ಮತ್ತೆ ಬಂತು ಹೋಳಿ ಹಬ್ಬ…..

ಬೇಸಿಗೆಯ ದಿನಗಳಲ್ಲಿ ಸೂರ್ಯನ ಕಿರಣಗಳು ನಮ್ಮ ಚರ್ಮದ ಮೇಲೆ ನೇರವಾಗಿ ಬೀಳುತ್ತವೆ. ಇದರಿಂದ ಶರೀರದಲ್ಲಿ ಕಾವು ಹೆಚ್ಚಾಗುವುದು ಕಾವು ಹೆಚ್ಚಾದರೆ ಸಿಟ್ಟು ಹೆಚ್ಚಾಗುವುದು ಖಿನ್ನತೆಯೂ ಬರುವುದು , ನಮ್ಮ ಶರೀರದ ಶೆಖೆಯನ್ನು ಸಹಿಸುವ ಕ್ಷಮತೆಯು ಹೆಚ್ಚಾಗಲಿ ಎಂದು ಮುತ್ತಗದ ಪುಷ್ಪಗಳನ್ನು ನೆನೆ ಹಾಕಿ ಬಣ್ಣ ಆಡುವರು , ಆದರೆ ಇಂದು ರಸಾಯನಿಕ ಮಿಶ್ರಿತ ಬಣ್ಣ ಎರಚುವುದೇ ಹೆಚ್ಚು ಮುತ್ತುಗದ ಪುಷ್ಪಗಳ ಬಣ್ಣ ಕಫ ನಿವಾರಕ ಹಾಗೂ ಮುತ್ತಗದ ಎಲೆಯಿಂದ ಮಾಡಿದ ತಟ್ಟೆಯಲ್ಲಿ ಊಟ ಆರೋಗ್ಯಕ್ಕೆ ಒಳ್ಳೆಯದು . ಬಣ್ಣ ಆಡುವುದರಿಂದ ದೇಹದಲ್ಲಿ ರೋಗ ಪ್ರತಿ ನಿರೋಧಕ ಶಕ್ತಿ ಸದೃಢವಾಗುವುದು ಕಾಮಾಲೆಯಿಂದ ರಕ್ಷಣೆ ನೀಡುವುದು . ಹಲವು ಕಡೆ ಕಾಮಣನನ್ನು ಸುಟ್ಟು ಬಣ್ಣ ಆಡಿದರೆ ಹಲವು ಕಡೆ ಬಣ್ಣ ಆಡಿ ಕಾಮಣ್ಣನನ್ನು ಸುಡುತ್ತಾರೆ . ಬೆಂಕಿ ತಂದು ಅದರಲ್ಲಿ ಕಡಲೆ ಸೇಂಗಾ ಸುಟ್ಟು ತಿಂದು ಸ್ನಾನ ಮಾಡಿ ಹೋಳಿಗೆ ಊಟ ಮಾಡುತ್ತಾರೆ . ಕೆಲವು ಕಡೆ ಗಂಡಸರಿಗೆ ಮಾತ್ರ ಬಣ್ಣ ಆಡುವ ರೂಢಿ ಇದೆ. ಈಗ ಲಿಂಗ ಬೇಧವಿಲ್ಲದೆ ಬಣ್ಣ ಎರಚಿ ಬಣ್ಣ ಆಡುತ್ತಾರೆ . ಪೌರಾಣಿಕ ಹಿನ್ನೆಲೆ:-ಪೂರ್ವದಲ್ಲಿ ತಾರಕಾಸುರ ನೆಂಬ ರಾಕ್ಷಸನಿದ್ದ . ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರನು ಲೋಕ ಕಂಟಕನಾಗಿ ಮೆರೆಯುತ್ತಿದ್ದ . ತನಗೆ ಮರಣವು ಬಾರದಿರಲಿ , ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಅಂದು ಬ್ರಹ್ಮನಲ್ಲಿ ವರವನ್ನು ಬೇಡಿದ್ದ ಭೋಗ ಸಮಾಧಿಯಲ್ಲಿದ್ದ ಶಿವ , ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾಧ್ಯವಿರಲಿಲ್ಲ . ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು .ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು . ಕಾಮ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು . ಭೋಗ ಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು . ರತಿದೇವಿ ದು:ಖದಿಂದ ಶಿವನಲ್ಲಿ ಪತಿ ಭಿಕ್ಷೆಯನ್ನು ಬೇಡಿದಳು ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿ ಯಾಗುವಂತೆ ಕಾಮನಿಗೆ ವರ ಕೊಟ್ಟನು ಲೋಕ ಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆ ಯೆಂದು ಆದ್ದರಿಂದ ಈ ದಿನವನ್ನು “ ಕಾಮನ ಹುಣ್ಣಿಮೆಯಾಗಿ ಆಚರಿಸುತ್ತಾರೆ.ಹೋಳಿ ಹುಣ್ಣಿಮೆ ಬಂದ್ರೆ ಸಾಕು ಗಂಡಸರಿಗೆ ಲಬೋ ಲಬೋ ಅಂತಾ ಹೊಯ್ಕಲಕ್ಕೆ ಒಂದು ದೊಡ್ಡ ಅವಕಾಶ.ಸಣ್ಣ ಮಕ್ಕಳು ಓಣಿ ಒಳಗಿನ ಎಲ್ಲಾ ಮನೀಗೂ ಹೋಗಿ ‘ ಕಾಮಣ್ಣನ ಮಕ್ಕಳು ಕಳ್ಳ ಸೂಳೆ ಮಕ್ಕಳು , ಏನೇನು ಕದ್ದರು ಕುಳ್ಳು ಕಟಗಿ ಕದ್ದರು , ಯಾತಕ್ಕೆ ಕದ್ದರು ಕಾಮಣ್ಣನ್ನು ಸುಡ್ಲಿಕ್ಕೆ ‘ ಅಂತ ಬೊಂಬಡಾ ಹೊಡಕೋತ ಒಂದು ಎರಡು ರೂಪಾಯಿ ಪಟ್ಟಿ ಕೇಳೋದು ಜೋಡಿ ಕೊಟ್ಟ ಕುಳ್ಳು ಕಟಗಿ ಶೇಖರಿಸಿಟ್ಟು ಕೊಳ್ಳುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಜರುಗುತ್ತದೆ. ಊರಿನ ಪ್ರತಿ ಓಣಿ (ಗಲ್ಲಿಗಳಲ್ಲಿ) ಗಳಲ್ಲಿ ಒಂದೊಂದು ನಿಗದಿತ ಸ್ಥಳದಲ್ಲಿ ಕಾಮನ ಕಟ್ಟೆಯೆಂಬ ಸ್ಥಳದಲ್ಲಿ ರತಿ ಮನ್ಮಥರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವರು.ಈ ಸಂದರ್ಭ ವಯಸ್ಸಿನ ಬೇಧವಿಲ್ಲದೇ ಹಲಗೆ ಬಾರಿಸುತ್ತ “ಕಾಮಣ್ಣನ ಕಟ್ಟುವ ಕರಿಬಿದರ ಸವರುತ್ತ, ಕಾಮಣ್ಣಗ ಬಾಸಿಂಗ ಕಟ್ಟುವ ನಮ್ಮ ಕಾಮ ಇನ್ನೆರಡ ದಿವಸ ಇರಲಿಲ್ಲೋ.” ಎಂದು ಲಬೋ ಲಬೋ ಲಬೋ ಎಂದು ಹೊಯ್ಯು ಕೊಳ್ಳುವ ಈ ಆಚರಣೆ ನಿಜಕ್ಕೂ ವಿಶಿಷ್ಟವಾದುದು.ಈ ಹೋಳಿ ಕಾಮನನ್ನು ಕೂಡ್ರಿಸಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ನೈವೇದ್ಯೆ ಮಾಡಿ ಮರುದಿನ ಕಟ್ಟಿಗೆಯ ಮೇಲೆ ಕಾಮನನ್ನು ಕುಳ್ಳಿರಿಸಿ ದಹನ ಮಾಡುವ ಮೂಲಕ ಹಬ್ಬ ಆಚರಣೆ ವಿಶಿಷ್ಟವಾದುದು.ಇಂಥ ಸಂದರ್ಭ ಕಾಮನನ್ನು ಸುಟ್ಟ ಬೆಂಕಿಯ ಕೆಂಡವನ್ನು ಕೆಲವು ಜನ ತಮ್ಮ ಮನೆಗೆ ತರುತ್ತಾರೆ. ಕಾರಣವಿಷ್ಟೇ ಆ ಕೆಂಡದಿಂದ ಮನೆಯ ಒಲೆಯನ್ನು ಹೊತ್ತಿಸಿದರೆ ವರ್ಷದುದ್ದಕ್ಕೂ ಅವರ ಮನೆ ಅಡುಗೆ ಹುಲುಸಾಗುತ್ತದೆ ಎಂಬ ನಂಬಿಕೆ. ಅಷ್ಟೇ ಅಲ್ಲ ಆ ದಿನ ಹೋಳಿಗೆ ಮಾಡುತ್ತಾರೆ ಅದನ್ನು ಹೆಂಗಸರು ಹೇಳುವ ರೀತಿ ಹೀಗಿದೆ “ ಹೊಯ್ಕೊಂಡ ಬಾಯಿಗೆ ಹೋಳಿಗೆ-ತುಪ್ಪ” ಎಂದು ಚೇಷ್ಟೆ ಮಾಡಿ ಉಣ ಬಡಿಸುವರು.ಇನ್ನೂ ಕೆಲವರು ಈ ಕಾಮನ ಬೆಂಕಿಯಲ್ಲಿ ಕಡಲೆ ಹುರಿದು ಕೊಳ್ಳುವರು. ಈ ಕಡಲೆ ತಿಂದರೆ ಬಾಯಿಯಲ್ಲಿನ ಹಲ್ಲುಗಳು ಗಟ್ಟಿಯಾಗುತ್ತವೆ ಎಂಬ ನಂಬಿಕೆ. ಕಾಮನ ಬೂದಿಯನ್ನು ಮನೆಗೆ ಒಯ್ದು ಆ ವರ್ಷದ ಮೊದಲ ಮಳೆಯ ನಂತರ ಬಿತ್ತುವ ಬೀಜದಲ್ಲಿ ಆ ಬೂದಿಯನ್ನು ಬೆರೆಸಿ ಬಿತ್ತನೆ ಮಾಡಿದರೆ ಬೆಳೆ ಚನ್ನಾಗಿ ಬರುತ್ತದೆ ಎಂಬ ಪ್ರತೀತಿ ಇದೆ. ಕಾಮ ದಹನ ಸಂದರ್ಭ ತೆಂಗಿನ ಕಾಯಿಯನ್ನು ಕಾಮನ ತಲೆಯನ್ನು ಗುರಿಯಾಗಿಸಿ ಕೊಂಡು ಎಸೆಯುವರು. ಆಗ ಅವನ ರುಂಡವು ಯಾವ ದಿಕ್ಕಿನತ್ತ ಬೀಳುತ್ತದೆಯೋ ಆ ದಿಕ್ಕಿನಲ್ಲಿ ಮಳೆ-ಬೆಳೆ ಬಹಳ ಆಗುತ್ತದೆ ಎನ್ನುವುದು ವಾಡಿಕೆ. ಕಾಮ ಸತ್ತ ಐದು ದಿನಕ್ಕೆ ಮಳೆಯಾಗುತ್ತದೆ. ಅದು ಕಾಮಣ್ಣನ ಬೂದಿ ತೋಯಿಸುತ್ತದೆ. ಅದು ಕಾಮನ ಕಣ್ಣೀರು ಎಂಬುದು ಗ್ರಾಮೀಣ ಜನರ ನಂಬಿಕೆ.
ಭೂಮಿಕಾ ರಂಗಪ್ಪ ದಾಸರಡ್ಡಿ,ಬಿದರಿ