ಸಹಾಯ ಮಾಡಿದ ಖುಷಿ…..

ಒಂದು ಚಿಕ್ಕ ಸಹಾಯ ಮನಸ್ಸಿಗೆ ಎಷ್ಟು ಖುಷಿ ಕೊಡುತ್ತದೆ ಎನ್ನುವುದು ಸಹಾಯ ಮಾಡಿದವರಿಗೆ ಬಹಳ ಚೆನ್ನಾಗಿ ಗೊತ್ತಿರುತ್ತದೆ ಅಲ್ಲವೇ?ಹೌದು ಇದು ನನಗೂ ಅನುಭವವಾದಂತದ್ದು. ಕೇವಲ ದುಡ್ಡು, ವಸ್ತುಗಳನ್ನು ಕೊಟ್ಟು ಮಾಡುವುದಷ್ಟೇ ಸಹಾಯವಲ್ಲ. ಸಹಾಯದ ಅರ್ಥ ಬಹಳ ದೊಡ್ಡದಿದೆ. ದುಃಖದಲ್ಲಿದ್ದವರಿಗೆ ಒಂದೆರಡು ಸಾಂತ್ವನದ ನುಡಿಗಳನ್ನಾಡುವುದೆ ಸಹಾಯ. ಯಾರಾದರೂ ಹಿರಿಯರು ಅಥವಾ ಚಿಕ್ಕಮಕ್ಕಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದ್ದರೆ ಅವರ ಕೈ ಹಿಡಿದು ರಸ್ತೆ ದಾಟುವಂತೆ ಮಾಡುವುದೆ ಸಹಾಯ. ಇಂತಹ ಚಿಕ್ಕ ಚಿಕ್ಕ ಸಹಾಯಗಳೇ ಮನಸ್ಸಿಗೆ ನೆಮ್ಮದಿ,ಖುಷಿ ನೀಡುವಂತಹವು. ಯಾವುದೇ ಅಪೇಕ್ಷೆಯಿಲ್ಲದೆ ತನ್ನ ಮನ ಸಂತೃಪ್ತಿಗಾಗಿ ಹಾಗೂ ಇನ್ನೊಬ್ಬರ ಖುಷಿಗಾಗಿ ಮಾಡುವುದನ್ನು ಸಹಾಯ ಎನ್ನದೇ ಮತ್ತಿನೆನ್ನಲು ಸಾಧ್ಯ ನೀವೆ ಹೇಳಿ. ಕೈಲಾದಷ್ಟು ಸಹಾಯ ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ ಆದರೆ ಮಾಡಲು ಯಾರು ತಯಾರಿರುವುದಿಲ್ಲ. ಮಾಡಿದರು ಅದರ ಹಿರಿಮೆಯನ್ನೆ ಹೇಳುತ್ತಾರೆ ನಾನಷ್ಟು ಕೊಟ್ಟೆ, ಇಷ್ಟು ಕೊಟ್ಟೆ, ಅವರಿಗಾಗಿ ಅದನ್ನ ಮಾಡಿದೆ, ಇದನ್ನ ಮಾಡಿದೆ ಹೀಗೆ ನಾನಾ ವಿಷಯಗಳು. ಬಲಗೈ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಹಾಗಿರಬೇಕು ಸಹಾಯ ಎಂದರೆ ಎಂದು ನಮ್ಮ ಹಿರಿಯರೆ ಹೇಳಿಲ್ಲವೆ. ನಾನು ಗಮನಿಸಿದ ಒಂದು ಸನ್ನಿವೇಶವೆಂದರೆ ಓಡಾಡುವ ಬಸ್ ಗಳಲ್ಲಿ ಹಿರಿಯರು ನಿಂತೆ ಇರುತ್ತಾರೆ, ಕಿರಿಯರು ಕೂತು ಮೊಬೈಲ್ ನೋಡ್ತಾ ಇರ್ತಾರೆ. ಅಲ್ಲಿ ನಮಗೆ ಸಹಾಯ ಮಾಡಲು ಅವಕಾಶವಿದೆ, ಕೆಲವರು ಅದನ್ನೆ ಸದುಪಯೋಗ ಮಾಡಿಕೊಳ್ಳುತ್ತಾರೆ ಇನ್ನು ಕೆಲವರು ತಮ್ಮ ಪಾಡಿಗೆ ತಾವಿರುತ್ತಾರೆ. ಏಕೆ?? ಏಕೆಂದರೆ ನಾವು ಸುರಕ್ಷಿತವಾಗಿರಬೇಕು ಬೇರೆಯವರು ಏನಾದರೂ ಆಗಲಿ ಎನ್ನುವ ಮನೋಭಾವನೆ. ಆ ಸಹಾಯ ಮಾಡುವ ಗುಣ ನಮ್ಮ ಮನಸ್ಸಿನಾಳದಿಂದ ಉದ್ಭವಿಸಬೇಕು. ನಾವೇನಾದರೂ ಅವರಿಗೆ ಸೀಟು ಬಿಟ್ಟು ಕೊಟ್ಟರೆ ನೋಡಿ ಅವರ ಖುಷಿ, ಅವರು ಮಾಡುವ ಒಂದು ಹಾರೈಕೆ ಮನವನ್ನು ಅತೀ ಸಂತೃಪ್ತಿಯಿಂದಿರುಸುವಂತದ್ದು. ಕೇವಲ ಇದಷ್ಟೇ ಅಲ್ಲ ಇನ್ನೂ ಹಲವಾರು ಸನ್ನಿವೇಶಗಳಲ್ಲಿ ನಮಗೆ ಸಹಾಯ ಮಾಡಲು ಅವಕಾಶ ಸಿಗುತ್ತವೆ, ಸಿಕ್ಕಾಗ ನಾವು ಕೈಲಾದ ಸಹಾಯ ಮಾಡಬೇಕು.ನಮ್ಮ ಮಕ್ಕಳು ಸಹ ನಮ್ಮನ್ನೆ ಅನುಸರಿಸುತ್ತಾರೆ. ಅವರಿಗೂ ಸಹಾಯ ಮಾಡುವ ಗುಣ ಕಲಿಸಬೇಕೆ ಹೊರತು ಕಸಿದುಕೊಂಡು ತಿನ್ನುವುದಲ್ಲ. ಸರಿಯಲ್ಲವೇ ನಾನು ಹೇಳುತ್ತಿರುವುದು?? ನಿಮ್ಮ ಮನಸ್ಸಿಗೆ ಬೇಸರ ಬಂದಾಗ ಈ ತರಹ ಸಹಾಯ ಮಾಡಿದ ಸನ್ನಿವೇಶಗಳನ್ನು ನೆನೆಸಿಕೊಳ್ಳಿ, ಮನಸ್ಸಿಗೆ ಖುಷಿ ತಾನಾಗೆ ಬರುತ್ತದೆ. ಬನ್ನಿ ಕೈಲಾದಷ್ಟು ಸಹಾಯ ಮಾಡುವ ನಾವು. ಆ ಸಿಹಿ ಕ್ಷಣಗಳನ್ನು ಮೆಲುಕು ಹಾಕೋಣ. ನೀವು ಯಾರಿಗಾದರೂ ಸಹಾಯ ಮಾಡಿದ್ದರೆ ಒಂದು ಕ್ಷಣ ಕಣ್ಣುಮುಚ್ಚಿ ಅದನ್ನು ನೆನೆದುಬಿಡಿ. ಅದರಿಂದ ಖುಷಿಯಾಯಿತ್ತಲ್ಲವೊ ಎಂಬುದನ್ನ ನನಗೆ ತಿಳಿಸಿ. ತಿಳಿಸುತ್ತಿರಲ್ಲವೇ??
ಬರಹ:-ಕು|| ತ್ರಿವೇಣಿ ಆರ್. ಹಾಲ್ಕರ್ (ಶ್ರೀಷಡ್ಯಜ)
ಗೊಬ್ಬರವಾಡಿ, ಕಲ್ಬುರ್ಗಿ ಜಿಲ್ಲೆ
ಕೃಷಿ ಮಹಾವಿದ್ಯಾಲಯ
ಕಲಬುರ್ಗಿಯ ವಿದ್ಯಾರ್ಥಿನಿ