ಕುಂಬಾರರ ಬದುಕಿಗಿಲ್ಲ ಸೌಲಭ್ಯದ ಒರತೆ, ಕುಶಲತೆ ಮರೆಯುತ್ತಿವೆ – ಮಡಿಕೆ ಮಾಡುವ ಕೈಗಳು.
ಕಾನಾ ಹೊಸಹಳ್ಳಿ ಏಪ್ರಿಲ್.03

ಡಿಜಿಟಲ್ ಯುಗದಲ್ಲಿ ಜೇಡಿ ಮಣ್ಣನ್ನು ಹದ ಮಾಡಿ ಮಾಡಿದ ಮಡಿಕೆ, ಕುಡಿಕೆ, ಒಲೆ ಸೇರಿದಂತೆ ವಿವಿಧ ಸಾಮಗ್ರಿ ವಸ್ತುಗಳನ್ನು ಜನರು ಖರೀದಿ ಮಾಡುತ್ತಿಲ್ಲ. ಹೀಗಾಗಿ ಕುಂಬಾರಿಕೆ ಉದ್ಯಮದಲ್ಲಿ ನಷ್ಟ ಅನುಭವಿಸುತ್ತಿರುವುದರಿಂದ ಕುಂಬಾರರ ಕುಶಲತೆ ಗ್ರಾಮೀಣ ಪ್ರದೇಶದಿಂದ ಹಂತ, ಹಂತವಾಗಿ ಕಣ್ಮರೆಯಾಗುತ್ತಿದೆ. ಕುಂಬಾರರು ತಮ್ಮ ಜೀವನಕ್ಕೆ ಅಗತ್ಯವಿರುವ ರೂಪ ಕೊಟ್ಟುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎಂಬುದಕ್ಕೆ ತಾಲ್ಲೂಕಿನ ಚಿಕ್ಕ ಜೋಗಿಹಳ್ಳಿ ಗ್ರಾಮದ ಚೌಡಪ್ಪ ಕುಂಬಾರನ ಬದುಕು ಸೂಕ್ತ ಉದಾಹರಣೆ. ಮುತ್ತಾತ, ತಾತ ತಂದೆಯವರ ಕಾಲದಿಂದಲೂ ಈ ಕುಟುಂಬಗಳು ತನ್ನ ಕುಲ ಕಸುಬಾಗಿ ಕುಂಬಾರಿಕೆ ನಂಬಿಕೊಂಡು ಜೀವನ ಸಾಗಿಸುತ್ತಿವೆ. ತಾಲೂಕಿನಲ್ಲಿ ಅನೇಕ ಕುಂಬಾರರು ಈ ಕಸುಬು ಕುಂಬಾರಿಕೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಒಂದು ಮಡಿಕೆ ತಯಾರಿಕೆ ಕಾರ್ಯ ಮುಗಿಯಲು 7-10 ಹಂತಗಳು ಆವಶ್ಯಕವಿದೆ. ಒಬ್ಬರು ದಿನವೊಂದಕ್ಕೆ 10-12 ಮಡಿಕೆಗಳನ್ನು ತಯಾರಿಸುತ್ತಾರೆ. ನಂತರ ಇವುಗಳನ್ನು ಒಣಗಿಸಿ, ಸುಟ್ಟು ಮಾರಾಟಕ್ಕೆ ಕಳಿಸಲು ಕನಿಷ್ಠ ಎಂದರೂ 10 ದಿನ ಕಾಲಾವಕಾಶ ಅಗತ್ಯವಿದೆ ಎಂದು ಕುಂಬಾರರು ಹೇಳುತ್ತಾರೆ. ಈ ಹಿಂದೆ ಮಡಿಕೆಯಿಲ್ಲದೇ ಮಾನವನ ಬದುಕಿಲ್ಲ ಅನ್ನುವಷ್ಟು ಮಡಿಕೆಯೇ ಮುಖ್ಯವಾಗಿತ್ತು. ಆ ಮಾತು ಈಗ ಸುಳ್ಳೇನೋ ಅನ್ನುವಷ್ಟು ಪರಿಸ್ಥಿತಿ ಬದಲಾಗಿದೆ. ಆಧುನೀಕತೆಯ ಭರಾಟೆಯಲ್ಲಿ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಫೈಬರ್ ಬಂದು ಮಡಿಕೆಗಳು ಮಾಯವಾಗುತ್ತಲೇ ಇದ್ದವು. ಇದರಿಂದ ಕುಂಬಾರರು ಆತಂಕದ ನಡುವೆಯೇ ವೃತ್ತಿ ಸಾಗಿಸುತ್ತಿದ್ದಾರೆ. ಈಗ ಪ್ರಸಕ್ತ ಬೇಸಿಗೆಯ ಬಿಸಿಲಿನ ತಾಪ ವಿಪರೀತ ಹೆಚ್ಚಿದ್ದರಿಂದ ಜನತೆ ಅನಿವಾರ್ಯವಾಗಿ ಮಡಿಕೆಯ ಮೊರೆ ಹೋಗುತ್ತಿದ್ದರಿಂದ ಮಾರಾಟದಲ್ಲಿ ಚೇತರಿಕೆ ಕಂಡು ಅವರಲ್ಲಿ ಸ್ವಲ್ಪ ಪ್ರಮಾಣದ ನೆಮ್ಮದಿ ಕಾಣುತ್ತಿದೆ. ಸುತ್ತಲಿನ ಹಳ್ಳಿಗಳ ಸಂತೆಗೆ ಕಳುಹಿಸಲಾಗುತ್ತದೆ. ಬೇಡಿಕೆ ಇದ್ದ ಸಮಯದಲ್ಲಿ ಮಾರಾಟಗಾರರು ನೇರವಾಗಿ ಇಲ್ಲಿಗೆ ಬಂದು ಕೊಂಡ್ಯೊಯುತ್ತಾರೆ. ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗಿ ಇರುತ್ತದೆ. ಉಳಿದ ಕಾಲದಲ್ಲಿ ಕೂಲಿ ಕೆಲಸ ನೆಚ್ಚಿಕೊಂಡಿರುವುದು ಹೊಟ್ಟೆ ತುಂಬಿಸುತ್ತಿದೆ. ನಾವು ಶಿಕ್ಷಣ ಸೌಲಭ್ಯದಿಂದ ವಂಚಿತರಾಗಿದ್ದು, ನಮ್ಮ ಮಕ್ಕಳಿಗೆ ಮಾತ್ರ ಶಿಕ್ಷಣ ಕೊಡಿಸಲು ಶ್ರಮಿಸುತ್ತಿದ್ದೇವೆ. ಆದರೆ, ಶಿಕ್ಷಣದ ಜತೆಗೆ ಕುಲಕಸುಬು ಸಹ ಕಲಿಸುತ್ತೇವೆ. ಹೊಟ್ಟೆಗೆ ಅನ್ನ ಹಾಕುವ ಕಸುಬು ಬಿಡಲು ಹೇಗೆ ಸಾಧ್ಯ ಎಂದು ಕುಂಬಾರ ಚೌಡಪ್ಪ ಮತ್ತಿತರರು ಹೇಳುತ್ತಾರೆ. ಇನ್ ಸರ್ಕಾರದಿಂದ ಯಾವುದೇ ಬಗೆಯ ಆರ್ಥಿಕ ನೆರವು ಸಿಕ್ಕಿಲ್ಲ ಎಂದು ದೂರುವ ಅವರು, ಸರ್ಕಾರ ವಸತಿ ಮತ್ತಿತರ ಸೌಲಭ್ಯ ನೀಡಲು ಸಹ ಮನಸ್ಸು ಮಾಡಿಲ್ಲ ಎಂಬುದು ಕುಂಬಾರರ ಅಳಲಾಗಿದೆ.ಬೇಸಿಗೆ, ಮದುವೆ ಕಾರ್ಯಗಳಿಗೆ ಮಾತ್ರ ಬೇಡಿಕೆ: ಒಂದು ಮಡಿಕೆಗೆ 150 ಹಾಗೂ 170, 208 ರೂಪಾಯಿ ವರೆಗೂ ಮಾರಾಟವಾಗುತ್ತಿದೆ. ಒಂದು ಹೂಜಿಗೆ 230 ರೂಪಾಯಿ ಹಾಗೂ ದೊಡ್ಡ ಹೂಜಿಗೆ 400 ರೂ. ಹೀಗೆ ವಿವಿಧ ಬೆಲೆಗಳಲ್ಲಿ ಬಿಕರಿಯಾಗುತ್ತವೆ. ಮದುವೆ ಕಾರ್ಯಕ್ಕೆ ಅಗತ್ಯವಾದ ಕೇಲು, ದೀಪಗಳು, ಮಗೆ, ಮದುಮಕ್ಕಳಿಗೆ ಬಾಸಿಂಗವನ್ನೂ ಇವರು ತಯಾರಿಸಿಕೊಡುತ್ತಾರೆ. ಬಸವ ಜಯಂತಿ ಸಂದರ್ಭದಲ್ಲಿ ಹೆಚ್ಚು ಮದುವೆ ಕಾರ್ಯಗಳು ನಡೆಯುತ್ತಿವೆ.
ಕೋಟ್:ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗಿ ಇರುತ್ತದೆ. ಉಳಿದ ಕಾಲದಲ್ಲಿ ಕೂಲಿ ಕೆಲಸ ನೆಚ್ಚಿಕೊಂಡಿರುವುದು ಹೊಟ್ಟೆ ತುಂಬಿಸುತ್ತಿದೆ. ಸರ್ಕಾರದಿಂದ ಯಾವುದೇ ಬಗೆಯ ಆರ್ಥಿಕ ನೆರವು ಸಿಕ್ಕಿಲ್ಲ, ಸರ್ಕಾರ ವಸತಿ ಮತ್ತಿತರ ಸೌಲಭ್ಯ ನೀಡಲು ಸಹ ಮನಸ್ಸು ಮಾಡಿಲ್ಲ ಇಂತಹ ಕಷ್ಟದ ಸಮಯದಲ್ಲಿ ನಮ್ಮ ನೆರವಿಗೆ ಸರಕಾರ ಬರಬೇಕು.•ಚೌಡಪ್ಪ ಕುಂಬಾರ, ಚಿಕ್ಕ ಜೋಗಿಹಳ್ಳಿ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ.