ಮಸ್ಕಿಯ ಬೆಟ್ಟದ ಮೇಲೆ ಶ್ರಾವಣ ಮಾಸದ ಕೊನೆಯ ಸೋಮವಾರ ಮಲ್ಲಿಕಾರ್ಜುನನ ದರ್ಶನಕ್ಕೆ ಸಾಲುಗಟ್ಟಿದ ಭಕ್ತರು.
ಮಸ್ಕಿ ಸ.03

ಪಟ್ಟಣದ ಬೆಟ್ಟದ ಮೇಲೆ ಇರುವ ಮಲ್ಲಿಕಾರ್ಜುನನ ದರ್ಶನಕ್ಕೆ ಶ್ರಾವಣ ಮಾಸದ ಕೊನೆಯ ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸಿದರು. ಬೆಳಿಗ್ಗೆ 3 ಗಂಟೆಯಿಂದಲೇ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿದ ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಮಲ್ಲಿಕಾರ್ಜುನನ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ಸಿದ್ದಯ್ಯ ಹೆಸರೂರು ಹಿರೇಮಠ ರವರ ನೇತೃತ್ವದಲ್ಲಿ ಮಲ್ಲಿಕಾರ್ಜುನ ದೇವರ ಅಭಿಷೇಕ ಸೇರಿದಂತೆ ಮಲ್ಲಯ್ಯನ ವಿಗ್ರಹಕ್ಕೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದ ರಿಂದ ಪೊಲೀಸರು ಸ್ಥಳದಲ್ಲಿದ್ದು ಸಾಲಿನಲ್ಲಿ ತೆರಳುವಂತೆ ಭಕ್ತರಿಗೆ ಸೂಚಿಸುತ್ತಿದ್ದ ದೃಶ್ಯ ಕಂಡು ಬಂತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಯಿತು.

ಸಂಜೆ 6 ಗಂಟೆಗೆ ಬೆಟ್ಟದ ಮೇಲಿಂದ ಮಲ್ಲಿಕಾರ್ಜುನನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೂಲಕ ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಪಟ್ಟಣಕ್ಕೆ ಕರೆದು ಕೊಂಡು ಬರಲಾಯಿತು. ರಾತ್ರಿ 7 ಗಂಟೆಗೆ ಪಟ್ಟಣದಲ್ಲಿರುವ ಮಲ್ಲಿಕಾರ್ಜುನನ ಉಚ್ಚಾಯ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ವರೆಗೆ ಎಳೆಯುವ ಮೂಲಕ ಒಂದು ತಿಂಗಳ ಶ್ರಾವಣ ಮಾಸಕ್ಕೆ ವೈಭವದ ತೆರೆ ಎಳೆಯಲಾಯಿತು. ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಸೇರಿದಂತೆ ಶಾಸಕ ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪುರಸಭೆ ನೂತನ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಹಾಗೂ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಸರ್ಕಲ್ ಇನ್‌ಸ್ಪೆಕ್ಟರ್ ಬಾಲಚಂದ್ರ ಡಿ.ಲಕ್ಕಂ, ಪಿಎಸ್‌ಐ ತಾರಬಾಯಿ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಹತ್ತಿ ಮಲ್ಲಿಕಾರ್ಜುನನ ದೇವರ ದರ್ಶನ ಪಡೆದು ಕೊಂಡರು. ಈ ವೇಳೆ, ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತು ಮಾಡಲಾಗಿತ್ತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ