ಗ್ರಾಮೀಣ ಭಾರತದ ಅವಿಭಾಜ್ಯ ಅಂಗ ರೇಡಿಯೋ – ಸಂತೋಷ ಬಂಡೆ.
ಇಂಡಿ ಫೆಬ್ರುವರಿ.13
ರೇಡಿಯೋ ಒಂದು ಶತಮಾನದಷ್ಟು ಹಳೆಯದಾದ ಸಾಮಾಜಿಕ ಸಂವಹನದ ಪ್ರಮುಖ ಮೂಲವಾಗಿದ್ದು, ಅದೊಂದು ಶ್ರಾವ್ಯ ಮಾಧ್ಯಮವಾಗಿದೆ. ಜಗತ್ತಿನ ಪ್ರತಿಯೊಬ್ಬ ನಾಗರಿಕನಿಗೂ ಸುಲಭವಾಗಿ, ವೇಗವಾಗಿ ತಲುಪಬಹುದಾದ ಮಾಧ್ಯಮ ರೇಡಿಯೋ ಆಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ರೇಡಿಯೋ ದಿನವನ್ನು ಉದ್ದೇಶಿಸಿ ಮಾತನಾಡಿದರು.

ಜಗತ್ತಿನಲ್ಲಿ ನಡೆದ ಮಹಾನ್ ಘಟನೆಗಳ ಸುದ್ದಿಯ ಜೊತೆಗೆ ಕೃಷಿ, ಶಿಕ್ಷಣ,ಆರೋಗ್ಯದಂತಹ ಅನೇಕ ರಂಗದ ಮಾಹಿತಿಯನ್ನು ಜನರಿಗೆ ತಲುಪಿಸಿದ್ದೇ ರೇಡಿಯೋ. ಒಂದು ಕಾಲದಲ್ಲಿ ಗ್ರಾಮೀಣ ಭಾರತದ ಇಂಚು ಇಂಚನ್ನು ತಲುಪಿದ್ದ ರೇಡಿಯೋ ದೇಶದ ಜನತೆಯೊಂದಿಗೆ ಭಾವನಾತ್ಮಕ ಅನುಬಂಧವನ್ನಿಟ್ಟುಕೊಂಡಿದೆ ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ರೇಡಿಯೋ ಅತ್ಯಂತ ಹಳೆಯ ಹಾಗೂ ಇಂದಿಗೂ ಚಾಲ್ತಿಯಲ್ಲಿರುವ ಸಂವಹನ ಮಾಧ್ಯಮವಾಗಿದೆ. ಇದು ಪ್ರಜಾಪ್ರಭುತ್ವದ ಪ್ರವಚನಕ್ಕೆ ವೇದಿಕೆಯನ್ನು ಒದಗಿಸುತ್ತದೆ. ಸಾರ್ವಜನಿಕರಿಗೆ ಮಾಹಿತಿಯನ್ನು ತಲುಪಿಸಲು ರೇಡಿಯೋ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಜಗತ್ತಿನಲ್ಲಿ ಸಂಘರ್ಷ ತಡೆಗಟ್ಟುವಲ್ಲಿ ಮತ್ತು ಶಾಂತಿ ನಿರ್ಮಾಣ ಮಾಡುವಲ್ಲಿ ರೇಡಿಯೋ ಆಧಾರಸ್ತಂಭವಾಗಿದೆ. ಹಳ್ಳಿ ಜನರ ದೈನಂದಿನ ಜೀವನ ಭಾಗವಾದ ರೇಡಿಯೋ ಅನೇಕ ವಿಚಾರಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿತ್ತು ಎಂದು ಹೇಳಿದರು.
ಶಿಕ್ಷಕಿ ಎಸ್ ಪಿ ಪೂಜಾರಿ ಸೇರಿದಂತೆ ಮಕ್ಕಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ