ರೈತರು ಕೃಷಿಯಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ ಕೊಳ್ಳಲಿ ಮಾಜಿ ಡಿಸಿಎಂ, ಶಾಸಕರಾದ ಲಕ್ಷ್ಮಣ ಸಂ ಸವದಿ ಹೇಳಿದರು.
ಅಥಣಿ ಫೆಬ್ರುವರಿ.6

ರೈತರು ಕೃಷಿಯಲ್ಲಿ ರಸಾಯನಿಕ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ರಸಾಯನಿಕ ಅತಿಯಾದ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಹೆಚ್ಚು ಜನರು ಕ್ಯಾನ್ಸರ್ ಸೇರಿದಂತೆ ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಎಲ್ಲ ರೈತರು ಸಾವಯವ ವ್ಯವಸಾಯ ಕೈಗೊಳ್ಳಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿಗಳು, ಅಥಣಿ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಲಕ್ಷ್ಮಣ ಸಂ ಸವದಿಯವರು ಹೇಳಿದರು.ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಅಥಣಿ ಹಾಗೂ ಕೃಷಿ ಇಲಾಖೆ ಬೆಳಗಾವಿ ವತಿಯಿಂದ ದಿ. 5-2-2024ರಂದು ಹಲ್ಯಾಳದ ಕೃಷ್ಣಾ ರೈತ ಭವನದಲ್ಲಿ ಆಯೋಜಿಸಿದ್ದ ಕಬ್ಬಿನ ಬೆಳೆಯ ಕುರಿತ 2.ನೇ ವರ್ಷದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೈತರ ಉದ್ಧಾರವಾಗದ ಹೊರತು ದೇಶದ ಉದ್ಧಾರವಾಗದು.

ಆದ್ದರಿಂದ ಸರ್ಕಾರಗಳು ಕೂಡ ರೈತರ ಪ್ರಗತಿಗೆ ಅನುಕೂಲವಾಗುವಂತಹ ಕೃಷಿ ನೀತಿಯನ್ನು ಜಾರಿ ಗೊಳಿಸುವುದು ಅಗತ್ಯವಿದೆ ಎಂದರು. ರೈತರು ಕೃಷಿಯಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ ಕೊಳ್ಳಬೇಕು. ಹೆಚ್ಚು ಇಳುವರಿ ನೀಡುವ ಕಬ್ಬಿನ ತಳಿಗಳನ್ನು ಆಯ್ಕೆ ಮಾಡಿ ಕೊಳ್ಳಬೇಕು. ಎಕರೆಗೆ 100 ಟನ್ ವರೆಗೂ ಕಬ್ಬು ಬೆಳೆಯಲು ಪ್ರಯತ್ನಿಸ ಬೇಕು. ಕೃಷಿ ಇಲಾಖೆಯಿಂದ ಪ್ರತಿ ವರ್ಷ ಎಕರೆಗೆ ಹೆಚ್ಚು ಟನ್ ಕಬ್ಬು ಬೆಳೆಯುವ ರೈತರಿಗೆ ಪ್ರಶಸ್ತಿ ಹಾಗೂ ಬಹುಮಾನ ನೀಡಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಇದರಿಂದ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನೇ ಮುಂದುವರಿಸದೇ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ಸುಧಾರಿತ ಕೃಷಿ ಪದ್ಧತಿ ಕೈಗೊಳ್ಳಬೇಕು. ಕೃಷಿಯಲ್ಲಿ ಸಾಧನೆ ಮಾಡಿದ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರ ಮಾರ್ಗದರ್ಶನ ಪಡೆಯಬೇಕು, ಕೃಷಿ ವಿಜ್ಞಾನಿಗಳು, ಕೃಷಿ ತಜ್ಞರ ಸಲಹೆ ಪಡೆದು ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗ ಬೇಕು ಎಂದು ಲಕ್ಷ್ಮಣ ಸವದಿಯವರು ಹೇಳಿದರು.

ಕೃಷಿ ತಜ್ಞರು, ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಪರಪ್ಪ ಚ. ಸವದಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಶಂಕರ ವಾಘಮೋಡೆ, ಬೆಳಗಾವಿ ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಎಸ್. ಪಾಟೀಲ, ಕೃಷಿ ವಿಜ್ಞಾನಿಗಳಾದ ಮಂಜುನಾಥ ಚೌರಡ್ಡಿ, ಚಿಕ್ಕೋಡಿ ಉಪ ಕೃಷಿ ನಿರ್ದೇಶಕರಾದ ಎಚ್.ಡಿ. ಕೋಳೆಕರ, ಸಂಕೇಶ್ವರದ ಕಬ್ಬು ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಎಸ್.ಎಸ್. ನೂಲಿ, ಜಿ.ಎಂ. ಪಾಟೀಲ, ಹೀರಾ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕರು, ಪ್ರಗತಿಪರ ರೈತರಾದ ಅಶೋಕ ಪಾಟೀಲ, ಅಥಣಿಯ ಸಹಾಯಕ ಕೃಷಿ ನಿರ್ದೇಶಕರಾದ ನಿಂಗಣ್ಣ ಬಿರಾದಾರ, ಸುರೇಶ ಮಾಯಣ್ಣವರ, ಘೂಳಪ್ಪ ಜತ್ತಿ, ರಾಜು ನಾಡಗೊಡ, ಶಿವು ಗೆಜ್ಜಿ, ಶ್ರೀಶೈಲ ನಾಯಿಕ, ನಾನಾ ಗೊಟಖಿಂಡಿ, ಸೌರಭ ಪಾಟೀಲ, ಹಣಮಂತ ಜಗದೇವ, ಅಶೋಕ ತೀರ್ಥ, ಲಕ್ಷ್ಮಣ ದೇವಪೂಜೆ, ದುಂಡಪ್ಪಾ ಅಸ್ಕಿ, ಬಾಳಪ್ಪಾ ಬೆಳಕೂಡ ಸೇರಿದಂತೆ ಮತ್ತಿತರ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ರೈತ ಬಾಂಧವರು ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ