದರೆ ಪವಿತ್ರವಾದ ‘ಕುರ್ ಆನ್’ಅಲ್ಲಾಹನಿಂದ ಪ್ರವಾದಿ ಮೊಹಮ್ಮದರ ಮೂಲಕ ಭೂಮಿಗೆ ಅವತೀರ್ಣ ಗೊಳ್ಳಲು ಪೂರ್ಣವಾಗಿ ಇಪ್ಪತ್ತಮೂರು ವರ್ಷಗಳು ಬೇಕಾಯಿತು. ಅದರ ಪ್ರಪ್ರಥಮ ವಾಕ್ಯಗಳು ಈ ತಿಂಗಳಲ್ಲಿಯೇ ಅವತೀರ್ಣ ಗೊಂಡುದುದರಿಂದ ರಂಜಾನ್ ಮಾಸಕ್ಕೆ ಅತಿಹೆಚ್ಚಿನ ಮಹತ್ವವಿದೆ. ರಂಜಾನ್ ತಿಂಗಳಲ್ಲಿ ಯಾವ ರಾತ್ರಿಯಂದು ಪ್ರಥಮ ವಾಕ್ಯಗಳು ಅವತೀರ್ಣ ಗೊಂಡವೋ ಅದಕ್ಕೆ ‘ಲೈಲತುಲ್ ಕದ್ರ್’ (ಶಕ್ತಿರಾತ್ರಿ)ಎಂದು ಕರೆಯುತ್ತಾರೆ.

ಈ ರಾತ್ರಿ ಯಾವುದೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ರಂಜಾನ್ ತಿಂಗಳ 21,23,25,27,29ನೇ ದಿನಾಂಕದಂದು ಅಂದರೆ ಕೊನೆಯ ಹತ್ತು ದಿನಗಳ ಬೆಸ್ ಸಂಖ್ಯೆಗಳ ದಿನಗಳ ಮುನ್ನಾ ರಾತ್ರಿ ಲೈಲತುಲ್ ಕದ್ರ್ ಆಗಿರಬಹುದು. ಇದರಲ್ಲಿ 27 ನೇ. ದಿನದ ಮುನ್ನಾರಾತ್ರಿ (ಅಂದರೆ 26 ನೇ. ದಿನದ ರಾತ್ರಿ) ಹೆಚ್ಚು ಸಂಭವನೀಯ ಎಂದು ಹೆಚ್ಚಿನವರು ನಂಬುತ್ತಾರೆ. ಈ ರಾತ್ರಿಯಲ್ಲಿ ನಡೆಸಿದ ಪ್ರಾರ್ಥನೆಗಳು ಉಳಿದ ಸಮಯದ ಪ್ರಾರ್ಥನೆಗಿಂತ ಸಾವಿರಾರು ಪಟ್ಟು ಹೆಚ್ಚು ಫಲಪ್ರದ ಎಂದು ಹೇಳಲಾಗಿದೆ.ಆದ್ದರಿಂದ ರಂಜಾನ್ ತಿಂಗಳಲಿ ‘ಕುರ್ ಆನ್’ ಪಠಣ ಮಾಡುವ ಮೂಲಕ ಬದುಕಿನ ಮೌಲ್ಯಗಳನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ.

೩)ಝಕಾತ್(ದಾನ/ಫಿತ್ರಾ):-

ಮಾನವ ಬದುಕಿನ ತಲ್ಲಣಗಳಲ್ಲಿ ಹಸಿವು, ಬಡತನ, ಅಸಮಾನತೆಗಳು ಪ್ರಮುಖವಾಗಿವೆ. ಅದನ್ನರಿತ ಪ್ರವಾದಿಯವರು ಅವುಗಳನ್ನ ನಿರ್ಮೂಲನೆ ಮಾಡುವ ಸಲುವಾಗಿ ಜಕಾತ್ ಪರಿಕಲ್ಪನೆ ನೀಡಿ ಮಹಾ ಮಾನವತವಾದಿ ಯಾಗಿದ್ದಾರೆ.

ರಂಜಾನ್ ಹಬ್ಬ ‘ದಾನದ ಹಬ್ಬ’ವೆಂದೇ ಪ್ರಸಿದ್ಧವಾಗಿದೆ. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತ ಧಾರ್ಮಿಕ ವ್ಯಕ್ತಿಯು ಬಡವನಿಗೆ, ಹಸಿದವನಿಗೆ ದಾನದ ಮೂಲಕ ಸಹಾಯ ಮಾಡುತ್ತಾನೆ. ಇಸ್ಲಾಂ ಶ್ರೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಇದು ಒಂದಾಗಿದೆ. ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದ ಉದ್ದೇಶ.ಜಕಾತ್ ಗೆ ಸಂಬಂಧಿಸಿದಂತೆ ‘ಕುರ್ ಆನ್’ ಅಲ್ಲಿರುವ ಕೆಲ ವಾಕ್ಯಗಳು ಹೀಗಿವೆ.

“ನಾವು ನಿಮಗೆ ಕೇವಲ ದೇವ ಸಂಪ್ರೀತಿಗಾಗಿ ಉಳಿಸುತ್ತಿದ್ದೇವೆ ನಿಮ್ಮ ಪ್ರತಿಫಲವನ್ನಾಗಲಿ ಕೃತಜ್ಞತೆ ಯಾಗಲಿ ನಾವು ಬಯಸುವುದಿಲ್ಲ” (ಪವಿತ್ರ ಕುರ್ ಆನ್ 76:9)

“ಸತ್ಯ ವಿಶ್ವಾಸಿಗಳೇ ಕೇವಲ ತೋರಿಕೆಗೆ ಖರ್ಚು ಮಾಡುವಂತೆ ನಿಮ್ಮ ದಾನ ಧರ್ಮಗಳ ಉಪಕಾರ ಭಾರವಿರಿಸಿ ಮತ್ತು ಬಡವರ ಮನ ನೋಯಿಸಿ ವ್ಯರ್ಥ ಗೊಳಿಸ ಬೇಡಿರಿ ” (ಪವಿತ್ರ ಕುರ್ ಆನ್ 2: 264.)

“ಅವರು ನೀಡುವುದನ್ನೆಲ್ಲ ದೇವ ಮಾರ್ಗದಲ್ಲಿ ನೀಡುತ್ತಾರೆ ಆದರೆ ಅವರ ಹೃದಯಗಳು ಅವರಿಗೆ ತಮ್ಮ ಪ್ರಭುವಿನ ಬಳಿ ಮರಳಲಿಕ್ಕಿದೆ ಎಂಬ ಭಯದಿಂದ ಕಂಪಿಸುತ್ತಿರುತ್ತದೆ” (ಪವಿತ್ರ ಕುರ್ ಆನ್ 23: 60)

“ಸತ್ಯ ವಿಶ್ವಾಸಿಗಳೇ ನಿಮ್ಮ ಶುದ್ಧ ಗಳಿಕೆಯನ್ನು ವ್ಯಯಿಸಿರಿ (ಪವಿತ್ರ ಕುರ್ ಆನ್ 2: 267.)೪)

ಆತ್ಮಾವಲೋಕನ:-

ರಂಜಾನ್‌ ತಿಂಗಳ ರೋಜಾ ಅವಧಿಯಲ್ಲಿ ಕೇವಲ ಅನ್ನಾಹಾರಗಳನ್ನು ತ್ಯಜಿಸುವುದು ಮಾತ್ರ ಉಪವಾಸವಲ್ಲ. ಮೂಲತಃ ಮನಸ್ಸಿನಲ್ಲಿ ಅನ್ನಾಹಾರದ ಸಹಿತ ಯಾವುದೇ ಬಯಕೆಗಳನ್ನು ಹೊಂದದಿರುವುದು, ಸುಳ್ಳು ಆಡದಿರುವುದು, ಕೆಟ್ಟದ್ದನ್ನು ಯೋಚಿಸದಿರುವುದು, ಲೈಂಗಿಕ ಕಾಮನೆಗಳನ್ನು ಕೆರಳಿಸದಿರುವುದು, ಚಾಡಿ ಹೇಳದಿರುವುದು ಮೊದಲಾದವುಗಳಿಂದ ಮನಸ್ಸನ್ನು ನಿಗ್ರಹಿಸುವುದು ಕಡ್ಡಾಯವಾಗಿದೆ. ಅಷ್ಟೇ ಏಕೆ, ಸುವಾಸನೆಯನ್ನು ಅಘ್ರಾಣಿಸುವುದು, ರುಚಿ ನೋಡುವುದು ಮತ್ತು ಉಗುಳು ನುಂಗುವುದನ್ನೂ ರೋಜಾ ಅವಧಿಯಲ್ಲಿ ನಿಷೇಧಿಸಲಾಗಿದೆ.

ದೇಹದ ಶುದ್ಧೀಕರಣ, ಮನದ ಶುದ್ಧೀಕರಣ, ದೇವಸ್ಮರಣೆ ಹಾಗೂ ಬಡವರಿಗೆ ಸಹಾಯ ಮಾಡುವ ಉನ್ನತ ಗುಣವನ್ನು ರೂಢಿ ಯಾಗಿಸುವುದು ಈ ಹಬ್ಬದ ಪ್ರಧಾನ ಉದ್ದೇಶ ವೆನ್ನಬಹುದು. ಪ್ರವಾದಿಯವರು ಈ ಘನ ಉದ್ದೇಶವನ್ನು ಈ ಕೆಳಗಿನ ವಾಕ್ಯಗಳ ಮೂಲಕ ಘೋಷಿಸಿದ್ದಾರೆ.

“ಯಾರು ಉಪವಾಸ ಆಚರಿಸಿಯು ಸುಳ್ಳು ಹೇಳುವುದನ್ನು ಮತ್ತು ಸುಳ್ಳು ವರ್ತಿಸುವುದನ್ನು ತೊರೆಯಲಿಲ್ಲವೋ ಅವರು ಅನ್ನ ಪಾನೀಯಗಳನ್ನ ತೊರೆಯ ಬೇಕೆಂದು ಅಲ್ಲಾಹನಿಗೆ ಯಾವ ಆಸಕ್ತಿಯು ಇಲ್ಲ (ಬುಖಾರಿ)

“ಯಾರು ಸತ್ಯವಿಶ್ವಾಸ ಮತ್ತು ಆತ್ಮಾವಲೋಕನದೊಂದಿಗೆ ರಂಜಾನ್ ತಿಂಗಳ ಉಪವಾಸ ಆಚರಿಸುವರು ದೇವನು ಅವರ ಗತ ಪಾಪಗಳನ್ನು ಕ್ಷಮಿಸುವನು” ಉಪವಾಸ ವ್ರತದ ಉದ್ದೇಶವೇ ಜೀವನವನ್ನು ಸಂಸ್ಕರಿಸುವುದಾಗಿದೆ ಆದ್ದರಿಂದ ಉಪವಾಸದ ವೇಳೆ ಎಲ್ಲಾ ಕೆಡುಕುಗಳಿಂದಲೂ ಪೂರ್ಣವಾಗಿ ದೂರವಿರುವ ಪ್ರಯತ್ನ ಮಾಡಬೇಕು. ಪ್ರವಾದಿ ಹೀಗೆ ಹೇಳಿರುವರು.

“ಉಪವಾಸ ವ್ರತವು ಗುರಾಣಿಯಾಗಿದೆ. ನಿಮ್ಮ ಪೈಕಿ ಯಾರಾದರೂ ಉಪವಾಸ ಆಚರಿಸುತ್ತಿದ್ದರೆ ಅವನು ತನ್ನ ಬಾಯಿಯಿಂದ ಯಾವುದೇ ಅಶ್ಲೀಲ ಮಾತು ಹೊರಡಿಸದಿರಲಿ, ಗುಲ್ಲು ಗಲಿಭೆಗಳು ಎಬ್ಬಿಸದಿರಲಿ. ಯಾರಾದರೂ ಅವನನ್ನ ಬೈದರೆ ಅಥವಾ ಅವನ ಜಗಳ ಕೇಳಿದರೆ ತಾನು ಉಪವಾಸ ಆಚರಿಸಿದ್ದೇನೆ ಎಂಬುದನ್ನು ಸ್ಮರಿಸಿ ಸುಮ್ಮನಿರಲಿ (ಬುಕಾರಿ ಮುಸ್ಲಿಂ)

“ಧರ್ಮ ಸಮತವಾಗಿಯೇ ಸಂಪಾದಿಸಿರಿ ನಿಶಿದ್ಧ ಸಂಪಾದನೆಯಿಂದ ಬೆಳೆದ ಶರೀರದ ಯಾವ ಆರಾಧನೆಯು ಸ್ವೀಕೃತವಾಗುವುದಿಲ್ಲ ಎಂದು ‘ಕುರ್ ಆನ್’ ಹೇಳುತ್ತದೆ.

ಪ್ರವಾದಿ ಈ ರೀತಿ ಹೇಳಿರುವರು “ಯಾವ ದೇಹ ನಿಷಿದ್ಧ ಸಂಪಾದನೆಯಿಂದ ಬೆಳೆದಿದೆಯೋ ಅದು ನರಕಕ್ಕೆ ಯೋಗ್ಯ”

ಎಂದಿದ್ದಾರೆ. ಅಂದರೆ ಇದರ ಅರ್ಥ ಇಸ್ಲಾಂ ಅನುಯಾಯಿಗಳು ನ್ಯಾಯಮಾರ್ಗದಲಿ ಮಾತ್ರ ಹಣ ಗಳಿಸ ಬೇಕೆಂಬುದಾಗಿದೆ.

೫)ಈದ್ ಉಲ್ ಫಿತರ್:-

ಇದು ರಂಜಾನಿನ ನಂತರದ ತಿಂಗಳಾದ ಶವ್ವಾಲ್ ಒಂದಕ್ಕೆ ಆಚರಿಸಲಾಗುತ್ತದೆ. ಅಂದು ಉಪವಾಸವಿಡುವಂತಿಲ್ಲ. ಪ್ರಾಥಃ ಬೇಗನೆ ಎದ್ದು ಸ್ನಾನ ಮಾಡಿ ಹೊಸ/ಉತ್ತಮ ಬಟ್ಟೆಯನ್ನು ಧರಿಸಿ ನಮಾಜ್ಹಿನ ನಂತರ ಅಲ್ಲಾಹನ ಹಿರಿಮೆ ಮಹಿಮೆ ಉಚ್ಚ ಸ್ವರದಲ್ಲಿ ಹೇಳುತ್ತಾ ಮನೆಗೆ ಬಂದು ಏನಾದರು ತುಸು ತಿಂದು ಮತ್ತೆ ಈದ್ಗಾಹ್ ಮೈದಾನಿನಲ್ಲಿ ಎಲ್ಲರೂ ಸೇರಿ ಹಬ್ಬದ ನಮಾಝ್ ನೆರವೇರಿಸಲಾಗುತ್ತದೆ.

ಮಸೀದಿಗೆ ಹೋಗುವಾಗ ಅಲ್ಲಿ ನಮಾಜ್ಹ್ ಪ್ರಾರಂಭವಾಗುವವರೆಗೂ ದೇವನ ಮಹಾನತೆಯನ್ನು ಹೊಗಳುತ್ತಾ ಕೃತಜ್ಞತೆ ಸಲ್ಲಿಸಲಾಗುತ್ತದೆ. ನಮಾಜ್ಹಿನ ನಂತರ ಜನರಿಗೆ ಉಪವಾಸದ ಈ ತಿಂಗಳಲ್ಲಿ ಗಳಿಸಿದ ಪುಣ್ಯ ಫಲವನ್ನು ಮತ್ತು ಆ ಪಡೆದ ತರಬೇತಿಯನ್ನು ಹಾಳು ಗೆಡಹದಂತೆ ಮುಂಬರುವ ಹನ್ನೊಂದು ತಿಂಗಳಿಗಾಗಿ ಜಾಗೃತರಾಗಿ ದೇವಾದೇಶಗಳನ್ನು ಪಾಲಿಸುತ್ತಾ ಜೀವಿಸಲು ಪ್ರವಚನವನ್ನು ನೀಡಲಾಗುತ್ತದೆ. ತಿಂಗಳಿಡೀ ಅತೀ ಹೆಚ್ಚು ದಾನ, ಕಡ್ಡಾಯ ದಾನ ಝಕಾತ್ ನೀಡಿ ಬಡವರ ದರಿದ್ರರ ಕಷ್ಟ ದುಖಗಳಿಗೆ ಸ್ಪಂದಿಸುತ್ತಾ ಕಳೆದಿದ್ದರೂ ಈ ಹಬ್ಬದ ನಮಾಜಿನ ಮೊದಲು ಬಡವರಿಗೆ ಹಬ್ಬ ಆಚರಿಸುವಂತೆ ಅಕ್ಕಿಯನ್ನೋ, ಇತರ ಖಾದ್ಯ ಧಾನ್ಯಗಳನ್ನೂ, ಖರ್ಜೂರ, ದ್ರಾಕ್ಷೆಗಳನ್ನೋ ನೀಡಬೇಕಾಗಿದೆ ಈ ದಾನವನ್ನು ‘ಝಾಕಾತುಲ್ ಫಿತರ್’ ಎನ್ನಲಾಗುತ್ತದೆ. ಅದನ್ನು ಈದ್ ನಮಾಜ್ಹಿನ ನಂತರ ನೀಡುವಂತಿಲ್ಲ. ಈ ಫಿತರ್ ದಾನ ದಿಂದಾಗಿ ಈ ಹಬ್ಬಕ್ಕೆ ಈದುಲ್ ಫಿತರ್ ಎಂದು ಹೆಸರಿಸಲಾಗಿದೆ.

ಈ ಹಬ್ಬದ ನಂತರ ಪರಸ್ಪರ ಹಸ್ತಲಾಘವ, ಮಾಡುತ್ತಾ ಆಲಂಗಿಸುತ್ತ ಈದ್ ಮುಬಾರಾಕನ್ನು ,

ರಂಜಾನ್ ಮುಬಾರಕ್:

(ಪೂಜ್ಯ ರಂಜಾನ್)

ರಂಜಾನ್ ಕರೀಮ್:-

(ಉದಾರ ರಂಜಾನ್)

ತಕಬ್ಬಲ್ ಅಲ್ಲಾಹ್:-

(“ದೇವರು ನಿಮ್ಮ ಪ್ರಾರ್ಥನೆ ಮತ್ತು ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸಲಿ)ಎಂಬ ನುಡಿಗಟ್ಟುಗಳಿಂದ ಹಾರೈಸುತ್ತಾ ಶುಭ ಕೋರುತ್ತಾರೆ.

ಪರಸ್ಪರ ಮನೆಗಳಿಗೆ ಭೇಟಿ ನೀಡುತ್ತ ಸೌಹಾರ್ದತೆಯನ್ನು ಎತ್ತಿ ಹಿಡಿಯುತ್ತಾರೆ.

ಒಟ್ಟಿನಲ್ಲಿ ಹೇಳುವುದಾದರೆ ನಮಾಜ್ ಮಾಡುವ ಮೂಲಕ ದೇವನಿಗೆ ಕೃತಜ್ಞತೆ ಸಲ್ಲಿಸುವುದು, ಉಪವಾಸದ ಮೂಲಕ ಬಡವರ ನಿರ್ಗತಿಕರ ಸಂಕಷ್ಟಗಳನ್ನು ಅರಿತು ಅವರ ಹಸಿವು ನೀಗುವಿಕೆಗೆ ಸಹಾಯ ಮಾಡುವುದು, ‘ಕುರ್ ಆನ್’ ಪಠಿಸುವ ಮೂಲಕ ಬದುಕಿನ ಮೌಲ್ಯಗಳನ್ನು ಮನದಲ್ಲಿ ದೃಢೀಕರಿಸಿಕೊಂಡು ಅದರಂತೆ ನಡೆಯುವುದು, ಆತ್ಮಾವಲೋಕನದ ಮೂಲಕ ನಮ್ಮಿಂದಾದ ತಪ್ಪುಗಳನ್ನ ಅರಿತು ಅವುಗಳನ್ನ ಸರಿ ಮಾಡಿಕೊಳ್ಳುವುದು, & ಈದ್ ನ ದಿನ ಪರಸ್ಪರ ಭೇಟಿಯ ಮೂಲಕ ಜನರೊಂದಿಗೆ ಅತ್ಮೀಯ ಭಾಂದವ್ಯ ಬೆಳೆಸುವುದು ರಂಜಾನ್ ತಿಂಗಳ ಪ್ರಮುಖ ಉದ್ದೇಶವಾಗಿದೆ.

ಒಂದು ಹೊಸ ಜೀವನವನ್ನು ಗತಿಸಿ ಹೋದ ಜೀವನಕ್ಕಿಂತ ಉತ್ತಮ ರೀತಿಯಲ್ಲಿ ನಡೆಸುವ ಹಾದಿಯಲ್ಲಿ ಸಾಗುವುದು ಪ್ರತಿಯೊಬ್ಬ ಇಸ್ಲಾಂ ಅನುಯಾಯಿಯ ಕರ್ತವ್ಯವಾಗಿದೆ. ಆದ್ದರಿಂದ,’ಕುರ್ ಆನ್’ ನ ಆಶಯದಂತೆ ಪ್ರವಾದಿಯವರು ಸೂಚಿಸಿದ ಸತ್ಯ,ಶಾಂತಿ,ಸನ್ನಡತೆ,ದಾನ,ಕರುಣೆ,ಸಹಬಾಳ್ವೆ ಸಮಾನತೆ ಇನ್ನಿತರ ಈ ಮೌಲ್ಯಗಳೆ ನಮ್ಮ ಬದುಕಿನ ಜಪವಾಗಲಿ; ಮಾನವೀಯತೆ ನಮ್ಮ ಉಸಿರಾಗಲಿ.

ಧನ್ಯವಾದಗಳು.

ಡಿ.ಶಬ್ರಿನಾ ಮಹಮದ್ ಅಲಿ

ಲೇಖಕಿ,ಚಳ್ಳಕೆರೆ,

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button