ಖ್ಯಾತ ಜಾನಪದ ಕಲಾವಿದ ಶ್ರೀ ಉಮೇಶ್ ನಾಯ್ಕ್ – ಅವರು ಬೆಳೆದು ಬಂದ ಸಾಧನೆಯ ಹಾದಿ.
ನಾಗರಕಟ್ಟೆ ಏ.08

ಕಲೆ ಎಲ್ಲರಲ್ಲಿಯೂ ಇರುತ್ತದೆ ಆದರೆ ತನಗೆ ಬೇಕಾದವರನ್ನು ಆರಿಸಿ ಕೊಳ್ಳುತ್ತದೆ ಎಂಬ ಮಾತಿನಂತೆ ಗ್ರಾಮೀಣ ಸೊಗಡು ಸಂಸ್ಕೃತಿಯ ನಾಡಿನ ಜೀವಾಳವಾಗಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಪ್ರತಿಭೆ ಚಿನ್ನ ಸಮುದ್ರದ ಜನಪದ ಗಾಯಕ ಉಮೇಶ್ ನಾಯ್ಕ್ ಅವರು ತಮ್ಮ ಪರಿಶ್ರಮ ಮತ್ತು ಕಂಠಸಿರಿಯ ಮೂಲಕ ಸಂಗೀತದ ಜೋಳಿಗೆ ಹಿಡಿದು ರಾಜ್ಯದಾದ್ಯಂತ ಗಮನ ಸೆಳೆದಿದ್ದಾರೆ.
1982 ರ ಜೂನ್ 12 ರಂದು ಬಡ ಕುಟುಂಬದಲ್ಲಿ ಜನಿಸಿದ ಉಮೇಶ್ ನಾಯ್ಕ್ ಅವರು ಕಡು ಬಡತನದಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗ್ರಾಮದಲ್ಲಿಯೇ ಪೂರ್ಣ ಗೊಳಿಸಿ, ನಂತರ ನರಗನಹಳ್ಳಿ ಶಾಲೆಯಲ್ಲಿ 10 ನೇ. ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದರು. ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡುತ್ತಾ, ತಮ್ಮ ವಂಶ ಪಾರಂಪರ್ಯವಾಗಿ ಬಂದ ಜನಪದ ಗಾಯನವನ್ನು ಮುಂದುವರಿಸಿ ಕೊಂಡು ಬಂದಿದ್ದಾರೆ.
ಬಾಲ್ಯದಿಂದಲೇ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು ಭಾವ ಗೀತೆ, ಜಾಗೃತಿ ಗೀತೆ, ಲಂಬಾಣಿ ಹಾಡುಗಳು, ಲಾವಣಿ, ಮಕ್ಕಳ ಗೀತೆಗಳು ಸೇರಿದಂತೆ ವಿವಿಧ ಜನಪದ ಶೈಲಿಗಳಲ್ಲಿ ಹಾಡಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರ ಗಾಯನ ಕಲೆ ಗಮನಿಸಿದ ಸ್ಥಳೀಯ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ ಪ್ರೋತ್ಸಾಹಿಸಿವೆ.
ಇತ್ತೀಚೆಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಉಮೇಶ್ ನಾಯ್ಕ್ ಅವರ ಗಾಯನ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಇವರ ಕಂಠಸಿರಿಗೆ ಮೆಚ್ಚಿದ ಅಭಿಮಾನಿಗಳು ಇವರಿಗೆ “ಗಾನ ಗಾರುಡಿಗ” ಎಂಬ ಬಿರುದು ನೀಡಿ ಗೌರವಿಸಿದ್ದಾರೆ.
ಕಳೆದ 25 ವರ್ಷಗಳಿಂದ ನಿರಂತರವಾಗಿ ಜನಪದ ಕಲಾ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಉಮೇಶ್ ನಾಯ್ಕ್ ಅವರು ರಾಜ್ಯದ ಮೂಲೆ ಮೂಲೆಯಲ್ಲಿಯೂ ತಮ್ಮ ಗಾಯನದ ಮೂಲಕ ಹೆಸರು ಮಾಡಿದ್ದಾರೆ. ಬಂಜಾರ ಭಾಷಾ ಅಕಾಡೆಮಿಯ ಮಾಜಿ ಸದಸ್ಯರಾಗಿರುವ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. 2024 ನೇ. ಸಾಲಿನ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸೇರಿದಂತೆ ವಾಲ್ಮೀಕಿ ಸಮಾಜದಿಂದಲೂ ರಾಜ್ಯ ಮಟ್ಟದ ಗೌರವ ದೊರೆತಿದೆ. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತವೂ ಇವರ ಕಲಾ ಸೇವೆಯನ್ನು ಮೆಚ್ಚಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ.
ಬಡತನದ ನಡುವೆಯೂ ಧೃತಿಗೆಡದೆ ತಮ್ಮ ಕಲೆಯನ್ನು ಮುಂದುವರಿಸುತ್ತಿರುವ ಉಮೇಶ್ ನಾಯ್ಕ್ ಅವರು, “ದೇವರು ಬಡತನ ಕೊಟ್ಟರೂ ಉತ್ತಮ ಕಂಠವನ್ನು ದಾನ ಮಾಡಿದ್ದಾನೆ” ಎಂದು ವಿನಯದಿಂದ ಹೇಳುತ್ತಾರೆ. ತಮ್ಮ ಗಾಯನಕ್ಕೆ ಅವಕಾಶ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾರೆ.
ಇಂದಿನ ಆಧುನಿಕ ಯುಗದಲ್ಲಿ ಜನಪದ ಕಲೆಗಳು ಅಳಿವಿನ ಅಂಚಿನಲ್ಲಿರುವಾಗ, ಅವುಗಳನ್ನು ಉಳಿಸಿ ಬೆಳೆಸಲು ತಮ್ಮ ಜೀವನವನ್ನೇ ಸಮರ್ಪಿಸಿರುವ ಉಮೇಶ್ ನಾಯ್ಕ್ ಅವರು ಯುವಕರಿಗೆ ಮಾದರಿ ಯಾಗಿದ್ದಾರೆ.
ಜನಪದ ಕಲೆ ಉಳಿಸುವ ಹಾದಿಯಲ್ಲಿ ಉಮೇಶ್ ನಾಯ್ಕ್ ಅವರ ಸಾಧನೆ ಶ್ಲಾಘನೀಯವಾಗಿದ್ದು, ಇಂತಹ ಕಲಾವಿದರಿಗೆ ಇನ್ನಷ್ಟು ಪ್ರೋತ್ಸಾಹ ಮತ್ತು ಸರ್ಕಾರಿ ಮಾನ್ಯತೆ ದೊರೆಯಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.

ವರದಿ:ಹನುಮಂತ.ನಾಯ್ಕ ಸಿ
ಜಿಲ್ಲಾ ಅತ್ಯುತ್ತಮ ಶಿಕ್ಷಕರು ಹಾಗೂ
ಯುವ ಸಾಹಿತಿಗಳು ನಾಗರಕಟ್ಟೆ
