ಗ್ರಾಮದ ಪವಾಡ ಪುರುಷ, ಆರಾಧ್ಯ ದೈವ – ಶ್ರೀ ಯಚ್ಚರೇಶ್ವರ ಸ್ವಾಮಿಗಳ ರಥೋತ್ಸವ.
ಹೊಳೆ ಆಲೂರು ಡಿ.21

ಗ್ರಾಮದ ಪವಾಡ ಪುರುಷ, ಆರಾಧ್ಯ ದೈವ ಶ್ರೀ ಯಚ್ಚರೇಶ್ವರ ಸ್ವಾಮಿಗಳ ರಥೋತ್ಸವ ಶುಕ್ರವಾರ ಸುಮಂಗಲಿಯರ ಕಳಸ-ಕನ್ನಡಿ, ಆರತಿ ಸೇರಿದಂತೆ ಸಕಲ ವಾದ್ಯ ಮೇಳ ಹಾಗೂ ಹರಗುರು ಚರ ಮೂರ್ತಿಗಳ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಜರುಗಿತು. ಜಾತ್ರೋತ್ಸವ ನಿಮಿತ್ತ ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಪೂಜೆ, ಮಹಾ ಮಂಗಳಾರತಿ ನಡೆದವು. 11 ಗಂಟೆಗೆ ಪ್ರಸಾದ ನಿಲಯದ ಲೋಕಾರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಮಧ್ಯಾಹ್ನ 1 ಗಂಟೆಗೆ ಗ್ರಾಮದ ಆಟೋ ಚಾಲಕರ ಸಂಘ, ಮೇಘರಾಜ ನಗರದ ಭಕ್ತರಿಂದ ಬೃಹತ್ ರುದ್ರಾಕ್ಷಿ ಮಾಲೆ ರಥಕ್ಕೆ ಅರ್ಪಿಸಲಾಯಿತು.

ಸಂಜೆ 4 ಗಂಟೆಗೆ ಹುಲ್ಲೂರೆ ಗ್ರಾಮದ ಭಕ್ತರಿಂದ ಹಳಿ ಬಂಡಿಯಲ್ಲಿ ತೇರಿನ ಹಗ್ಗ ಹಾಗೂ ಬಸವಣ್ಣ ದೇವರ ಮೂರ್ತಿ ಪ್ರತಿಷ್ಠಾಪಿಸಿ ಡೊಳ್ಳು-ಭಜನೆ ಸೇರಿದಂತೆ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಯಚ್ಚರೇಶ್ವರ ದೇವಸ್ಥಾನಕ್ಕೆ ತರಲಾಯಿತು. ಸಂಜೆ 5 ಗಂಟೆಗೆ ಪಲ್ಲಕ್ಕಿ ಉತ್ಸವದ ನಂತರ ನರಗುಂದ ಪುಣ್ಯಾರಣ್ಯ ಪತ್ರಿವನ ಮಠದ ಡಾ, ಶ್ರೀ ಗುರುಸಿದವೀರ ಶಿವಯೋಗಿ ಶಿವಾಚಾದ್ಯರು, ಶಿರೋಳ ಯಚ್ಚರೇಶ್ವರ ಮಠದ ಅಭಿನವ ಯಚ್ಚರಸ್ವಾಮೀಜಿ, ಉಳವೇಂದ್ರ ಮಠದ ಅಲ್ಲಮಯ್ಯ ಸ್ವಾಮೀಜಿ, ಯಚ್ಚರೇಶ್ವರ ಶ್ರೀಗಳ ಸಮ್ಮುಖದಲ್ಲಿ ರಥೋತ್ಸವ ನೆರವೇರಿತು. ರಥ ರಾಜ ಬೀದಿಯಲ್ಲಿ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ. ಬಾಳೆ-ಲಿಂಬೆ ಹಣ್ಣು, ಹಾರೀಕು ಹಾರಿಸಿ ಭಕ್ತಿ ಸಮರ್ಪಿಸಿದರು. ‘ಯಚ್ಚರೇಶ್ವರ ಮಹಾರಾಜ್ ಕೀ ಜೈ’ ಜಯಘೋಷ ಮುಗಿಲು ಮುಟ್ಟಿತು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ

