ಕೊಟ್ಟೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯ.
ಕೊಟ್ಟೂರು ಸೆಪ್ಟೆಂಬರ್.1

ತಾಲ್ಲೂಕಿನಲ್ಲಿ ಮುಂಗಾರು ಕೈಕೊಟ್ಟಿದ್ದು ಅಲ್ಪ ಸ್ವಲ್ಪ ಮಳೆಗೆ ರೈತರು ಮುಂಗಾರು ಬೆಳೆ ಬಿತ್ತನೆ ಮಾಡಿದ್ದು, ಮಳೆಯಾಗದ ಕಾರಣ ಬೆಳೆಗಳೆಲ್ಲಾ ಸಂಪೂರ್ಣ ಒಣಗಿ ಹೋಗಿದ್ದು ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಸಾಲಕ್ಕೆ ಬೆಳೆ ಸಿಗದೆ ರೈತರು ಸಾಲಗಾರರಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಕೊಟ್ಟೂರು ತಾಲ್ಲೂಕನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ತ್ವರಿತ ಗತಿಯಲ್ಲಿ ಪರಿಹಾರ ಮಂಜೂರು ಮಾಡಬೇಕೇಂದು ಒತ್ತಾಯಿಸಿದ್ದಾರೆ.ಗುರುವಾರ ತಹಶೀಲ್ದಾರರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮನವಿ ಪತ್ರ ನೀಡಿದರು. ಮುಂಗಾರು ಕೈಕೊಟ್ಟಿದ್ದರಿಂದ ಬರಗಾಲ ಬಂದೊದಗಿದೆ. ಸರ್ಕಾರ ರೈತರಿಗೆ ಸಹಕಾರಿ ಬ್ಯಾಂಕಿನಲ್ಲಿ ಶೂನ್ಯ ಬಡ್ಡಿದರದಲ್ಲಿ ಐದು ಲಕ್ಷದವರೆಗೆ ಸಾಲ ಕೊಡುತ್ತೇವೆಂದು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ ಆದರೆ ಇದು ಅನುಷ್ಠಾನವಾಗುತ್ತಿಲ್ಲ. ಈ ಆಶ್ವಾಸನೆ ಬರೀ ವಿಧಾನಸೌಧದ ಕಡತಕ್ಕೆ ಮಾತ್ರ ಸೀಮಿತವಾಗಿದ್ದು ಕಾರ್ಯಗತಗೊಳಿಸುವಲ್ಲಿ ಸರ್ಕಾರ ಕ್ರಮವಹಿಸಬೇಕೆಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಮಂಜುನಾಥ ತಿಳಿಸಿದರು. ಜಿಲ್ಲಾ ಗೌರವಾಧ್ಯಕ್ಷ ಕೆ.ಇ.ಬಿ.ಕೊಟ್ರೇಶಪ್ಪ ಸುರೇಶ್,ಇನ್ನು ಮುಂತಾದ ರೈತ ಮುಖಂಡರು ಹಾಜರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು