ಅಸ್ವಚ್ಚತೆಯ ಆಗರಕ್ಕೆ ಅವಕಾಶ ಕೊಟ್ಟ – ಅಮರಾವತಿ ಗ್ರಾಮ ಪಂಚಾಯಿತಿ.
ಹುನಗುಂದ ಫೆ.21

ಚರಂಡಿ ಇಲ್ಲದೇ ರಸ್ತೆ ಮೇಲೆ ಹರಿಯುತ್ತಿರುವ ಗಬ್ಬೆದ್ದು ನಾರುತ್ತಿರುವ ಕೊಳಚೆ ನೀರು,ದುರ್ವಾಸನೆ ಯಿಂದ ಬೇಸತ್ತ ಜನರು, ರಸ್ತೆ ದಾಟಲು ಹರಸಾಹಸ ಪಡುವ ಚಿಕ್ಕಮಕ್ಕಳು, ವಯೋ ವೃದ್ಧರು, ನಿತ್ಯ ಮೂಗು ಮುಚ್ಚಿಕೊಂಡು ತಿರುಗುವ ಸಾರ್ವಜನಿಕರು, ಹಂದಿಗಳಿಗೆ ಹೇಳಿ ಮಾಡಿಸಿದ ತಾಣ, ಸಂಜೆಯಾದರೇ ಸಾಕು ಗುಂಯ್ಗುಡುತ್ತಿರುವ ಸೊಳ್ಳೆಗಳು ಕಾಟ, ಸಾಂಕ್ರಾಮಿಕ ರೋಗಗಳ ಉತ್ಪತ್ತಿಯ ಹಾಟ್ ಸ್ಪಾಟ್ ಈ ಒಂದು ಅವ್ಯವಸ್ಥೆಯ ಆಗರ ಬೇರೆಲ್ಲಿ ಅಲ್ಲ ಅದು ತಾಲೂಕಿನ ಅಮರಾವತಿ ಗ್ರಾಮದ ವಾರ್ಡ ನಂಬರ-೧ ರ ವಡ್ಡರ ಓಣಿಯ ಸಾಬಣ್ಣ ಮಾನಳ್ಳಿ ಅವರ ಮನೆ ಹತ್ತಿರದ ವಾಸ್ತವದ ಸ್ಥಿತಿ. ಹೌದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಚ್ಛತೆ ಮತ್ತು ಚರಂಡಿ ನಿರ್ಮಾಣ, ಗಣ ತ್ಯಾಜ್ಯ ವಿಲೇವಾರಿಗಾಗಿ ಪ್ರತಿ ವರ್ಷ ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಅಮರಾವತಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಮತ್ತು ಅಧ್ಯಕ್ಷರು ಮಾತ್ರ ಕಣ್ಣಿದ್ದು ಕುರುಡಾ ಗಿದ್ದಾರೆಂದು ಅಲ್ಲಿನ ಸಾರ್ವಜನಿಕರು ನಿತ್ಯ ಇಡೀ ಶಾಪ ಹಾಕುತ್ತಿದ್ದಾರೆ. ವಾರ್ಡಿನ ಸದಸ್ಯ ಕಳೆದ ಮೂರು ವರ್ಷಗಳಿಂದ ಅಲ್ಲಿ ಚರಂಡಿ ನಿರ್ಮಿಸಿ, ಅಲ್ಲಿನ ಜನ ವಸತಿಗೆ ಸಾಕಷ್ಟು ತೊಂದರೆ ಆಗ್ತಾ ಇದೆ, ನಿತ್ಯ ಸೊಳ್ಳೆಯ ಕಾಟದಿಂದ ರೋಗ ರುಜೀನಗಳಿಗೆ ನಾವೇ ಆಸ್ಪದ ಕೊಟ್ಟಂತಾಗುತ್ತದೆ ಎಂದು ಸಾಕಷ್ಟು ಸಾರಿ ಅಧ್ಯಕ್ಷ ಮತ್ತು ಪಿ.ಡಿ.ಓ ಅವರಿಗೆ ಸಭೆಯಲ್ಲಿ ಮನವಿ ಮಾಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಗಳು ಗ್ರಾಮೀಣ ಜನರ ಕಲ್ಯಾಣಕ್ಕಾಗಿ ಮತ್ತು ಸ್ವಚ್ಛತೆಗಾಗಿ ಕೈಕೊಂಡ ಯೋಜನೆಗಳು ಗ್ರಾಮ ಪಂಚಾಯತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ದಿಂದ ಸಂಪೂರ್ಣ ಮಣ್ಣು ಪಾಲಾಗುತ್ತಿವೆ ಎನ್ನುವುದು ಅಮರಾವತಿ ಗ್ರಾಮದ ಅಸ್ವಚ್ಛತೆಯ ವ್ಯವಸ್ಥೆಯ ನೈಜ ಸ್ಥಿತಿಯನ್ನು ಕಂಡಾಗ ಎಲ್ಲರಿಗೂ ಗೊತ್ತಾಗಲಿದೆ. ಸಾಂಕ್ರಮಿಕ ರೋಗ ಹರಡುವ ಭೀತಿ ಅಮರಾವತಿ ಗ್ರಾಮದ ಇಡೀ ಓಣಿಯ ಕೊಳಚೆ ನೀರು ಚರಂಡಿ ನಿರ್ಮಾಣ ಮಾಡದೇ ಇರುವುದರಿಂದ ನಿತ್ಯ ರಸ್ತೆಯ ಮೇಲೆ ಹರಿಯುವುದರ ಜೊತೆಗೆ ದೊಡ್ಡ ದೊಡ್ಡ ತಗ್ಗುಂಡಿಗಳಲ್ಲಿ ನಿಂತು ದುರ್ವಾಸನೆ ಬೀರುವುದು ಜೊತೆಗೆ ಡೆಂಗ್ಯು, ಚಿಕನ್ ಗುನ್ಯಾ, ಮಲೇರಿಯಾದಂತ ಅನೇಕ ಸಾಂಕ್ರಾಮಿಕ ರೋಗಗಳು ಉತ್ಪತ್ತಿ ಮಾಡುವ ಬಹು ದೊಡ್ಡ ತಾಣ ಇದಾಗಿದೆ. ಸಾರ್ವಜನಿಕರ ಇಡಿ ಶಾಪ ಗಬ್ಬೆದ್ದು ನಾರುತ್ತಿರುವ ಈ ಕೊಳಚೆ ಗುಂಡಿಯ ಸ್ವಚ್ಛ ಗೊಳಿಸಿ ವ್ಯವಸ್ಥಿತ ಚರಂಡಿಯನ್ನು ನಿರ್ಮಾಣ ಮಾಡಿ ಎಂದು ಅನೇಕ ಸಾರಿ ಪಂಚಾಯಿತಿ ಸದಸ್ಯ ಮತ್ತು ಅಧ್ಯಕ್ಷ ಪಿ.ಡಿ.ಓ ತಿಳಿಸಿದರು ಕೂಡಾ ಇತ್ತ ಕಡೆಗೆ ತಲೆ ಹಾಕಿಯೂ ಕೂಡ ಮಲಗುತ್ತಿಲ್ಲ, ನಿತ್ಯ ಸೊಳ್ಳೆ, ಹಾವು, ಚೇಳು ಕಾಟದಿಂದ ನಾವು ಬೇಸತ್ತು ಹೋಗಿದ್ದೇವೆ ಇದರ ಕುರಿತು ಸಾಕಷ್ಟು ಬಾರಿ ಪಿಡಿಓ ಮೇಡಮ್ ಅವರಿಗೆ ತಿಳಿಸಿದರೇ ಅವರು ಕ್ಯಾರೆನ್ನುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಇಡೀ ಶಾಪ ಹಾಕಿದರು.

ಸ್ವಚ್ಛತೆಗೆ ಮುಂದಾಗದ ಪಂಚಾಯತಿ ಅಧಿಕಾರಿಗಳು ವಾರ್ಡ್ ಸದಸ್ಯ ಮತ್ತು ಅಲ್ಲಿನ ಸಾರ್ವಜನಿಕರು ಅವ್ಯವಸ್ಥೆಯನ್ನು ಸ್ವಚ್ಛ ಗೊಳಿಸಿ ಎಂದು ಸಾಕಷ್ಟು ಮನವಿ ಮಾಡಿ ಕೊಂಡರು ಪಂಚಾಯತಿ ಅಧಿಕಾರಿಗಳು ಮಾತ್ರ ಸ್ವಚ್ಛತೆಗೆ ಮುಂದಾಗದಿರುವುದು ದುರಂತ. ಈಗಲಾದರೂ ಪಂಚಾಯತಿ ಪಿ.ಡಿ.ಓ ಮತ್ತು ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ರೋಗ ರುಜೀನಗಳು ಉಲ್ಬನ ಗೊಳ್ಳುವ ಮುಂಚೆ ಗಬ್ಬೆದ್ಧು ದುರ್ವಾಸನೆ ಬೀರುತ್ತಿರುವ ಆ ಕೊಳಚೆ ಗುಂಡೆಯನ್ನು ಸ್ವಚ್ಛಗೊಳಿಸಿ ಆ ಸ್ಥಳದಲ್ಲಿ ಚರಂಡಿ ನಿರ್ಮಾಣ ಮಾಡ್ತಾರಾ ಅಂತಾ ಕಾಯ್ದು ನೋಡಬೇಕಾಗಿದೆ.
ಬಾಕ್ಸ್ ಸುದ್ದಿ:-
ಗ್ರಾ.ಪಂ.ಸದಸ್ಯರ ಮಾತಿಗೂ ಕಿಮ್ಮತ್ತಿಲ್ಲ,
ಅಮರಾವತಿ ಗ್ರಾಮದ ವಾರ್ಡ್ ನಂಬರ – 1 ರ ವಡ್ಡರ ಓಣಿಯಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿದು ಅಲ್ಲಲ್ಲಿ ತೆಗ್ಗುಂಡಿಗಳಲ್ಲಿ ನಿಲ್ಲುತ್ತಿದೆ. ಆ ಓಣಿಯ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ, ಅಲ್ಲಿ ವ್ಯವಸ್ಥಿತವಾದಂತ ಚರಂಡಿ ನಿರ್ಮಾಣ ಆಗಬೇಕು ಎಂದು ಕಳೆದ ಎರಡು ಮೂರು ವರ್ಷಗಳಿಂದ ಅಧ್ಯಕ್ಷ ಮತ್ತು ಪಿ.ಡಿ.ಓ ಗಳಿಗೆ ತಿಳಿಸಿದರು ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಸದಸ್ಯರ ಮಾತಿಗೂ ಯಾವುದೇ ಕಿಮ್ಮತ್ತು ಇಲ್ಲದಂತಾಗಿದೆ.
ಮಾಳಪ್ಪ ಚಿತ್ತವಾಡಗಿ. ಸದಸ್ಯರು. ಗ್ರಾ.ಪಂ. ಅಮರಾವತಿ.
ಬಾಕ್ಸ್ ಸುದ್ದಿ:-
ಗ್ರಾ.ಪಂ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗಲಿ,
ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಒಂದು ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊಳಚೆ ನೀರು ನಿಂತು, ಗಬ್ಬೆದ್ದು ನಾರುತಿದ್ದರೂ ಇದನ್ನು ಸ್ವಚ್ಛತೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ನಮ್ಮ ಓಣಿಯ ಜನಕ್ಕೆ ಇದೆ. ಅಧಿಕಾರಿಗಳು ಎಚ್ಚೆತ್ತು ಕೊಂಡು ಸ್ವಚ್ಛತೆಗೆ ಮುಂದಾಗಲಿ.
ಬಸವರಾಜ ಭೋವಿ ಗ್ರಾಮಸ್ಥರು ಅಮರಾವತಿ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ್.ಬಿ.ಬಂಡರಗಲ್ಲ.ಹುನಗುಂದ