ಮಾ.8 ವಿಶ್ವ ಮಹಿಳಾ ದಿನಾಚರಣೆ…..

ವಿಶ್ವ ಸಂಸ್ಥೆಯು 1975 ರಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿತು. 1977 ರಲ್ಲಿ ಯು ಎನ್ ಜನರಲ್ ಅಸೆಂಬ್ಲಿಯು ಮಹಿಳೆಯತ ಹಕ್ಕುಗಳ ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್.8 ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿ ವರ್ಷ ಮಾರ್ಚ್.8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತಿದೆ.. ಮಹಿಳೆಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಅವರ ಸಾಧನೆ, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ ಇದಾಗಿದೆ. ಪ್ರತಿ ವರ್ಷವು ವಿಶ್ವಸಂಸ್ಥೆಯು ಹೊಸ ಹೊಸ ಥೀಮ್ ನೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.”ಯತ್ರ ನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ l” ಎಲ್ಲಿ ನಾರಿಯರಿಗೆ ಗೌರವ ಇದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಅಂತ ಪ್ರತೀತಿ . “ಶೋಚಂತಿ ಜಾಮಯೋ ಯತ್ರ ವಿನಶ್ಯತ್ಯಾಸು ತತ್ಕುಲಂ l”ಸ್ತ್ರೀಯರು ದುಃಖಿಸಿದರೆ ಅದಕ್ಕೆ ಕಾರಣವಾದವರ ವಂಶವು ನಾಶವಾಗುತ್ತದೆ.ನಮ್ಮ ಭಾರತ ದೇಶದಲ್ಲಿ ಸ್ತ್ರೀಯರಿಗೆ ಸಮಾಜದಲ್ಲಿ ಒಂದು ಮಹತ್ತರವಾದ ಸ್ಥಾನಮಾನಗಳು ಹಿಂದಿನಿಂದಲೂ ಇದೆ . ಹಿಂದೆ, ಮಹಿಳೆಯರು ಮನೆಗಳಲ್ಲಿ ನಿರ್ಬಂಧವನ್ನು ಹೊಂದಿದ್ದರು ಮತ್ತು ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಕಾಲಿಡುವಂತಿಲ್ಲ.ಅವರ ಮನೆಯ ಜವಾಬ್ದಾರಿಗಳು ಅವರ ಏಕೈಕ ಕೆಲಸದ ಕ್ಷೇತ್ರವಾಗಿದೆ. ಆದರೆ ಕಾಲಾನಂತರದಲ್ಲಿ ಸಮಾಜವು ಅನೇಕ ಬದಲಾವಣೆಗಳನ್ನು ಕಂಡಿದೆ. ಇದಲ್ಲದೆ, ಈ ಪೀಳಿಗೆಯು ಹೆಚ್ಚಿನ ಜವಾಬ್ದಾರಿಯೊಂದಿಗೆ ಮಹಿಳೆಯರನ್ನು ನಂಬುತ್ತದೆ ಮತ್ತು ಗೌರವಿಸುತ್ತದೆ. ಈಗ, ಮಹಿಳೆಯರಿಗೆ ಕೆಲಸದಲ್ಲಿ ಸಮಾನ ಅವಕಾಶವನ್ನು ನೀಡಲಾಗಿದೆ ಮತ್ತು ಅನೇಕ ಕ್ಷೇತ್ರಗಳಲ್ಲಿ ಪುರುಷರ ನಡುವೆ ಮತ್ತು ಕೆಲವೊಮ್ಮೆ ಮುಂದೆ ನಿಲ್ಲಲು ಅವಕಾಶ ನೀಡಲಾಗುತ್ತದೆ. ಇಂದು ಮಹಿಳೆಯರು ತಮ್ಮ ಸಾಮರ್ಥ್ಯ ಮತ್ತು ಸಾಮರ್ಥ್ಯಗಳನ್ನು ಅರಿತು ಕೊಳ್ಳಲು ಪ್ರಾರಂಭಿಸಿದ್ದಾರೆ, ತಮ್ಮ ಮನೆ ಮತ್ತು ಇಡೀ ಸಮಾಜದ ಯಶಸ್ಸಿಗೆ ಕೊಡುಗೆ ನೀಡುವ ಮೂಲಕ ತಮ್ಮ ಮನೆಯಿಂದ ಹೊರಬರಲು ಸಿದ್ಧರಾಗಿದ್ದಾರೆ. ಮಹಿಳೆಯರು ನಿಜವಾಗಿಯೂ ಜಗತ್ತನ್ನು ತಮ್ಮ ಕಡೆಗೆ ತಿರುಗಿಸುವಂತೆ ಮಾಡುತ್ತಿದ್ದಾರೆ. ಮಹಿಳೆಯರು ಹೆಚ್ಚಿನ ಎತ್ತರವನ್ನು ತಲುಪುತ್ತಿದ್ದಾರೆ ಮತ್ತು ಬಾಹ್ಯಾಕಾಶಕ್ಕೆ ಪ್ರಯಾಣಿಸುತ್ತಿದ್ದಾರೆ ಎಂದು ನೀವು ನೋಡಬಹುದು. ಜೊತೆಗೆ ಪ್ರತಿಯೊಂದು ಕ್ಷೇತ್ರಕ್ಕೂ ಕಾಲಿಟ್ಟು ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಪಡಿಸುವಲ್ಲಿ ಯಶಸ್ವಿ ಯಾಗುತ್ತಿದ್ದಾರೆ. ಹೆಣ್ಣೆಂದು ಜರಿಯದಿರು ಜಗವೇ , ಕಾರಣ ಹೆಣ್ಣಿಲ್ಲದ ಮನೆಯುಂಟೇ ಈ ಜಗದಿ ,ಅಂತಹಾ ಹೆಣ್ಣುಗಳು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸಿದ್ದಾಳೆ . ಅಷ್ಟೇ ಅಲ್ಲ ಮನೆ , ಕಛೇರಿ ಎರಡನ್ನೂ ಸಮಾಗಿ ನಿಭಾಯಿಸುವಲ್ಲಿ ಯಶಸ್ವಿ ಯಾಗಿದ್ದಾಳೆ . ಮಕ್ಕಳನ್ನು ಓದಿಸಿ ವಿದ್ಯಾವಂತರಾಗಿ ಮಾಡಿ ಒಳ್ಳೆಯ ಪ್ರಜೆಯನ್ನಾಗಿ ಸಮಾಜಕ್ಕೆ ನೀಡುವಲ್ಲಿ ಹೆಣ್ಣಿನ ಪಾಲು ಇದೆ . ಒಬ್ಬ ಮಗಳಾಗಿ , ತಂಗಿಯಾಗಿ , ತಾಯಿಯಾಗಿ ಜೀವನದ ಹಲವು ಘಟ್ಟಗಳನ್ನು ದಾಟಿ ಸೈ ಎನಿಸಿ ಕೊಂಡಿದ್ದಾಳೆ . ಇಂತಹ ಹೆಣ್ಣು ಮಗಳನ್ನು ನಾವು ನಮ್ಮ ಸಮಾಜ ಗೌರವದಿಂದ ನಡೆಸಿ ಕೊಳ್ಳಬೇಕು . ದಿನಾ ಬೆಳಿಗ್ಗೆ ನಾವು ಕಾಣುವ , ಕೇಳುವ ಮಹಿಳೆಯ ಮನ್ನಣೆ ಸಿಗಲಿ ಮೇಲೆ ದೌರ್ಜನ್ಯ , ವರದಕ್ಷಿಣೆಯ ಕಿರುಕುಳ , ಹಾಗೂ ಲೈಂಗಿಕ ಕಿರುಕುಳ ಇವೆಲ್ಲವೂ ಇಂದಿಗೂ ನಡೆಯುತ್ತಲೇ ಇದೆ , ಹೆಣ್ಣನ್ನು ಕಾಣುವ ರೀತಿ ಬದಲಾಗಬೇಕು , ಸಂಸಾರ ತೂಗಿಸಲು ಮಹಿಳೆಯರು ಮನೆಯಿಂದ ಹೊರಗೆ ಹೋಗುತ್ತಾರೆ . ಇಂತಹಾ ಸಮಯದಲ್ಲಿ ಹೆಣ್ಣನ್ನು ಗೌರವದಿಂದ ನಡೆಸಿ ಕೊಳ್ಳಬೇಕು ಮತ್ತು ಅವಳಿಗೆ ರಕ್ಷಣೆ ನೀಡಬೇಕು , ಕಚೇರಿಗಳಲ್ಲಿ ಸೌಹಾರ್ದ ವಾತಾವರಣ ನಿರ್ಮಾಣವಾಗಬೇಕು . ಆಕೆಯನ್ನು ಎಲ್ಲರೂ ಗೌರವದಿಂದ ನಡೆಸಿ ಕೊಳ್ಳಬೇಕು , ಇದುವೇ ನಾವು ಅವಳಿಗೆ ನೀಡುವ ಸಹಕಾರ , ಸನ್ಮಾನ. ಅದು ಕೇವಲ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಮಾತ್ರ ಸೀಮಿತವಾಗದಿರಲಿ.
ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ