ಬಾಣಂತಿಯರ ಸಾವಿನ ಕುರಿತು ಉನ್ನತ ತನಿಖೆ ಆಗಲಿ – ನಿರುಪಾದಿ.ಕೆ ಗೋಮರ್ಸಿ ಆಗ್ರಹ.
ಸಿಂಧನೂರು ಡಿ.15

ಕೆಲವೆ ದಿನಗಳ ಅಂತರದಲ್ಲಿ ಸಿಂಧನೂರು ತಾಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಬಾಣಂತಿಯರ ಸಾವು ಸಂಭವಿಸಿದ್ದು ಇದಕ್ಕೆ ನೇರವಾಗಿ ಅಲ್ಲಿನ ವೈದ್ಯರು, ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಸಿಬ್ಬಂದಿಗಳೇ ನೇರ ಕಾರಣ. ಈ ವಿಷಯದ ಕುರಿತು ಆರೋಗ್ಯ ಇಲಾಖೆ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ಪತ್ರಿಕಾ ಹೇಳಿಕೆ ಮುಖಾಂತರ ಕೆ.ಆರ್.ಎಸ್ ಪಕ್ಷದ ಮುಖಂಡ ನಿರುಪಾದಿ.ಕೆ ಗೋಮರ್ಸಿ ಆಗ್ರಹಿಸಿದರು. ರಾಜ್ಯದಾದ್ಯಂತ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ಬಾಣಂತಿಯರ ಸಾವಿನ ಬಗ್ಗೆ ವಿಶೇಷವಾಗಿ ಹೆಚ್ಚಿನ ತನಿಖೆ ಯಾಗಬೇಕು ಸರ್ಕಾರಿ ಆಸ್ಪತ್ರೆಯಲ್ಲಿ ಆಗುತ್ತಿರುವ ಬಾಣಂತಿಯರ ಸಾವಿಗೆ ಸರ್ಕಾರದ ವತಿಯಿಂದ ಅವರ ಕುಟುಂಬಕ್ಕೆ ಹೆಚ್ಚಿನ ಧನ ಸಹಾಯ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಸಿಂಧನೂರು ತಾಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವುಗಳು ಸರ್ವೇ ಸಾಮಾನ್ಯ ಎಂಬಂತಾಗಿದ್ದು ಇಲ್ಲಿ ಎಷ್ಟೇ ಸುರಕ್ಷಿತವಾದ ನೀತಿ-ನಿಯಮಗಳಿದ್ದರೂ ವೈದ್ಯರ, ಅಧಿಕಾರಿಗಳ, ಆಡಳಿತ ಮಂಡಳಿ, ಸಿಬ್ಬಂದಿಗಳ ಕರ್ತವ್ಯ ಲೋಪದಿಂದ ಮತ್ತು ನಿಷ್ಕಾಳಜಿ ಯಿಂದಾಗಿ ಸಾವುಗಳು ಸಂಭವಿಸುತ್ತಿದ್ದು ಇದು ಖಂಡನೀಯ.ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವತಿಯಿಂದ ಕೋಟ್ಯಾಂತರ ರೂಪಾಯಿ ಖರ್ಚು ವೆಚ್ಚಕ್ಕೆ, ಉತ್ತಮ ಮತ್ತು ಉನ್ನತ ಮಟ್ಟದ ಚಿಕಿತ್ಸೆಗೆ ಅನುದಾನ ಬಿಡುಗಡೆ ಯಾದರೂ ಸಹ ಸರ್ಕಾರಿ ಆಸ್ಪತ್ರೆಯಲ್ಲಿ ಈಗಲೂ ಸಹ ಸ್ವಚ್ಛತೆ ಇಲ್ಲದಿರುವುದು, ಸಿಬ್ಬಂದಿಗಳ ಕೊರತೆ, ಸಮಯದ ನಿರ್ವಹಣೆಯಲ್ಲಿ ವಿಫಲ, ಹೆಚ್ಚಿನ ಗುಣಮಟ್ಟದ ಚಿಕಿತ್ಸೆ ದೊರೆಯದೆ ಇರುವುದು ವಿಪರ್ಯಾಸದ ಸಂಗತಿ.ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳು ಕಡು ಬಡವರು, ಆರ್ಥಿಕವಾಗಿ ಹಿಂದುಳಿದವರಾಗಿದ್ದು ಅವರಿಗೆ ಸುರಕ್ಷಿತವಾದಂತ ವಾತಾವರಣ ಮತ್ತು ಸರ್ಕಾರಿ ಸೇವೆ ಸೌಲಭ್ಯಗಳ ಪೂರೈಕೆ ಅಗತ್ಯ ಎಂದು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ