“ಗಣೇಶನನ್ನು ಬೀದಿಗೆ ತಂದ ತಿಲಕರು”…..

ಈ ದೇಶದ ಬಹುಸಂಖ್ಯಾತರ ಆರಾಧಕ ದೇವರಲ್ಲಿ ಗಣಪತಿ ದೇವನಿಗೆ ಅತಿ ಪ್ರಾಮುಖ್ಯತೆ ಇದೆ. ಆತನನ್ನು ವಿಘ್ನ ವಿನಾಶಕ ಎಂದು ಕರೆಯುವರು. ಇಲ್ಲಿನ ಜನ ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ಆ ಕೆಲಸಕ್ಕೆ ಬರುವ ವಿಘ್ನಗಳೆಲ್ಲವೂ ನಾಶವಾಗಲಿ ಎಂದು ಗಣೇಶನಿಗೆ ಮೊದಲು ಪ್ರಾರ್ಥನೆ ಪೂಜೆಯ ಸಲ್ಲಿಸಿ ತಮ್ಮ ಕಾರ್ಯಗಳನ್ನು ಆರಂಭಿಸುವ ವಾಡಿಕೆ ಇದೆ.ಪಾರ್ವತಿ ಪರಮೇಶ್ವರರ ಮಗನಾದ ಗಣೇಶನ ಬಗ್ಗೆ ನಮ್ಮ ಅನೇಕ ಪುರಾಣ ಗ್ರಂಥಗಳಲ್ಲಿ ಬಹುವಿಧವಾದ ಉಲ್ಲೇಖಗಳನ್ನು ಯಥೇಚ್ಛವಾಗಿ ನೋಡಬಹುದು. ಋಗ್ವೇದದಲ್ಲೂ ಆತನ ಕುರಿತಾದ ಶ್ಲೋಕಗಳಿವೆ,ಇನ್ನು ವ್ಯಾಸ ಮಹರ್ಷಿಗಳು ಮಹಾಭಾರತ ಕಾವ್ಯವನ್ನು ಹೇಳುತ್ತಾ ಹೋದಂತೆ ಅದನ್ನು ಲಿಖಿತ ರೂಪದಲ್ಲಿ ದಾಖಲಿಸಿದ್ದು ಗಣಪತಿ ಎಂದು ಕೆಲವು ಕಡೆ ಕಂಡು ಬರುತ್ತದೆ. ಹಾಗೆ ರಾಮಾಯಣ ಮಹಾಕಾವ್ಯದಲ್ಲಿಯೂ ಗಣೇಶನ ಪಾತ್ರ ಪ್ರವೇಶಗೊಳ್ಳುತ್ತದೆ ರಾವಣನು ಘೋರ ತಪಸ್ಸು ಮಾಡಿ ಶಿವನಿಂದ ಆತ್ಮಲಿಂಗವನ್ನು ಪಡೆದುಕೊಂಡಿದ್ದನು ಅದನ್ನು ತನ್ನ ಸಾಮ್ರಾಜ್ಯ ಲಂಕೆಗೆ ಕೊಂಡೊಯ್ಯಬೇಕೆಂದುಕೊಂಡನು ಕೆಲವೇ ಹೊತ್ತಿನಲ್ಲಿ ಲಂಕೆಯನ್ನು ತಲುಪುವವನಿದ್ದನು ಆದರೆ ಆಗ ಸೂರ್ಯಾಸ್ತವಾಗತೊಡಗಿತು ಮಹಾಪೂಜಾವಂತನಾದ ರಾವಣನು ತಾನು ಸಮುದ್ರದಲ್ಲಿ ಸ್ನಾನ ಮಾಡಿ ಶಿವನನ್ನು ಪೂಜಿಸಬೇಕೆಂದುಕೊಂಡನು ಆದರೆ ಕೈಯಲ್ಲಿದ್ದ ಆತ್ಮಲಿಂಗವನ್ನು ಕೆಳಗಡೆ ಇಟ್ಟರೆ ಅಲ್ಲೇ ಸ್ಥಾಪನೆಗೊಳ್ಳುತ್ತದೆ ಎಂದು ಶಿವನು ಹೇಳಿ ಕಳಿಸಿದ್ದರಿಂದ ಈ ಲಿಂಗವನ್ನು ಯಾರ ಕೈಯಲ್ಲಿ ಕೊಡಬೇಕೆಂದು ಯೋಚಿಸುತ್ತಿರುವಾಗ ರಾವಣನು ನಿಂತ ಜಾಗದ ಕಡೆಗೆ ಒಬ್ಬ ಬಾಲ ಬ್ರಾಹ್ಮಣನು ಬರುವುದನ್ನು ಕಂಡು ರಾವಣನು ಆತನನ್ನು ಕರೆದು ಈ ಲಿಂಗವನ್ನು ಕೆಲವು ಹೊತ್ತು ಇಲ್ಲೇ ಹಿಡಿದುಕೊಂಡು ನಿಲ್ಲು ಎಂದು ವಿನಂತಿಸಿಕೊಂಡನು ಆ ಬಾಲಕನು ಮೂರು ಬಾರಿ ನಾನು ನಿನ್ನನ್ನು ಕರೆಯುತ್ತೇನೆ ಅಷ್ಟರಲ್ಲಿ ನೀನು ಬರದೆ ಹೋದರೆ ನಾನು ಇದನ್ನು ಕೆಳಗೆ ಇಟ್ಟುಬಿಡುತ್ತೇನೆ ಎಂದು ಒಂದು ಕರಾರನ್ನು ಹಾಕಿ ಹಿಡಿದುಕೊಳ್ಳಲು ಒಪ್ಪಿದನು ರಾವಣನು ಆಗಲಿ ಎಂದು ಸ್ನಾನಕ್ಕೆ ಹೋದನು ಬೇಗಬೇಗನೆ ಮೂರು ಬಾರಿ ಕೂಗಿ ಆ ಬಾಲಕನು ಅದನ್ನು ಭೂಮಿಗೆ ಸ್ಪರ್ಶಿಸಿ ಬಿಟ್ಟನು ಆ ಶಿವನ ಆತ್ಮಲಿಂಗವು ಅಲ್ಲೇ ಸ್ಥಾಪನೆಗೊಂಡಿತು ರಾವಣ ತನ್ನ ಎಲ್ಲಾ ಶಕ್ತಿಯನ್ನು ಉಪಯೋಗಿಸಿ ಅದನ್ನು ಎತ್ತಲು ಹೋದರೆ ಅದು ಸಾಧ್ಯವಾಗಲಿಲ್ಲ ಅಲ್ಲಿ ಬಾಲಕನಾಗಿ ಬಂದವನೇ ವಿನಾಯಕ ತನ್ನ ಉಪಾಯದಿಂದ ಶಿವನ ಆತ್ಮಲಿಂಗವನ್ನು ಭರತ ಭೂಮಿಯಲ್ಲಿಯೇ ಸ್ಥಾಪಿಸಿದನು ಅದೇ ಸ್ಥಳವೇ ಇಂದಿನ ಗೋಕರ್ಣವಾಗಿದೆ. ವಿನಾಯಕನು ಮಹಾಲೀಲಾವತಾರಿ ಒಂದು ಬಾರಿ ತಂದೆ ತಾಯಿಗಳಾದ ಪಾರ್ವತಿ ಪರಮೇಶ್ವರರು ತಮ್ಮ ಮಕ್ಕಳಾದ ಷಣ್ಮುಖನಿಗೂ ಗಣಪತಿಗೂ ಒಂದು ಸ್ಪರ್ಧೆಯನ್ನು ಏರ್ಪಡಿಸುತ್ತಾರೆ ಯಾರು ಇಡೀ ಜಗತ್ತನ್ನು ಮೊದಲು ಸುತ್ತಿ ಬರುತ್ತಾರೋ ಅವರಿಗೆ ಬಹುಮಾನ ಕೊಡುತ್ತೇವೆ ಎಂದಾಗ ಷಣ್ಮುಖನು ತನ್ನ ವಾಹನವಾದ ನವಿಲಿನ ಮೇಲೆ ಕುಳಿತು ಪ್ರಪಂಚವನ್ನು ಸುತ್ತಲೂ ಹೋದ ಆದರೆ ಬುದ್ಧಿವಂತ ಗಣೇಶನು ತನ್ನ ವಾಹನವಾದ ಇಲಿಯ ಮೇಲೆ ಕುಳಿತು ತಂದೆ-ತಾಯಿಗಳನ್ನೇ ಮೂರು ಸುತ್ತು ಸುತ್ತಿದನು ಆಗ ಪಾರ್ವತಿ ಪರಮೇಶ್ವರರು ವಿನಾಯಕನಿಗೆ ಇದೇನು ಎಂದು ಕೇಳಿದಾಗ ನನ್ನ ಪಾಲಿನ ಎಲ್ಲ ಪ್ರಪಂಚವು ನೀವೇ ಅಲ್ಲವೇ? ನಿಮ್ಮೊಳಗೆ ನಾನು ಇಡೀ ವಿಶ್ವವನ್ನೇ ಕಾಣುತ್ತಿದ್ದೇನೆ ಎಂದು ತಂದೆ ತಾಯಿಗಳ ಮಹತ್ವವನ್ನು ಜಗತ್ತಿಗೆ ಅರ್ಥ ಮಾಡಿಸಿ ಸ್ಪರ್ಧೆಯಲ್ಲಿ ವಿಜೇತನಾದ. ಇನ್ನು ಈ ವಿನಾಯಕನು ಭಾರತದ ಸ್ವತಂತ್ರ ಸಮರದಲ್ಲಿ ವಿಶೇಷವಾದ ಪಾತ್ರವನ್ನು ವಹಿಸಿರುವನು. ಎಲ್ಲರ ಮನೆಯೊಳಗೆ ಕುಳಿತು ಪೂಜಿಸಲ್ಪಡುವ ಇವನನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕರ ಮಧ್ಯತಂದು ಬೀದಿಗಳಲ್ಲಿ ಪ್ರತಿಷ್ಠಾಪಿಸತೊಡಗಿದರು ಇದರಿಂದ ಯುವಜನರು ಗಣೇಶ ಚತುರ್ಥಿಯ ಹೆಸರಿನಲ್ಲಿ ಒಂದು ಕಡೆ ಸೇರಲಾರಂಭಿಸಿ ಸ್ವತಂತ್ರದ ಸಮರದ ಬಗ್ಗೆ ಚರ್ಚೆ ನಡೆಸತೊಡಗಿದರು ಗಣೇಶ ಪ್ರತಿಷ್ಠಾಪನೆಯನ್ನು ನೆಪವಾಗಿಸಿಕೊಂಡು ಜನಸಾಮಾನ್ಯರು ಸರಪಳಿಯಂತೆ ಸಂಘಟನೆಗೊಳ್ಳತೊಡಗಿದರು ಎಲ್ಲರೂ ಒಂದೆಡೆ ಸೇರಿ ದೇಶದ ಬಗ್ಗೆ ಸಮಾಲೋಚನೆ ಮಾಡುತ್ತಾ ಹೋರಾಟದ ರೂಪೇಶಗಳನ್ನು ರಚಿಸಿದರು ಭಾರತದ ಸ್ವತಂತ್ರ ಸಮರದ ಇತಿಹಾಸ ಪುಟಗಳಲ್ಲಿ ಸಾರ್ವಜನಿಕ ಗಣೇಶ ಚತುರ್ಥಿಯು ಅಳಿಯಲಾಗದ ದಾಖಲೆಯಾಗಿ ಸೇರಿಕೊಂಡಿದೆ.ಆದರೆ ಇಂದಿನ ಯುವ ಸಮುದಾಯ ಸಾರ್ವಜನಿಕ ಗಣೇಶೋತ್ಸವದ ಉದ್ದೇಶವನ್ನೇ ಮರೆತು ಮೋಜು ಮನೋರಂಜನೆಗಳಿಗಾಗಿ ಆಚರಿಸುತ್ತಿರುವುದು ದುರಂತದ ಸಂಗತಿ. ರಾಷ್ಟ್ರೀಯತೆಯ ಚಿಂತನೆಗಳಿಗಾಗಿ ಒಂದೆಡೆ ಸೇರಬೇಕೆಂದು ಗಣೇಶೋತ್ಸವವನ್ನು ತಿಲಕರು ಆಚರಣೆಗೆ ತಂದಿರುವ ಸಂಗತಿಯನ್ನು ಮರೆಯದೆ ಅದರ ಮಹತ್ವವನ್ನು ಅರಿತು ನಾವೆಲ್ಲರೂ ಸಾಗೋಣ.
✍️ ಶ್ರೀರಾಮಕೃಷ್ಣ ದೇವರು
ಶ್ರೀ ಷಣ್ಮುಖಾರೂಢ ಮಠ. ವಿಜಯಪುರ