ಇತಿಹಾಸ ಸುಪ್ರಸಿದ್ಧ ಮೊರಬದ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವದ ನಿರ್ಮಾಣದ ಕಾರ್ಯ – ಭರದಿಂದ ನಡೆದಿರುವುದು.
ಮೊರಬ ಡಿ.23

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮದಲ್ಲಿ ಪ್ರತಿ ವರ್ಷ ಪದ್ಧತಿಯಂತೆ 1946 ನೇ. ಕ್ರೋಧಿನಾಮ ಸಂವತ್ಸರದ ಪುಷ್ಯ ಶುದ್ಧ ಪಂಚಮಿ 2025 ಜನವರಿ-4 ರಂದು ತಾಲೂಕಿನ ಮೊರಬ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಳೆದ ಬುಧವಾರ ತೇರಿನ ಗಾಲಿಗಳಿಗೆ ಪೂಜಾ ಕೈಂಕರ್ಯ ನಡೆದು, ಗ್ರಾಮದ ಬಡಿಗೇರ್ ಈರಣ್ಣ ಹಾಗೂ ಪ್ರಕಾಶ್ ಆಚಾರ್ ಇವರಿಗೆ ದೇವಸ್ಥಾನ ಮಂಡಳಿಯವರು ಅಕ್ಕಿಪಡಿ ಹಾಗೂ ಕಾಣಿಕೆಯನ್ನು ಸಂದಾಯ ಮಾಡುವ ಮೂಲಕ ಭವ್ಯ ರಥದ ನಿರ್ಮಾಣದ ಹೊಣೆಯನ್ನು ನಿಭಾಯಿಸಲು ಕೋರಿದರು. ಸಣ್ಣ ವೀರಣ್ಣನ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮಂಗಳ ವಾಧ್ಯಗಳ ಮೂಲಕ ರಥೋತ್ಸವದ ಮೂಲಾಧಾರವಾದ ರಥದ ಗಡ್ಡಿಯನ್ನು ಶೆಡ್ಡಿನಿಂದ ಹೊರಗೆಳೆದು, ನಿರ್ಮಾಣಕ್ಕೆ ಬೇಕಾದ ಸಕಲ ಸಲಕರಣೆಗಳಿಗೆ ಪೂಜೆ ನೆರವೇರಿಸಿದರು.

ತೇರು ಕಟ್ಟುವ ಮಿಣಿ, ಬಂಧಿಸುವ ಬೃಹತ್ ಹಗ್ಗಗಳ ಸುಸ್ಥಿತಿಯನ್ನು ಪರಿಶೀಲನೆ ನಡೆಸುವ ಮೂಲಕ ಹೊರಗೆ ಇರಿಸಲಾಯಿತು. ಇತ್ತ ಮೊರಬ ಗ್ರಾಮದ ಪ್ರತಿಯೊಂದು ಕುಟುಂಬವು ಮನೆಗೆ ಸುಣ್ಣ, ಬಣ್ಣ ಬಳಿಯುವ ಕಾರ್ಯವೂ ನಡೆಯುತ್ತದೆ. ಹೊಸ ಬಟ್ಟೆಗಳು, ನೆರ ಊರಿನಿಂದ ಆಗಮಿಸುವ ಬಂಧುಗಳಿಗೆ ಖಡಕ್ ರೊಟ್ಟಿ, ಶೇಂಗಾ, ಎಳ್ಳು, ಕಡ್ಲಿ, ಖಾರದ ಪುಡಿಗಳನ್ನು ತಯಾರಿಸುವ ಸಂಭ್ರಮ ದಲ್ಲಿರುತ್ತಾರೆ. ಸರ್ವ ಧರ್ಮದ ಸಮನ್ವಯ, ಸಮತಾ ಭಾವದಿಂದ ಸುಕ್ಷೇತ್ರ ಮೊರಬ ಗ್ರಾಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ, ಗ್ರಾ.ಪಂ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತದೆ ಎಂದು ಅಧ್ಯಕ್ಷೆ ದುರುಗಮ್ಮ ವೆಂಕಟೇಶ್, ಉಪಾಧ್ಯಕ್ಷ ಕರಿಯಪ್ಪ ನೇತೃತ್ವದಲ್ಲಿ ಪದ್ಧತಿಯನುಸಾರ ಅನೂಚಾನವಾಗಿ ನಡೆದು ಕೊಂಡು ಬಂದ ರೀತಿಯಲ್ಲಿ ರಥೋತ್ಸವ ಸಂಭ್ರಮದ ಸಿದ್ಧತೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯಂತೆ ನಿರ್ಣಯವನ್ನು ತೆಗೆದು ಕೊಳ್ಳುವ ಮೂಲಕ ಭಕ್ತರಿಗೆ ಯಾವುದೇ ಕೊರತೆ ಯಾಗದಂತೆ ಮುಂಜಾಗೃತೆಯನ್ನು ವಹಿಸಿ ಕೊಳ್ಳುವುದು ನಡೆದಿದೆ. ಗ್ರಾಮದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ರಥೋತ್ಸವ ಸಾಗುವ ರಹದಾರಿಯ ನಿರ್ವಹಣೆ, ಚರಂಡಿ ನೀರು ನಿಲ್ಲದಂತೆ ಕ್ರಮ ತೆಗೆದು ಕೊಳ್ಳುವುದು ಇತರೆ ಕಾರ್ಯಗಳು ಭರದಿಂದ ನಡೆದಿದೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ