ಭರವಸೆಯ ಬೆಳಕು ಮೂಡಿಸಿದ – ನಾಯಕನಿಗೆ ನಂದಾ ದೀಪ.
ಕೂಡ್ಲಿಗಿ ಡಿ.10

ಸಮ ಸಮಾಜಕ್ಕೆ ಹೋರಾಡಿದ ಮಹಾನ್ ನಾಯಕನಿಗೆ ನಮನ ಸಲ್ಲಿಸುವ ಅದೆಷ್ಟೋ ಕಾರ್ಯಕ್ರಮಗಳನ್ನು ಆಯೋಜಿಸಿದರೂ, ಕಡಿಮೆಯೇ ಎಂದು ತಾಲೂಕು ಕಜಾಪ ಅಧ್ಯಕ್ಷ ಕೆ.ಯಂ ವೀರೇಶ್ ನುಡಿದರು. ಪಟ್ಟಣದ ಬಂಡೇಬಸಾಪುರ ರಸ್ತೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮದ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಅಂಬೇಡ್ಕರ್ ವಿಶ್ವ ನಾಯಕನಾಗಿರುವುದು ಅವರ ಜ್ಞಾನದ ಬಲದಿಂದ ನಿಮ್ಮಂತೆ ವಸತಿ ನಿಲಯಗಳು ಇಲ್ಲದ ಕಾಲಮಾನದಲ್ಲಿ ಬೀದಿ ಬದಿಯ ದೀಪದ ಬುಡದಲ್ಲಿ ಓದುವ ಮೂಲಕ ತಿರುಗುವ ಈ ಭೂ ಮಂಡಲದಲ್ಲಿ ಶಾಶ್ವತ ಸಾಧನೆ ಮಾಡಿ, ಅವರ ಹೆಸರು ಚಿರ ಸ್ಥಾಯಿಯಾಗಿ ಉಳಿಯುವಂತೆ ಮಾಡಿ ಹೋಗಿದ್ದಾರೆ. ದೇಶದಲ್ಲಿ ಇಂತವರ ಸಾರ್ಥಕ ಕಾರ್ಯಗಳಿಂದಾಗಿ, ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಪ್ರಪಂಚದಲ್ಲಿ ಕಂಗೊಳಿಸುತ್ತಿದೆ ಎಂದರು. ಜ್ಞಾನ ಸಂಪಾದನೆ ಮಾಡಿದಷ್ಟು, ಈ ಜಗತ್ತಿನ ಬೆಲೆ ಎಂಬುದು ಅವರಿಗೆ ಅರಿವಿತ್ತು, ಕೊನೆಗೂ ಅದರಿಂದಲೇ ವಿಶ್ವ ಮಾನ್ಯರಾಗಿ, ಸಂವಿಧಾನ ಶಿಲ್ಪಿಯಾಗಿದ್ದಾರೆ. ದಲಿತ, ದಮನಿತ, ಶೋಷಿತ, ಬಡ ಕೂಲಿ ಕಾರ್ಮಿಕರಿಗೆ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ ಆಶಾ ಕಿರಣವಾಗಿ ಗೋಚರಿಸಿದ್ದಾರೆ. ಅಪಾರ ನೋವುಗಳನ್ನು ಸಹಿಸಿ ಕೊಂಡು, ಮೇಲುವರ್ಗದ ಜನರು ನೀಡುವ ಚಿತ್ರ ಹಿಂಸೆಗಳಿಗೆ ತನುವೊಡ್ಡಿ, ಮನನೊಂದು, ಅದೇ ದೃಢ ಮನದಿಂದ ಹಗಲಿರಳು ಎನ್ನದೆ ರಾಕ್ಷಸನಾಗಿ ಅಧ್ಯಯನ ಮಾಡದಿದ್ದರೆ, ತನ್ನಂತೆ ನೋವುಗಳನ್ನು ಸಹಿಸಿ ಕೊಂಡ ದೇಶದ ಜನರ ಕಲ್ಯಾಣಕ್ಕೆ ರಕ್ಷಣೆ ನೀಡಲು ಅಕ್ಷರಶಃ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇಶ, ವಿದೇಶಗಳ. ಅನೇಕ ಮಹನೀಯರು ಬರೆದ ದೊಡ್ಡ ದೊಡ್ಡ ಗ್ರಂಥಗಳಿಂದ ತುಂಬಿದ ಮನೆಯೇ ಶಾರದಾ ಮಾತೆಯ ಆಲಯವಾಗಿತ್ತು.

ಇದರೊಂದಿಗೆ ಲಿಖಿತ ರೂಪದ ಸಂವಿಧಾನದಲ್ಲಿ ಮಾನವೀಯತೆಯ ನೆಲಗಟ್ಟಿನಲ್ಲಿ ಬೇಕಾದ ಸ್ವಾತಂತ್ರ್ಯವನ್ನು ಕಲ್ಪಿಸಿ ಆಧುನಿಕ ಕಲ್ಪವೃಕ್ಷವಾದ ಬಾಬಾ ಸಾಹೇಬರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ವೀರೇಶ್ ಹೇಳಿದರು. ನಿಲಯ ಮೇಲ್ವೀಚಾರಕ ಮಲ್ಲಪ್ಪ ಮಾತನಾಡಿ, ಈ ನೆಲದ ಪ್ರತಿಯೊಂದು ವಿಚಾರಗಳ ಬಗ್ಗೆ ಆಳ, ಅರಿವು ಇದ್ದರಿಂದ ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಸ್ಪಷ್ಟವಾದ ಜ್ಞಾನದ ಪರಿಣಾಮ ದೇಶಕ್ಕೆ ಬಲಿಷ್ಟ ಮತ್ತು ಶ್ರೇಷ್ಟ ಸಂವಿದಾನವನ್ನು ನೀಡಿದರು. ಅಸಮಾನತೆಯೇ ಮೇಳೈಸುತ್ತಿದ್ದ ಕಾಲದಲ್ಲಿ ತಾನು ಅನುಭವಸಿದ ಯಮ ಯಾತನೆಗಳು ಮುಂದಿನ ಜನಾಂಗಕ್ಕೆ ಮುಂದುವರಿಯ ಬಾರದು, ಎಲ್ಲರಂತೆ ಅವರು ಸಮಾನತೆಯಿಂದ ಬದುಕ ಬೇಕೆಂಬ ಹಂಬಲದಿಂದ ನಿರಂತರ ಅಧ್ಯಯನಗಳಿಂದ ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯದ ವಿರುದ್ಧ ಹೋರಾಡಿ, ಪ್ರತಿಯೊಬ್ಬರ ಹಕ್ಕುಗಳಿಗಾಗಿ ನ್ಯಾಯ ಮಂಡನೆ ಮಾಡಿದರು. ನ್ಯಾಯ ಶಾಸ್ತ್ರಜ್ಞ, ಅರ್ಥಶಾಸ್ತಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನ ದಿಂದ ಹೋರಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಅನುಪಮ ಮನದ ಮಹಾನ್ ಮಾನವತಾವಾದ ಅಂಬೇಡ್ಕರ್ ಇಂದಿಗೂ ನಮ್ಮೊಡನೆ ಇದ್ದಾರೆ ಎಂದರು. ನಿಲಯದ ಅಡುಗೆ ಯವರಾದ ಹೆಚ್.ನಾಗರಾಜ್, ಮೀನಾಕ್ಷಮ್ಮ, ಮಹಮ್ಮದ್ ರಫಿ, ಸಿರಿಬಿ ರಾಘವೇಂದ್ರ ಮತ್ತು ರುಕ್ಸಾನ್ ಬೇಗಂ ಇದ್ದರು. ನಿಲಯದ ಬಾಲಕರು ಕ್ಯಾಂಡಲ್ ಬೆಳಕಿನೊಡನೆ, ಆಶಾ ಜ್ಯೋತಿ ಅಂಬೇಡ್ಕರ್ ಅವರಿಗೆ ನಮನಗಳನ್ನು ಸಲ್ಲಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ. ಸಾಲುಮನೆ.ಕೂಡ್ಲಿಗಿ.ವಿಜಯನಗರ