ಶ್ರೀ ಸತ್ಯಾತ್ಮ ತೀರ್ಥರ ಚಾತುರ್ಮಾಸ್ಯದ ಅಂಗವಾಗಿ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ.
ಇಲಕಲ್ಲ ಆ.28

ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರ ದಿವ್ಯಾನು ಗ್ರಹದಿಂದ ನೂರು ಜನ ಬಡವರಿಗೆ ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು ಎಂದು ಖ್ಯಾತ ನೇತ್ರ ತಜ್ಞರಾದ ಡಾ. ಸುಶೀಲ ಕಾಖಂಡಕಿಯವರು ಇಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ರಾಘವೇಂದ್ರ ನೇತ್ರ ಸೇವಾ ಕೇಂದ್ರ ಚಾರಿಟೇಬಲ್ ಟ್ರಸ್ಟ್, ಇಳಕಲ್ ಬ್ರಾಹ್ಮಣ ಸಮಾಜ ಹಾಗೂ ಲಯನ್ಸ್ ಕ್ಲಬ್ ಇಳಕಲ್ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಗಸ್ಟ್ ೩೦ ಹಾಗೂ ೩೧ ರಂದು ಕಣ್ಣಿನ ಪೊರೆ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ ಎಂದು ಅವರು ಹೇಳಿದರು. ಈ ಉಚಿತ ಶಿಬಿರದ ಎಲ್ಲ ಮಾಹಿತಿಗಳನ್ನು ಟ್ರಸ್ಟ್ನ ಅಧ್ಯಕ್ಷೆ ಸುದೀಪ್ತಾ ಕಾಖಂಡಕಿಯವರು ತಿಳಿಸುತ್ತಾ ಲೋಕ ಕಲ್ಯಾಣಕ್ಕಾಗಿ ಅನೇಕ ಸೇವೆ ಹಾಗೂ ಯೋಜನೆಗಳನ್ನು ಹಾಕಿ ಕೊಂಡು ಈಗ ಮುಂಬೈನಲ್ಲಿ ಚಾತುಮಾಸ್ಯ ಸಂಕಲ್ಪ ಕೈಗೊಂಡಿರುವ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮ ತೀರ್ಥರ ಅನುಗ್ರಹ ದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಭವ್ಯ ಇತಿಹಾಸ ಹೊಂದಿರುವ ಉತ್ತರಾದಿ ಮಠದ ಚಾತುರ್ಮಾಸ್ಯ ಹಾಗೂ ಮಹಾ ಸಮಾರಾಧನೆಗಳು ದೇಶಾದ್ಯಂತ ತುಂಬಾ ಜನಪ್ರಿಯವಾಗಿವೆ.

ಶ್ರೀ ಸತ್ಯಾತ್ಮ ತೀರ್ಥರ ದರ್ಶನ ಮಾತ್ರದಿಂದ ತಮ್ಮ ಪಾಪಗಳೆಲ್ಲ ದೂರವಾಗುವವು ಎಂದು ಭಕ್ತರು ನಂಬಿದ್ದಾರೆ. ಶ್ರೀಗಳ ಕ್ಷಣ ಮಾತ್ರದ ದರ್ಶನಕ್ಕಾಗಿ ಜನರು ಹಾತೊರೆಯುತ್ತಾರೆ. ವಿದೇಶಗಳಲ್ಲಿಯೂ ಅವರಿಗೆ ಅಪಾರ ಸಂಖ್ಯೆಯ ಭಕ್ತ ರಿದ್ದಾರೆಂದು ಈ ಸಂದರ್ಭದಲ್ಲಿ ಕಾಖಂಡಕಿ ದಂಪತಿಗಳು ಗುರುಗಳನ್ನು ಸ್ಮರಿಸಿದರು. ಇಳಕಲ್ ಬ್ರಾಹ್ಮಣ ಸಮಾಜ, ಲಯನ್ಸ್ ಕ್ಲಬ್ ಹಾಗೂ ಜೇಸಿ ಸಿಲ್ಕ್ ಸಿಟಿ ಸಂಸ್ಥೆ, ಅಕ್ಕನ ಬಳಗ ಸಂಸ್ಥೆ, ಕುಷ್ಟಗಿ ಇನ್ನರ್ ವ್ಹೀಲ್ ಕೂಡಾ ಈ ಸೇವೆಯಲ್ಲಿ ಕೈಜೋಡಿಸಿವೆ. ಅಗಸ್ಟ್ ೩೦ ರಂದು ತಮ್ಮ ಆಸ್ಪತ್ರೆಯಲ್ಲಿ ಕ್ಯಾಟರ್ಯಾಕ್ಟ್ ಆಪರೇಶನ್ ಮಾಡಲಾಗುವುದು ಹಾಗೂ ಮರುದಿನ ೩೧ ರಂದು ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಶುಶ್ರೂಷೆ ಮಾಡಲಾಗುವುದು ಎಂದು ಡಾ. ಕಾಖಂಡಕಿ ಅವರು ತಿಳಿಸಿದರು. ೩೧ ರಂದು ಬೆಳಿಗ್ಗೆ ಪಾಂಡುರಂಗ ಸಮುದಾಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಎಲ್ಲ ಫಲಾನುಭವಿಗಳು ಭಾಗವಹಿಸುತ್ತಾರೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಜಯಾನಂದ ಕಾಶಪ್ಪನವರ ಹಾಗೂ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ, ರಾಜು ಎಂ. ಬೋರಾ, ಶಾಂತು ಸುರಪುರ, ಅವರು ಆಗಮಿಸಲಿದ್ದಾರೆ. ಶ್ರೀಮತಿ ಸುದೀಪ್ತಾ ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯ ಮೇಲೆ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಕುಲಕರ್ಣಿ, ಲಯನ್ಸ್ ಕ್ಲಬ್ ಅಧ್ಯಕ್ಷ ಮಹಾಬಳೇಶ ಮರಟದ, ಜೇಸಿ ಸಿಲ್ಕ್ ಸಿಟಿ ಅಧ್ಯಕ್ಷೆ ರಾಜೇಶ್ವರಿ ಹರಿಹರ ಉಪಸ್ಥಿತರಿರುತ್ತಾರೆ.ಶ್ರೀ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನವಾದ ಉತ್ತರಾದಿ ಮಠವು ಶ್ರೀ ಸತ್ಯಾತ್ಮ ತೀರ್ಥರ ವಿದ್ವತ್ತು ಹಾಗೂ ಶಿಷ್ಯರಿಗೆ ಅವರು ಧಾರೆ ಎರೆಯುವ ವಿದ್ವತ್ತುಗಳಿಂದ ಶ್ರೀಮಠವು ಕೀರ್ತಿ ಶಿಖರದ ಉತ್ತುಂಗಕ್ಕೇರಿದೆ. ಸದಾ ಲೋಕ ಕಲ್ಯಾಣದ ಚಿಂತನೆಯನ್ನು ಮಾಡುತ್ತಿರುವ ಉತ್ತರಾದಿ ಮಠಾಧೀಶರ ಅನುಗ್ರಹವು ನಮ್ಮ ಜೀವನವನ್ನು ಪುನೀತ ಗೊಳಿಸಿದೆ ಎಂದು ಡಾ. ಕಾಖಂಡಕಿ ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು.