“ಒಂಟಿಯಾಗಿದ್ದರೇನು ಭಗವಂತವಿಲ್ಲವೇನು ನಮ್ಮೊಂದಿಗೆ”…..

ನಮ್ಮ ಬದುಕಿನ ಮೊದಲ ಉಸಿರು ಶುರುವಾಗಿದ್ದೇ ಏಕಾಂತದಲ್ಲಿ. ಒಂಬತ್ತು ತಿಂಗಳು ತಾಯಿಯ ಗರ್ಭದ ಕತ್ತಲೆಯಲ್ಲಿ ಇದ್ದಾಗಲೂ ನಮ್ಮ ಪ್ರಾಣದ ಮಿಡಿತ ನಮಗಷ್ಟೇ ಕೇಳಿಸುತ್ತಿತ್ತು. ಆ ಸುಂದರ ಬಂಧನದಿಂದ ಕಳಚಿಕೊಂಡು ಹೊರ ಬಂದಾಗ ನಮ್ಮ ಜೊತೆಗೆ ಯಾವ ಆಸ್ತಿ ಇರಲಿಲ್ಲ ಯಾವ ಆಭರಣವಿರಲಿಲ್ಲ, ಕಡೆಗೆ ನಾವು ತೊಡಲು ಒಂದು ಬಟ್ಟೆಯೂ ಇರಲಿಲ್ಲ. ನಾವು ಈ ಭೂಮಿಗೆ ಬಂದಾಗ ನಮ್ಮ ಕೈಗಳು ಮುಚ್ಚಿದ್ದವು ಅಂದರೆ ನಾವು ಏನನ್ನೂ ತರಲಿಲ್ಲ ಎಂಬ ಸಂಕೇತವದು.

ನಮ್ಮ ಜೊತೆಗೆ ಬಂದವರು ಯಾರೂ ಇಲ್ಲ. ತಂದೆ, ತಾಯಿ, ಅಣ್ಣ-ತಮ್ಮಂದಿರು ಎಲ್ಲರೂ ನಾವು ಬಂದ ಮೇಲೆ ಸಿಕ್ಕ ಸಂಬಂಧಗಳು. ಈ ಲೋಕಕ್ಕೆ ಪರಿಚಯವಾದ ಮೇಲೆ ನಾವು ನಮ್ಮವರು ಎಂದು ಬೆಳೆಸಿಕೊಂಡ ಮಾಯೆಯ ಪ್ರಪಂಚವಿದು. ಆದರೆ ವಾಸ್ತವವೇನೆಂದರೆ, ಹುಟ್ಟುವಾಗ ನಾವು ಹೇಗೆ ಒಬ್ಬರೇ ಬಂದೆವೋ, ಹೋಗುವಾಗಲೂ ನಮ್ಮ ನೆರಳನ್ನೂ ಕೂಡಾ ಜೊತೆಗೆ ಕೊಂಡೊಯ್ಯಲು ಸಾಧ್ಯವಿಲ್ಲ.ನಾವಿಲ್ಲಿ ಕಲೆಹಾಕುವ ಅಂತಸ್ತು, ಹಣ, ಕೀರ್ತಿ ಎಲ್ಲವೂ ಬಾಡಿಗೆ ಮನೆಯ ವಸ್ತುಗಳಿದ್ದಂತೆ. ಕೊನೆಯಲ್ಲಿ ನಮ್ಮ ಜೊತೆ ಬರುವುದು ನಾವು ಮಾಡಿದ ಪುಣ್ಯ ಮತ್ತು ಇತರರ ಮನಸ್ಸಿನಲ್ಲಿ ನಾವು ಉಳಿಸಿ ಹೋಗುವ ಪ್ರೀತಿ ಮಾತ್ರ. ಬರುವಾಗ ಏನನ್ನೂ ತರಲಿಲ್ಲ, ಹೋಗುವಾಗ ಏನನ್ನೂ ಕೊಂಡೊಯ್ಯಲಾರೆವು ಎಂಬ ಅರಿವು ನಮಗಿದ್ದರೆ, ಈ ನಡುವಿನ ಜೀವನದಲ್ಲಿ ದ್ವೇಷಕ್ಕೆ ಜಾಗವಿರುವುದಿಲ್ಲ. ಒಂಟಿಯಾಗಿ ಬಂದ ನಾವು, ಈ ಪಯಣದಲ್ಲಿ ಅನೇಕರನ್ನು ಭೇಟಿಯಾಗುತ್ತೇವೆ. ಆದರೆ ಅಂತಿಮವಾಗಿ ನಮ್ಮ ಆತ್ಮದ ಪಯಣ ನಮಗಷ್ಟೇ ಸೀಮಿತ. ಈ ಒಂಟಿತನವೇ ನಮಗೆ ಬದುಕಿನ ಅತಿದೊಡ್ಡ ಪಾಠ ಪ್ರೀತಿಯಿಂದ ಬಾಳಬೇಕು, ಆದರೆ ಯಾವುದಕ್ಕೂ ಅತಿಯಾಗಿ ಅಂಟಿಕೊಳ್ಳ ಬಾರದು.

ಜೀವನದಲ್ಲಿ ಕೆಲವೊಮ್ಮೆ ನಾವು ಅಂದು ಕೊಂಡಂತೆ ಯಾವುದೂ ನಡೆಯುವುದಿಲ್ಲ. ನಾವು ಯಾರಿಗೆ ಒಳ್ಳೆಯದನ್ನು ಬಯಸುತ್ತೇವೆಯೋ ಅವರೇ ನಮ್ಮನ್ನು ದ್ವೇಷಿಸಬಹುದು ಅಥವಾ ನಾವು ಪ್ರೀತಿಸುವವರು ನಮ್ಮನ್ನು ಹತ್ತಿರಕ್ಕೆ ಸೇರಿಸದೆ ದೂರ ತಳ್ಳಬಹುದು. ಇಂತಹ ಸಂದರ್ಭದಲ್ಲಿ ಮನಸ್ಸಿಗೆ ಜಿಗುಪ್ಸೆ ಅಥವಾ ಬೇಸರವಾಗುವುದು ಸಹಜ. ಆದರೆ ನೆನಪಿರಲಿ ಇತರರ ದ್ವೇಷ ಅಥವಾ ಕಡೆಗಣನೆ ನಮ್ಮ ವ್ಯಕ್ತಿತ್ವದ ಅಳತೆಗೋಲಲ್ಲ. ಜಗತ್ತು ನಮ್ಮನ್ನು ಗುರುತಿಸದಿದ್ದಾಗ ಅಥವಾ ದ್ವೇಷಿಸಿದಾಗ ನಾವು ಕುಗ್ಗಬಾರದು. ಸೂರ್ಯನನ್ನು ಮೋಡಗಳು ಮುಚ್ಚಿದ ತಕ್ಷಣ ಸೂರ್ಯನ ಅಸ್ತಿತ್ವ ಅಳಿಸಿ ಹೋಗುವುದಿಲ್ಲ, ಹಾಗೆಯೇ ಯಾರೋ ನಿಮ್ಮನ್ನು ಕಡೆಗಣಿಸಿದ ತಕ್ಷಣ ನಿಮ್ಮ ಬೆಲೆ ಕಡಿಮೆಯಾಗುವುದಿಲ್ಲ. ನಿಮ್ಮನ್ನು ನೀವು ಪ್ರೀತಿಸಲು ಕಲಿಯಿರಿ. ಯಾರೋ ನಿಮ್ಮನ್ನು ಹತ್ತಿರ ಕರೆಯಲಿಲ್ಲ ಎಂಬ ಕಾರಣಕ್ಕೆ ಮನ ನೊಂದ ಕೊಳ್ಳಬೇಡಿ. ಯಾರು ನಿಮ್ಮನ್ನು ಅರ್ಥ ಮಾಡಿ ಕೊಳ್ಳುವುದಿಲ್ಲವೋ ಅವರಿಗೆ ನಿಮ್ಮ ವಿವರಣೆಯ ಅಗತ್ಯವೂ ಇರುವುದಿಲ್ಲ. ನಿಮ್ಮನ್ನು ದ್ವೇಷಿಸುವವರ ಮಧ್ಯೆಯೇ ನೀವು ನಗುನಗುತ್ತಾ ಬಾಳಿ ತೋರಿಸುವುದೇ ನೀವು ಅವರಿಗೆ ನೀಡುವ ಅತಿದೊಡ್ಡ ಉತ್ತರ. ಒಂಟಿತನವನ್ನು ಶಾಪವೆಂದು ಭಾವಿಸಬೇಡಿ ಅದು ನಿಮ್ಮನ್ನು ನೀವು ತಿದ್ದಿ ಕೊಳ್ಳಲು ಸಿಕ್ಕ ಅವಕಾಶವೆಂದು ಭಾವಿಸಿ. ನದಿಯು ಹರಿಯುವಾಗ ಎದುರಾಗುವ ಕಲ್ಲು ಬಂಡೆಗಳನ್ನು ದ್ವೇಷಿಸುವುದಿಲ್ಲ, ಬದಲಿಗೆ ತನ್ನ ಹಾದಿಯನ್ನು ಬದಲಿಸಿಕೊಂಡು ಸಾಗರದತ್ತ ಸಾಗುತ್ತದೆ. ನೀವೂ ಅಷ್ಟೇ, ದ್ವೇಷದ ಹಾದಿಯನ್ನು ಬಿಟ್ಟು ಪ್ರೀತಿ ಮತ್ತು ಸಾಧನೆಯ ಹಾದಿಯಲ್ಲಿ ಸಾಗಿ.

ಕಷ್ಟಗಳು ಬಂದಾಗ ಕನ್ನಡಿಯೂ ಕೂಡ ಕತ್ತಲಲ್ಲಿ ಸಾಥ್ ನೀಡಲ್ಲ ಎನ್ನುವುದು ನಮಗೆ ತಿಳಿದಿರುವ ವಿಷಯ ಆದರೆ ನನ್ನ ಜೊತೆ ಯಾರೂ ಇಲ್ಲ ಎಂಬ ಕೊರಗಿಗಿಂತ, ನನ್ನನ್ನು ಎದುರಿಸಲು ನಾನೊಬ್ಬನೇ ಸಾಕು ಎಂಬ ಛಲ ನಮ್ಮನ್ನು ಗೆಲುವಿನ ದಡಕ್ಕೆ ಮುಟ್ಟಿಸುತ್ತದೆ. ಜೀವನವೆಂಬ ಹಾದಿಯಲ್ಲಿ ಸುಖವಿದ್ದಾಗ ನೂರಾರು ಜನ ಕೈ ಜೋಡಿಸುತ್ತಾರೆ. ಆದರೆ ಕಷ್ಟದ ಕಾರ್ಮೋಡ ಕವಿದಾಗ ನೆರಳು ಸಹ ನಮ್ಮನ್ನು ಬಿಟ್ಟು ದೂರ ಸರಿಯುತ್ತದೆ. ಇದು ಪ್ರಕೃತಿಯ ನಿಯಮ. ನಾವು ಯಾರ ಮೇಲೆ ಅತಿಯಾದ ನಿರೀಕ್ಷೆ ಇಟ್ಟು ಕೊಳ್ಳುತ್ತೇವೆಯೋ, ಅವರೇ ನಮ್ಮನ್ನು ಅರ್ಧ ದಾರಿಯಲ್ಲಿ ಕೈಬಿಟ್ಟಾಗ ಆಗುವ ನೋವು ಅಸಹನೀಯ. ಆದರೆ ನೆನಪಿಡಿ, ಸಮುದ್ರದಲ್ಲಿ ಈಜುವವನಿಗೆ ತನ್ನ ಕೈಕಾಲುಗಳೇ ಆಸರೆ ಹೊರತು ದಡದಲ್ಲಿ ನಿಂತು ನೋಡುವವರ ಚಪ್ಪಾಳೆಯಲ್ಲ. ನಮ್ಮ ನೋವಿನ ಆಳ ನಮಗೇ ಗೊತ್ತು, ಅದನ್ನು ಸರಿಪಡಿಸುವ ಶಕ್ತಿಯೂ ನಮ್ಮಲ್ಲೇ ಇದೆ. ನನ್ನ ಜೊತೆ ಯಾರೂ ಇಲ್ಲ ಎನ್ನುವುದು ನೋವಲ್ಲ ಅದು ನಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸುವ ಒಂದು ಸಂದರ್ಭ. ಒಬ್ಬರೇ ಹೋರಾಡಿ ಗೆದ್ದಾಗ ಸಿಗುವ ಮರ್ಯಾದೆ ಮತ್ತು ಆತ್ಮವಿಶ್ವಾಸ ಕೋಟಿ ಜನರ ನಡುವೆ ಇದ್ದರೆ ಸಿಗುವುದಿಲ್ಲ. ನಮ್ಮ ಕಷ್ಟಕ್ಕೆ ಯಾರಾದರೂ ಹೆಗಲು ಕೊಡುತ್ತಾರೆ ಎಂದು ಕಾಯುವುದು ದುರ್ಬಲತೆಯ ಲಕ್ಷಣ. ಕಣ್ಣೀರು ಹಾಕುವುದಾದರೆ ದೇವರ ಮುಂದೆ ಅಥವಾ ನಿಮ್ಮಷ್ಟಕ್ಕೆ ನೀವು ಹಾಕಿ ಬಿಡಿ. ಹೊರಗೆ ಮಾತ್ರ ಆ ಕಣ್ಣೀರನ್ನು ಒರೆಸಿಕೊಂಡು ನಾನು ಗೆದ್ದೇ ತೀರುತ್ತೇನೆ ಎಂಬ ಕಿಚ್ಚಿನಿಂದ ಮುನ್ನುಗ್ಗಿ. ಈ ಪ್ರಪಂಚದಲ್ಲಿ ಯಾರೂ ಶಾಶ್ವತವಲ್ಲ. ನಾವು ಬಂದಿರುವುದು ಒಬ್ಬರೇ ಹೋಗುವುದು ಒಬ್ಬರೇ. ಹಾಗಿದ್ದ ಮೇಲೆ ಮಧ್ಯದ ಈ ಹೋರಾಟಕ್ಕೆ ಮತ್ತೊಬ್ಬರ ಹಂಗೇಕೆ? ನಿಮ್ಮ ನೋವನ್ನು ನಿಮ್ಮ ಏಳಿಗೆಗೆ ಮೆಟ್ಟಿಲು ಮಾಡಿಕೊಳ್ಳಿ. ಮೌನವಾಗಿ ಬೆಳೆಯಿರಿ, ನಿಮ್ಮ ಯಶಸ್ಸು ಜಗತ್ತಿಗೆ ಉತ್ತರ ನೀಡಲಿ. ಯಾರೂ ಇಲ್ಲದಿದ್ದರೂ ಪರವಾಗಿಲ್ಲ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ. ನಮ್ಮ ಜೊತೆ ನಮ್ಮ ಆತ್ಮವಿಶ್ವಾಸ ಸದಾ ಇರಲಿ. ನೀವೇ ನಿಮ್ಮ ಜೀವನದ ಸಾರಥಿ. ಒಂಟಿತನವೇ ನಮ್ಮ ಶಕ್ತಿಯಾಗಲಿ.

ಬದುಕಿನ ಹಾದಿಯಲ್ಲಿ ಕೆಲವೊಮ್ಮೆ ಇಡೀ ಜಗತ್ತೇ ನಮ್ಮನ್ನು ಮರೆತಿದೆ ಎಂಬ ಭಾವನೆ ಕಾಡುವುದು ಸಹಜ. ಈ ಒಬ್ಬಂಟಿತನ ಎನ್ನುವುದು ಕೇವಲ ಮೌನವಲ್ಲ, ಅದು ಮನಸ್ಸಿನ ಒಳಗಿನ ಒಂದು ಭಾರವಾದ ಚೀರಾಟ. ಒಬ್ಬಂಟಿ ಯಾಗಿರುವುದು ಎಂದರೆ ಸೋತಂತೆ ಅಲ್ಲ. ಯಾರೂ ನಮ್ಮನ್ನು ಕೇರ್ ಮಾಡುತ್ತಿಲ್ಲ ಎಂಬ ನೋವು ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡುತ್ತದೆ. ಜಗತ್ತು ನಿಮ್ಮನ್ನು ಗುರುತಿಸದಿದ್ದಾಗ, ನೀವು ನಿಮ್ಮನ್ನು ಗುರುತಿಸಿ ಕೊಳ್ಳಲು ಇದು ಸರಿಯಾದ ಸಮಯ. ನಿಮ್ಮ ಪ್ರೀತಿ, ನಿಮ್ಮ ಕಾಳಜಿ ಮೊದಲು ನಿಮಗೇ ಮೀಸಲಿರಲಿ. ಬೇರೆಯವರು ನೀಡುವ ಬೆಲೆಗಿಂತ, ನಾವು ನಮಗೆ ಕೊಟ್ಟು ಕೊಳ್ಳುವ ಗೌರವ ದೊಡ್ಡದು. ಇಂದು ಯಾರೂ ಇಲ್ಲ ಎಂದು ಅನಿಸಬಹುದು, ಆದರೆ ಕಾಲ ಉರುಳಿದಂತೆ ನಿಮ್ಮ ಮೌಲ್ಯ ತಿಳಿಯುವ ಜೀವಗಳು ನಿಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತವೆ. ಅಲ್ಲಿಯವರೆಗೆ, ನಿಮ್ಮ ಒಂಟಿತನವನ್ನು ಏಕಾಂತವನ್ನಾಗಿ ಬದಲಾಯಿಸಿ ಕೊಳ್ಳಿ. ನಿಮ್ಮ ಕನಸುಗಳ ಜೊತೆ ಮಾತನಾಡಿ ನಿಮ್ಮ ಮೌನದಲ್ಲಿ ನಿಮ್ಮನ್ನೇ ಹುಡುಕಿಕೊಳ್ಳಿ. ಆಕಾಶದಲ್ಲಿ ಚಂದಿರನು ಒಬ್ಬನೇ, ಆದರೂ ಅವನು ಕತ್ತಲೆಯನ್ನು ಬೆಳಗುತ್ತಾನೆ. ನೀವು ಕೂಡ ಅಷ್ಟೇ, ಯಾರೂ ಇಲ್ಲದಿದ್ದರೂ ನಿಮ್ಮ ಜೀವನವನ್ನು ನೀವು ಬೆಳಗಬಲ್ಲಿರಿ.

ಉದಾಹರಣೆಗೆ ಹೇಳುವುದಾದರೆ ಯಾವ ಜಾಗವನ್ನು ಕಂಡರೆ ಮನುಷ್ಯರು ಭಯಪಡುತ್ತಾರೋ, ಎಲ್ಲಿಗೆ ಹೋಗಲು ಹಿಂಜರಿಯುತ್ತಾರೋ, ಅಂತಹ ಸ್ಮಶಾನವೇ ಕೈಲಾಸನಾಥನಾದ ಶಿವನಿಗೆ ಪರಮ ಪ್ರಿಯವಾದ ತಾಣ. ಜಗತ್ತು ಯಾವುದನ್ನು ಅಶುಭ ಎಂದು ದೂರ ತಳ್ಳುತ್ತದೆಯೋ, ಶಿವನು ಅದನ್ನು ಪ್ರೀತಿಯಿಂದ ಅಪ್ಪಿ ಕೊಳ್ಳುತ್ತಾನೆ. ಸ್ಮಶಾನವು ಜೀವನದ ಪರಮ ಸತ್ಯವನ್ನು ಸಾರುವ ಜಾಗ. ಇಲ್ಲಿ ಶ್ರೀಮಂತ-ಬಡವ, ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಬೂದಿಯಾಗಲೇಬೇಕು. ಶಿವನು ಸ್ಮಶಾನದಲ್ಲಿ ನೆಲೆಸುವ ಮೂಲಕ, ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಅರಿವನ್ನು ನಮಗೆ ಮೂಡಿಸುತ್ತಾನೆ. ಯಾರು ಇಷ್ಟಪಡದ ಬಿಲ್ವಪತ್ರೆ ದೇವರಿಗೆ ಶ್ರೇಷ್ಠವಾದಂತೆ, ಯಾರಿಗೂ ಬೇಡವಾದ ಒಂಟಿತನವು ಸಾಧಕನಿಗೆ ವರವಾಗಬಲ್ಲದು. ಹೊರಜಗತ್ತಿನ ಗದ್ದಲದಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವ ಬದಲು, ಒಂಟಿತನದ ಬಿಲ್ವಪತ್ರೆಯನ್ನು ಹಿಡಿದು ಅಂತರಂಗದ ಶಿವನಿಗೆ ಅರ್ಪಿಸಿದರೆ ಶಾಂತಿ ಸಿಗುವುದು ನಿಶ್ಚಿತ. ಎಕ್ಕೆ ಗಿಡಕ್ಕೆ ಅರಮನೆಯ ಉದ್ಯಾನವನದಲ್ಲಿ ಜಾಗವಿಲ್ಲ, ಅದರ ಹಾಲಿನ ಭಯಕ್ಕೆ ಜನರು ಹತ್ತಿರ ಸುಳಿಯುವುದಿಲ್ಲ. ಆದರೆ, ಪ್ರಪಂಚವೇ ಯಾವುದನ್ನು ಬೇಡವೆಂದು ದೂರ ತಳ್ಳುತ್ತದೆಯೋ, ಅದನ್ನು ಕೈಲಾಸನಾಥ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಸುಗಂಧಭರಿತ ಹೂವುಗಳಿಗಿಂತ ಶಿವನಿಗೆ ಈ ಬಿಳಿ ಎಕ್ಕೆಯ ಹೂವುಗಳೆಂದರೆ ಅಚ್ಚುಮೆಚ್ಚು. ಒಬ್ಬಂಟಿತನ ಅಂದರೆ ಬರಿ ಶೂನ್ಯವಲ್ಲ, ಅದು ತನ್ನನ್ನು ತಾನು ಕಂಡುಕೊಳ್ಳುವ ಹಾದಿ. ಎಕ್ಕೆ ಗಿಡವು ಬಿಸಿಲ ಧಗೆಯಲ್ಲಿ, ಯಾರೂ ನೀರು ಹಾಕದಿದ್ದರೂ ಹಸಿರಾಗಿ ನಗುತಲಿರುತ್ತದೆ. ಒಂಟಿಯಾಗಿ ಬೆಳೆಯುವುದು ದೌರ್ಬಲ್ಯವಲ್ಲ, ಅದು ಆತ್ಮ ವಿಶ್ವಾಸದ ಸಂಕೇತ. ನೂರಾರು ಹೂವುಗಳ ನಡುವೆ ಗುರುತಿಸಿ ಕೊಳ್ಳುವುದು ಸುಲಭ, ಆದರೆ ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿ ಕೊಳ್ಳುವುದು ಶ್ರೇಷ್ಠತೆ. ಕಣ್ಣು ಮುಚ್ಚಿ ಒಮ್ಮೆ ನಿಮ್ಮ ಹೃದಯ ಬಡಿತವನ್ನು ಕೇಳಿಸಿ ಕೊಳ್ಳಿ. ಅದು ನಿಮಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ನಿಮ್ಮ ಜೀವವೇ ನಿಮ್ಮ ಮೇಲೆ ಇಷ್ಟೊಂದು ಪ್ರೀತಿ ಇಟ್ಟಿರುವಾಗ, ಯಾರೂ ಇಲ್ಲ ಎಂದು ಕೊರಗುವುದು ಸರಿಯೇ? ನೀವು ಒಂಟಿಯಲ್ಲ, ನೀವು ಒಂದು ಅದ್ಭುತ ಶಕ್ತಿ. ನೀವು ಒಂಟಿಯಲ್ಲ, ನಿಮ್ಮೊಳಗೇ ಒಂದು ಜಗತ್ತಿದೆ.

ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಭರಣ ಆಗುವಾಗ ಅಪ್ರತಿಮ ವೀರರಾದ ಐವರು ಪತಿಯರು ಮೌನಕ್ಕೆ ಶರಣಾಗಿದ್ದರು. ದ್ರೌಪದಿಯ ಸಹಾಯಕ್ಕೆ ಯಾರು ಬರಲಿಲ್ಲ ಆಗ ದ್ರೌಪದಿಯ ಆ ಒಂಟಿತನ ಕೇವಲ ವ್ಯಕ್ತಿಯೊಬ್ಬಳ ಅಸಹಾಯಕತೆಯಲ್ಲ, ಬದಲಿಗೆ ಇಡೀ ಜಗತ್ತೇ ಕೈಬಿಟ್ಟಾಗ ಅನುಭವಿಸುವ ಅತಿದೊಡ್ಡ ಶೂನ್ಯ. ಯಾರು ಸಹಾಯಕ್ಕೆ ಬರಲಿಲ್ಲ ಎಂಬ ನೋವು ಅವಳನ್ನು ಅಗ್ನಿಪುತ್ರಿಯನ್ನಾಗಿ ಮಾಡಿತು. ಅವತ್ತು ಅವಳು ಒಂಟಿಯಾಗಿ ಗೆದ್ದಿದ್ದಕ್ಕೇ ಕುರುಕ್ಷೇತ್ರದ ಕಿಡಿ ಹತ್ತಿತು. ದ್ರೌಪದಿಯ ಆ ಕಥೆ ನಮಗೆ ಹೇಳುವುದು ಒಂದೇ ಜಗತ್ತು ನಿಮ್ಮ ಬೆನ್ನಿಗೆ ನಿಲ್ಲದಿದ್ದಾಗ, ನಿಮ್ಮ ಆತ್ಮಗೌರವಕ್ಕಾಗಿ ನೀವೊಬ್ಬರೇ ನಿಲ್ಲಬೇಕಾಗುತ್ತದೆ. ಆ ಒಂಟಿ ಹೋರಾಟವೇ ಮನುಷ್ಯನಿಗೆ ನಿಜವಾದ ಮಹಾಜಯವನ್ನು ತಂದುಕೊಡುತ್ತದೆ. ಮತ್ತು ದಶರಥ ಮಹಾರಾಜನಿಗೆ ನಾಲ್ಕು ಜನ ಮಕ್ಕಳಿದ್ದರು ಆದರೆ ದಶರಥ ಮಹಾರಾಜ ಕೊನೆ ಉಸಿರೆಳೆಯುವಾಗ ನಾಲ್ಕು ಜನ ಮಕ್ಕಳು ಕೂಡ ಇರಲಿಲ್ಲ ಈ ಮೂಲಕ ತಿಳಿಯುವುದೇನೆಂದರೆ ಎಲ್ಲರಿದ್ದರು ಕೊನೆಗೆ ಒಬ್ಬಂಟಿ ಎಂಬ ಭಾವನೆ. ಹಾಗೂ ರಾಮ ಲಕ್ಷ್ಮಣ ಇವರಿಬ್ಬರೂ ಬಹಳ ಶ್ರೇಷ್ಠವಂತರು ಮತ್ತು ಪ್ರಭುದ್ಧರು. ಹೀಗೆ ಒಂದು ಸಂದರ್ಭದಲ್ಲಿ ರಾವಣ ಬಂದು ಸೀತಾ ಮಾತೆಯನ್ನು ಅಪಹರಿಸಿ ಕೊಂಡು ಹೋಗುವಾಗ ಆ ಸಂದರ್ಭದಲ್ಲಿ ಲಕ್ಷ್ಮಣನ ರೇಖೆಯು ಕೂಡ ಏನು ಮಾಡಲಿಕ್ಕೆ ಸಾಧ್ಯವಾಗಲಿಲ್ಲ ಜೊತೆಗೆ ರಾಮನ ದಿವ್ಯಶಕ್ತಿಯು ಕೂಡ ಏನು ಸಹಾಯ ಮಾಡಲಿಕ್ಕೆ ಆಗಲಿಲ್ಲ ಹಾಗಾಗಿ ಬದುಕಿನಲ್ಲಿ ನಮಗೆ ಕಷ್ಟ ಬಂದಾಗ ನಮ್ಮನ್ನು ನಾವೇ ಎದುರಿಸುವಂತಹ ಕ್ಷಣ ಬರಬೇಕು. ಅವಾಗಿನ ದಿನಗಳಲ್ಲಿ ಯಾರೋ ಒಬ್ಬರು ಬಂದು ಕಾಡುಗಲ್ಲಾದ ನಮ್ಮನ್ನು ಶಿಲೆಯನ್ನಾಗಿ ಕೆತ್ತನೆ ಮಾಡುತ್ತಿದ್ದರು ಎಂಬ ಮಾತುಗಳು ಆ ದಿನಗಳಲ್ಲಿ ಕೇಳಿ ಬರುತ್ತಿದ್ದವು ಆದರೆ ಪ್ರಸ್ತುತ ದಿನಮಾನಗಳಲ್ಲಿ ಶಿಲೆಯು ನಾವೇ ಶಿಲ್ಪಿಯು ನಾವೇ ನಮ್ಮನ್ನು ನಾವೇ ಹೇಗೆ ಬೇಕು ಹಾಗೆ ಕೆತ್ತನೆ ಮಾಡಿಕೊಳ್ಳಬಹುದು ಇಂತಹ ಸಂದರ್ಭದಲ್ಲಿ ನಮ್ಮ ಹಣೆಬರಹವನ್ನು ನಾವೇ ಬರೆದುಕೊಳ್ಳುವ ಪರಿಸ್ಥಿತಿ ಇರುತ್ತದೆ. ನಾವು ಜೀವನದಲ್ಲಿ ಏನಾಗಬೇಕು ಎಂದು ಅಂದುಕೊಂಡಿರುತ್ತವೆಯೋ ಅದು ನಾವಾಗುತ್ತೇವೆ ಹಾಗಾಗಿ ಅವರಿದ್ದಾರೆ, ಇವರಿದ್ದಾರೆ, ಅವರು ಬರಲಿಲ್ಲ ಇವರು ಬರಲಿಲ್ಲ ಈ ರೀತಿಯ ಅನಾವಶ್ಯಕ ಚಿಂತನೆಗಳನ್ನು ಮಾಡುವ ಬದಲಿಗೆ ನಾವು ಒಬ್ಬರು ಇದ್ದೀವಲ್ಲ ಅಷ್ಟೇ ಸಾಕು. ಧೈರ್ಯದಿಂದ ನಾವಿರಬೇಕು. ಆ ಕುರಿಯ ಗುಂಪಲ್ಲಿ ಒಬ್ಬರು ನಾವಾಗುವುದಕ್ಕಿಂತ, ಹುಲಿ, ಸಿಂಹ ಚಿರತೆಯಂತೆ ಒಂಟಿಯಾಗಿ ನಾವಿರೋಣ. ಒಂಟಿಯಾಗಿದ್ದರೂ ಕೂಡ ಧೈರ್ಯದಿಂದ ಬದುಕುವ ಶಕ್ತಿ ನಮ್ಮಲ್ಲಿರಲಿ. ನಾವು ಯಾವತ್ತೂ ಒಂಟಿಯಲ್ಲ ನಮ್ಮೊಂದಿಗೆ ನಮ್ಮ ಮನಸ್ಸು ಪರಿಶುದ್ಧ ಇದ್ದರೆ ನಮ್ಮ ಜೊತೆಗೆ ದೇವನು ಇದ್ದೇ ಇರುತ್ತಾನೆ.

ಸೋಲು ಮತ್ತು ತಿರಸ್ಕಾರಗಳನ್ನೇ ಸೋಪಾನವಾಗಿಸಿ ಕೊಂಡು ಸಾಧನೆಯ ಶಿಖರಕ್ಕೇರಿದ ಎಷ್ಟೋ ಮಹನೀಯರ ಬದುಕು ನಮಗೆ ದೊಡ್ಡ ಪಾಠ. ಜಗತ್ತು ಗೆದ್ದವರನ್ನು ಮಾತ್ರ ಗುರುತಿಸುತ್ತದೆ, ಆದರೆ ಆ ಗೆಲುವಿನ ಹಿಂದೆ ಬಿದ್ದ ಕಣ್ಣೀರು ಮತ್ತು ಅನುಭವಿಸಿದ ಅವಮಾನದ ಕಥೆ ಯಾರಿಗೂ ತಿಳಿಯುವುದಿಲ್ಲ. ಅನೇಕ ಸಾಧಕರ ಬದುಕನ್ನು ಗಮನಿಸಿದರೆ, ಅವರಿಗೆ ಆರಂಭದಲ್ಲಿ ಸಿಕ್ಕಿದ್ದು ಪ್ರೋತ್ಸಾಹವಲ್ಲ, ಬದಲಾಗಿ ಕಟು ಟೀಕೆ ಮತ್ತು ತಿರಸ್ಕಾರ. ಎಷ್ಟೋ ಜನರನ್ನು ನಿನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಮನೆಯಿಂದ ಹೊರ ಹಾಕಲಾಗಿದೆ, ಸಮಾಜ ಅವರನ್ನು ಹುಚ್ಚರೆಂದು ಕರೆದು ದೂರ ತಳ್ಳಿದೆ. ಆದರೆ, ಈ ಒಂಟಿತನವೇ ಅವರಿಗೆ ಶಕ್ತಿಯಾಯಿತು. ಸುತ್ತಲೂ ಯಾರೂ ಇಲ್ಲದಿದ್ದಾಗ, ಅವರಿಗೆ ತಮ್ಮ ಒಳಗಿನ ಧ್ವನಿ ಕೇಳಿ ಸತೊಡಗಿತು. ಮನೆಯಿಂದ ಹೊರಬಂದಾಗ ದಾರಿ ಕಾಣದಿದ್ದರೂ, ತಮ್ಮ ಗುರಿಯ ಮೇಲೆ ಅವರಿಗೆ ಅಚಲ ನಂಬಿಕೆಯಿತ್ತು. ಹಸಿವು, ನಿದ್ರೆಯಿಲ್ಲದ ರಾತ್ರಿಗಳು ಮತ್ತು ಪ್ರೀತಿಪಾತ್ರರ ಅಗಲಿಕೆಯ ನೋವು ಅವರನ್ನು ಎದೆಗುಂದಿಸುವ ಬದಲು, ಮತ್ತಷ್ಟು ಗಟ್ಟಿಯಾಗಿಸಿತು. ಸಾಧಕರು ಒಂಟಿಯಾಗಿ ಬದುಕಲು ಬಯಸುವುದಿಲ್ಲ, ಆದರೆ ಅವರ ಸತ್ಯ ಮತ್ತು ಕನಸುಗಳು ಜನ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅವರು ಕಾಡಿನ ಮಧ್ಯೆ ಬೆಳಗುವ ದೀಪದಂತೆ ಆರಂಭದಲ್ಲಿ ಕತ್ತಲೆಯಲ್ಲಿ ಏಕಾಂಗಿಯಾಗಿ ಹೋರಾಡುತ್ತಾರೆ. ಒಮ್ಮೆ ಅವರ ಸಾಧನೆಯ ಬೆಳಕು ಜಗತ್ತಿಗೆ ಕಂಡಾಗ, ಅಂದು ಅವರನ್ನು ದೂರ ತಳ್ಳಿದವರೇ ಇಂದು ಅವರ ನೆರಳಿಗಾಗಿ ಕಾಯುತ್ತಾರೆ. ಒಂಟಿತನವು ಶಾಪವಲ್ಲ, ಅದು ತನ್ನನ್ನು ತಾನು ಕಂಡುಕೊಳ್ಳುವ ಒಂದು ತಪಸ್ಸು. ಯಾರೂ ಇಲ್ಲದಿದ್ದರೂ ಪರವಾಗಿಲ್ಲ, ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದರೆ ಇಡೀ ಜಗತ್ತೇ ನಿಮ್ಮ ಹಿಂದೆ ಬರುವ ಕಾಲ ಬಂದೇ ಬರುತ್ತದೆ.

ಇನ್ನೊಂದು ಉದಾಹರಣೆ ಹೇಳುವುದಾದರೆ ಶಾಲೆಯಿಂದ ಹೊರಹಾಕಲ್ಪಟ್ಟ ಆ ನೋವು ಥಾಮಸ್ ಎಡಿಸನ್ ಅವರನ್ನು ಕುಗ್ಗಿಸಲಿಲ್ಲ. ಬದಲಾಗಿ, ಜಗತ್ತಿನಲ್ಲಿ ಕತ್ತಲೆ ಎನ್ನುವುದಿಲ್ಲ, ಬೆಳಕನ್ನು ಸೃಷ್ಟಿಸಲು ನಮಗೆ ಇನ್ನೂ ಸರಿಯಾಗಿ ತಿಳಿದಿಲ್ಲವಷ್ಟೇ ಎಂದು ನಂಬಿ ಸಾವಿರ ಬಾರಿ ಸೋತರೂ ಛಲ ಬಿಡದೆ ಬಲ್ಬ್ ಕಂಡುಹಿಡಿದರು. ಇಂದು ಜಗತ್ತು ಬೆಳಗುತ್ತಿದೆ ಎಂದರೆ ಅದಕ್ಕೆ ಕಾರಣ ಅಂದು ಎಡಿಸನ್ ಅನುಭವಿಸಿದ ಅವಮಾನ ಮತ್ತು ಅದನ್ನು ಸನ್ಮಾನವನ್ನಾಗಿ ಬದಲಿಸಿದ ಅವರ ಅಚಲ ಪರಿಶ್ರಮ. ಇದು ಅವಮಾನವನ್ನು ಅವಕಾಶವನ್ನಾಗಿ ಬದಲಿಸಿದ ಅತೀ ದೊಡ್ಡ ಜೀವನ ಪಾಠ.

ಜೀವನದ ಹಾದಿಯಲ್ಲಿ ನಮಗೆ ಅತಿ ಹತ್ತಿರದವರು ಎನ್ನಿಸುವ ಅಣ್ಣ-ತಮ್ಮಂದಿರಾಗಲಿ, ಹೆಂಡತಿ-ಮಕ್ಕಳಾಗಲಿ ನಮ್ಮಿಂದ ದೂರಾದಾಗ ಅಥವಾ ನಮ್ಮನ್ನು ಅರ್ಥ ಮಾಡಿಕೊಳ್ಳದಿದ್ದಾಗ ಮನಸ್ಸು ಭಾರವಾಗುವುದು ಸಹಜ. ನನ್ನವರು ಯಾರು ಇಲ್ಲ ಎಂಬ ಒಂಟಿತನ ನಮ್ಮನ್ನು ಕಾಡತೊಡಗುತ್ತದೆ. ಆದರೆ ಈ ಪ್ರಪಂಚದಲ್ಲಿ ಯಾರೂ ನಿಜವಾಗಿ ಒಬ್ಬಂಟಿಯಲ್ಲ. ಜನರು ಕೈಬಿಟ್ಟರೂ ದೇವರು ಎಂದಿಗೂ ಕೈಬಿಡುವುದಿಲ್ಲ. ನಾವು ಹುಟ್ಟುವಾಗಲೂ ಒಬ್ಬರೇ ಬಂದೆವು, ಹೋಗುವಾಗಲೂ ಒಬ್ಬರೇ ಹೋಗುತ್ತೇವೆ. ಹಾಗಾಗಿ, ಈ ನಡುವೆ ಸಿಗುವ ಸಂಬಂಧಗಳು ಬದುಕಿನ ಪಾಠಗಳಷ್ಟೇ. ಮನಸ್ಸನ್ನು ದೃಢವಾಗಿಟ್ಟುಕೊಂಡು, ಆ ದೇವರ ಮೇಲಿನ ಭಕ್ತಿಯಲ್ಲಿ ಶಾಂತಿಯನ್ನು ಕಂಡುಕೊಳ್ಳಿ. ನೆನಪಿರಲಿ ನೀವು ಒಬ್ಬಂಟಿಯಲ್ಲ ದೇವರ ಕೃಪೆ ಸದಾ ನಿಮ್ಮನ್ನು ಕಾಯುತ್ತಿದೆ. ನಾವೆಂದು ಒಬ್ಬಂಟಿಯಲ್ಲ ದೇವರಿದ್ದಾನೆ ನಮ್ಮ ಜೊತೆಯಲ್ಲಿ ಎಂಬ ಭಾವನೆ ನಮ್ಮಲ್ಲಿರಬೇಕು.

ಕಣ್ಣಿನ ರೆಪ್ಪೆಯಂತೆ ಕಾಪಾಡಿ ತುತ್ತು ಅನ್ನವನ್ನು ಮಕ್ಕಳಿಗಾಗಿ ಮೀಸಲಿಟ್ಟು ಬೆಳೆಸಿದ ಪೋಷಕರಿಗೆ, ಇಂದು ಅದೇ ಮಕ್ಕಳು ಒಬ್ಬಂಟಿ ಎಂಬ ಹಣೆಪಟ್ಟಿ ಕಟ್ಟುವುದು ಅತಿದೊಡ್ಡ ವಿಧಿಯ ವೈಪರೀತ್ಯ. ಯಾವ ಮಗುವಿನ ಮೊದಲ ಹೆಜ್ಜೆಗಾಗಿ ನಾವು ಕೈಹಿಡಿದು ನಡೆಸಿದ್ದೆವೋ, ಇಂದು ಅದೇ ಮಗು ನಮ್ಮನ್ನು ಬಿಟ್ಟು ಮಾರುದೂರ ಹೋಗಿ ನಿಂತಾಗ ಎದೆ ಸೀಳುವಂತಹ ನೋವಾಗುತ್ತದೆ. ಮನೆಯನ್ನು ಬೆಳಗಲು ಬಂದ ಸೊಸೆ, ಮನೆಯ ದೀಪವನ್ನೇ ಆರಿಸುವ ಹಂತಕ್ಕೆ ಹೋದಾಗಲೂ ಮಗ ಮೌನವಾಗಿರುವುದು ಹೆತ್ತವರಿಗೆ ಸತ್ತ ಸಮಾನ. ಹೆಂಡತಿಯ ಮೇಲಿನ ಪ್ರೀತಿ ಇರಲಿ ಆದರೆ ಅದು ಹೆತ್ತವರ ಮೇಲಿನ ಋಣವನ್ನು ಮರೆಯುವಂತೆ ಮಾಡಬಾರದು. ನೆನಪಿರಲಿ, ಇಂದು ನಿಮ್ಮ ತಂದೆ-ತಾಯಿಗೆ ನೀವು ಏನು ಮಾಡುತ್ತೀರೋ, ನಾಳೆ ನಿಮ್ಮ ಮಕ್ಕಳಿಂದ ನಿಮಗೂ ಅದೇ ಕಾದಿರುತ್ತದೆ. ಕಾಲದ ಚಕ್ರ ಯಾರಿಗೂ ಯಾವುದನ್ನೂ ಬಾಕಿ ಉಳಿಸಿಕೊಳ್ಳುವುದಿಲ್ಲ. ಕೊನೆಯದಾಗಿ ಹೇಳುವುದಾದರೆ ಹೆತ್ತವರು ಎಂದಿಗೂ ಮಕ್ಕಳ ಕೆಟ್ಟದ್ದನ್ನು ಬಯಸುವುದಿಲ್ಲ. ನೀವು ದೂರ ಹೋದರೂ ಅವರು ಬಯಸುವುದು ನಿಮ್ಮ ಸುಖವನ್ನೇ. ಆದರೆ ಆ ಸುಖದ ನಡುವೆ ಒಮ್ಮೆಯಾದರೂ ನಿಮ್ಮನ್ನು ಬೆಳೆಸಿದ ಆ ಕೈಗಳ ನೆನಪಾಗಲಿ.

ಯಾರು ನಮ್ಮನ್ನು ಬಿಟ್ಟು ಹೋಗಿದ್ದಾರೋ ಅವರು ನಮ್ಮ ಜೀವನದ ಸುಂದರ ಭವಿಷ್ಯದಲ್ಲಿ ಇರಲು ಅರ್ಹರಲ್ಲ ಎಂದೇ ಅರ್ಥ. ಹಳೆಯ ಎಲೆಗಳು ಉದುರಿದಾಗಲೇ ಮರಕ್ಕೆ ಹೊಸ ಚಿಗುರು ಬರಲು ಸಾಧ್ಯ. ಹಾಗೆಯೇ, ಅರ್ಹತೆಯಿಲ್ಲದವರು ಹೋದಾಗಲೇ ನಮಗೆ ಅರ್ಹರಾದವರು ಸಿಗಲು ದಾರಿಯಾಗುತ್ತದೆ. ನಿಮ್ಮ ಯಶಸ್ಸು ಮತ್ತು ಸಂತೋಷವೇ ನಿಮ್ಮನ್ನು ಬಿಟ್ಟು ಹೋದವರಿಗೆ ನೀವು ನೀಡುವ ದೊಡ್ಡ ಉತ್ತರವಾಗಲಿ.

ಯಾರು ನಿಮ್ಮ ಕಣ್ಣೀರಿಗೆ ನಿಜವಾಗಿಯೂ ಅರ್ಹರೋ ಅವರು ಎಂದಿಗೂ ನೀವು ಕಣ್ಣೀರು ಹಾಕುವಂತೆ ಮಾಡುವುದಿಲ್ಲ. ಆದರೆ ನಿಮ್ಮ ಕಣ್ಣೀರಿಗೆ ಯಾರು ಯೋಗ್ಯರಲ್ಲ ಅವರಿಗಾಗಿ ನೀವು ಕಣ್ಣೀರು ಹಾಕುವುದು ವ್ಯರ್ಥ,ಸ್ವಾಮಿ ವಿವೇಕಾನಂದರ ಈ ಮಾತುಗಳು ಮಾನವ ಸಂಬಂಧಗಳ ಆಳವಾದ ಸತ್ಯವನ್ನು ಬಿಂಬಿಸುತ್ತವೆ. ಬದುಕಿನಲ್ಲಿ ಎಲ್ಲರಿಗೂ ಸ್ಥಾನ ಕೊಡಬೇಡಿ. ನಿಮ್ಮ ಕಣ್ಣೀರಿಗೆ ಬೆಲೆ ನೀಡುವವರಿಗೆ ಮಾತ್ರ ನಿಮ್ಮ ಹೃದಯದಲ್ಲಿ ಜಾಗ ನೀಡಿ. ಏಕೆಂದರೆ ನಿಮ್ಮ ಕಣ್ಣೀರನ್ನು ಹರಿಯದಂತೆ ಕಾಪಾಡುವವನೇ ನಿಮ್ಮ ಪಾಲಿನ ನಿಜವಾದ ಆಪ್ತ. ಒಂಟಿತನ ಎಂಬುದು ಒಂದು ಶಿಕ್ಷೆಯಲ್ಲ, ಅದು ಒಂದು ತಪಸ್ಸು. ಯಾರೂ ಇಲ್ಲದಾಗಲೂ ನಗುನಗುತ ಬದುಕು ಸಾಗಿಸುವುದೇ ನಿಜವಾದ ಗೆಲುವು. ನಮ್ಮ ಬದುಕಿಗೆ ನಾವೇ ಶಿಲ್ಪಿಗಳು, ನಾವೇ ದಾರಿಗಳು.

ಶ್ರೀ ಮುತ್ತು.ಯ ವಡ್ಡರ (ಶಿಕ್ಷಕರು)

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಹಿರೇಮಳಗಾವಿ/ಬಾಗಲಕೋಟ

9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button