ಹಸಿರೆಲೆಗಳ ಚಿಗರೊಡೆಯುವ ದಿನ ಯುಗಾದಿ…..

ಸದಾ ತಿರುಗುತ್ತಿರುವ ಕಾಲಚಕ್ರದ ನಡುವಿನ ನಮ್ಮ ಜೀವನದಲ್ಲಿ ಅಮೂಲ್ಯ ಕ್ಷಣಗಳು ಕಳೆದು ಹೋಗುತ್ತಿದ್ದರೂ ಮತ್ತೆ ನೂತನ ಕಾಲವು ನಮಗೆ ಒದಗಿ ಬರುತ್ತಾ ಹೊಸ ಹೊಸ ಅವಕಾಶಗಳು ನಮಗಾಗಿ ಬಾಗಿಲು ತೆರೆಯುತ್ತಲಿರುತ್ತವೆ. ಹಾಗಾಗಿ ಕಳೆದ ಹೋದ ಕಾಲವು ನಮ್ಮಿಂದ ಕೆಲವೊಂದು ಕಸಿದುಕೊಂಡರೂ ಹೊಸ ಹೊಸ ಭರವಸೆಯನ್ನು ತರುವುದು ಸುಳ್ಳಲ್ಲ. ಇಂತಹ ಕಾಲದ ಸಂದೇಶವನ್ನು ನೀಡುವ ಕಾಲದ ಹಬ್ಬ ನಮ್ಮ ಯುಗಾದಿ. ಪಕ್ಷಿಗಳಲ್ಲಿ ನವಿಲು, ಪ್ರಾಣಿಗಳಲ್ಲಿ ಮಾನವ, ಋತುಗಳಲ್ಲಿ ವಸಂತ ಋತು ಶ್ರೇಷ್ಠವಾದಂತೆ ಎಲ್ಲ ಹಬ್ಬಗಳಲ್ಲಿ ಯುಗಾದಿಯು ಶ್ರೇಷ್ಠ. ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ ಬೇರೆ ಹೆಸರಿನಿಂದ, ಸಾಮಾನ್ಯವಾಗಿ ಎಲ್ಲರೂ ಆಚರಿಸುವರು ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧವಾದ ಯುಗಾದಿ ಹಬ್ಬ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬ ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ. ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ – ಬಲ್ಲಿದರೆಂಬ ತಾರತಮ್ಯವಿಲ್ಲದೇ ಎಲ್ಲಾ ಹಿಂದುಗಳು ಆಚರಿಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ವ್ಯಾಪಾರಿಗಳು ಹಾಗೂ ಇನ್ನಿತರರು ಕೂಡ ಅಂದಿನ ದಿನವೇ ಶುಭ ಕಾರ್ಯವನ್ನು ಮಾಡುತ್ತಾರೆ. ‘ ಯುಗಾದಿ’ ಬಂದಿತೆಂದರೆ ಎಲ್ಲೆಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರ ಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುವವು. ಎಲ್ಲಿ ನೋಡಿದರೂ ಮರ ಗಿಡ ಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುವುದು. ಯುಗಾದಿಯ ದಿನ ಮುಂಜಾನೆ ಬೇವು ಮಿಶ್ರಿತ ನೀರಿನಿಂದ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಹೋಗಿ ದೇವರನ್ನು ಪೂಜಿಸಿ, ಬೇವು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಬೇವು- ಬೆಲ್ಲವು ಸುಖ – ದುಃಖ, ರಾತ್ರಿ- ಹಗಲು,ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡು ಮನುಷ್ಯ ಬದುಕಬೇಕು. ಜೀವನದಲ್ಲಿ ಕಷ್ಟ- ಸುಖ ನೋವು – ನಲಿವುಗಳ ಸಮ್ಮಿಶ್ರಣವಾಗಿವೆ. ಇವೆರಡೂ ಒಟ್ಟಿಗೆ ಇರುವವು. ಎರಡನ್ನೂ ಸಮದೃಷ್ಟಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು – ಬೆಲ್ಲವನ್ನು ತಿನ್ನಿಸುವರು. ಕಲಿಯುಗದ ಅಂಧಕಾರದ ರಾತ್ರಿಯನ್ನು ಸತ್ಯಯುಗದ ಸುಜ್ಞಾನದ ಬೆಳಕನ್ನಾಗಿ ಪರಿವರ್ತಿಸುವ ಉದಯ ಕಾಲವೇ ಯುಗಾದಿ. ಯುಗಾದಿಯು ನಾಡಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಉಜ್ವಲತೆಯನ್ನು, ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯ. ಯುಗಾದಿಯು ಪ್ರಕೃತಿ ಮಾತೆಯ ಪುನರುತ್ಥಾನದ ದಿನವನ್ನು ಸೂಚಿಸುತ್ತದೆ. ವಸಂತ ಕಾಲ ಸಮೀಪಿಸುತ್ತಿದ್ದಂತೆ, ಹೊಸ ಸಸ್ಯಗಳು ಮತ್ತು ಎಲೆಗಳು ಭೂಮಿಯನ್ನು ಹಸಿರಿನಿಂದ ಆವರಿಸಿಕೊಳ್ಳುತ್ತವೆ. ಯುಗಾದಿಯು ಚಳಿಗಾಲದ ಕಠೋರವಾದ ಚಳಿಯ ನಂತರ ವಸಂತಕಾಲದ ಆರಂಭ ಮತ್ತು ಸೌಮ್ಯವಾದ ಹವಾಮಾನವನ್ನು ಸೂಚಿಸುವ ಹಬ್ಬವಾಗಿದೆ. ಇದು ವಸಂತ ಋತುವನ್ನು ಸ್ವಾಗತಿಸಲು ಆಚರಿಸುವ ಹಬ್ಬವೂ ಹೌದು. ಯುಗಾದಿ ಹಬ್ಬವು ನಮಗೆ ಬಂದಿದ್ದನ್ನೆಲ್ಲ ಸ್ವೀಕರಿಸಿ ಒಳ್ಳೆಯ ಮತ್ತು ಕೆಟ್ಟದ್ದನ್ನು ಸಕಾರಾತ್ಮಕ ಮನೋಭಾವದಿಂದ ಎದುರಿಸುವ ಸರಳ ಸಂದೇಶವನ್ನು ನೀಡುತ್ತದೆ. ಈ ಹಬ್ಬದ ದಿನದಂದು ಜನರು ತಮ್ಮ ಮನೆಗಳ ಪ್ರವೇಶದ್ವಾರವನ್ನು ಮಾವಿನ ಎಲೆಗಳು ಮತ್ತು ರಂಗೋಲಿಯಿಂದ ಅಲಂಕರಿಸುತ್ತಾರೆ. ಯುಗಾದಿಯಂದು ಜನರು ಉತ್ತಮ ಆರೋಗ್ಯ ಮತ್ತು ಸಮೃದ್ಧಿಗಾಗಿ ದೇವರನ್ನು ಪ್ರಾರ್ಥಿಸುತ್ತಾರೆ. ಇದಲ್ಲದೆ ಜನರು ಬೆಲ್ಲ ಮತ್ತು ಬೇವಿನ ಎಲೆಗಳನ್ನು ಸಮಾನ ಪ್ರಮಾಣದಲ್ಲಿ ಹಂಚುತ್ತಾರೆ, ಅಂದು ದೇವರು ಮತ್ತು ಕುಟುಂಬದ ಹಿರಿಯರಿಂದ ಆಶೀರ್ವಾದವನ್ನು ಪಡೆಯುತ್ತಾರೆ. ಬೆಲ್ಲ ಮತ್ತು ಬೇವಿನ ಎಲೆಗಳನ್ನು ಹಂಚಿಕೊಳ್ಳುವುದು ಜೀವನದ ಒಳ್ಳೆಯ ಮತ್ತು ಕೆಟ್ಟ ಹಂತಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿದೆ. ಹಿಂದೂಗಳ ಪವಿತ್ರ ಹಬ್ಬ ಚಂದ್ರಮಾನ ಯುಗಾದಿಯ ಶುಭ ಸಂದರ್ಭದಲ್ಲಿ ಪ್ರಕೃತಿಯ ಬದಲಾವಣೆಯ ಸಂದರ್ಭದಲ್ಲಿ ಬೇವು- ಬೆಲ್ಲ ಸವಿಯುವ ಮೂಲಕ ನಾಡಿಗೆ ಕಾಲಕಾಲಕ್ಕೆ ತಕ್ಕಂತೆ ಮಳೆ-ಬೆಳೆ ಆಗಲಿ. ಸಾಕಷ್ಟು ಉತ್ಸಾಹ, ಸಂಭ್ರಮ, ಸಡಗರದಿಂದ ನೂತನ ವರ್ಷದಲ್ಲಿ ಸಂತೋಷ, ನೆಮ್ಮದಿ, ಅಭಿವೃದ್ಧಿ ನಮ್ಮದಾಗಲಿ. ವರ್ಷ ಪೂರ್ತಿ ಹರುಷ ತುಂಬಿರಲಿ, ಬೇವು ಬೆಲ್ಲದಂತೆ ಎಲ್ಲರ ಜೀವನದಲ್ಲೂ ಸಿಹಿ ಕಹಿ ಇರುವುದು ಸಾಮಾನ್ಯ ಆದರೆ ನಮ್ಮ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ ಸುಖ, ಸಮೃದ್ಧಿ, ಶಾಂತಿ, ಸೌಹಾರ್ದತೆ ನಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ. ಹಿಂದಿನ ಕಹಿ ಘಟನೆಗಳನ್ನು ಮರೆತು, ಹೊಸ ಭರವಸೆ, ಆಶಾವಾದದಿಂದ ಮುಂದೆ ನೋಡುವ ಸಮಯ ಇದು. ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ, ಬೇವು ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಕು. ಜ್ಯೋತಿ ಆನಂದ ಚಂದುಕರ ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button