ಹಮಾಲಿ ಕಾರ್ಮಿಕರ ಮಕ್ಕಳು ಐಪಿಎಸ್ ಅಧಿಕಾರಿಗಳಾಗಬೇಕು :- ಅನಂತನಾಡಿಗ್ …..
ತರೀಕೆರೆ (ಮೇ.1) :
ಒಳ್ಳೆಯ ಆಹಾರ ಸೇವನೆಯಿಂದ ಹಮಾಲಿ ಕಾರ್ಮಿಕರು ಸದೃಢ ಆರೋಗ್ಯ, ಶಕ್ತಿವಂತರಾಗಬೇಕು ಆಗ ಹಮಾಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹಿರಿಯ ಪತ್ರಕರ್ತರಾದ ಅನಂತ ನಾಡಿಗ್ ರವರು ಇಂದು ಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿರುವ ಜಿಲ್ಲಾ ಹಮಾಲಿ ಕಾರ್ಮಿಕರ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು ಡಾ, ಬಿಆರ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ವಿಶ್ವಮಾನವ ಡಾ.ಬಿಆರ್ ಅಂಬೇಡ್ಕರ್ ರವರು ಮುಂದಾಲೋಚನೆಯಿಂದ ಸಂವಿಧಾನಬದ್ಧವಾಗಿ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಕಾಯಿದೆಗಳನ್ನು ಜಾರಿಗೆ ತಂದಿದ್ದಾರೆ, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಪಂಚದಲ್ಲಿಯೇ ಮಹತ್ವ ಪಡೆಯಲು ಅಂಬೇಡ್ಕರ್ ರವರು ನೀಡಿರುವ ಸಂವಿಧಾನವಾಗಿದೆ. ಹಮಾಲಿ ಕಾರ್ಮಿಕರು ಸಂಸ್ಕಾರವಂತರಾಗಬೇಕು ನಿಮ್ಮ ಮಕ್ಕಳು ಶಿಕ್ಷಣವಂತರಾಗಬೇಕು, ಜ್ಞಾನವಂತರಾಗಬೇಕು, ಐಎಎಸ್, ಐಪಿಎಸ್, ಅಧಿಕಾರಿಗಳಾಗಬೇಕು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕ,ದ,ಸಂ,ಸ,ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ಮಾತನಾಡಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಡೆಸಿದ ದಂಗೆ, ಕ್ರಾಂತಿಯ ದಿನವನ್ನು ಮೇ ಡೆ ಅಥವಾ ಕಾರ್ಮಿಕರ ದಿನವೆಂದು ಆಚರಣೆ ವಿಶ್ವದ್ಯಂತ ಮಾಡಲಾಗುತ್ತಿದೆ. ಸ್ವಾತಂತ್ರ ಭಾರತದಲ್ಲಿ ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರು ಕಾರ್ಮಿಕರಿಗೆ ಸಂವಿಧಾನ ಬದ್ಧವಾಗಿ ಸಮಯ ನಿಗದಿಪಡಿಸಿ ಅವರಿಗೆ ಭವಿಷ್ಯನಿಧಿ,ಇಎಸ್ಐ ಮುಂತಾದ ಕಾರ್ಮಿಕ ಕಲ್ಯಾಣ ಕಾಯ್ದೆಗಳನ್ನು ಜಾರಿಗೆ ತಂದರು. ಹಮಾಲಿ ಕಾರ್ಮಿಕರು ಕಳೆದ 35 ವರ್ಷಗಳಿಂದಲೂ ಸಮಾನತೆಯ ಸಂಕೇತವಾದ ನೀಲಿ ಸಮವಸ್ತ್ರ ಧರಿಸಿ ಸ್ವಾಭಿಮಾನಿಗಳಾಗಿದ್ದಾರೆ. ನೀವು ಹಮಾಲಿ ಕಾರ್ಮಿಕರಾಗಿದ್ದೀರಿ, ನಿಮ್ಮ ಮಕ್ಕಳು ಹಮಾಲಿ ಕಾರ್ಮಿಕರಾಗದೆ ಉನ್ನತ ಶಿಕ್ಷಣ ಪಡೆದು ಡಾಕ್ಟರ್ಸ್,ಇಂಜಿನಿಯರ್ಸ್, ಲಾಯರ್ಸ್, ತಹಶೀಲ್ದಾರ್,ಡಿಸಿ, ಎಸ್‌ಪಿ,ಯಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು, ಅಂತಹ ಗುರಿ ಸಾಧನೆ ಮಾಡಿಸಿರಿ ಎಂದು ಹೇಳಿದರು. ಜಿಲ್ಲಾ ಹಮಾಲಿ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ಪಿ ನಾರಾಯಣ ಮಾತನಾಡಿ ಹಮಾಲಿ ಕಾರ್ಮಿಕರೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಅಂಬೇಡ್ಕರ್ ರವರ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಕೆ ರಾಜು, ಹಿರಿಯ ಹಮಾಲಿ ಕಾರ್ಮಿಕರಾದ ಅಣ್ಣಪ್ಪ,ಆರ್ ವೆಂಕಟೇಶ್, ಟಿಸಿ ಬಸವರಾಜು,ನಾಗಪ್ಪ,ರಾಮಸ್ವಾಮಿ, ಮಧು, ಚರಣ್, ಉಪಸ್ಥಿತರಿದ್ದು ಸಂಘಟನಾ ಕಾರ್ಯದರ್ಶಿಯಾದ ಎ ಶ್ರೀನಿವಾಸ್ ಸ್ವಾಗತಿಸಿ,ನಿರೂಪಿಸಿ, ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ …