ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯನ್ನು ಒದಗಿಸಿ – 2.60 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ.
ಹುನಗುಂದ ಜೂನ್.20

ಸರ್ಕಾರಿ ನೌಕರರ 7 ನೇ. ವೇತನ ಪರಿಷ್ಕರಣೆ ಜಾರಿ, ಹಳೆಯ ನಿಶ್ಚಿತ ಪಿಂಚಣಿ ಮರುಸ್ಥಾಪನೆ, 2.60 ಲಕ್ಷ ಖಾಲಿ ಹುದ್ದೆಗಳ ಭರ್ತಿ ಹಾಗೂ ಹೊರಗುತ್ತಿಗೆ ನೌಕರರಿಗೆ ಕೆಲಸದ ಭದ್ರತೆ ಒದಗಿಸಲು ಒತ್ತಾಯಿಸಿ ಬುಧವಾರ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಪ್ರತಿಭಟನೆ ನಡೆಸಿ ಗ್ರೇಡ್-2 ತಹಶೀಲ್ದಾರ ಮಹೇಶ ಸಂದಿಗವಾಡ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆಯಲ್ಲಿ ಒಕ್ಕೂಟದ ರಾಜ್ಯ ಜಂಟಿ ಕಾರ್ಯದರ್ಶಿ ಬಸವರಾಜ ಜಿ ಗೌಡರ ಮಾತನಾಡಿ ಕರ್ನಾಟಕ ರಾಜ್ಯ 7 ನೇ. ವೇತನ ಆಯೋಗವು ತನ್ನ ಶಿಫಾರಸ್ಸುಗಳನ್ನು ಸಲ್ಲಿಸಲು ಎರಡು ಬಾರಿ ಅವಧಿ ವಿಸ್ತರಣೆ ಪಡೆದು, ಸುದೀರ್ಘ ಕಾಲದ ನಂತರ ಅಂತಿಮವಾಗಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. 7 ನೇ ವೇತನ ಆಯೋಗದ ಶಿಫಾರಸ್ಸುಗಳು ಸ್ಪಷ್ಟವಾಗಿರದೇ ಗೊಂದಲ ದಿಂದ ಕೂಡಿದ್ದು, ನೌಕರರ ವೇತನ ಪ್ರಮಾಣವನ್ನು ಕಡಿತ ಗೊಳಿಸುವ ಕ್ರಮಗಳನ್ನು ಹೊಂದಿದೆ ಎಂದು ಆರೋಪಿಸಿದರು. ಜುಲೈ 2022 ರಂದು 7 ನೇ. ವೇತನ ಆಯೋಗದ ಪರಿಷ್ಕರಣೆಯನ್ನು ಕಾಲ್ಪನಿಕವಾಗಿ ಪರಿಗಣಿಸಿ, ನೌಕರರಿಗೆ ಮಧ್ಯಂತರ ಪರಿಹಾರವನ್ನು ನೀಡಿದ ರಾಜ್ಯ ಸರ್ಕಾರವು ಆದೇಶಿಸುವುದು ವೈಜ್ಞಾನಿಕವಾದುದು. ಮನೆ ಬಾಡಿಗೆ ಭತ್ಯೆ, ಪ್ರಭಾರ ಭತ್ಯೆ, ಅಂಗವಿಕಲರ ನೌಕರರ ಭತ್ಯೆ, ಸಮವಸ್ತ್ರ ಭತ್ಯೆ, ಇತ್ಯಾದಿಗಳನ್ನು ಬೆಲೆಯೇರಿಕೆ ಮಟ್ಟಕ್ಕನುಗುಣವಾಗಿ ಹೆಚ್ಚಿಸಬೇಕು ಎಂದರು.ಒಕ್ಕೂಟದ ತಾಲೂಕ ಅಧ್ಯಕ್ಷ ಕೆ.ವ್ಹಿ.ಮಡಿವಾಳರ ಮಾತನಾಡಿ ಹೊಸ ಪಿಂಚಣಿ ವ್ಯವಸ್ಥೆಯಿಂದಾಗಿ ಸರ್ಕಾರಿ ನೌಕರರಿಗೆ ಯಾವುದೇ ನಿಶ್ಚಿತ ಪ್ರಮಾಣದ ಪಿಂಚಣಿ ಸಿಗದೇ ಸಂಧ್ಯಾ ಕಾಲದಲ್ಲಿ ನೌಕರ ಬದುಕು ಬೀದಿಗೆ ಬಿದ್ದಂತಾಗಿದೆ. ನೌಕರರು ಮತ್ತು ಸರ್ಕಾರಗಳ ವಂತಿಕೆ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಕಂಪನಿಗಳ ಭದ್ರತೆ ಒದಗಿಸಲು ತೊಡಗಿಸಿದಂತಾಗಿದೆ. ಆದ್ದರಿಂದ, ಎನ್.ಪಿ.ಎಸ್ ಪದ್ದತಿ ರದ್ದು ಪಡಿಸಿ, ಹಳೆಯ ನಿಶ್ಚಿತ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸಲು ಸರ್ಕಾರವು ಆಶ್ವಾಸನೆ ನೀಡಿರುವಂತೆ ಓಪಿಎಸ್ ಜಾರಿ ಮಾಡಬೇಕು.ಸರ್ಕಾರದ ವಿವಿಧ ಇಲಾಖೆಗಳು, ನಿಗಮ/ ಮಂಡಳಿಗಳಲ್ಲಿ ಲಕ್ಷಾಂತರ ಯುವಜನತೆ ಯಾವುದೇ ಸೇವಾ ಭದ್ರತೆ ಇಲ್ಲದೇ, ಕನಿಷ್ಟ ವೇತನವಾಗಲಿ,ಕಾನೂನುಬದ್ದವಾಗಿ ನೀಡಬೇಕಾದ ಇ.ಎಸ್.ಐ/ಪಿ.ಎಫ್ ಸೌಲಭ್ಯಗಳಾಗಲಿ,ಮಾಸಿಕ ವೇತನ ಸರಿಯಾದ ದಿನಾಂಕಕ್ಕೆ ನೀಡುವುದಾಗಲಿ ಇದಾವುದೂ ಇಲ್ಲದೇ, ಹೊರಗುತ್ತಿಗೆ ನೌಕರರು ಆಧುನಿಕ ಜೀತಪದ್ದತಿಯಂತೆ ಹೊರಗುತ್ತಿಗೆ ಏಜೆನ್ಸಿಗಳ ಕಪಿಮುಷ್ಟಿಗೆ ಸಿಲುಕಿ ನರಳುತ್ತಿದ್ದಾರೆ. ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಸೇವಾ ಭದ್ರತೆ ಒದಗಿಸಬೇಕು ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಿ.ಬಿ.ಅಂಬಿಗೇರ, ಎಸ್.ಕೆ.ಕೊನೆಸಾಗರ, ಸಿದ್ದಲಿಂಗಪ್ಪ ಬೀಳಗಿ, ಎಂ.ಎನ್,ನದಾಫ್, ಸಂಗಣ್ಣ ನಾಗೂರ, ಬಿ.ಎಚ್.ಕರಡಿ, ಬಿ.ಆರ್.ಯಂಡಿಗೇರಿ, ಗಿರಿಜಾ ಮಡಿವಾಳರ, ಎಸ್.ಎಂ.ಹೊಕ್ರಾಣಿ, ವಿ.ಎಚ್.ಗೌಡರ, ಎಚ್.ಎಂ.ಕಲ್ಪನಾ,ಕೆ. ಎನ್.ಜಲಗೇರಿ, ಎಲ್,ವಾಯ್.ಗುಂಡಿಮನಿ,ವಿಜಯಾ ಗೌಡರ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಮಲ್ಲಿಕಾರ್ಜುನ್.ಎಂ.ಬಂಡರಗಲ್ಲ ಹುನಗುಂದ.