ಪ್ರಾಣಿ ಬಲಿ ತಡೆಗೆ ಸಹಕರಿಸಿದ ಭಕ್ತರಿಗೆ ಧನ್ಯವಾದ.
ಹೊಸಪೇಟೆ ಆ.13





ನಗರದಲ್ಲಿನ 32 ನೇ. ವಾರ್ಡಿನ ತಳವಾರ ಕೇರಿಯಲ್ಲಿ ನಡೆದ ರಾಂಪುರದ ಶ್ರೀ ದುರುಗಮ್ಮದೇವಿ ಜಾತ್ರೆಯಲ್ಲಿ ಕೋಣ ಸೇರಿದಂತೆ ಇತರ ಪ್ರಾಣಿಗಳ ಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದ್ದು, ಪ್ರಾಣಿಗಳ ಬಲಿ ನೀಡದೆ ಅಹಿಂಸಾತ್ಮಕವಾಗಿ ನಡೆದ ಜಾತ್ರೆ ಮಾದರಿ ಯಾಗಿದೆ, ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ, ಮಾಧ್ಯಮಗಳು ಮತ್ತು ಗ್ರಾಮಸ್ಥರಿಗೆ, ಭಕ್ತರಿಗೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು-ಪ್ರಾಣಿ ಬಲಿ ನಿರ್ಮೂಲನೆ ಜಾಗೃತಿ ಮಾಹಾ ಸಂಘ ಮತ್ತು ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ರಾದ ಶ್ರೀ ದಯಾನಂದ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ. 32 ನೇ. ವಾರ್ಡಿನ ತಳವಾರ ಕೇರಿಯಲ್ಲಿ ಇದೇ ಆಗಸ್ಟ್ ತಿಂಗಳ ದಿನಾಂಕ: 12.08.2024 ರಿಂದ 13.08.2024ರ ವರೆಗೆ ಎರೆಡು ದಿನಗಳ ಕಾಲ ನಡೆದ ರಾಂಪುರದ ಶ್ರೀ ದುರುಗಮ್ಮದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆ ಕುರಿತು ಹಮ್ಮಿಕೊಂಡಿದ್ದ ಅಭಿಯಾನವು ಸಂಪೂರ್ಣ ಯಶಸ್ವಿ ಯಾಗಿದ್ದು ಕೋಣ ಸೇರಿದಂತೆ ಯಾವುದೇ ಪ್ರಾಣಿಗಳ ಬಲಿ ನೀಡದೆ ಸಂಪೂರ್ಣ ಅಹಿಂಸಾತ್ಮಕವಾಗಿ ಜಾತ್ರೆ ನೆರವೇರಿದ್ದು ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲಾಗಿ ಸ್ಥಾಪಿಸಲ್ಪಟ್ಟಿತು.ಜಾತ್ರೆಯಲ್ಲಿ ಈ ಹಿಂದೆ ರಾಂಪುರದ ಏಳು ಕೇರಿಗಳ ಭಕ್ತಾದಿಗಳು ಹರಕೆಯ ರೂಪದಲ್ಲಿ ಕೋಣ, ಆಡು, ಕುರಿ ಮುಂತಾದ ಪ್ರಾಣಿಗಳನ್ನು ಜಾತ್ರಾ ಸಂದರ್ಭದಲ್ಲಿ ದೇವಾಲಯದ ಆವರಣ, ಸುತ್ತ ಮುತ್ತಲಿನ ಪರಿಸರದಲ್ಲಿ ಬಲಿ ನೀಡುತ್ತಿದ್ದ ಪರಂಪರೆ ನಡೆಸಿ ಕೊಂಡು ಬಂದಿದ್ದರು ಆದರೆ ಈ ವರ್ಷ ಪ್ರಥಮ ಬಾರಿಗೆ ಕರ್ನಾಟಕ ಹೈ ಕೋರ್ಟ್ ಆದೇಶ ಮತ್ತು ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ 1959 ಹಾಗೂ 1963 ರ ನಿಯಮಗಳು ಮತ್ತು 1975ರ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಹಾಗೂ 2020 ರ ಅನ್ವಯ ವಿಜಯನಗರ ಜಿಲ್ಲಾಡಳಿತ, ಮಾನ್ಯ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್ ರವರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಬಿ. ಎಲ್. ಹರಿಬಾಬು ರವರ ಮಾರ್ಗ ದರ್ಶನದಲ್ಲಿ ಮತ್ತು ಹೊಸಪೇಟೆ ನಗರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಲಕ್ಕಣ್ಣ ಕೂಡ್ಲಿಗಿ ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ ತಳವಾರ್ ಹಾಗೂ ಹೊಸಪೇಟೆ ಗ್ರಾಮೀಣ ಇನ್ಸ್ಪೆಕ್ಟರ್ ಶ್ರೀ ಗುರುರಾಜ ಇವರುಗಳ ಮತ್ತು ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸುಮಾರು 100 ಕ್ಕು ಹೆಚ್ಚು ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಮಾಡಿದ್ದಲ್ಲದೆ ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತರ ಮನ ವೊಲಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು-ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾ ಸಂಘ ಮತ್ತು ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿಯವರ ಮನವಿ ಮೇರೆಗೆ ವ್ಯಾಪಕ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಕೋಣ ಮತ್ತು ಇನ್ನಿತರ ಪ್ರಾಣಿ ಬಲಿ ತಡೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿ ಆಗಿದ್ದಾರೆ. ಈ ಪ್ರಾಣಿ ಬಲಿ ತಡೆ ಯಶಸ್ವಿಗೆ ಕಾರಣರಾದ ಎಲ್ಲರಿಗೂ ದಯಾನಂದ ಸ್ವಾಮೀಜಿಯವರು ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆ ಸಲ್ಲಿಸಿದ್ದಾರೆ.ಇದೇ ರೀತಿ ಜಿಲ್ಲೆಯ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ, ದೇವಾಲಯ, ಮಂದಿರ, ದರ್ಗಾ ಮುಂತಾದೆಡೆ ಯಾವುದೇ ರೀತಿಯ ಪ್ರಾಣಿಗಳ ಬಲಿ ನೀಡದೆ ಅಹಿಂಸಾತ್ಮಕ ರೀತಿ ಸಾತ್ವಿಕ ಪೂಜೆ ಸಲ್ಲಿಸ ಬೇಕೆಂದು ಸ್ವಾಮೀಜಿಯವರು ಕೋರಿದ್ದಾರೆ ಮತ್ತು ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ ಎಲ್ಲಿಯೂ ಯಾವುದೇ ರೀತಿಯ ಪ್ರಾಣಿಗಳ ಬಲಿ ನಡೆಯದಂತೆ ಹಾಗೂ ಗೋವಂಶ ಜಾನುವಾರುಗಳ ಹತ್ಯೆ ಆಗದಂತೆ ಕಾನೂನು ಮತ್ತು ಹೈ ಕೋರ್ಟ್ ಆದೇಶಗಳ ಚೌಕಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕೆಂದು ವಿನಂತಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ