ನಗರದ ಕಂಠಿ ಸರ್ಕಲ್ ಬಳಿಯಿರುವ ಇಬ್ರಾಹಿಂ ಮಸ್ಜಿದ್ ಸಭಾಂಗಣದಲ್ಲಿ – ಜಮಾಅತೆ ಇಸ್ಲಾಮೀ ಹಿಂದ್(JIH).
ಇಳಕಲ್ಲ ಮಾ.28

ಇಳಕಲ್ಲ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ (SIO) ಇಳಕಲ್ಲ ಇದರ ಜಂಟಿ ಆಶ್ರಯದಲ್ಲಿ ಗುರುವಾರ ಸಾಯಂಕಾಲ ಏರ್ಪಡಿಸಿದ್ದ “ಸೌಹಾರ್ದ ಇಫ್ತಾರ್ ಕೂಟ” ಕಾರ್ಯಕ್ರಮದಲ್ಲಿ ನಗರದ ಗಣ್ಯರು ಮತ್ತು ವಿದ್ಯಾರ್ಥಿ-ಯುವಜನ ಮುಖಂಡರು ಹಾಗೂ ಸರ್ವ ಧರ್ಮೀಯರ ಬಂಧುಗಳು ಭಾಗವಹಿಸಿದ್ದರು.ಎಸ್.ಐ.ಓ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಪೀರ್ ಲಟಗೇರಿ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಸೌಹಾರ್ದ ಇಫ್ತಾರ್ ಕೂಟವು ಪರಸ್ಪರರ ನಂಬಿಕೆ, ಆಚರಣೆ ಮತ್ತು ಧರ್ಮಶ್ರದ್ಧೆ ಅರಿಯುವ ಹಾಗೂ ರಮ್ಜಾನ್ ತಿಂಗಳ ಉಪವಾಸದ ಶುಭ ಸಂದರ್ಭದಲ್ಲಿ ಉಪವಾಸಿಗನ ಜೊತೆ ಭಿನ್ನ ನಂಬಿಕೆ, ಬಹು ಧರ್ಮೀಯ ಜನ ರೊಂದಿಗೆ ಸಹ ಪಂಕ್ತಿಯಲ್ಲಿ ಕುಳಿತು ಸೌಹಾರ್ದಯುತ ಮನೋಭಾವವನ್ನು ಬೆಳೆಸುವುದು ಇಫ್ತಾರ್ ಕೂಟದ ಆಶಯವಾಗಿದೆ. ಎಂದು ಹಾಗೂ ಈ ನೆಲದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯು ಕೂಡಿ ಬಾಳುವ ಸಂಸ್ಕೃತಿಯನ್ನು ಹೊಂದಿದ್ದು. ಈ ಬಗೆಯ ಕಾರ್ಯಕ್ರಮವು ಮಾನವ ಏಕತೆ ಮತ್ತು ಸ್ವಾಭಾವಿಕ ಸಹೋದರತ್ವದ ಒಂದು ಕುರುಹಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜನಾಬ ಲಾಲಹುಸೇನ ಕಂದಗಲ್ಲ ರವರು ಮಾತನಾಡಿ, “ಇಫ್ತಾರ್ ಎಂದರೆ ಬಿಡುವುದು, ಉಪವಾಸವನ್ನು ನಿರ್ದಿಷ್ಟ ಸಮಯದ ವರೆಗೆ ನಿರ್ವಹಿಸಿ ದೇವನ ಆದೇಶದಂತೆ ತೊರೆಯುವುದು ಇಫ್ತಾರ್ ನ ಅರ್ಥವಾಗಿದೆ ಎಂದರು.ಇಫ್ತಾರ್ (ಉಪವಾಸ ತ್ಯಜಿಸುವುದು) ಅಪರಾಧ ಮನೋಭಾವ ಮತ್ತು ಎಲ್ಲಾ ಕೆಡುಕುಗಳನ್ನು ತ್ಯಜಿಸುವುದಾಗಿದೆ. ಪೋಲಿಸರ ಭಾಷೆಯಲ್ಲಿ ಗಿರಫ್ತಾರ್ ಎಂದರೆ ಅಪರಾಧಿಗಳನ್ನು ಹಿಡಿಯುವುದು ಎಂದರ್ಥ. ಇಫ್ತಾರ್ ಅದಕ್ಕೆ ವಿರುದ್ಧವಾದಿದ್ದು, ಸ್ವತಂತ್ರವಾಗುವುದು ಎಂದರ್ಥ ಎಂದರು.ಎಲ್ಲ ಧರ್ಮಗಳು ಮತ್ತು ವೇದ ಗ್ರಂಥಗಳಲ್ಲಿಯೂ ಕೂಡಾ ಈ ಉಪವಾಸ ವ್ರತದ ಬಗ್ಗೆ ಉಲ್ಲೇಖಿಸಲಾಗಿದೆ. ಈ ಉಪವಾಸದಿಂದ ನಿಮ್ಮಲ್ಲಿ ದೇವಭಯ ಉಂಟಾಗಬೇಕು ಅಂದಾಗ ಮಾತ್ರ ಈ ಉಪವಾಸ ವ್ರತಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು. ನನ್ನ ವರ್ತನೆಯಲ್ಲಿ ಬದಲಾವಣೆ ಯಾಗದಿದ್ದರೆ. ನನ್ನ ಜೀವನದಲ್ಲಿ ಬದಲಾವಣೆ ಆಗದಿದ್ದರೆ ಬೆಳಿಗ್ಗೆಯಿಂದ ಹಸಿವು ದಾಹ ಸಹಿಸುವುದು ವ್ಯರ್ಥವಾಗುವುದು. ಈ ಉಪವಾಸದ ಮೂಲ ಉದ್ದೇಶವು ನಮ್ಮ ಇಂದ್ರಿಯಗಳನ್ನು ನಿಗ್ರಹಿಸುವುದಾಗಿದೆ.

ಯಾವಾಗಲೂ ನನ್ನ ದೇವ ನನ್ನನ್ನು ನೋಡುತ್ತಿದ್ದಾನೆ, ನಾನು ಎಲ್ಲ ಕೆಡುಕುಗಳಿಂದ ದೂರ ಉಳಿಯಬೇಕು ಎನ್ನುವ ಭಾವನೆಯೇ ಇದರ ಹಿಂದಿರುವ ತಿರುಳಾಗಿದೆ ಎಂದರು. ಹಸಿವು, ದಾಹ ಸಹಿಸಿದಂತೆ ನಿಮ್ಮ ಅರಿಷಡ್ವರ್ಗಗಳನ್ನು ನಿಯಂತ್ರಿಸ ಬೇಕಾಗಿದೆ. ಇವತ್ತು ಎಲ್ಲ ಸವಲತ್ತುಗಳು ನಮ್ಮ ಬಳಿ ಇವೆ ಆದರೆ ನೈತಿಕ ಮೌಲ್ಯಗಳ ಕೊರತೆ ಇದೆ ಉಪವಾಸ ವ್ರತದಿಂದ ಅದನ್ನು ಪಡೆಯಲು ಸಾಧ್ಯವಾಗಬೇಕು ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಳಕಲ್ಲ ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಿ.ಸಿ ಚಂದ್ರಾಪಟ್ಟಣ ಸರ್ ರವರು ಮಾತನಾಡಿ ಜಮಾಅತೆ ಇಸ್ಲಾಮೀಯು ಇಂತಹ ಕಾರ್ಯಕ್ರಮಗಳಿಂದ ನಗರದಲ್ಲಿ ಎಲ್ಲಾ ಧರ್ಮಗಳ ಮಧ್ಯೆ ಸೌಹಾರ್ದತೆ ಬೆಸೆಯುವ ಕೆಲಸ ಮಾಡುತ್ತಿದೆ ಎಂದರು, ಸಂಘಟನೆಯವರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು ಅಂದಾಗ ಮಾತ್ರ ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಮಹಾದೇವ ಕಂಬಾಗಿ ರವರು ಮಾತನಾಡಿ “ಇಫ್ತಾರ್ ಸೌಹಾರ್ದ ಕೂಟ” ದಲ್ಲಿ ಸಂದರ್ಭೋಚಿತವಾಗಿ ಮಾತನಾಡುತ್ತಾ ತಮ್ಮ ಬಾಲ್ಯದ ಸೌಹಾರ್ದ ದಿನಗಳನ್ನು ಮೆಲುಕು ಹಾಕಿದರು ಹಾಗೂ ನಮ್ಮ ಹಿರಿಯರು ಕಲಿಸಿದ ಸಾಮರಸ್ಯದ ಮೌಲ್ಯಗಳನ್ನು ನಾವು ನಮ್ಮಲ್ಲಿ ಸಂಪೂರ್ಣವಾಗಿ ಅಳವಡಿಸಿ ಕೊಳ್ಳಲು ಹಾಗೂ ಇಂದಿನ ವಿದ್ಯಾರ್ಥಿ-ಯುವಕರು ವ್ಯಾಟ್ಸಾಪ್ ಸಂದೇಶಗಳನ್ನೆ ಸತ್ಯವೆಂದು ತಿಳಿದು, ವರ್ತಿಸುವುದು ಸರಿಯಲ್ಲ, ಕನ್ನಡ ಸಾಹಿತ್ಯ ಮತ್ತು ನಮ್ಮ ಸಹಬಾಳ್ವೆಯ ಪರಂಪರೆಯನ್ನು ಮುಂದುವರೆಸಿ ಕೊಂಡು ಹೋಗಬೇಕು ಎಂದರು. ಯುವ ಮುಖಂಡರಾದ ಹನುಮಂತ ಚುಂಚಾ ರವರು ಎಸ್.ಐ.ಓ (SIO) ಸಂಘಟನೆಯವರು ವಿದ್ಯಾರ್ಥಿ ಯುವ ಜನರ ನಡುವೆ ಅಧ್ಬುತ ಕಾರ್ಯ ಮಾಡುತ್ತಿದ್ದು, ಶೈಕ್ಷಣಿಕ ಮತ್ತು ಸಾಮಾಜಿಕ ರಂಗದಲ್ಲಿ ಇತರರಿಗೆ ಮಾದರಿ ಯಾಗಿದ್ದು, ಸರ್ಕಾರಿ ಶಾಲೆ, ಸಾರ್ವಜನಿಕ ವಿಶ್ವವಿದ್ಯಾಲಯ ಉಳಿವಿಗಾಗಿ, ವಿದ್ಯಾರ್ಥಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಡೈಟ್ ಕಾಲೇಜಿನ ಉಪನ್ಯಾಸಕರಾದ ಅಮರಯ್ಯ ಕಪ್ಪರದ ರವರು ಸೌಹಾರ್ದತೆಯ ಕುರಿತು ಮಾತನಾಡಿದರು.ನಗರದ ತೆರಿಗೆ ಸಲಹೆಗಾರರಾದ ಶ್ರೀ ಪ್ರಶಾಂತ್ ಹಂಚಾಟೆ ರವರು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹಾಗೂ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು. ಯುವ ಮುಖಂಡರಾದ ರಾಘವೇಂದ್ರ ಶಿಂಗಸೆಟ್ಟಿ ರವರು ಕೂಡಿ ಬಾಳುವ ಸಂಸ್ಕೃತಿ ಮತ್ತು ಕುರ್ ಆನ್ ನೀಡಿದ ಮಾನವ ಏಕತೆ ಕುರಿತು ಮಾರ್ಮಿಕವಾಗಿ ಮಾತನಾಡಿದರು.ವೇದಿಕೆ ಮೇಲೆ ನಗರಸಭಾ ಸದಸ್ಯರಾದ ಸುರೇಶ ಜಂಗ್ಲಿ, ಜಮಾಅತೆ ಇಸ್ಲಾಮೀಯ ಬಾಗಲಕೋಟೆ ಜಿಲ್ಲಾ ಸಂಚಾಲಕ ಅಬ್ದುಲ್ ರಹ್ಮಾನ ಬಿಳೇಕುದರಿ, ಸ್ಥಾನೀಯ ಅಧ್ಯಕ್ಷರಾದ ಸಯೀದ್ ಅಹ್ಮದ್ ಕೊತ್ವಾಲ್, ಉಪಸ್ಥಿತರಿದ್ದರು. ಕಾರ್ಯಕ್ರಮವು ಮೌಲಾನಾ ಫಾರೂಕ ಉಮರಿ ರವರ ಕುರಾನ್ ಪಠಣದ ಮೂಲಕ ಪ್ರಾರಂಭವಾಯಿತು, ಅಬ್ದುಲ್ ಗಫಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ