“ನನ್ನ ಅಪ್ಪ ಅಮ್ಮನಂತೆಯೇ ನನ್ನ ಪ್ರೀತಿಸುವ ಜೀವ ಅಂದ್ರೆ ನನ್ನ ಅಕ್ಕ”…..

ಅಮ್ಮನ ಸ್ಥಾನವನ್ನು ಹಾಗೂ ಅಮ್ಮ ಕೊಡೋ ಪ್ರೀತಿಯನ್ನು ಜಗತ್ತಿನಲ್ಲಿ ಯಾರಿಂದಲೂ ತುಂಬೋದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ. ಅದೇ ರೀತಿ ಅಕ್ಕನ ಸ್ಥಾನವನ್ನು ಕೂಡ ಬಹುಶಃ ಈ ಜಗತ್ತಿನಲ್ಲಿ ಯಾರಿಂದಲೂ ತುಂಬೋದಕ್ಕೆ ಸಾಧ್ಯವಿಲ್ಲ ಅನ್ಸುತ್ತೆ. ಯಾಕೆಂದ್ರೆ ಅಕ್ಕ ಎಂದರೆ ಆಕೆ ಅಮ್ಮನಂತೆ. ಮನೆಯಲ್ಲಿ ಅಮ್ಮ ಇಲ್ಲದಿದ್ದಾಗ ತಮ್ಮ /ತಂಗಿಯರ ಪಾಲನೆ – ಪೋಷಣೆ ಮಾಡುವ ಮಾತೃ ಹೃದಯಿ ನನ್ನ ಅಕ್ಕ. ಅಕ್ಕನಿಗೂ ಕೂಡ ಅಮ್ಮನ ಗುಣಗಳೇ ಬಳವಳಿಯಾಗಿ ಬಂದಿರುತ್ತದೆ. ಅಕ್ಕ ನಮಗೆಲ್ಲಾ ಎರಡನೇ ತಾಯಿ ಇದ್ದ ಹಾಗೆ. ಆಕೆ ತಮ್ಮ / ತಂಗಿಯರನ್ನು ಓದಿಸುತ್ತಾಳೆ, ಬರೆಸುತ್ತಾಳೆ. ಅವರ ಬೇಕು – ಬೇಡ ವಿಚಾರಿಸುತ್ತಾಳೆ. ಅಮ್ಮನಷ್ಟೇ ಪ್ರೀತಿ, ಕಾಳಜಿಯನ್ನು ತೋರುತ್ತಾಳೆ. ಅದಕ್ಕೆ ಅಕ್ಕನನ್ನು ಎರಡನೇ ತಾಯಿ ಎಂದು ಕರೆಯುತ್ತಾರೆ. ಇನ್ನೂ ನಾವು ಬೆಳೆದು ದೊಡ್ಡವರಾದ ಮೇಲೆಯೂ ಕೂಡ ಆಕೆಯ ಜೀವನದಲ್ಲಿ ಏನೇ ಸಮಸ್ಯೆಗಳಿದ್ದರೂ ಕೂಡ ಅವಳು ನಮ್ಮ ಸಮಸ್ಯೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾಳೆ. ಆಕೆ ನಮ್ಮನ್ನು ಪ್ರೀತಿ ಮಾಡುತ್ತಾಳೆ, ಪೋಷಿಸುತ್ತಾಳೆ, ಕಾಳಜಿ ಮಾಡುತ್ತಾಳೆ. ಕಷ್ಟ ಬಂದಾಗ ನಮ್ಮ ಜೊತೆಗೆ ನಿಲ್ಲುವ ಕರುಣಾಮಯಿ ನಮ್ಮಕ್ಕ. ಸಂಕಷ್ಟದಲ್ಲಿ ನಮಗೆ ಸಹಾಯ ಮಾಡುತ್ತಾ, ಮಾರ್ಗದರ್ಶನ ನೀಡುತ್ತಾಳೆ. ಪ್ರೀತಿಯ ಅಕ್ಕನಿಂದ ಕಲಿಯೋದು ತುಂಬಾನೇ ಇದೆ. ಆಕೆಯಲ್ಲಿರುವ ತಾಳ್ಮೆ ಬೇರೆ ಯಾರಲ್ಲೂ ಇರೋದಕ್ಕೆ ಸಾಧ್ಯವೇ ಇಲ್ಲ. ಅಪ್ಪ – ಅಮ್ಮನನ್ನು ಬಿಟ್ಟರೆ ಅಕ್ಕನೇ ನಮ್ಮ ಮನೆಯ ರಿಯಲ್ ಹೀರೋ. ಅಕ್ಕ ಅವಳು ಯಾವುದೇ ಪರಿಸ್ಥಿತಿಯಲ್ಲೂ ನಮ್ಮ ಕೈ ಬಿಡೋದಿಲ್ಲ. ನಮ್ಮ ಜೊತೆಗೆ ನಿಂತು ನಮಗೆ ಶಕ್ತಿಯನ್ನು ತುಂಬುತ್ತಾಳೆ. ನಾನು ಮತ್ತು ನನ್ನ ಅಣ್ಣ – ತಮ್ಮಂದಿರು ಶಾಲೆಗೆ ಹೋಗುವಾಗ ನಮ್ಮ ಅಕ್ಕ ನಮ್ಮನ್ನು ಯಾವ ರೀತಿ ರಕ್ಷಣೆ ಮಾಡುತ್ತಿದ್ದಳೋ ಅದೇ ರೀತಿ ದೊಡ್ಡವರಾದ ಮೇಲೆಯೂ ಕೂಡ ರಕ್ಷಣೆ ಮಾಡುತ್ತಿದ್ದಾಳೆ. ನಮ್ಮ ಮೇಲೆ ಯಾವಾಗಲೂ ಅಕ್ಕನ ಕಣ್ಣು ಇದ್ದೇ ಇರುತ್ತದೆ. ನಾವು ದಾರಿ ತಪ್ಪಿದಾಗ ಪೋಷಕರ ಬಳಿ ಹೇಳುವ ಬದಲು ಆಕೆ ಮೊದಲು ನಮ್ಮ ತಿದ್ದಿ ಬುದ್ಧಿ ಹೇಳುತ್ತಾಳೆ. ಆಕೆ ದುಡಿಯುವ ಸಂದರ್ಭದಲ್ಲಿ ನಮ್ಮ ಬೇಡಿಕೆಗಳಿಗೆ ಇಲ್ಲ ಅಂದವಳಲ್ಲ. ಸಮಾಜದಲ್ಲಿ ನಮಗೆ ಉತ್ತಮ ಸ್ಥಾನ – ಮಾನ ದೊರೆಯಬೇಕೆಂದು ಹಾತೊರೆಯುವ ಮನಸ್ಸು ಅವಳದ್ದು. ಅಕ್ಕ ಎಂಬ ಪದವೇ ಬೆಚ್ಚಗೆ, ಮುನಿಸಿಕೊಳ್ಳುವುದಕ್ಕೆ, ಜೊತೆಯಾಗಿ ಓಡಾಡುವುದಕ್ಕೆ, ಕೀಟಲೆ ಮಾಡಲು, ನೋವಾದಾಗ ತಬ್ಬಿಕೊಂಡು ಅಳಲು ಸಮಾಧಾನ ಮಾಡಲು, ಸ್ನೇಹಿತೆಯಂತೆ ಮನದ ಮಾತನ್ನು ಹೇಳಲು ಎಲ್ಲದಕ್ಕೂ ಅಕ್ಕ ಬೇಕೇ ಬೇಕು ಅನ್ಸುತ್ತೆ, ಇವೆಲ್ಲವೂ ಅನುಭವವಾಗುವುದು ಅಕ್ಕನನ್ನು ಅತಿಯಾಗಿ ಪ್ರೀತಿಸಿದವರಿಗೆ ಮಾತ್ರ. ಅಕ್ಕ ಎನ್ನುವ ಪದವೇ ಹಾಗೆ. ಅಕ್ಕ ಎಂಬ ಎರಡಕ್ಷರವು ಅಕ್ಕರೆ ಎಂಬ ಮೂರಕ್ಷರದ ಅನ್ವರ್ಥ ಎಂದೆ ಹೇಳಬಹುದು. ಅಕ್ಕ ಅನಿಸಿಕೊಂಡರೆ ಸಾಕೇ? ತಮ್ಮ -ತಂಗಿಯರೊಡನೆ ಆಕೆ ಜಗಳ ಮಾಡಬಾರದು, ತಮ್ಮ – ತಂಗಿಯರ ಮನ ನೋಯಿಸಬಾರದು ಅಂತೆಲ್ಲಾ ಅನ್ನುವ ಹೆತ್ತವರು ಮನೆಯ ಮೊದಲ ಮಗಳು ಹಟ ಮಾಡಿದರೆ ಅಥವಾ ತಪ್ಪು ಮಾಡಿದರೆ ಹೇಳುವ ಮಾತು ನೀನೇ ಹೀಗೆ ಮಾಡಿದರೆ ಹೇಗೆ? ನೀನು ಸರಿ ಇದ್ದರೆ ನಿನ್ನ ತಮ್ಮ – ತಂಗಿಯರೂ ಸರಿ ಇರುತ್ತಾರೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಅನ್ನುವ ಗಾದೆಯೇ ಇದೆ. ಆದುದರಿಂದ ಅಕ್ಕ ಆದವಳು ಉಳಿದವರಿಗೆ ಮೇಲ್ಪoಕ್ತಿಯಾಗಿರಬೇಕು. ಇಂತಹ ಮಾತುಗಳು ನಿಜವೂ ಅನ್ನಿಸುವಂತಹ ಎಷ್ಟೋ ಉದಾಹರಣೆಗಳಿವೆ. ಅಕ್ಕನನ್ನೇ ಅನುಸರಿಸುವ ಒಡಹುಟ್ಟಿದವರಿಗೆ ಅಕ್ಕ ಹೇಳಿದ್ದು ವೇದವಾಕ್ಯ. ಅಕ್ಕನ ಸಾಧನೆಗಳು ಒಡಹುಟ್ಟಿದವರಿಗೆ ಸ್ಫೂರ್ತಿಯ ಸೆಲೆಗಳು. ಅಕ್ಕನ ಸಹಾಯ ಮತ್ತು ಮಾರ್ಗದರ್ಶನ ಜೊತೆಗೆ ಅಕ್ಕ ನಡೆದ ದಾರಿಯಲ್ಲಿಯೇ ಸಾಗಿ ಬದುಕಿನಲ್ಲಿ ನೆಲೆ ಕಂಡುಕೊಳ್ಳುವರು. ಅಕ್ಕ ತನ್ನ ನೋವನ್ನು ನುಂಗಿಕೊಂಡು, ತಮ್ಮ ತಂಗಿಯರ ನೋವಿಗೆ ಸಾಂತ್ವನ ನೀಡುವವಳು. ತನ್ನ ಸಮಸ್ಯೆಯನ್ನು ಬದಿಗಿಟ್ಟು, ಒಡಹುಟ್ಟಿದವರ ಸಮಸ್ಯೆಯನ್ನು ಪರಿಹರಿಸಲು ಯತ್ನಿಸುವಳು. ಅದಕ್ಕೆ ಹೇಳಿರುವುದು ಅಪ್ಪ ಅಮ್ಮನಂತೆಯೇ ಪ್ರೀತಿಸುವ ಇನ್ನೊಂದು ಜೀವ ಅಂದ್ರೆ ಅಕ್ಕ ಅಂತ. ಪ್ರತಿಯೊಬ್ಬರಿಗೂ ಮೊದಲು ಗುರು. ಮೊದಲ ಸ್ನೇಹಿತೆ ಎಂದೆಲ್ಲಾ ಇದ್ದೇ ಇರುತ್ತಾರೆ. ಹಾಗೆ ನನ್ನ ಜೀವನದಲ್ಲಿ ಮೊದಲ ಗುರು ನನ್ನ ತಂದೆ – ತಾಯಿಯಂತೆ ಅವರಿಗೆ ಸಮನಾಗಿರುವ ನನ್ನ ಪ್ರೀತಿಯ ಅಕ್ಕ. ಮೊದಲ ಸ್ನೇಹಿತೆ ನನ್ನಕ್ಕ. ತಾಯಿಯ ಪ್ರೀತಿ, ತಂದೆಯ ಮಮಕಾರ, ಅಣ್ಣನ ಕಾಳಜಿ ಇಷ್ಟೆಲ್ಲಾ ಭಾವಗಳನ್ನು ಒಂದೆಡೆ ಕೂಡಿಟ್ಟು ನನಗೆ ನೀಡಿರುವುದು ನನ್ನ ಅದೃಷ್ಟ. ಸಂಬಂಧದಲ್ಲಿ ಸಹೋದರಿಯಾದರೂ ಪ್ರಾಣ ಸ್ನೇಹಿತೆಯಂತೆ ಇದ್ದಾಳೆ ನನ್ನ ಅಕ್ಕ. ನನ್ನ ಚಿಕ್ಕ ಪುಟ್ಟ ತಪ್ಪುಗಳನ್ನು ತಿದ್ದಿ ಸರಿದಾರಿಗೆ ಕೊಂಡೊಯ್ಯುವ ಮಮತಾಮಯಿ ಇವಳು. ಕೆಲವೊಮ್ಮೆ ಹೇಳಿದ ಮಾತು ಕೇಳದೆ ಇದ್ದಾಗ, ಸಹಿಸಿಕೊಂಡು ಇನ್ನೂ ಕೆಲವೊಮ್ಮೆ ಗದರಿ ಆ ಕ್ಷಣಕ್ಕೆ ನನ್ನ ಬಾಯನ್ನು ಮುಚ್ಚಿಸಿ ಮತ್ತೆ ನಗು ಮುಖದಿಂದ ಮಾತನಾಡಿಸುವ ನನ್ನ ಪ್ರೀತಿಯ ಅಕ್ಕ ಇವಳು. ನನ್ನ ಪಾಲಿನ ಎರಡನೇ ತಾಯಿ ಇವಳು. ಅಪ್ಪ – ಅಮ್ಮ ಕೂಡ ನನ್ನನ್ನು ಹೆಚ್ಚಾಗಿ ನೋಡಿಕೊಳ್ಳುತ್ತಿದ್ದಾರೆ. ಈ ಮುಗ್ದ ಪ್ರೀತಿ ಸಂಬಂಧವನ್ನು ಎಂದಿಗೂ ಕಳೆದುಕೊಳ್ಳಲು ನಾನು ಇಚ್ಛಿಸುವುದಿಲ್ಲ. ನಮ್ಮಿಬ್ಬರ ಪ್ರೀತಿ ಹೊಂದಾಣಿಕೆಯನ್ನು ನೋಡಿ ಹೊಟ್ಟೆ ಉರಿ ಪಟ್ಟುಕೊಂಡವರೂ ಇದ್ದಾರೆ. ಹಾಗೆಯೇ ಅಕ್ಕ – ತಂಗಿ ಅಂದ್ರೆ ಹೀಗಿರಬೇಕೆಂದು ಹೇಳಿದವರೂ ಇದ್ದಾರೆ. ಹಾಗಿದ್ದ ಮೇಲೆ ನಮ್ಮ ಸಂಬಂಧ ಇನ್ನೂ ಬಿಗಿಯಾಗಿ ಸಾಗಬೇಕೆಂಬುದೇ ನನ್ನಾಸೆ. ಅಕ್ಕ ನಿನ್ನ ಅಕ್ಕರೆ ನನ್ನ ಮೇಲೆ ಸದಾ ಹೀಗೆಯೇ ಇರಲಿ. ತಾಯಿಯಾಗಿ ಮಮತೆ ತೋರುವ, ತಂದೆಯಾಗಿ ಮಾರ್ಗದರ್ಶಿಸುವ, ಗೆಳತಿಯಾಗಿ ಜೊತೆಗಾತಿಯಾಗುವ, ಗುರುವಾಗಿ ಬಾಳಿಗೆ ಅರ್ಥ ತೋರುವ ವಿಶೇಷ ವ್ಯಕ್ತಿತ್ವದ ಅಕ್ಕನೆಂಬ ಜೀವ. ಅಕ್ಕರೆಯ ಪ್ರೀತಿ ತೋರುವಳು, ಸೋಲಿನಲ್ಲೂ ಜತೆಗಿರುವಳು, ಅತ್ತರೆ ಕಣ್ಣೊರೆಸುವಳು, ಬೇಸರವಾದರೆ ನಗಿಸುವಳು, ಅಮ್ಮನಂತೆ ಮುದ್ದಿಸುವಳು, ಮಗಳಂತೆ ನೋಡಿಕೊಳ್ಳುವಳು, ಕಷ್ಟದಲ್ಲಿ ಕೈ ಹಿಡಿಯುವಳು, ನನ್ನ ಪಾಲಿನ ಭಾಗ್ಯ ಇವಳು ನನ್ನಕ್ಕ.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ