ಬ್ರಹ್ಮಶ್ರೀ ನಾರಾಯಣ ಗುರು ಶಾಲೆಯ ಆವರಣದಲ್ಲಿ ಮಣ್ಣಿನ ಅಕ್ರಮ ಮಾರಾಟ – ತನಿಖೆ ಮತ್ತು ಕಾನೂನು ಕ್ರಮಕ್ಕೆ ಆಗ್ರಹ.
ವಡ್ಡರ್ಸೆ ಸ.09





ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಡ್ಡರ್ಸೆಯಲ್ಲಿರುವ ಪ್ರತಿಷ್ಠಿತ ಬ್ರಹ್ಮಶ್ರೀ ನಾರಾಯಣ ಗುರು ಶಾಲೆಯ ಆವರಣದಲ್ಲಿ ಕೆಂಪು ಮಣ್ಣಿನ ಅಕ್ರಮ ಮಾರಾಟ ನಡೆಯುತ್ತಿದೆ ಎಂಬ ಗಂಭೀರ ಆರೋಪದ ಬಗ್ಗೆ ಪತ್ರಿಕಾ ಹೇಳಿಕೆ ನೀಡಲು ನಾವು ಇಲ್ಲಿ ಸೇರಿದ್ದೇವೆ. ಈ ಘಟನೆ ಶಾಲೆಯ ಪಾವಿತ್ರ್ಯತೆ ಮತ್ತು ಗೌರವಕ್ಕೆ ಧಕ್ಕೆ ತಂದಿದ್ದು, ನಾವು ಈ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ.
ಶಾಲೆಯ ಪ್ರಾಂಶುಪಾಲರು, ಸ್ಥಳೀಯ ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ, ಶಾಲೆಯ ಆವರಣದಲ್ಲಿರುವ ಮಣ್ಣನ್ನು ಅಕ್ರಮವಾಗಿ ಮಾರಾಟ ಮಾಡಿ ಹಣಗಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಆದರ್ಶಗಳಿಗೆ ವಿರುದ್ಧವಾದ ಕೃತ್ಯ. ಸಾರ್ವಜನಿಕ ಆಸ್ತಿಯ ದುರುಪಯೋಗ ಮತ್ತು ಶಾಲೆಯ ಸಂಪನ್ಮೂಲಗಳ ಅನಧಿಕೃತ ಮಾರಾಟದಂತಹ ಘಟನೆಗಳು ಶೈಕ್ಷಣಿಕ ಸಂಸ್ಥೆಗಳ ನೈತಿಕತೆಯನ್ನು ಪ್ರಶ್ನಿಸುವಂತಿದೆ. ಈ ವಿಷಯದಲ್ಲಿ ಪ್ರಾಂಶುಪಾಲರು ನೇರ ಹೊಣೆಗಾರರಾಗಿದ್ದು, ಅವರ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.

ಈ ಅಕ್ರಮ ಚಟುವಟಿಕೆಯನ್ನು ತಡೆಯಲು ಮುಂದಾದ ಯುವ ಕಾಂಗ್ರೆಸ್ ಮುಖಂಡರೊಬ್ಬರಿಗೆ ಕುಂದಾಪುರದ ವಕೀಲರಾದ ಕೆ.ಸಿ. ಶೆಟ್ಟಿ ಕೋತ್ತಾಡಿ ಅವರು ಬೆದರಿಕೆ ಹಾಕಿರುವುದು ಖಂಡನೀಯ. “ನಾರಾಯಣ ಗುರು ಶಾಲೆಯ ಮಣ್ಣು ಯಾರಿಗೆ ಬೇಕಾದರೂ ಮಾರಬಹುದು, ಕೇಳುವ ಅಧಿಕಾರ ಯಾರಿಗೂ ಇಲ್ಲ” ಎಂಬ ಹೇಳಿಕೆಯು ಅಕ್ಷಮ್ಯ. ಈ ಹೇಳಿಕೆ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಅಗೌರವ ತೋರಿಸುತ್ತದೆ.
ಕಾನೂನನ್ನು ಕೈಗೆತ್ತಿ ಕೊಳ್ಳಲು ಯತ್ನಿಸಿದ ಹಾಗೂ ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧವೂ ಕೂಡಲೇ ಕಾನೂನು ಕ್ರಮ ಜರುಗಿಸಬೇಕು.ನಾರಾಯಣ ಗುರು ಶಾಲೆಯ ಗೌರವ ಮತ್ತು ಸಂಸ್ಥೆಯ ಶುದ್ಧತೆಯನ್ನು ಕಾಪಾಡಲು ಈ ಕೆಳಗಿನ ಕ್ರಮಗಳನ್ನು ತಕ್ಷಣವೇ ಕೈಗೊಳ್ಳ ಬೇಕು ಎಂದು ನಾವು ಒತ್ತಾಯಿಸುತ್ತೇವೆ.
ಶಾಲೆಯ ಆವರಣದಲ್ಲಿ ನಡೆಯುತ್ತಿರುವ ಮಣ್ಣಿನ ಅಕ್ರಮ ಮಾರಾಟವನ್ನು ತಕ್ಷಣವೇ ನಿಲ್ಲಿಸಬೇಕು.
ಈ ಕೃತ್ಯದಲ್ಲಿ ಭಾಗಿಯಾಗಿರುವ ಪ್ರಾಂಶುಪಾಲರು ಮತ್ತು ಇತರ ವ್ಯಕ್ತಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ, ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು.
ಯುವ ಮುಖಂಡರಿಗೆ ಬೆದರಿಕೆ ಹಾಕಿದ ವಕೀಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು.

ಇಂತಹ ಘಟನೆಗಳು ಮರುಕಳಿಸದಂತೆ ಶಾಲೆಯ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳ ಮೇಲೆ ಸ್ಥಾಪಿತವಾದ ಈ ಸಂಸ್ಥೆಯನ್ನು ಅಕ್ರಮ ಚಟುವಟಿಕೆಗಳಿಂದ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಕಾನೂನು ಮತ್ತು ಸುವ್ಯವಸ್ಥೆಯನ್ನು ಎತ್ತಿ ಹಿಡಿಯುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ವಡ್ದರ್ಸೆ ನಾರಾಯಣ ಗುರು ಅಭಿಮಾನಿಗಳು ಮತ್ತು ಯುವ ಸಂಘಟನೆಯ ಪರವಾಗಿ ನಾವು ಈ ಮೂಲಕ ಒತ್ತಾಯಿಸುತ್ತೇವೆ ಎಂದು ವಡ್ದರ್ಸೆ ನಾರಾಯಣ ಗುರು ಅಭಿಮಾನಿಗಳು ಮತ್ತು ಯುವ ಸಂಘಟನೆಯವರು ತಿಳಿಸಿದ್ದಾರೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನಿತ್ಯ ನಿರಂತರವಾಗಿ ಪ್ರಜ್ಞಾವಂತರ ನಾಡಲ್ಲಿ ಅಜ್ಞಾನಿತರ ವರ್ತನೆ ಎಷ್ಟು ಸಮಂಜಸ ಅಂತಾ ಪ್ರಶ್ನೆ ಹುಟ್ಟು ಹಾಕಿದೆ ಎಂದು ಅಭಿಪ್ರಾಯ ಪಟ್ಟಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ