ಆಕಸ್ಮಿಕ ಬೆಂಕಿ – ಮನೆ ಬೆಂಕಿಗಾಹುತಿ.
ಕೂಡ್ಲಿಗಿ ಆಗಷ್ಟ.18

ಆಕಸ್ಮಿಕ ಬೆಂಕಿ ಅವಘಡದಿಂದಾಗಿ ವಾಸದ ಮನೆಯೊಂದು ಸುಟ್ಟುಹೋಗಿರುವ ಘಟನೆ ತಾಲೂಕಿನ ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಳ ಶೆಟ್ಟಿಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಗ್ರಾಮದ ಗೊಲ್ಲರ ನಿಂಗಮ್ಮ ಗಂಡ ದಿ ಹನುಮಂತಪ್ಪ ಎಂಬುವರ ಮನೆಯೇ ಬೆಂಕಿಗಾಹುತಿಯಾಗಿದ್ದು,

ಲಕ್ಷಾಂತರ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮನೆಯಲ್ಲಿ ಯಾರು ಇಲ್ಲದೆ ಹೊಲದಲ್ಲಿ ಕಳೆ ತೆಗೆಯಲು ಹೋದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟರೂ ಪ್ರಯೋಜನವಾಗಿಲ್ಲ. ಸುದ್ದಿ ತಿಳಿದು ಅಗ್ನಿಶಾಮಕದಳದ ಸಿಬ್ಬಂದಿಗಳು ಬರುವಷ್ಟರಲ್ಲಿ ಮನೆಯು ಭಾಗಶಃ ಸುಟ್ಟುಹೋಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಬೆಂಕಿಯನ್ನು ನಂದಿಸುವ ಮೂಲಕ ಅಕ್ಕಪಕ್ಕದ ಮನೆಗಳಿಗೆ ಆಗಬಹುದಾದ ಭಾರೀ ಅನಾಹುವನ್ನು ತಪ್ಪಿಸಿದರು.
ಮನೆಯ ಮುಂದೆ ವಿದ್ಯುತ್ ಕಂಬ ಸುಟ್ಟು ಕರ್ಕಲಾಗಿದೆ, ಮನೆಯಲ್ಲಿ ದಾಸ್ತಾನಿಟ್ಟಿದ್ದ ದವಸ ಧಾನ್ಯ, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಲಕ್ಷಾಂತರ ರು.ಗಳ ನಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನೆ. ಕೂಡ್ಲಿಗಿ