ತಾಲೂಕಿನ ವಿವಿಧ ಸರ್ಕಾರಿ ಕಛೇರಿ ಆರಂಭ ಮಾಡಲು ಒತ್ತಾಯ.

ಕೊಟ್ಟೂರು ಫೆಬ್ರುವರಿ.23

ತಾಲೂಕು ಘೋಷಣೆಯಾಗಿ ಆರು ವರ್ಷಗಳು ಕಳೆದಿದ್ದು ಇದುವರೆಗೂ ಕೆಲವು ತಾಲೂಕಾ ಮಟ್ಟದ ಕಛೇರಿಗಳನ್ನು ಆರಂಭಿಸುವಂತೆ ಸಿಪಿಐ(ಎಂಎಲ್) ಗುರುವಾರ ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಿತು. ಮನವಿ ಸಲ್ಲಿಸಿದ ಮಾತನಾಡಿದ ಸಿಪಿಐ(ಎಂಎಲ್) ಕಾರ್ಯದರ್ಶಿ ಗುಡಿಯಾರ ಮಲ್ಲಿಕಾರ್ಜುನರವರು ಕೊಟ್ಟೂರು ತಾಲ್ಲೂಕಿಗೆ ಇದುವರೆಗೂ ಕೋರ್ಟ್, ಉಪನೋಂದಣಿ ಕಛೇರಿ, ಬಿ.ಇ.ಓ. ಕಛೇರಿ, ಸಿಡಿಪಿಓ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಸಹಕಾರಿ ಇಲಾಖೆ, ಆಡಿಟ್ ಇಲಾಖೆ ಇನ್ನುಳಿದ ತಾಲ್ಲೂಕು ಮಟ್ಟದ ಕಛೇರಿಗಳನ್ನು ಕೂಡಲೇ ಆರಂಭಿಸಬೇಕೆಂದು ಒತ್ತಾಯಿಸಿದರು. ಅಲ್ಲದೇ ಪಟ್ಟಣದ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿ ವಿಪರೀತವಿದ್ದು, ಬಡ ಮಕ್ಕಳು ಗುಣಮಟ್ಟದ ವಿದ್ಯಾಭ್ಯಾಸ ದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು. ೬-೮ ಸಾವಿರ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಊಟ ಸಿಗದೇ ಬಳಲುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಘೋಷಣೆ ಮಾಡಬೇಕು. ತಾಲ್ಲೂಕಿಗೆ ಇದುವರೆಗೂ ಪದವಿ ಕಾಲೇಜ್ ಇಲ್ಲದೇ ಇರುವುದರಿಂದ ಉನ್ನತ ವಿದ್ಯಾಭ್ಯಾಸಕ್ಕೆ ಪರದಾಡುವ ಸ್ಥಿತಿ ಇದೆ. ಕೊಟ್ಟೂರಿನ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು ಹಾಗೂ ಕಂದಾಯ ಇಲಾಖೆ ಭ್ರಷ್ಟಾಚಾರದ ಆಗರಗಳಾಗಿವೆ. ಸಾರ್ವಜನಿಕ ಕೆಲಸ ಮಾಡಲು ಲಂಚ ಮಾಮೂಲಿ ಆಗಿರುತ್ತದೆ. ಗ್ರಾಮ ಪಂಚಾಯಿತಿಗಳ ಭ್ರಷ್ಟ ಆಡಳಿತ ಕೊನೆಯಾಗಬೇಕು. ಮೈಕ್ರೋ ಫೈನಾನ್ಸ್‌ಗಳು ಜನರಿಗೆ ಸಾಲ ನೀಡಿ ವಸೂಲಾತಿ ಮಾಡಲು ಕಿರುಕುಳ ನೀಡುತ್ತಿವೆ. ತಾಲ್ಲೂಕಿನ ಕೆರೆಗಳ ಒತ್ತುವರಿಯನ್ನು ತೆರವು ಗೊಳಿಸುವುದು, ಕೊಟ್ಟೂರು ತಾಲ್ಲೂಕಿನಲ್ಲಿ ಓಸಿ ಮತ್ತು ಜೂಜಾಟ, ಇಸ್ಪೇಟ್, ಅಕ್ರಮ ಮರಳು ಸಾಗಾಣಿಕೆ, ಅನಧಿಕೃತ ಮದ್ಯ ಮಾರಾಟ ಇವೆಲ್ಲವೂ ನಡೆಯುತ್ತಿದ್ದು ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರು ಮತ್ತು ತುರ್ತು ನಿಗಾ ನುರಿತ ವೈದ್ಯರನ್ನು ನೇಮಿಸಲು ಇನ್ನುಳಿದಂತೆ ಸುಮಾರು ೧೨ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದ ಗುಡದಯ್ಯ, ರಾಮನಗೌಡ ಬೋರನಹಳ್ಳಿ, ಟಿ.ಅಜ್ಜಪ್ಪ, ಕೂಡ್ಲಿಗಿ ಪರುಸಪ್ಪ, ಕರಿಬಸಯ್ಯ ಸ್ವಾಮಿ, ಡಿ.ಎಸ್.ಎಸ್. ಮುಖಂಡ ಚಂದ್ರಶೇಖರ್, ನೂರ್ ಮಹಮದ್, ಅಂಜಿನಮ್ಮ, ಸಿದ್ದಮ್ಮ, ಗುಡಿಯಾರ ಚಿಕ್ಕಪ್ಪ, ಕೆರೆಗೋಣೆಪ್ಪರ ಕೆಂಚಪ್ಪ, ಆಟೋ ಬಸವರಾಜ, ಉಜ್ಜಿನಿ ಬಸವರಾಜ ಮುಂತಾದವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button