ರೈತರ ಪರ ಕಾಳಜಿಗೆ ಭೀಮಾ ನದಿ ಗೇಟ್ ಎತ್ತಿ ನೀರು ಹರಿಸಿದ್ದು – ಪಂಚಮಸಾಲಿ ಸಮಾಜದ ಅಗ್ರಗಣ್ಯ ನಾಯಕ.

“ಹುನಗುಂದ ವಿಶೇಷ ಲೇಖನ” ಮಲ್ಲಿಕಾರ್ಜುನ.ಎಂ.ಬಂಡರಗಲ್ಲ

ಜಿನುಗು ದಾಡಿ, ಖಾದಿ ಧೋತರ, ನೆಹರು ಶೆರ್ಟ್, ತೆಲೆಯ ಮೇಲೆ ಸದಾ ಉಣ್ಣೆ ಟೋಪಿ, ಉತ್ತರ ಕರ್ನಾಟಕದ ಖಡಕ್ ಜವಾರಿ ಭಾಷೆ, ಮಾತಿನಲ್ಲಿ ಒಂದಿಷ್ಟು ಒರಟುತನ, ಕ್ಷಣದೊಳಗೆ ಮೃದುವಾಗುವ ವರ್ಣರಂಜಿತ ವ್ಯಕ್ತಿತ್ವ, ತಮ್ಮ ರಾಜಕಾರಣದ ಅವಧಿಯನ್ನು ಸದಾ ಜನ ಸೇವೆಗೆ ಮೀಸಲಿಟ್ಟ ಹೃದಯ ಶ್ರೀಮಂತ, ತಾವು ಆಡಿದ್ದೇ ನಡೆಯ ಬೇಕೆಂಬ ಹಠದ ಸ್ವಭಾವ ಮಾಜಿ ಸಚಿವ ಲಿಂ, ಎಸ್. ಆರ್, ಕಾಶಪ್ಪನವರದು. ದೂರವಾಣಿ ಕರೆ ಬಂದರೇ ಸಾಕು ಪೋನ್ ಎತ್ತಿದವರೇ ಸರ್ಕಾರ…! ಕಾಶಪ್ಪನವರ…! ಎಂದು ಖಡಕ್ ಮಾತಿನಿಂದಲೇ ಆರಂಭಿಸುವ ಅವರ ಮಾತಿನ ಛಾಟಿ ಇಡೀ ರಾಜ್ಯಕ್ಕೆ ಗೊತ್ತಿತ್ತು.ಅಖಂಡ ವಿಜಯಪುರ ಮತ್ತು ಬಾಗಲಕೋಟಿ ಜಿಲ್ಲೆಯ ಹುನಗುಂದ ತಾಲೂಕಿನ ಕೃಷ್ಣ ನದಿಯ ದಡ ದಲ್ಲಿರುವ ಒಂದು ಪುಟ್ಟ ಗ್ರಾಮವಾದ ಹಾವರಗಿಯಲ್ಲಿ ಜನಿಸಿದ ಲಿಂ,ಎಸ್.ಆರ್.ಕಾಶಪ್ಪನವರ ಮೊದಲು ತಾಲೂಕ ಅಭಿವೃದ್ದಿ ಮಂಡಳಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜರ್ನಿ ಆರಂಭಿಸುವ ಮೂಲಕ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನದವರಿಗೂ ಸಾಗಿದರು. ಹಮ್ಮು ಬಿಮ್ಮಿಲ್ಲದ ಸರಳ ವ್ಯಕ್ತಿತ್ವದ ರಾಜಕಾರಣಿ ಯಾಗಿದ್ದರು. ಜಿಗಿಟುತನ ಹಾಗೂ ಜವಾರಿ ಭಾಷೆ ಮತ್ತು ಮೃದು ಸ್ವಭಾವ ಅವರನ್ನು ಅಲ್ಲಿಯತನಕ ಕರೆದು ಕೊಂಡು ಹೋಗಿದ್ದಲ್ಲದೇ ಇವರು ಇಂದಿಗೂ ಜನರ ಮನಸಿನಲ್ಲಿ ಸದಾ ಜನಾನುರಾಗಿ ಮತ್ತು ಮುತ್ಸದ್ದಿ ನಾಯಕ ಎನ್ನಿಸಿ ಕೊಂಡಿದ್ದಾರೆ.1949 ಫೆಬ್ರವರಿ 26 ರಂದು ಹಾವರಗಿಯಲ್ಲಿ ಜನಸಿದ ಲಿಂ,ಎಸ್.ಆರ್.ಕಾಶಪ್ಪನವರ 2003 ಜೂನ್ 27 ರಂದು ಆಕಸ್ಮಿಕ ಅಫಘಾತದಲ್ಲಿ ನಿಧನರಾದರು. ಬದುಕಿದ್ದರೇ ರಾಜ್ಯದ ಲಿಂಗಾಯತ ಅಗ್ರಗಣ್ಯ ನಾಯಕರಾಗುತ್ತಿದ್ದ ರೆಂದು ಅವರಲ್ಲಿದ್ದ ಮುತ್ಸದ್ದಿ ನಾಯಕತ್ವ ಕಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಹೇಳುವ ಮೂಲಕ ಕಾಂಗ್ರೆಸ್‌ಗೆ ಕಾಶಪ್ಪನವರ ಅನಿವಾರ್ಯ ಆಗಿದ್ದರೆಂದು ಹೇಳಿದ ಮಾತು ಮರೆಯಲಾಗುವುದಿಲ್ಲ.ಹಾವರಗಿಯಂತಹ ಸಣ್ಣ ಹಳ್ಳಿಯಿಂದ ತಮ್ಮ ರಾಜಕೀಯವನ್ನು ಆರಂಭಿಸಿ ಇವರು ಮೊದಲ ಬಾರಿಗೆ ತಾಲೂಕ ಅಭಿವೃದ್ಧಿ ಮಂಡಳಿ(ಟಿಡಿಬಿ) ಸದಸ್ಯರಾಗಿ ಮತ್ತು ಅಧ್ಯಕ್ಷರಾದರು. 1985 ರಲ್ಲಿ ವಿಧಾನಸಭೆ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋಲನ್ನು ಕಂಡರೂ.ಛಲ ಬಿಡದೇ ಪಕ್ಷ ಸಂಘಟಿಸಿ 1989 ರಲ್ಲಿ ತಮ್ಮನ್ನು ಸೋಲಿಸಿದ ಲಿಂ, ಎಸ್. ಎಸ್. ಕಡಪಟ್ಟಿ ಅವರ ವಿರುದ್ದವೇ ಅತ್ಯಧಿಕ ಮತಗಳಿಂದ ಅವರನ್ನು ಸೋಲಿಸಿ ಮೊದಲು ಬಾರಿಗೆ ವಿಧಾನ ಸಭೆಯನ್ನು ಪ್ರವೇಶಿಸಿದರು. ನಂತರ ಸತತ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ರಾಗಿದ್ದರು. ಮುಂದಿನ ರಾಜಕೀಯ ನಡೆ ಬೆರಗು ಹುಟ್ಟಿಸಿತ್ತು. ರಾಜಕೀಯ ಹೆಜ್ಜೆ ಮತ್ತು ಅವರ ದಿಟ್ಟ ನಿಲುವುಗಳು,ಪ್ರಾಮಾಣಿಕ ಜನಸೇವೆ, ಅವರಲ್ಲಿನ ಜಿಗುಟುತನ, ಜವಾರಿ ಸ್ವಭಾವ ಅವರನ್ನು ರಾಜ್ಯದ ಕ್ಯಾಬಿನೆಟ್ ಮಂತ್ರಿಯ ಹುದ್ದೆಯವರಗೂ ಕರೆದ್ಯೋಯಿತು.ಮಾತಿನಲ್ಲಿ ವೈರಿಯನ್ನು ಸೆಳೆಯುವ ಚಾಣಕ್ಯ-ತಮಗೆ ಹತ್ತಿರದವರ ಗಿಂತ ವೈರಿಗಳನ್ನು ಮಾತಾಡಿಸುವ ಮತ್ತು ಅವರ ಮನಸ್ಸು ಬದಲಾಯಿಸುವ ಚಾಣಕ್ಯ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡುತ್ತಿದ್ದರೂ ಗೆದ್ದ ನಂತರ ಕ್ಷೇತ್ರದ ಜನತೆಯನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಮೂಲಕ ಒಂದು ರೀತಿಯ ಅಜಾತ ಶತ್ರುಯಾಗಿದ್ದರು. ಪಂಚಮಸಾಲಿ ಸಮಾಜ ಅಗ್ರಗಣ್ಯ ನಾಯಕರು-ಕಾಶಪ್ಪನವರ ಪಂಚಮಸಾಲಿ ಸಮಾಜ ಸಂಘಟನೆಯಲ್ಲಿ ಅವರ ಕೊಡುಗೆ ಅಪಾರ. ಸಮಾಜದ ರಾಜ್ಯಾಧ್ಯಕ್ಷರಾಗಿ ಗಮನಾರ್ಹ ಸೇವೆ ಮಾಡಿದ್ದರು. ರಾಜ್ಯದ ವಿವಿಧ ಕಡೆ ಸಮಾಜದ ಮುಖಂಡರು ಬೆಳೆಸಿ ರಾಜಕಾರಣದಲ್ಲಿ ಮಿಂಚಿ ಮರೆಯಾದ ಮಾಣಿಕ್ಯ. ಇಂತಹ ಮೇರು ನಾಯಕ ಮರೆಯಾಗಿ ಇಂದಿಗೆ 22 ವರ್ಷಗಳೇ ಸಂಧಿವೆ. ಅಭಿವೃದ್ದಿಯ ಹರಿಕಾರರು-ತಮ್ಮ 14 ವರ್ಷದ ಸುದೀರ್ಘ ಅಧಿಕಾರ ಅವಧಿಯಲ್ಲಿ ತಾಲೂಕಿನ ಕೋಟ್ಯಾಂತರ ರೂಪಾಯಿ ಅನುದಾನವನ್ನು ತಂದು ಮರೋಳ ಏತ ನೀರಾವರಿ, ಕೂಡಲ ಸಂಗಮ ಅಭಿವೃದ್ಧಿ, ಅಲ್ಲಿನ ಜಿಟಿಟಿಸಿ ಕಾಲೇಜು ಸ್ಥಾಪನೆ, ಶಾಲಾ ಕಾಲೇಜುಗಳ ಮಂಜೂರಿ ಮತ್ತು ನಿರ್ಮಾಣ, ಪಶು ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ರಸ್ತೆ ಅಭಿವೃದ್ಧಿ, ಡಾಂಬರೀಕರಣ, ಅಡಿಹಾಳ ಸೇತುವೆ ನಿರ್ಮಾಣಕ್ಕೆ ಕನಸ್ಸು ಕಂಡವರು. ಮುಳಗಡೆ ಗ್ರಾಮಗಳ ಸ್ಥಳಾಂತರ, ವಿವಿಧ ಯೋಜನೆಯಲ್ಲಿ ಸಾವಿರಾರು ಮನೆಗಳ ನಿರ್ಮಾಣ, ಹುನಗುಂದದಲ್ಲಿ ತಾಲೂಕ ಕ್ರೀಡಾಂಗಣ, ಇಳಕಲ್ ಡೈಟ್ ಆರಂಭ ಸೇರಿದಂತೆ ನೂರಾರು ಕೋಟಿ ಅನುದಾನ ತಂದು ಇಡೀ ಮತ ಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದರು.

“ಬಾಕ್ಸ್ ಸುದ್ದಿ”-

ಸದಾ ರೈತಪರ ಚಿಂತಕರು-ಸದಾ ರೈತಪರ ಕಾಳಜಿಯುಳ್ಳ ಅವರು ಭೀಮಾನದಿ ಗೇಟ್ ಕಿತ್ತಿ ರೈತರ ಜಮೀನಿಗೆ ನೀರು ಹರಿಸಿದ್ದು ಇಂದಿಗೂ ಕೂಡಾ ರೈತರು ಮರೆತ್ತಿಲ್ಲ. ಇಂತಹ ಎಂಟೆದೆಯ ರಾಜಕಾರಣಿ ಕಂಡಿದ್ದು ಅಪರೂಪ. ರೈತ ಕುಟುಂಬದಲ್ಲಿ ಹುಟ್ಟಿ ಜನ ಸಾಮಾನ್ಯರ ಮಧ್ಯದಲ್ಲಿ ಬೆಳೆದು ಬಂದ ಎಸ್‌.ಆರ್‌.ಕೆ ಸರ್ವ ಸಮಾಜಗಳನ್ನು ಒಟ್ಟಿಗೆ ಕರೆದ್ಯೋದ ಧೀಮಂತ ನಾಯಕರಾಗಿದ್ದರು. ಹೋರಾಟದಲ್ಲಿ ಒಂದು ಹೆಜ್ಜೆ ಮುಂದಿದ್ದರು. ಪಂಚಮಸಾಲಿ ಸಮಾಜದ ಅಗ್ರಗಣ್ಯ ನಾಯಕರಾಗಿ ಸಮಾಜ ಸಂಘಟನೆಯಲ್ಲಿ ಅವರ ಕೊಡುಗೆ ಅಪಾರವಾಗಿತ್ತು. ಇಂತಹ ಜನಾನುರಾಗಿ, ಮುತ್ಸದ್ದಿ ನಾಯಕರು ಮರೆಯಾಗಿ ಇಂದಿಗೆ 22 ವರ್ಷಗಳೇ ಸಂದಿವೆ.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button