ರಸ್ತೆ ಕಾಮಗಾರಿಯ ನಿರ್ಮಾಣದಲ್ಲಿ ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಿ – ಶಾಸಕ ಕಾಶಪ್ಪನವರ.

ಹುನಗುಂದ ನವೆಂಬರ್.13

ರಸ್ತೆ ಕಾಮಗಾರಿಯಲ್ಲಿ ಉತ್ತಮ ಗುಣ ಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಶಾಸಕ ವಿಜಯಾನಂದ ಕಾಶಪ್ಪನವರ ಗುತ್ತಿಗೆದಾರರಿಗೆ ಸೂಚಿಸಿದರು.ಶುಕ್ರವಾರ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಪುನರ್ವಸತಿ ವಿಭಾಗ ಕಚೇರಿ -೦೨ ಆಲಮಟ್ಟಿರವರ ಅಡಿಯಲ್ಲಿ ಬರುವ ಇದ್ದಲಗಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅನುದಾನದಲ್ಲಿ ಮೂಲಭೂತ ಸೌಕರ್ಯ ಮತ್ತು ೨.೩೯ ಕೋಟಿ ಅನುದಾನದಲ್ಲಿ ಇದ್ದಲಗಿ ಗ್ರಾಮದಿಂದ ಧನ್ನೂರ ಕ್ರಾಸ್‌ ದವರಗೆ ರಸ್ತೆ ಕಾಮಗಾರಿ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ಕಳೆದ ೨೦೧೩ರಲ್ಲಿ ಶಾಸಕನಾಗಿದ್ದ ವೇಳೆಯಲ್ಲಿ ನಾರಾಯಣಪೂರ ಹಿನ್ನೀರಿನಿಂದ ಬಾಧಿತಗೊಂಡ ೧೦ ಗ್ರಾಮಗಳ ಪುನರ್ವಸತಿ ಅಭಿವೃದ್ದಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಭೂಮಿ ಪೂಜೆ ನೆರವೇರಿಸಿ ಕೆಲಸ ಪ್ರಾರಂಭಿಸಿದೆ.ಆದರೆ ಕಳೆದ ಬಿಜೆಪಿ ಸರ್ಕಾರ ಪುನರ್ವಸತಿ ಅಭಿವೃದ್ದಿಗೆ ಅನುದಾನ ನೀಡಲಿಲ್ಲ ಮತ್ತು ಅಭಿವೃದ್ದಿ ಕೈ ಕೊಳ್ಳಲಿಲ್ಲ.ಸದ್ಯ ಕಳೆದ ವಿಧಾನ ಸಭೆ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವುಕುಮಾರ ಅವರಿಗೆ ಹುನಗುಂದ ತಾಲೂಕಿನ ೧೦ ಪುನರ್ವಸತಿ ಕೇಂದ್ರಗಳ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡುವಂತೆ ತಿಳಿಸಿದಾಗ ೧೦ ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದು.ಆ ೧೦ ಕೋಟಿ ಅನುದಾನದಲ್ಲಿ ೧೦ ಪುನರ್ವಸತಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಶೀಘ್ರದಲ್ಲಿ ಸಂತ್ರಸ್ಥರು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡುವ ವ್ಯವಸ್ಥೆ ಮಾಡುತ್ತೇನೆ.ಪುನರ್ವಸತಿ ಕೇಂದ್ರದ ನಿವೇಶನ ಹಂಚಿಕೆ ಮತ್ತು ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಮುಂದಿನ ವಾರವೇ ಇದ್ದಲಗಿಯಲ್ಲಿಯೇ ಪುನರ್ವಸತಿ ಮತ್ತು ಪುನರ ನಿರ್ಮಾಣ ಇಲಾಖೆಯ ಎಲ್ಲಾ ಅಧಿಕಾರಿಗಳ ಗ್ರಾಮ ಸಭೆ ಕರೆದು ಇತ್ಯರ್ಥ ಪಡಿಸಲಾಗುವುದು.ಸದ್ಯ ಇದ್ದಲಗಿಯಿಂದ ಧನ್ನೂರ ಕ್ರಾಸ್‌ನವರಗೆ ೨.೩೯ ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ೪.೫ ಕಿಮೀ ರಸ್ತೆ ಕಾಮಗಾರಿಯನ್ನು ಅತ್ಯಂತ ಗುಣ ಮಟ್ಟದಿಂದ ಕೂಡಿರಬೇಕು ಎಂದರು.ಗ್ರಾಮಸ್ಥ ಸಂಗಮೇಶ ಹಾವರಗಿ ಮಾತನಾಡಿ ಪುನರ್ವಸತಿ ಕೇಂದ್ರದ ನಿವೇಶನ ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯವಾಗಿದೆ.ಒಂದೇ ಕುಟುಂಬದ ನಾಲ್ಕು ಜನ ಅಣ್ಣತಮ್ಮರಿಗೆ ಬೇರೆ ಬೇರೆ ಕಡೆಗೆ ಪ್ಲಾಟ್ ಹಂಚಿಕೆ ಮಾಡಿದ್ದು.ಇದು ಸರಿಯಾದ ಕ್ರಮವಲ್ಲ ಅದನ್ನು ಸರಿಪಡಿಸಿ ಹಕ್ಕುಪತ್ರ ನೀಡಬೇಕು ಎಂದರು.ಗ್ರಾ.ಪಂ ಸದಸ್ಯ ಎನ್.ಕೆ.ಮುಲ್ಲಾ ಮಾತನಾಡಿ ಇದ್ದಲಗಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ೫೦೮೦ ನಿವೇಶನಗಳಲ್ಲಿ ೧೨೦೩ ನಿವೇಶನಗಳು ಮಾತ್ರ ಸಂತ್ರಸ್ಥರಿಗೆ ಹಂಚಿಕೆಯಾಗಿದ್ದು.ಸದ್ಯ ೫೦೦ ಸಂತ್ರಸ್ಥರಿಗೆ ಮಾತ್ರ ಹಕ್ಕುಪತ್ರ ಹಂಚಿಕೆಯಾಗಿವೆ.ಇನ್ನು ಗ್ರಾಮದಿಂದ ಅನೇಕ ಕಾರಣಗಳಿಂದ ಬೇರೆಡೆ ವಾಸಿಸುತ್ತಿರುವ ೧೮೮ ಜನರಿಗೆ ಹಕ್ಕು ಪತ್ರ ನೀಡಲು ಅಧಿಕಾರಿಗಳು ಮೀನಾಮೇಷ ಎನ್ನಿಸುತ್ತಿದ್ದಾರೆ.ಗಂಡ ಹೆಂಡತಿಯ ಹೆಸರಿನಲ್ಲಿ ಎರಡು ಮನೆಗಳಿದ್ದರೂ ಒಂದೇ ನಿವೇಶನ ಹಂಚಿಕೆಯಾಗುತ್ತಿದೆ.ಇಂತಹ ಅನೇಕ ಸಮಸ್ಯೆಗಳಿದ್ದು ಅವುಗಳನ್ನು ಪರಿ ಹರಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ನಾರಾಯಣಪೂರ ಪುನರ್ವಸತಿ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಎಸ್.ಮಂಜನಾಳ,ಸಹಾಯಕ ಅಭಿಯಂತರ ಬಿ.ಜಿ.ಭದ್ರಶೆಟ್ಟಿ,ಮುಖಂಡ ವಿಜಯ ಮಹಾಂತೇಶ ಗದ್ದನಕೇರಿ,ಗ್ರಾಮಸ್ಥರಾದ ಶರಣಯ್ಯ ಮಂಟೇದೇವರಮಠ,ಚನ್ನಯ್ಯ ಹೊಸಗೌಡ್ರ,ನಿಂಗನಗೌಡ ನಾಡಗೌಡ್ರ,ಸಿ.ಎಸ್.ಅಂಗಡಿ,ಬಿ.ಎಸ್.ಬಡ್ಡಿ,ಗ್ರಾ.ಪಂ ಸದಸ್ಯ ಸಂಗಮೇಶ ಆನೇ ಹೊಸೂರ,ಶಂಕ್ರಪ್ಪ ಚಿಕ್ಕೋಡಿ,ಗುತ್ತಿಗೆದಾರ ವೆಂಕಣ್ಣ ದ್ಯಾವನಗೌಡ್ರ ಸೇರಿದಂತೆ ಅನೇಕರು ಇದ್ದರು.

ಬಾಕ್ಸ್ ಸುದ್ದಿ-ಇದ್ದಲಗಿ ಗ್ರಾಮದಿಂದ ಧನ್ನೂರ ಕ್ರಾಸ್‌ನವರಗೆ ರಸ್ತೆ ಕಾಮಗಾರಿ ೨.೩೯ ಕೋಟಿ ಅನುದಾನದಲ್ಲಿ ೪.೫ ಕಿ.ಮೀ ಉದ್ದ ೫.೫ ಮೀ ಅಗಲದ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿದ್ದು.ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿತ್ತು.ಸದ್ಯ ಕಾಮಗಾರಿ ಆರಂಭಕ್ಕೆ ಗ್ರಾಮಸ್ಥರು ಸಹಕಾರ ಅಗತ್ಯ.ಎಸ್.ಎಸ್.ಮಂಜನಾಳ.ಸಹಾಯಕ ಕಾರ್ಯಪಾಲಕ ಅಭಿಯಂತರರು ನಾರಾಯಣಪೂರ,

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button