‘ಬರಹದ ಒಳನೋಟ’ ಕೃತಿಯಲ್ಲಿ ಕಂಡ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ “ಮಾತೃ ಹೃದಯದ ಕವಿತ್ವ”….!

✍️ ಡಿ.ಶಬ್ರಿನಾ ಮಹಮದ್ ಅಲಿ ಕನ್ನಡದ ವರಕವಿ ಬೇಂದ್ರೆಯವರು ಕವಿತೆ ಎಂದರೇನು ಎಂಬುದಕೆ ‘ಮಗುವ ಮುಷ್ಠಿಯೊಳಗಿನ ತಾಯಿ ಸೆರಗಿನ ನೂಲು ಕವಿತೆ’ ಎಂದು ಹೇಳುತ್ತಾರೆ. ಕವಿತೆಯನು ತಾಯಿ ಮಗುವಿನ ಗಟ್ಟಿ ಬಾಂಧವ್ಯದ ಸಂಕೇತಕೆ ಹೋಲಿಸಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಬರೆಯುವ ಪ್ರತಿಯೊಬ್ಬ ಕವಿಯಲ್ಲೂ ನಾವು ತಾಯಿಹೃದಯವನ್ನ ಕಾಣಲಿಕ್ಕೆ ಸಾಧ್ಯವಿಲ್ಲ! ಅವರ ಎಷ್ಟೋ ಕೃತಿಗಳನ್ನು ಓದಿದರೂ ಅವರು ನಮಗೆ ದಕ್ಕದೇಹೋಗುತ್ತಾರೆ! ಆದರೆ ಕೆಲವರು ಒಂದೆರಡು ಕೃತಿಗಳಲ್ಲಿ ಓದುಗನಿಗೆ ಬಹುಬೇಗ ಅರ್ಥವಾಗಿಬಿಡುತ್ತಾರೆ. ಅಂತಹವರ ಸಾಲಿಗೆ ನಮ್ಮ ಚಳ್ಳಕೆರೆಯ ಸಹೃದಯ ಸಾಹಿತಿಗಳು, ಸಂಘಟಕರಾದ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ಸೇರುತ್ತಾರೆ ಅನ್ನುವುದೇ ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ.

ಯಾವುದೇ ಒಂದು ಕೃತಿ ಎಂದರೆ, ಕವನ, ಕಥೆ, ಪ್ರಬಂಧ, ಲೇಖನ ಹೀಗೆ ಎಂದೂ ಭಾವಿಸುತ್ತೆವಲ್ಲವೆ! ಆದರೆ ‘ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ಬರಹದ ಒಳನೋಟ’ ಎಲ್ಲದಕ್ಕಿಂತ ಭಿನ್ನವಾಗಿದೆ. ಇಡೀ ಕೃತಿಯಲ್ಲಿ ಹಿರಿಯ & ಕಿರಿಯ ಸಾಹಿತಿಗಳು, ಓದುಗರು ಸೇರಿದಂತೆ ಇಪ್ಪತ್ತಕ್ಕಿಂತ ಹೆಚ್ಚು ಮಂದಿ, ತಿಪ್ಪೇಸ್ವಾಮಿಯವರ ಬರಹದ ಒಳನೋಟವನ್ನ ತಮ್ಮ ಅನುಭವದ ಭಾವಗಳಿಂದ ನಲ್ಮೆಯಿಂದ ಅತ್ಯಂತ ಸಹಜವಾಗಿ ವ್ಯಕ್ತಪಡಿಸುವ ಮೂಲಕ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ‘ಮಾತೃಹೃದಯದ ಕವಿತ್ವ ಉಳ್ಳವರು’ ಎಂಬುದನ್ನ ಪ್ರತಿ ಸಾಲಿನಲ್ಲಿ ಅರುಹಿದ್ದಾರೆ.

ಪುಟ ತೆರದಂತೆ, ಬಡತನದ ಬೇಗೆಯಲಿ ಬೆಂದರೂ ಅದರ ನೆಪ ಹೇಳದೆ ತನಗೆ ಸಂಸ್ಕಾರ &ಶಿಕ್ಷಣ ಕೊಡಿಸಿದ ಹೆತ್ತವರಿಗೆ & ತನ್ನ ಪೊರೆದವರಿಗೆ ಕವಿ ಈ ಕೃತಿಯನ್ನು ಅರ್ಪಿಸಿರುವುದು ಅರ್ಥ ಪೂರ್ಣವೆನಿಸುತ್ತದೆ. ಅಷ್ಟೇಯಲ್ಲದೆ ಅವರ ಬಾಲ್ಯದ ಹಸಿವಿನ ದಿನಗಳು ನಮಗರಿವಿಲ್ಲದೆ ನಮ್ಮೆದೆರು ಹಾದುಹೋಗುತ್ತವೆ! ನನ್ನಿವಾಳ ಪಾಪಣ್ಣನವರ ಶುಭಹಾರೈಕೆಯಲ್ಲಿ “ಸ್ವಾತಂತ್ರ್ಯ ಭವ್ಯ ಭಾರತದಲ್ಲಿ ಬದುಕುತ್ತಿರುವ & ವೈಚಾರಿಕವಾಗಿ ಬದಲಾವಣೆ ಹೊಂದುತ್ತಿರುವ ಈ ದೇಶದಲ್ಲಿ ಭೂಮಿಯನ್ನೂ ಬಿಟ್ಟು ಬೇರೆ ಬೇರೆ ಗ್ರಹಗಳಲ್ಲಿ ವಾಸದ ನೆಲೆಗಳನ್ನೂ ಶೋಧಿಸುತಿದ್ದೇವೆ. ಇಂತಹ ಜಾಗತಿಕ ಸಂದರ್ಭದಲ್ಲಿ ಭೂಮಿ ಮೇಲೆ ಬದುಕುತ್ತಿರುವ ನೂರಾರು ಅಬಲ ಸಮುದಾಯಗಳು ಕನಿಷ್ಠ ಮೂಲಭೂತ ಸವಲತ್ತುಗಳಿಂದ ವಂಚಿತವಾಗಿ ಬದುಕುತ್ತಿರುವ ಹೀನಾಯ ಜೀವಗಳ ನೋವಿನ ಅನಾವರಣ ತಿಪ್ಪೇಸ್ವಾಮಿ ಅವರ ಕವಿತೆಗಳಲ್ಲಿ ಕಾಣಬಹುದು” ಎಂದು ಹೇಳುವ ಮೂಲಕ ವಾಸ್ತವ ಸತ್ಯವನ್ನ ತಿಳಿಸಿದ್ದಾರೆ. ಮುಂದೆ ಸಾಗಿದಂತೆ ಬರಹದ ಒಳನೋಟ ಹೀಗಿದೆ.

ಹಿರಿಯ ಸಾಹಿತಿಗಳಾದ ಡಾ, ಸಿ.ಶಿವಲಿಂಗಪ್ಪ ಅವರು ಕೊರ್ಲಕುಂಟೆ ತಿಪ್ಪೇಸ್ವಾಮಿಯವರ ಮೊದಲ ಹನಿಗವನ ಸಂಕಲನ ‘ಜೇನಹನಿ’ ಕುರಿತು “ಹನಿಗವನಗಳ ಉತ್ಕೃಷ್ಟ ಕಾಲದ ಪ್ರೇರಣೆಯಿಂದ ತಮ್ಮ ಅನುಭವದ ಆಲೋಚನೆಗಳಿಗೆ ಹನಿಗವನಗಳ ಸ್ವರೂಪದಲ್ಲಿ ಸಾಕಾರಗೊಳಿಸುವ ಅರ್ಥಪೂರ್ಣ ಪ್ರಯತ್ನವನ್ನು ತಿಪ್ಪೇಸ್ವಾಮಿಯವರು ಯಶಸ್ವಿಯಾಗಿ ಮಾಡಿದ್ದಾರೆ. ವೈವಿಧ್ಯಮಯವಾದ ವಸ್ತುಗಳನ್ನು ಕುರಿತು ಹನಿಗವನಗಳನ್ನು ರಚಿಸಿರುವ ತಿಪ್ಪೇಸ್ವಾಮಿ ಅವರು ಸದಾ ಬರಹದ ಧ್ಯಾನದಲ್ಲಿರುವ ನಿರಂತರ ಅಧ್ಯಯನ ಮತ್ತು ಕಾವ್ಯ ಸೃಷ್ಟಿಯಿಂದ ಭರವಸೆಯ ಕವಿಯಾಗಿ ಮೂಡಿ ಬರಲಿ” ಎಂದು ಹಾರೈಸಿದ್ದಾರೆ.

ಪ್ರೊಫೆಸರ್ ಚಂದ್ರಶೇಖರಯ್ಯ ಅವರು, ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ‘ಮನದಾಳದ ಬಯಕೆಗಳು’ ಕವನ ಸಂಕಲನ ಕುರಿತು ಹೀಗೆ ಹೇಳುತ್ತಾರೆ, “ಮೈಸೂರು ವಿಶ್ವವಿದ್ಯಾಲಯದ ಪದವಿಧರ ತರಗತಿಗೆ ಪಠ್ಯವಾಗಿದ್ದ ನನ್ನ ‘ಮಾಚಳ್ಳಿಯ ಮಹನೀಯರು’ ಕಾದಂಬರಿಯನ್ನು ವಿದ್ಯಾರ್ಥಿಯಾಗಿ ಓದಿ ಅವರು ಬರೆದ ಪತ್ರ ಇಂದಿಗೂ ನನ್ನ ಬಳಿ ಇದೆ. ಈ ಮಾತುಗಳೇನ್ನೇಕೆ ಹೇಳಿದೆನೆಂದರೆ, ಕವಿಯೋ ಬರಹಗಾರನು ಆಗಬೇಕೆಂಬ ತಿಪ್ಪೇಸ್ವಾಮಿ ಅವರ ಬಯಕೆ ನೆನ್ನೆ ಮೊನ್ನೆಯದಲ್ಲ; ಅವರು ವಿದ್ಯಾರ್ಥಿಯಾಗಿದ್ದಾಗಿನಿಂದ ಬಯಕೆಗೆಳನ್ನು ಹಚ್ಚಿಕೊಂಡವರು,ಅದಕ್ಕಾಗಿ ಓದಿಕೊಂಡವರು, ಮಾನಸಿಕ ಸಿದ್ಧತೆ ಮಾಡಿಕೊಂಡವರು ಮತ್ತು ಹೃದಯ ಸಂಪನ್ನತೆಯನ್ನು ಗಳಿಸಿಕೊಂಡವರು ಬೆಳೆಸಿಕೊಂಡವರು. ಒಬ್ಬ ಒಳ್ಳೆಯ ಸೃಜನಶೀಲ ಲೇಖಕನಿಗೆ ಇರಬೇಕಾದ ಈ ಗುಣಗಳನ್ನು ನಾನು ತಿಪ್ಪೇಸ್ವಾಮಿಯವರಲ್ಲಿ ಅಂದಿನಿಂದಲೂ ಕಾಣುತ್ತಾ ಬಂದಿದ್ದೇನೆ. ಈ ಗುಣಗಳು ಅವರ ಬದುಕಿನ ಮೂಸೆಯಲ್ಲಿ ಕರಗಿ ಸ್ಪುಟಗೊಂಡು ವಿಕಾಸವಾಗಿ ಅಭಿವ್ಯಕ್ತಿಗೊಳ್ಳುತ್ತಿರುವುದಕ್ಕೆ ಸಾಕ್ಷಿ ಅನ್ನುವಂತೆ ಈ ಕವನ ಸಂಕಲನ ಮನದಾಳದ ಬಯಕೆ ಪ್ರಕಟವಾಗುತ್ತಿದೆ” ಎಂದು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ರೊಫೆಸರ್ ಸಿ.ಕೆ ಮಹೇಶ್ ಅವರು ತಮ್ಮ ‘ದಲಿತ ಮೀಮಾಂಸೆಗಳ ಹುಡುಕಾಟದಲ್ಲಿ’ ಎಂಬ ಶೀರ್ಷಿಕೆಯಡಿಯಲ್ಲಿ “ಪ್ರತಿ ಜಿಲ್ಲೆಯಲ್ಲಿ ಹತ್ತಾರು ದಲಿತ ಯುವಕರು ದಲಿತರ ಅನುಭವಗಳನ್ನು ಕಾವ್ಯ, ಕತೆ, ನಾಟಕ, ಪ್ರಬಂಧ, ಚುಟುಕು ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ದಲಿತರ ಎದೆಯ ಕದವ ತೆರೆಯುತ್ತಿರುವವರು. ಇದೊಂದು ನಿಜಕ್ಕೂ ಶ್ಲಾಘನೀಯವಾದದ್ದು. ಈ ದೃಷ್ಟಿಯಲ್ಲಿ ತಿಪ್ಪೇಸ್ವಾಮಿಯ ಬರಹ ಮೆಚ್ಚಲರ್ಹ ಮತ್ತು ಪ್ರಸಂಶನೀಯ. ತಿಪ್ಪೇಸ್ವಾಮಿಯ ಯಾವ ಕವನಗಳು ರಚ್ಚು,ದ್ವೇಷ ಆಕ್ರೋಶಗಳನ್ನು ಬಿಚ್ಚುವುದಿಲ್ಲ,ಎಲ್ಲವೂ ಮೌನದ ಮಾತುಗಳಾಗಿವೆ. ಒಳಗಿನ ನೋವು ತಣ್ಣಗೆ ಝರಿಯ ರೂಪದಲ್ಲಿ ಅಂತರ್ಗತವಾಗಿ ಚಲಿಸಿದೆ. ಅಷ್ಟೇ ಅಲ್ಲ ಪ್ರತಿಮೆಗಳು ಹೊಸ ನಿರ್ವಹಣೆಗೆ ಒಳಗಾಗಿವೆ. ಈ ಮೂಲಕ ಹತ್ತಾರು ಹೊಳಹುಗಳು ಇಲ್ಲಿ ನಾವು ಕಾಣಬಹುದು. ದಲಿತರ ನೋವು ನಮಗೆಲ್ಲ ತಿಳಿದಂತೆ ಒಂದು ಮುಳ್ಳಿನ ಹಾಸಿಗೆ ಇಲ್ಲವೇ ಮೈಯೊಳಗಿನ ರಕ್ತ ಚಿಮ್ಮಿಸುವ ಚೂಪಿನ ಮುಳ್ಳು ಎಂದು. ಆದರೆ ತಿಪ್ಪೇಸ್ವಾಮಿಯವರು ವ್ಯಕ್ತಪಡಿಸುವ ನೋವಿಗೆ ಕ್ಲೀಷೆಯ ಸಂಕೇತ ಬಳಸಿಲ್ಲ. ತಮ್ಮ ‘ನೋವಿನ ಗಂಧ ಬಳಿದುಕೊಂಡವರು’ ಕವನದಲ್ಲಿ ದಲಿತರು ತಮ್ಮ ಅಗಾಧ ನೋವು ಮರೆಯಾಚಿಸಿಕೊಳ್ಳಲು ಶೋಷಕರಿಗೆ ಆ ನೋವು ತಿಳಿಯದಂತಿರಲು ಮುಖವಾಡ ಧರಿಸಿಕೊಂಡು, ತಮಟೆಯ ಹೊಸ ನಾದಕ್ಕೆ ಹೊಸ ಕುಣಿತ ಪ್ರದರ್ಶಿಸುತ್ತಾ ಶತಶತಮಾನಗಳ ನೋವಿಗೆ ಗಂಧವನ್ನ ಲೇಪಿಸಿಕೊಂಡು ಬದುಕುತ್ತಿರುವವರು ಅನ್ನುವ ಭಾವನೆಯನ್ನು ಹೊರ ಚಿಮ್ಮಿಸಿರುವುದು ನಿಜಕ್ಕೂ ತಿಪ್ಪೇಸ್ವಾಮಿ ಇರುವಾಗ ಕಾವ್ಯ ಶಕ್ತಿಯ ಪ್ರದರ್ಶನವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆಯ ಪ್ರೊಫೆಸರ್ ದಿ|| ಡಿ ಅಂಜಿನಪ್ಪ ಅವರು ತಿಪ್ಪೇಸ್ವಾಮಿಯವರ ಕವಿತೆಗಳನ್ನು ಕುರಿತು “ತಿಪ್ಪೇಸ್ವಾಮಿಯವರು ಕನ್ನಡತನವನ್ನು, ಕನ್ನಡದ ಸಾಂಸ್ಕೃತಿಕ, ಸ್ಮೃತಿ ಚಲನಗಳನ್ನು ಗೌರವಿಸುವ ಕವಿ. ಅವರು ಕವಿ ಅಷ್ಟೇ, ಅಲ್ಲ ಕನ್ನಡವನ್ನು ಕಟ್ಟುವ ಮುಂಗಾಣ್ಕೆಗೆ ಇರುವ ಹೋರಾಟಗಾರ. ಚಿತ್ರದುರ್ಗ ಪರಿಸರದಲ್ಲಿ ಕನ್ನಡದ ಸಾಂಸ್ಕೃತಿಕ ಪರಿಚಾರಿಕೆಯನ್ನು ಮಾಡುತ್ತಿರುವ ಸಹೃದಯ ಕವಿ. ‘ಎದೆಯ ಕದವ ತೆರೆದು’ ಕವನ ಸಂಕಲನದ ಕವಿತೆಗಳ ಅಭಿವ್ಯಕ್ತಿಗಳ ಹಿಂದೆ ಕನ್ನಡ ಪ್ರಜ್ಞೆ, ದಲಿತ ಬಂಡಾಯ ಚಳುವಳಿ ಮತ್ತು ಚಿಂತನೆಯ ಪ್ರಭಾವ ಪ್ರೇರಣೆಗಳಿವೆ. ಚಳುವಳಿಗಳ ನಡೆ-ನುಡಿಗಳ ಮೂಲಕವೇ ಬೆಳದು ಬಂದಿರುವ ತಿಪ್ಪೇಸ್ವಾಮಿ ಅವರ ದೃಷ್ಟಿ ಧೋರಣೆಗಳೇ ಇಲ್ಲಿನ ಕವಿತೆಗಳನ್ನ ರೂಪಿಸಿವೆ. ಅಂಬೇಡ್ಕರ್ ಅವರ ಆಲೋಚನೆಗಳು ಇಲ್ಲಿನ ಕವಿತೆಗಳ ಚಿಂತನಪರ ಆಶಯಗಳಲ್ಲಿದೆ. ಬಂಡಾಯದ ಮನೋಧರ್ಮ ತಿಪ್ಪೇಸ್ವಾಮಿ ಅವರ ಕಾವ್ಯದ ಲಕ್ಷಣ ಮಾತ್ರವಾಗಿರದೆ ಅವರ ಕವಿತೆಗಳ ಸೊಗಸು ಆಗಿದೆ. ಅದೇ ಅವರ ಸಾಂಸ್ಕೃತಿಕ ಮೌಲ್ಯವು ಆಗಿದೆ ವಿಚಾರಗಳನ್ನು ಘೋಷನಾತ್ಮಕವಾಗಿ ಹೇಳದೆ ಅದನ್ನು ಕಾವ್ಯ ಜಲವಾಗಿ ನಿರೂಪಿಸುವ ಕೌಶಲ ಇಲ್ಲಿನ ಕವಿತೆಗಳಲ್ಲಿರುವುದನ್ನು ಕಾಣಬಹುದು. ಹಾಗಾಗಿ ಇಲ್ಲಿ ಕವಿ ಉಳಿಯದಿದ್ದರೂ ಕವಿತೆ ಉಳಿಯುತ್ತವೆ. ಬದುಕಿನ ಜೀವಸಾನಿಧ್ಯದಿಂದ ಬರೆಯುವ ಕೊರ್ಲಕುಂಟೆ ತಿಪ್ಪೇಸ್ವಾಮಿಯವರ ಕವಿತೆಗಳಲ್ಲಿ ಬದುಕಿನ ಭಾವತಂತುಗಳಿವೆ. ಮಾನವಂತ ಬದುಕಿನ ಹುಡುಕಾಟದ ತುಡಿತವಿದೆ. ಕನ್ನಡ ಮಾತಿನ ಜಾಯಮಾನದ ಲಯವಿದೆ. ಇಲ್ಲಿನ ಕೆಲವು ಕವಿತೆಗಳ ಕೆಲವು ವಿಶಿಷ್ಟ ಶಬ್ದಗಳ ಕೇವಲ ಅರ್ಥ ಸೂಚಕಗಳಾಗಿರದೇ ಅರ್ಥಗಳನ್ನು ಬೆಳೆಸುವಲ್ಲಿ ಶಕ್ತವಾಗಿದೆ ಈ ಎಲ್ಲಾ ದೃಷ್ಟಿಯಿಂದ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ನಮ್ಮ ಪರಿಸರದ ಜೀವ ಸಂವೇದನೆಯ ಸಹಜ ಪ್ರತಿಭೆಯ ಕವಿಯಾಗಿದ್ದಾರೆ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇವರಷ್ಟೇಯಲ್ಲದೇ ಕಥೆಗಾರರಾದ ತಿಪ್ಪಣ್ಣ ಮರಿಕುಂಟೆ ಸರ್, ಮೋದೂರು ತೇಜ ಸರ್, ಡಾ, ಬಿ.ಎಂ ಗುರುನಾಥ್ ಸರ್, ಕರಿಯಪ್ಪ ಮಾಳಿಗೆ ಸರ್, ಜಡೇಕುಂಟೆ ಮಂಜುನಾಥ್ ಸರ್, ಮಲ್ಲಿಕಾರ್ಜುನ ಕಲಮರಹಳ್ಳಿ ಸರ್, ದೀಪಿಕಾ ಬಾಬು, ಮುಂತಾದ ಹಿರಿಯ,ಕಿರಿಯ ಸಾಹಿತಿಗಳು ಕೊರ್ಲಕುಂಟೆಯವರ ಬರಹಗಳ ಒಳ ನೋಟವನ್ನ ಅತ್ಯಂತ ಪ್ರೀತಿಯಿಂದ ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ಮಾತೃ ಹೃದಯದ ಸಹೃದತೆಯನ್ನ ಓದುಗರಿಗೆ ಪರಿಚಯಿಸಿದ್ದಾರೆ. ಎಲ್ಲರ ಈ ಕಾರ್ಯ ಅಭಿನಂದರ್ಹವಾಗಿದೆ.

ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ಸಾಹಿತಿಯಾಗಷ್ಟಯಲ್ಲದೆ ಪತ್ರಕರ್ತರಾಗಿ ತಮ್ಮ ‘ಗ್ರಾಮದ ಕೂಗು’ ವಾರ ಪತ್ರಿಕೆಯ ಸಂಪಾದಕರಾಗಿ ಇಂದಿಗೂ ಪ್ರಸ್ತುತವಾದ ಜನರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸುದ್ದಿಗಳನ್ನು ವರದಿ ಮಾಡಿರುವುದು ಇವರ ಜಾಗೃತ ಮನಸ್ಸಿನ ಪ್ರತಿಬಿಂಬವಾಗಿ ನಿಂತಿವೆ ಎಂದೇ ಹೇಳಬಹುದು. ಕೆಲವನ್ನು ಉಲ್ಲೇಖಿಸುವುದಾದರೆ,,ಸಮಸ್ಯೆಗಳ ಸುಳಿಯಲ್ಲಿ ಹಳ್ಳಿಗರ ಬದುಕು,ಅಮೂಲ್ಯ ಜೀವಗಳು ಹೋದವೆ ಹೊರತು ಭ್ರಷ್ಟಾಚಾರ ಕೊಚ್ಚಿ ಹೋಗಲಿಲ್ಲ, ಪ್ರತಿ ಗ್ರಾಮಸ್ಥರೂ….ಸ್ಮಶಾನ ಕೇಳವಂತಾಗಿದೆ, ಚುನಾವಣೆ ಎಂಬ ವ್ಯವಸ್ಥೆ ಮೋಸದಾಟವಾಯಿತೆ..?ಗ್ರಾಮಗಳು ಕೂಡ ರಾಜಕೀಯ ರಣರಂಗವಾಗುವ ಕಾಲ,ಗ್ರಾಮಗಳನ್ನು ಆವರಿಸಿಕೊಂಡ ನೀಚ ರಾಜಕೀಯವೆಂಬ ಭೂತ,ಸ್ವಾತಂತ್ರ್ಯವಾಗಿರುವ ಭಾರತದಲ್ಲಿ ನಾವು ಬದುಕುತ್ತಿರುವ ಪರಿ, ನಿರುದ್ಯೋಗ ಸಮಸ್ಯೆ ಕೇಳದ ಸರ್ಕಾರ. ಈ ಎಲ್ಲಾ ಸುದ್ದಿಗಳು ಇಂದಿಗೂ ಪರಿಹಾರ ಕಾಣದಂತ ಜ್ವಲಂತ ಸಮಸ್ಯೆಗಳಾಗಿಯೇ ಉಳಿದಿವಿ. ಅಂತಹ ಸಾರ್ವಕಾಲಿಕ ಸುದ್ದಿಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ತಮ್ಮ ಜನಪರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಸಾಹಿತ್ಯ & ಪತ್ರಿಕೋದ್ಯಮದಲ್ಲಿ ತನ್ನದೇ ಯಾದ ಛಾಪು ಮೂಡಿಸಿದ ಕವಿ ತಿಪ್ಪೇಸ್ವಾಮಿ ಸರ್ ಕುರಿತು ಕರಿಯಪ್ಪ ಮಾಳಗಿ ಸರ್ ಅವರು “ಕೊರ್ಲಕುಂಟೆ ತಿಪ್ಪೇಸ್ವಾಮಿ ಕೊರಳ ಕನ್ನಡವೂ ಬೇಕು, ಕರುಳಿನ ಕನ್ನಡವೂ ಬೇಕೆಂದು ಕಂಕಣ ತೊಟ್ಟವರು. ಕನ್ನಡವೆಂದರೆ ಬರೀ ಭಾಷೆಯಲ್ಲ ಅದೊಂದು ಬದುಕು ಎಂದು ನಂಬಿದವರು” ಎಂದು ಹೇಳಿದ್ದಾರೆ. ಅವರ ಮಾತಿನಂತೆ ಕನ್ನಡವೇ ತಮ್ಮ ಬದುಕೆಂದು ಬದುಕುತ್ತಿರುವ ಕವಿ ತಿಪ್ಪೇಸ್ವಾಮಿ ಅವರಿಗೆ ‘ಕನ್ನಡಾಂಬೆಯ ಆಶೀರ್ವಾದ ಸದಾ ಇರಲಿ; ಸಕಲವೂ ಒಳಿತಾಗಲಿ’ ಎಂದು ಮನಸಾರೆ ಆಶಿಸಿ ನನ್ನ ಲೇಖನಿಗೆ ವಿರಾಮವನ್ನಿಡುತಿದ್ದೇನೆ.

ಡಿ.ಶಬ್ರಿನಾ ಮಹಮದ್ ಅಲಿ

ಲೇಖಕಿ-ಚಳ್ಳಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button