ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶ್ರೀ ಸಿದ್ದೇಶ್ವರರು – ವಿ.ವೈ.ಪತ್ತಾರ.
ಇಂಡಿ ಜನೇವರಿ.2

ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾ ಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ ಆಗಿದ್ದರು ಎಂದು ಶಾಲಾ ಮುಖ್ಯ ಶಿಕ್ಷಕಿ ವಿ ವೈ ಪತ್ತಾರ ಹೇಳಿದರು. ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಶ್ರೀ ಸಿದ್ದೇಶ್ವರ ಮಹಾ ಸ್ವಾಮಿಗಳ ಗುರು ನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶ್ರೀಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನ ಮಾನಸದಲ್ಲಿ ಉಳಿಯುವಂತೆ ವಿವರಿಸುವುದೇ ಅವರ ವೈಶಿಷ್ಟ್ಯ ಎಂದು ಹೇಳಿದರು. ಶಿಕ್ಷಕಿ ಎಸ್ ಡಿ ಬಿರಾದಾರ ಮಾತನಾಡಿ, ಸಿದ್ದೇಶ್ವರರ ಮಾತು ಎಂದರೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬಲು ಪ್ರೀತಿ. ಆತ ಮಹಾ ಬುದ್ದಿವಂತ, ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿ ಜ್ಞಾನವಿದೆ. ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸ ದಿಂದ ಎಲ್ಲರೆದುರು ಹೇಳುತ್ತಿದ್ದರು ಎಂದು ತಿಳಿಸಿದರು. ಶಿಕ್ಷಕ ಸಂತೋಷ ಬಂಡೆ ಮಾತನಾಡಿ,ಶ್ರೀ ಸಿದ್ದೇಶ್ವರ ಶ್ರೀಗಳು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದರು. ಅವರ ಸರಳತೆ, ಸಹಾನುಭೂತಿ, ಯೋಗದ ಮನೋಭಾವಗಳು, ಬದುಕಿನ ಸಮಸ್ಯೆಗಳಿಗೆ ಸೃಜನಶೀಲ ವಿಧಾನಗಳು ಮನುಕುಲಕ್ಕೆ ದಾರಿ ದೀಪವಾಗಿವೆ ಎಂದು ಹೇಳಿದರು. ಶಿಕ್ಷಕರಾದ ಎಸ್ ಎಂ ಪಂಚಮುಖಿ,ಎಸ್ ಬಿ ಕುಲಕರ್ಣಿ, ಜೆ ಸಿ ಗುಣಕಿ,ಎಸ್ ಎನ್ ಡಂಗಿ, ಯಲ್ಲಮ್ಮ ಸಾಲೋಟಗಿ, ಸಂತೋಷ ಬಿರಾದಾರ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ