“ಹಸಿರಿನ ಮಡಿಲಲಿ ನಮ್ಮ ಉಸಿರು”…..

ಮನುಷ್ಯನಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧ ಈ ಸಂಬಂಧವು ಶಾಶ್ವತವಾಗಿ ಉಳಿದರೆ ಮಾತ್ರ ಭೂಮಿಯ ಮೇಲೆ ಮನುಷ್ಯನ ಜೀವನ ಸಾಧ್ಯ ಇಲ್ಲವೆಂದರೆ ಮನುಷ್ಯನ ನಾಶ ಶತಸಿದ್ಧ. ಈ ಭೂಮಿಗಿಂತ ಅತ್ಯುತ್ತಮವಾದ ಸ್ಥಳ ಬೇರೊಂದಿಲ್ಲ, ಆದ್ದರಿಂದ ಶ್ರಮವಾದರೂ ಸರಿಯೇ ನಮ್ಮ ಭೂಮಿಯನ್ನು ರಕ್ಷಿಸೋಣ. ಉಸಿರಿಗಾಗಿ ಪರಿಸರ. ಹಸಿರನ್ನೇ ಉಸಿರಾಡಿ, ಹಸಿರಿನ ಜತೆಗೆ ಜೀವಿಸಿ, ಹಸಿರಿನ ಜತೆಗೆ ಮುಂದಿನ ಜೀವನ ಪಯಣ ಸಾಗಿಸೋಣ. ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು.

ಮಾನವನಿಗೆ ಪರಿಸರವು ಅತ್ಯಮೂಲ್ಯ ಕೊಡುಗೆಯಾಗಿದೆ ಇಂದು ಪರಿಸರವು ಮಾನವರಿಗೆ ನೀಡಿದ ಎಲ್ಲವನ್ನು ಗೌರವಿಸಲು ಮತ್ತು ಕೃತಜ್ಞರಾಗಿರಲು ಮತ್ತು ಅದನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ವಿಶ್ವ ಪರಿಸರ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಅಗತ್ಯಗಳಿಗಷ್ಟೇ ಸಂಪನ್ಮೂಲ ಬಳಸಿ ಭವಿಷ್ಯಕ್ಕೆ ಉಳಿಸಿ ಬದುಕುವುದು ನಮ್ಮ ಹಿರಿಯರು ಪಾಲಿಸಿದ ಆಚರಣೆ. ಅದನ್ನೇ ನಾವೂ ಅನುಸರಿಸಬೇಕೆಂಬುದೇ ಕೊರೋನ ಕಲಿಸಿದ ಪಾಠದ ತಿರುಳು. ವಿಶ್ವ ಪರಿಸರ ದಿನವಾದ ಇಂದು ನಮ್ಮ ಬದುಕನ್ನು ಪರಿಸರಸ್ನೇಹಿಯಾಗಿಸುವ ಪ್ರತಿಜ್ಞೆ ಮಾಡೋಣ.

ಮಾಲಿನ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಲ್ಲದ ಸುಂದರ ಜಗತ್ತನ್ನು ಸೃಷ್ಟಿಸುವುದು ವಿಶ್ವ ಪರಿಸರ ದಿನದ ಹಿಂದಿನ ಕಲ್ಪನೆ. ಪ್ಲಾಸ್ಟಿಕ್ ನಿಷೇಧ, ಹೆಚ್ಚು ಮರಗಳು ಮತ್ತು ಗಿಡಗಳನ್ನು ನೆಡುವುದು, ನೀರನ್ನು ಉಳಿಸುವುದು, ಮರುಬಳಕೆ ಮಾಡುವುದು ಮತ್ತು ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ಉಳಿಸುವುದು ಉತ್ತಮ ಪರಿಸರಕ್ಕೆ ಕಾರಣವಾಗುವ ಕೆಲವು ಹಂತಗಳಾಗಿವೆ. ನಾವು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕು ಮತ್ತು ಅವುಗಳನ್ನು ಸಮರ್ಥವಾಗಿ ಮತ್ತು ಎಚ್ಚರಿಕೆಯಿಂದ ಬಳಸಬೇಕು. ಒಟ್ಟಾರೆ ನಾವು ಸುಂದರವಾದ ಮತ್ತು ಆರೋಗ್ಯಕರವಾದ ವಾತಾವರಣವನ್ನು ನಿರ್ಮಿಸಬೇಕು.

ಇಂದು ನಾವು ಅನುಭವಿಸುತ್ತಿರುವ ನೀರು ಗಾಳಿ ಬೆಳಕು ಇವೆಲ್ಲ ಪ್ರಕೃತಿ ದತ್ತವಾಗಿ ಉಚಿತವಾಗಿ ಈ ನಿಸರ್ಗದಿಂದ ಪಡೆಯುತ್ತಿದ್ದೇವೆ. ಒಬ್ಬ ಮನುಷ್ಯನು ಬದುಕಬೇಕಾದರೆ ಭೂಮಿ, ನೀರು, ಗಾಳಿ, ಬೆಳಕು ಇವೆಲ್ಲ ಬೇಕೇ ಬೇಕು. ಇವೆಲ್ಲವೂ ಸುರಕ್ಷಿತವಾಗಿ ಸಂರಕ್ಷಣೆಯಿಂದ ಇರಬೇಕೆಂದರೆ ನಾವು ಪರಿಸರವನ್ನು ಸಂರಕ್ಷಿಸಬೇಕು. ಪರಿಸರ ಸಂರಕ್ಷಣೆಯಿಂದ ಇರಬೇಕೆಂದರೆ ನಾವು ಗಿಡಮರಗಳನ್ನು ಬೆಳೆಸಬೇಕು, ನದಿ ಕೆರೆ ಹಳ್ಳಗಳನ್ನು ಸ್ವಚ್ಛವಾಗಿಡಬೇಕು ಮತ್ತು ಗಾಳಿ ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು. ಈ ನಿಸರ್ಗ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ನಿಸರ್ಗಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ನಾವು ಪ್ರಕೃತಿಗೆ ಏನು ಕೊಡದೇ ಇದ್ದರೂ ಪರವಾಗಿಲ್ಲ ಅದನ್ನು ನಾಶ ಮಾಡದೇ ಇದ್ದರೆ ಅಷ್ಟೇ ಸಾಕು.

ಮನುಜ ಅನ್ನ ನೀರಿಲ್ಲದೆ ಬದುಕಬಹುದೇನೋ? ಆದರೆ ಹಸಿರಿನ ಶುದ್ಧ ಉಸಿರು ಇರದಿದ್ದರೆ ಬದುಕುವುದು ಕಷ್ಟ ಸಾಧ್ಯ. ಬಾಲ್ಯದಲ್ಲಿಯೇ ಪರಿಸರ ಅರಿವು ಮಕ್ಕಳಲ್ಲಿ ಮೂಡಿಸಬೇಕಿದೆ. ವೈಯಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ ಕಲಿಸಲು ಕೊರೋನಾದಂತಹ ವೈರಸ್ ಬರಬೇಕಾಯಿತು. ದೇವರಿದ್ದ ಕಡೆ ದುಷ್ಟಶಕ್ತಿಗಳು ಸುಳಿಯುವುದಿಲ್ಲವಂತೆ. ಪರಿಸರವೇ ದೇವರು, ಸ್ವಚ್ಛತೆ ದೈವತ್ವ. ಮನುಕುಲದ ಉಳಿವಿಗಾಗಿ ಪರಿಸರವನ್ನು ರಕ್ಷಿಸಿ ಉಳಿಸಿ ಬೆಳೆಸಬೇಕಿದೆ. ಪರಿಸರ ಸ್ವಚ್ಛತೆ ನಮ್ಮೆಲ್ಲರ ಹೊಣೆ ಹಸಿರೇ ಉಸಿರು, ಹಸಿರೇ ಜೀವನ.

ಪ್ರತಿಯೊಬ್ಬ ಮನುಷ್ಯನ ಜೀವವು ಉಳಿದಿರುವುದು ಪ್ರತಿಯೊಂದು ಸಸ್ಯವು ತಾನು ಉಸಿರಾಡುವ ಕೆಟ್ಟ ಗಾಳಿಯನ್ನು ಪಡೆದು ನಮಗಾಗಿ ಒಳ್ಳೆಯ ಗಾಳಿಯನ್ನು ಕೊಟ್ಟು ನಮ್ಮ ಜೀವವನ್ನು ರಕ್ಷಿಸುವ ಪರಿಸರ ನಮ್ಮೆಲ್ಲರ ಜೀವ ರಕ್ಷಕ. ಪ್ರತಿಯೊಂದು ಮನೆಯಲ್ಲೂ ಮಕ್ಕಳಿರಬೇಕು ಪ್ರತಿಯೊಂದು ಮನೆಯಲ್ಲೂ ಮರವಿರಬೇಕು ಮನೆಗೊಂದು ಮರ ಊರಿಗೊಂದು ವನವಾದರೆ ಪರಿಸರ ಸುಮಧುರವಾಗುದರಲ್ಲಿ ಸಂದೇಹವಿಲ್ಲ. ಮರಗಳನ್ನ ಬೆಳೆಸುತ್ತಾ ಹೋದರೆ ಮಳೆ ಬೆಳೆಗೆ ತೊಂದರೆಯಾಗದೆ ಅನ್ನಕ್ಕು ಬರವಿಲ್ಲದೆ ಉತ್ತಮ ಜೀವನ ನಡೆಸಲು ವನರಾಶಿಯ ಸಹಕಾರ ನಮಗಾಗಿ ಇರಲೇಬೇಕು ಪ್ರತಿಯೊಬ್ಬ ನಾಗರಿಕನು ಕೂಡ ತಿಳಿದುಕೊಳ್ಳಬೇಕಾದ ವಿಷಯವಿದು.

ಭಾರತೀಯರೆಂದು ಮಣ್ಣಿನ ಮಕ್ಕಳು, ನಿಸರ್ಗದ ಪೂಜಕರು. ಆದರೆ ಆಧುನಿಕತೆ ಹೆಚ್ಚಾದಾಗಿನಿಂದ ಅತಿಯಾಸೆ ದುರಾಸೆಯೂ ಹೆಚ್ಚಾಗಿ ಮನುಷ್ಯ ರಾಕ್ಷಸನಾಗಿ ಬದಲಾದ. ಹೀಗಾಗಿ ನೆರಳು ಕೊಡುವ ಮರವನು ಕಡಿದು, ನೀರು ಕೊಡುವ ನದಿಯ ನುಂಗಿ, ಔಷಧಿಯಿಂದ ತುಂಬಿದ ಕಾಡನು ನಾಶ ಮಾಡಲು ಪ್ರಾರಂಭಿಸಿದ. ಇದರಿಂದ ಮಾನವನ ಅಳವಿನ ಜೊತೆಗೆ ಪರಿಸರವು ಅಳಿವಿನ ಅಂಚಿಗೆ ಬಂದು ನಿಂತಿದೆ. ಅದಕ್ಕೆ ಹೇಳೋದು “ಮಾಡಿದ್ದುಣ್ಣೋ ಮಹರಾಯ ಅಂತಾ.” ಈಗಲಾದರೂ ಮಾನವ ಎಚ್ಚೆತುಕೊಂಡು ಕಾಡಿನ ಬೆಳವಣಿಗೆಗೆ ಸಹಕರಿಸಿ, ಜಲ, ನೆಲ ಹಾಗೂ ಜೀವಿಗಳ ಅಭಿವೃದ್ಧಿಗೆ ಅಣಿಯಾಗಬೇಕು, ಆಗ ಇಡೀ ಭೂಮಿಯೇ ಹಸುರಿನ ನಂದನವಾಗಿ, ನಮ್ಮ ಬದುಕು ಚಂದನವಾಗಿ ಸುಗಂಧ ಹರಡಲು ಸಾಧ್ಯ.

ಮಾನವನ ಅಳಿವು ಉಳಿವು ನಿಂತಿರುವುದು ಈ ಭೂಮಿ ಮೇಲಿನ ಪರಿಸರದಿಂದ ಮಾತ್ರ. ನಮ್ಮ ಬದುಕಿಗೆ ಉಸಿರು ಎಷ್ಟು ಮುಖ್ಯವೋ ಅಷ್ಟೇ ಹಸಿರು ಕೂಡ ಪ್ರಾಮುಖ್ಯವಾಗಿದೆ. ಹಸಿರೇ ಉಸಿರು ಎಂಬಂತೆ ಬದುಕುವ ಪ್ರಸಂಗ ನಮ್ಮದಾಗಿದೆ. ಎಲ್ಲೆಲ್ಲೋ ಸ್ವರ್ಗವ ಹುಡುಕಬೇಡಿ ಪರಿಸರವೇ ನಮ್ಮ ಸ್ವರ್ಗವಾಗಿದೆ ನೋಡಿ ಪರಿಸರವನ್ನು ವರ್ಣಿಸಲು ಅಸಾಧ್ಯವಾದದು.

ಪರಿಸರ ಮತ್ತು ಮಾನವನ ಸಂಬಂಧ ಅನ್ಯೋನ್ಯವಾಗಿದೆ. ಎರಡು ಅಂಶಗಳು ಒಂದನ್ನೊಂದು ಅವಲಂಬಿಸಿವೆ. ಮಾನವ ತನ್ನ ಜೀವಿತಾವಧಿಯಲ್ಲಿ ಪರಿಸರದ ಅಜೈವಿಕ ಅಂಶಗಳಾದ ಗಾಳಿ, ನೀರು, ಆಹಾರ ಮುಂತಾದವುಗಳನ್ನು ಅವಲಂಬಿಸಿರುತ್ತಾನೆ. ಪರಿಸರ ತನ್ನ ಅಸ್ತಿತ್ವಕ್ಕಾಗಿ ಮಾನವನ ಚಟುವಟಿಕೆಗಳನ್ನು ಅವಲಂಬಿಸಿರುತ್ತದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಾಣ್ಯದ ಯಾವುದೇ ಒಂದು ಮುಖ ವಿಕಾರವಾದರೆ ನಾಣ್ಯಕ್ಕೆ ಬೆಲೆ ಇರುವುದಿಲ್ಲ. ಹಾಗೆಯೇ ಪರಿಸರ ನಾಶವಾದರೆ ಮಾನವನಿಗೆ ಉಳಿಗಾಲವಿಲ್ಲ. ಮಾನವನ ನಾಶವಾದರೆ ಪರಿಸರ ಉಳಿಯುವುದಿಲ್ಲ. ಎರಡೂ ಅಂಶಗಳ ರಕ್ಷಣೆ ನಮ್ಮೆಲ್ಲರ ಹೊಣೆ. ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರಿನ ಜೊತೆ ಹಸನಾದ ವಾತಾವರಣ ಸೃಷ್ಟಿ ಮಾಡಬೇಕಿದೆ. ಈ ಪರಿಸರದ ಪ್ರೀತಿ ಮತ್ತು ಆರೈಕೆಯ ಜವಾಬ್ದಾರಿ ಎಲ್ಲರ ಉಸಿರಾಗಿರಲಿ. ಅದುವೇ ನಮ್ಮ ಜೀವಕ್ಕೆ ಉಸಿರು ನೀಡುತ್ತದೆ ನೆನಪಿರಲಿ.

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಆದರೂ ರಕ್ಷಣೆ ಮಾಡುತ್ತಿಲ್ಲ ನಾವು ಅದಕ್ಕೋಸ್ಕರ ತಾನೇ ಇಷ್ಟೆಲ್ಲ ನೋವು. ಗಿಡವನ್ನು ನೆಡೋಣ, ಮರವಾಗಿ ಬೆಳೆಸೋಣ, ತಂಪಾದ ಗಾಳಿ ಸವಿಯೋಣ, ಪರಿಸರ ಮಾಲಿನ್ಯವನ್ನು ತಡೆಯೋಣ, ಬತ್ತಿ ಹೋಗುತ್ತಿರುವ ಭೂಮಿಯನ್ನು ಹಚ್ಚ ಹಸಿರಾಗಿಸೋಣ ಪರಿಸರದ ಸಂಕೇತ ಹಸಿರು, ಈ ಹಸಿರೇ ನಮ್ಮ ಉಸಿರು, ಉಳಿಸೋಣ ಪರಿಸರವ ಪರಿಸರವಿದ್ದರೆ ನಮ್ಮ ಜೀವ .

*****

ಕು. ಜ್ಯೋತಿ ಆನಂದ ಚಂದುಕರ

ಬಾಗಲಕೋಟ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button