ರಕ್ತ ಹೀನತೆ ತಡೆ ಗಟ್ಟಲು ಎಲ್ಲರ ಸಹಕಾರ ಮುಖ್ಯ- ಭಜಂತ್ರಿ.
ಇಂಡಿ ಜ.29

ರಕ್ತ ಹೀನತೆಯು ಗರ್ಭಿಣಿಯರು, ಚಿಕ್ಕ ಮಕ್ಕಳು, ಹದಿ ಹರೆಯದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ತಡವಲಗ ಸಮುದಾಯ ಆರೋಗ್ಯ ಕೇಂದ್ರದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ರಾಮಗೊಂಡ ಭಜಂತ್ರಿ ಹೇಳಿದರು. ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್,ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ‘ಅನಿಮೀಯ ಮುಕ್ತ ಅಭಿಯಾನ’ ವನ್ನು ಉದ್ಧೇಶಿಸಿ ಮಾತನಾಡಿದರು. 10 ರಿಂದ 19 ವಯಸ್ಸಿ ನವರಲ್ಲಿ ಕಂಡು ಬರುವ ರಕ್ತ ಹೀನತೆ ಪ್ರಮಾಣ ನಿಯಂತ್ರಿಸುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪ್ರತಿ ಶತ 55% ಕ್ಕಿಂತ ಹೆಚ್ಚು ಗಂಡು ಮತ್ತು ಹೆಣ್ಣು ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ.

ಪ್ರತಿವಾರಕ್ಕೆ ಒಂದು ಕಬ್ಬಿಣಾಂಶದ ಮಾತ್ರೆಯನ್ನು ನೀಡಿ, ಮಕ್ಕಳಲ್ಲಿ ರಕ್ತ ಹೀನತೆಯನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು. ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ರಕ್ತ ಹೀನತೆಯು ಸಾರ್ವತ್ರಿಕ ಆರೋಗ್ಯ ಸಮಸ್ಯೆಯಾಗಿದ್ದು, ನಿತ್ಯ ಹಸಿರು ತರಕಾರಿ, ಬೇಳೆ ಕಾಳುಗಳಿಂದ ತಯಾರಿಸಿದ ಊಟ ಸೇವಿಸುವುದರ ಜೊತೆಗೆ ಹಣ್ಣು, ಮೊಸರು ಸೇವಿಸಿ ರಕ್ತ ಹೀನತೆಯಿಂದ ದೂರವಿರುವಂತೆ ತಿಳಿಸಿದರು. ಶಿಕ್ಷಕ ಎಸ್.ಆರ್ ಚಾಳೇಕರ ಮಾತನಾಡಿ, ಮಕ್ಕಳಲ್ಲಿ ಕಂಡು ಬರುವ ರಕ್ತ ಹೀನತೆಯನ್ನು ನಿಯಂತ್ರಿಸಲು ಕಬ್ಬಿಣಾಂಶಯುಕ್ತ ಸಮತೋಲನ ಆಹಾರ ಸೇವಿಸುವ ಮೂಲಕ ರಕ್ತ ಹೀನತೆಯಿಂದ ಮುಕ್ತರಾಗುವಂತೆ ಕರೆ ನೀಡಿದರು. ಮುಖ್ಯ ಶಿಕ್ಷಕ ಅನಿಲ ಪತಂಗಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ.ವಿಜಯಪುರ