ಸ್ವತಂತ್ರ ಭಾರತದ ಚೈತನ್ಯ ಸ್ವರೂಪ ಡಾ. ಬಿ.ಆರ್.ಅಂಬೇಡ್ಕರ್ – ಸಂತೋಷ ಬಂಡೆ.
ಹಿರೇರೂಗಿ ಡಿಸೆಂಬರ್.6

ಅಂಬೇಡ್ಕರ್‌ರವರ ಜೀವನ ಪ್ರತಿಯೊಬ್ಬ ವಿದ್ಯಾರ್ಥಿಗೆ ಆದರ್ಶವಾಗಬೇಕು, ಅವರು ಜ್ಞಾನಾರ್ಜನೆಗೆ ತೋರಿದ ಆಸಕ್ತಿ,ಸಮಾಜದ ಬೆಳವಣಿಗೆಗೆ ಶಿಕ್ಷಣವನ್ನು ಉಪಯೋಗಿಸಿ ಕೊಂಡ ರೀತಿ, ದೇಶಕ್ಕೆ ತೋರಿದ ಗೌರವ ಮತ್ತು ದೇಶ ಪ್ರೇಮವನ್ನು ಇಂದಿನ ಮಕ್ಕಳು ಅರಿತು ಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು. ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಡಾ.ಬಿ ಆರ್ ಅಂಬೇಡ್ಕರ್ ಅವರ ಪರಿ ನಿರ್ವಾಣ ದಿನವನ್ನು ಉದ್ದೇಶಿಸಿ ಮಾತನಾಡಿದರು. ‘ಸ್ವತಂತ್ರ ಭಾರತದ ಚೈತನ್ಯ ಸ್ವರೂಪ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಶಿಕ್ಷಣದಿಂದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಆದ್ದರಿಂದ ಎಲ್ಲರೂ ಶಿಕ್ಷಣವನ್ನು ಪಡೆದು ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕು‘ ಎಂದರು. ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಪ್ರತಿ ವ್ಯಕ್ತಿಯಲ್ಲಿ ಅನನ್ಯ ಸಾಮರ್ಥ್ಯವನ್ನು ಸಾಧಿಸಲು ನೆರವಾಗುವುದೇ ಶಿಕ್ಷಣದ ಗುರಿಯಾಗಬೇಕು, ಶಿಕ್ಷಣವು ಮಕ್ಕಳ ಗುರಿಯನ್ನು ರೂಪಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಅಂಬೇಡ್ಕರ್ ಅವರ ಚಿಂತನೆ ಇಂದಿನ ಮಕ್ಕಳಿಗೆ ಅತ್ಯಗತ್ಯವಾಗಿದೆ ಎಂದು ಹೇಳಿದರು. ಹಿರೇರೂಗಿ ಉರ್ದು ಕ್ಲಸ್ಟರ್ ಸಿ ಆರ್ ಪಿ ಬಾದಶಾಹ ಚಪ್ಪರಬಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆ ಮತ್ತು ಆದರ್ಶಗಳು ಲಕ್ಷಾಂತರ ಜನರಿಗೆ ಸ್ಪೂರ್ತಿ. ಅವರು ದೇಶದ ಕುರಿತು ಕಂಡಿದ್ದ ಕನಸುಗಳನ್ನು ನನಸಾಗಿಸಲು ಎಲ್ಲರೂ ಶ್ರಮಿಸಬೇಕು.ಅವರ ಸಾರ್ಥಕ ಬದುಕಿನ ಬಗ್ಗೆ ಪ್ರತಿಯೊಬ್ಬರೂ ತಿಳಿದು ಕೊಳ್ಳುವಂತಾಗಬೇಕು ಎಂದು ಹೇಳಿದರು. ಶಿಕ್ಷಕಿ ಎಸ್ ಪಿ ಪೂಜಾರಿ, ಡಿಎಡ್ ಪ್ರಶಿಕ್ಷಣಾರ್ಥಿಗಳಾದ ತೈಸಿನ್ ನದಾಫ್, ತಾಹೀರ್ ಅರಬ, ಸಾಲಿಯಾ ಖಾಜಿ,ಅಫ್ತಾಬ್ ಮುಲ್ಲಾ ಮತ್ತು ಮಕ್ಕಳು ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ