ಶಂಕರಲಿಂಗೇಶ್ವರ ಜಾತ್ರೆಯಲ್ಲಿ ಅಂಬಲಿ ಮಜ್ಜಿಗೆ ಸವಿದ ಭಕ್ತರು
ಲಚ್ಯಾಣ ಏ.14-
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಶ್ರೀ ಶಂಕರಲಿಂಗೇಶ್ವರ ಮಹಾರಥೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜ್ರಂಭಣೆಯಿಂದ ಜರುಗಿದವು. ಕಮರಿಮಠದ ಸೇವಾ ಸಮಿತಿಯ ವತಿಯಿಂದ ಇಲ್ಲಿನ ನಿರಂತರ ದಾಸೋಹ ಕೇಂದ್ರದಲ್ಲಿ ಭಕ್ತರು ತಂಪಾದ ಮಜ್ಜಿಗೆ ಅಂಬಲಿ ಸವಿದು ಸಂತಸಪಟ್ಟರು.

ಬಂಥನಾಳದ ಪೂಜ್ಯ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ನಿರಂತರ ದಾಸೋಹ ಕೇಂದ್ರವನ್ನು ವಿಸ್ತರಿಸಿ ಬ್ರಹತ್ ದಾಸೋಹ ಕೇಂದ್ರವನ್ನು ತೆರೆಯಲಾಗಿತ್ತು. ಮಹಾದಾಸೋಹ ಕೇಂದ್ರದಲ್ಲಿ ಭಕ್ತರ ಸೇವೆಗೆ ಸ್ಥಳಿಯ ಹಾಗೂ ಸುತ್ತಲ ಗ್ರಾಮದ ಮಹಿಳೆಯರು ಆದಿಯಾಗಿ ಹಲವು ಸೇವಾಸಕ್ತರು ಸ್ವಯಂ ಸೇವಕರಾಗಿ ಕಾಯಕ ಮಾಡಿ ರುಚಿಕಟ್ಟಾದ ಬುಂದೆ, ಕಡಕ್ ರೊಟ್ಟಿ, ಅಂಬಲಿ, ಅನ್ನ, ಸಾರು, ಮಜ್ಜಿಗೆ ಸಿದ್ದಪಡಿಸಿ ಬಂದ ಭಕ್ತರಿಗೆ ವಿತರಿಸಿ ದಾಸೋಹ ಸೇವೆಗೈದರೆ, ಇತ್ತ ಭಕ್ತರು ಅನ್ನ ಪ್ರಸಾದ ಸ್ವಿಕರಿಸಿ, ಅಂಬಲಿ ಮಜ್ಜಿಗೆ ಸವಿದು ಸಂಭ್ರಮಿಸಿದರು.
ರಥೋತ್ಸವಕ್ಕೂ ಮುನ್ನ ಅಗ್ನಿ ಪ್ರವೇಶ ಕಾರ್ಯಕ್ರಮ ವಿವಿಧ ವಾದ್ಯ ಮೇಳದೊಂದಿಗೆ ವಿಜ್ರಂಭಣೆಯಿಂದ ನಡೆಯಿತು. ಸ್ಥಳಿಯ ಯುವಕರು ಸ್ವಂತ ಖರ್ಚಿನಲ್ಲಿ ೬ ಸಾವಿರ ನೀರಿನ ಪಾಕೆಟ್ ವಿತರಿಸಿ ಅಳಿಲು ಸೇವೆ ಸಲ್ಲಿಸಿದರು.
ಉತ್ಸವದ ಅಂಗವಾಗಿ ಜಾನುವಾರ ಜಾತ್ರೆಯು ಬಲು ಜೋರಾಗಿತ್ತು. ರಣ ಬಿಸಿಲಿನಿಂದ ರಕ್ಷಿಸಲು ಜಾನುವಾರಗಳಿಗೆ ಇಲ್ಲಿನ ಮಠದ ವತಿಯಿಂದ ಬ್ರಹತ್ ಪೆಂಡಾಲ್ ವ್ಯವಸ್ಥೆ ಮಾಡಿ ನೆರಳಿನ ಸೌಲಭ್ಯ ಕಲ್ಪಿಸಲಾಗಿತ್ತು. ಈ ಬಾರಿ ಅಂದಾಜು ೧,೫೦೦ ಕ್ಕೂ ಹೆಚ್ಚು ಜಾನುವಾರಗಳನ್ನು ರೈತರು ಮಾರಾಟಕ್ಕಾಗಿ ತಂದಿದ್ದರು. ಈ ವೇಳೆ ಉತ್ತಮ ರಾಸುಗಳ ಖರೀದಿ ಹಾಗೂ ಮಾರಾಟ ಕ್ರಿಯೆಯು ನಡೆಯಿತು.
ಉತ್ಸವ ನೋಡಲು ಸುತ್ತಲ ಗ್ರಾಮದ ರೈತರು ಎತ್ತಿನ ಬಂಡಿಯ ಮೂಲಕ ಬಂದು ಉತ್ಸವದಲ್ಲಿ ಪಾಲ್ಗೊಂಡ ನೋಟ ಗಮನಸೆಳೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಾದ ಗೀ ಗೀಪದ, ಡೊಳ್ಳಿನ ಪದ, ಪೌರಾಣಿಕ ನಾಟಕ, ಸಾಮಾಜಿಕ ನಾಟಕ ಪ್ರದರ್ಶನಗೊಂಡವು.
ಹಳಿಂಗಳಿಯ ಶಿವಾನಂದ ಮಹಾಸ್ವಾಮೀಜಿ, ಯರನಾಳದ ಗುರುಸಂಗನಬಸವ ಮಹಾಸ್ವಾಮೀಜಿ, ಹೂವಿನಹಿಪ್ಪರಗಿಯ ಮಾತ್ರೋಶ್ರೀ ದ್ರಾಕ್ಷಾಯಣಿ ಅಮ್ಮನವರು ಅನೇಕ ಸಾಧು ಸಂತರು ಮತ್ತಿತರಿದ್ದರು.
ಜಿಲ್ಲಾ ವರದಿಗಾರರು:ಬೀ ಎಸ್ ಹೊಸೂರ್. ವಿಜಯಪುರ