ಕರ್ನಾಟಕದಲ್ಲಿ ಏಕೈಕ ಅಗ್ನಿ ಸಾಲಿಗ್ರಾಮ ರೂಪೀ ಶಿವಲಿಂಗ. (ಅಮೃತೇಶ್ವರ ದೇವಾಲಯ)

ಅಜ್ಜಂಪುರ ಜು.04

ಹೊಯ್ಸಳರ ಆಡಳಿತದಲ್ಲಿ ನಿರ್ಮಾಣವಾದ ಅದೆಷ್ಟೋ ಪುರಾತನ ದೇವಾಲಯಗಳು, ಐತಿಹಾಸಿಕ ಕ್ಷೇತ್ರಗಳು ನಮ್ಮ ಕರುನಾಡಿನಲ್ಲಿ ಕಂಡು ಬರುತ್ತವೆ. ಕರ್ನಾಟಕವನ್ನು ಬಹುಕಾಲದವರೆಗೆ ಆಳಿದವರಲ್ಲಿ ಹೊಯ್ಸಳರೂ ಪ್ರಮುಖರು. ಗಂಗರು, ಕದಂಬರು ಮತ್ತು ಚಾಲುಕ್ಯರಂತೆ ಇವರೂ ಸಹ ಕನ್ನಡ ನಾಡಿನಾದ್ಯಂತ ಸುಮಾರು 92 ದೇವಾಲಯಗಳನ್ನು ಹೊಯ್ಸಳರು ನಿರ್ಮಿಸಿದ್ದಾರೆ. ವಿಶೇಷವಾಗಿ ಕರ್ನಾಟಕದಲ್ಲಿ ಏಕೈಕ “ಅಗ್ನಿ ಸಾಲಿಗ್ರಾಮ ಶಿವಲಿಂಗ” ಇರುವ ದೇವಾಲಯ ಅಮೃತೇಶ್ವರ ದೇವಾಲಯವೂ ಒಂದು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಅಮೃತಪುರ (ಅಜ್ಜಂಪುರ) ಎಂಬ ಗ್ರಾಮದಲ್ಲಿರುವ ಅಮೃತೇಶ್ವರ ದೇವಾಲಯ ತನ್ನ ಭವ್ಯ ಶಿಲ್ಪಕಲಾ ಕೆತ್ತನೆ ಗಳಿಂದಾಗಿಯೇ ಜಗತ್ ಪ್ರಸಿದ್ಧಿ ಪಡೆದಿದೆ. ಹೊಯ್ಸಳರ ಆಡಳಿತದಲ್ಲಿ ನಿರ್ಮಿತವಾದಂತಹ ಅದ್ಬುತ ಶಿವ ದೇವಾಲಯಗಳಲ್ಲಿ ಅಮೃತಪುರದ ಅಮೃತೇಶ್ವರ ದೇವಾಲಯ ಮುಂಚೂಣಿಯಲ್ಲಿದೆ. ಈ ದೇವಾಸ್ಥಾನವನ್ನು ಹೊಯ್ಸಳರ ದೊರೆ ವಿಷ್ಣುವರ್ಧನರ ಮೊಮ್ಮಗನಾದ ಎರಡನೇ ವೀರ ಬಲ್ಲಾಳನು ಕ್ರಿ. ಶ.1196 ರಲ್ಲಿ ನಿರ್ಮಿಸಿದ್ದಾರೆಂದು ಶಾಸನಗಳು ಉಲ್ಲೇಖಿಸುತ್ತವೆ. ಮೊದಲ ನೋಟದಲ್ಲಿಯೇ ಮೂಕ ವಿಸ್ಮಿತರಾಗುವಂತಹ ಶಿಲ್ಪಕಲಾ ಸಿರಿಯನ್ನು ಹೊಂದಿರುವ ಈ ದೇವಾಲಯ ಉಗಮಿಸಲು ಒಂದು ಇತಿಹಾಸವಿದೆ. ಆಗಿನ ಕಾಲದ ಹೊಯ್ಸಳ ಸಾಮ್ರಾಜ್ಯವು ದ್ವಾರ ಸಮುದ್ರದಿಂದ ದಕ್ಷಿಣ ದಿಕ್ಕಿಗೆ ತರೀಕೆರೆವರೆಗೂ ಹಬ್ಬಿತ್ತು. ಹೊಯ್ಸಳ ಸಾಮ್ರಾಜ್ಯದ ಎರಡನೇ ವೀರ ಬಲ್ಲಾಳನ ಮಹಾದಂಡ ನಾಯಕನಾಗಿದ್ದಂತಹ ಅಮತೀಯ ನಾಯಕರೊಬ್ಬರು ಅಪರಿಮಿತ ಶೂರರಾಗಿದ್ದರು.

ಜೊತೆ ಜೊತೆಗೆ ಅವರು ಎರಡನೇ ವೀರ ಬಲ್ಲಾಳನ ಆಪ್ತರಾಗಿದ್ದರು ಅವರಿಗೆ ರಾಜರು ಪ್ರೀತಿಯಿಂದ ಅಮೃತದಂಡ ಎಂದು ನಾಮಕರಣ ಮಾಡಿದರು.ಹೊಯ್ಸಳರು ಮತ್ತು ಕಡು ವೈರಿಗಾಳಾದ ಗುರ್ಜರರ ನಡುವೆ ಕ್ರಿ.ಶ 1192 ರ ಇಸವಿಯಲ್ಲಿ ಘನಗೋರ ಯುದ್ಧವೊಂದು ಜರುಗುತ್ತದೆ. ಆಗ ಅಮೃತದಂಡ ನಾಯಕರು ಗುರ್ಜರರ ವಿರುದ್ಧ ಧೈರ್ಯದಿಂದ ಕಾದಾಡಿ ಅವರನ್ನು ಹಿಮ್ಮೆಟ್ಟಿಸಲು ಸಫಲರಾದರೂ ಸಹ ತಮ್ಮ ಪ್ರಾಣವನ್ನು ಕಳೆದು ಕೊಳ್ಳಬೇಕಾಯಿತು, ತಮ್ಮ ಪರಮ ಸ್ನೇಹಿತನನ್ನು ಕಳೆದು ಕೊಂಡಂತಹ ಎರಡನೇ ವೀರ ಬಲ್ಲಾಳರು ತನ್ನ ಸ್ನೇಹಿತನ ನೆನಪಿಗಾಗಿಯೇ ಕ್ರಿ.ಶ 1196 ರಲ್ಲಿ ನಿರ್ಮಿಸಿದಂತಹ ಸುಂದರ ಕಲಾ ಸಿರಿಯೇ ಅಮೃತಪುರದ ಅಮೃತೇಶ್ವರ ದೇಗುಲ.ಈ ದೇಗುಲದಲ್ಲಿ 52 ಅಗರ್ವರ ಕಂಬಗಳು ಹಾಗೂ 250 ವಿಶಿಷ್ಟ ಕೆತ್ತನೆಯ ಸಣ್ಣ ಗೋಪುರಗಳಿವೆ.ನಕ್ಷತ್ರಾಕಾರದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ, ಗರ್ಭ ಗುಡಿಯಲ್ಲಿರುವ ಅಮೃತೇಶ್ವರ ಶಿವಲಿಂಗವನ್ನು ನೇಪಾಳ ದೇಶದ ಗಂಡಕಿ ನದಿಯಿಂದ ತಂದಂತಹ ಅಗ್ನಿ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾಗಿದೆ ಭಾರತದಲ್ಲಿ ಆರು ಅಗ್ನಿ ಸಾಲಿಗ್ರಾಮ ಶಿವಲಿಂಗಗಳಿವೆ. ನಮ್ಮ ಕರ್ನಾಟಕದಲ್ಲಿರುವ ಏಕೈಕ ಅಗ್ನಿ ಸಾಲಿಗ್ರಾಮ ಶಿವಲಿಂಗವೆಂದರೆ ಇದೇ ಅಮೃತೇಶ್ವರ ಶಿವಲಿಂಗ ಮಾತ್ರ.ಅಗ್ನಿ ಸಾಲಿಗ್ರಾಮಕ್ಕೆ ಬ್ರಹ್ಮ, ವಿಷ್ಣು, ಮಹೇಶ್ವರರು ಶಕ್ತಿ ತುಂಬಲಾಗಿದೆ ಎಂದು ಶಾಸನಗಳಲ್ಲಿ ವಿವರಿಸಲಾಗಿದೆ. ಅಮೃತೇಶ್ವರ ಶಿವಲಿಂಗವನ್ನು ಮಕರ ಸಂಕ್ರಾಂತಿ ದಿನ ದಂದು ಪ್ರತಿಷ್ಠಾಪನೆ ಮಾಡಲಾಗಿದೆ. ಇದೇ ಕಾರಣಕ್ಕಾಗಿಯೇ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನ ಸೂರ್ಯನ ಕಿರಣಗಳು ಅಮೃತೇಶ್ವರ ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸುತ್ತವೆ ಇದೇ ಈ ದೇಗುಲದ ವೈಶಿಷ್ಟತೆ. ಈ ಸೋಜಿಗವನ್ನು ಕಣ್ತುಂಬಿ ಕೊಳ್ಳಲು ಭಕ್ತರು ಮಕರ ಸಂಕ್ರಾಂತಿಯಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.ಅಮೃತೇಶ್ವರ ದೇಗುಲದ ಮತ್ತೊಂದು ಸೋಜಿಗವೆಂದರೆ ಗರ್ಭ ಗುಡಿಯಲ್ಲಿರುವ ನಂದಾದೀಪ, ಮೊದಲು ನಂದಾ ದೀಪವನ್ನು ಮೈಸೂರು ಒಡೆಯರಾದ ಮುಮ್ಮಡಿ ಕೃಷ್ಣರಾಜ ಒಡೆಯರು ಬೆಳಗಿಸಿದ್ದರಂತೆ ಈ ನಂದಾದೀಪ ಒಮ್ಮೊಯೂ ಆರದಂತೆ ದೇಗುಲದ ಅರ್ಚಕರು ಕಾಪಾಡಿ ಕೊಂಡು ಬರುತ್ತಿದ್ದಾರೆ. ಈ ನಂದಾದೀಪಕ್ಕೆ ಎಣ್ಣೆಯನ್ನು ಅರ್ಪಿಸಿ ಅಮೃತೇಶ್ವರನ ಪೂಜಿಸಿದವರ ಬಾಳು ಅಮೃತಮಯವಾಗಿರುತ್ತದೆ ಎಂಬ ನಂಬಿಕೆ ಇದೆ.ಈ ದೇಗುಲದಲ್ಲಿ ಶಾರದಾ ದೇವಿ, ಲಕ್ಷ್ಮಿ ದೇವಿ, ಪಾರ್ವತಿ ದೇವಿಗಳ ವಿಗ್ರಹಗಳು ಇವೆ. ದೇವಾಲಯದ ಸುತ್ತಲೂ ಇರುವಂತಹ ರಾಮಾಯಣ ಮತ್ತು ಮಹಾಭಾರತ ಹಾಗೂ ಭಾಗವತಗಳಿಗೆ ಸಂಬಂಧಿಸಿದಂತಹ ಕಥಾ ವಸ್ತುಗಳ ಶಿಲ್ಪಗಳು ಎಲ್ಲರನ್ನು ಸೆಳೆಯುತ್ತವೆ. ಈ ದೇವಾಲಯದ 4 ಎಕರೆ ವಿಶಾಲ ಪ್ರದೇಶವು ಕೇಂದ್ರ ಪುರಾತತ್ವ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ. ದೇವಾಲಯದ ಮುಂಭಾಗದಲ್ಲಿರುವ ಉದ್ಯಾನ ವನವು ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರವಾಗಿದೆ.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button