ವಿಶ್ವ ದಾಖಲೆ ಸಾಧನೆಗೈದ – ಬಂಡೆ ಸಹೋದರಿಯರು.
ನಾಗಠಾಣ ಮಾ.17

ಆಟವಾಡುವ ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಈ ಸಾಧನೆ ಅದ್ವಿತೀಯವಾದುದು. ದೃಢ ಸಂಕಲ್ಪದಿಂದ ಮುನ್ನುಗ್ಗಿದಾಗ ಸಾಧನೆ ಸಾಧ್ಯ ಎಂಬುದನ್ನು ತಾಲೂಕಿನ ನಾಗಠಾಣ ಗ್ರಾಮದ ಈ ಅವಳಿ ಸಹೋದರಿಯರು ಸಾಬೀತು ಪಡಿಸಿದ್ದಾರೆ.ಶಿಕ್ಷಕ ಸಂತೋಷ ಬಂಡೆ ಹಾಗೂ ಸುರೇಖಾ ಬಂಡೆ ಅವರ ಅವಳಿ ಹೆಣ್ಣು ಮಕ್ಕಳಾದ ಅನುಶ್ರೀ ಹಾಗೂ ಶ್ರೀನಿಧಿ ಬಂಡೆ ಅವರು ಸದ್ಯ ಯುಕೆಜಿ ತರಗತಿಯಲ್ಲಿ ಓದುತ್ತಿದ್ದು, ಅವರು ಕೇವಲ ’47 ಸೆಕೆಂಡುಗಳಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಹೇಳಿ ನೂತನ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಹೈ-ವೈಬ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ ನವರು ಚಿಕ್ಕ ಮಕ್ಕಳ ಈ ಅಪರೂಪದ ಗ್ರಹಿಕಾ ಶಕ್ತಿ, ಬುದ್ಧಿ ಶಕ್ತಿಯ ಸಾಧನೆಯನ್ನು ಪರಿಗಣಿಸಿ, ರೆಕಾರ್ಡ್ ಟೈಟಲ್ ಸರ್ಟಿಫಿಕೇಟ್, ಟ್ರೋಫಿ, ಬ್ಯಾಡ್ಜ್, ಮೆಡಲ್ ನೀಡುವ ಮೂಲಕ ‘ನೂತನ ವಿಶ್ವ ದಾಖಲೆಯ’ ಹೆಮ್ಮೆಯೊಂದಿಗೆ ಗೌರವಿಸಿದ್ದಾರೆ. ’47 ಸೆಕೆಂಡುಗಳಲ್ಲಿ ಭಾರತದ ಸಂವಿಧಾನ ಪೀಠಿಕೆ ಹೇಳಿದ ಯುಕೆಜಿ ಅವಳಿ ಸಹೋದರಿಯರು’ – ಎಂಬ ತಲೆ ಬರಹದ ಮೂಲಕ ಬುದ್ಧಿಶಕ್ತಿ ವಿಭಾಗದಲ್ಲಿ ಇದೊಂದು ನೂತನ ವಿಶ್ವ ದಾಖಲೆಯ ಸಾಧನೆ ಎಂದು ಹೈ-ವೈಬ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ ನವರು ಘೋಷಿಸಿ, ಗೌರವಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಮಕ್ಕಳ ಈ ಸಾಧನೆಗಾಗಿ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೇಕಾರ್ಡ್ಸ್ ನವರು ‘ನ್ಯಾಷನಲ್ ರೆಕಾರ್ಡ್’ ದಾಖಲೆ ಯೊಂದಿಗೆ ಗೌರವಿಸಿದ್ದು ಇಲ್ಲಿ ಸ್ಮರಿಸಬಹುದು. ಪ್ರತಿಯೊಂದು ಮಗುವು ಪ್ರತಿಭಾನ್ವಿತ. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಮಗುವಿನಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸುವ ಜತೆಗೆ ಚಿಕ್ಕಂದಿನಿಂದಲೇ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸಿದರೆ ಒಳಿತಾಗುತ್ತದೆ. ಮಕ್ಕಳ ಈ ವಿಶ್ವ ದಾಖಲೆಯ ಸಾಧನೆ ಸಂತಸ ತಂದಿದೆ ಎಂದು ಮಕ್ಕಳ ತಂದೆ ಸಂತೋಷ ಬಂಡೆ ಖುಷಿ ಹಂಚಿ ಕೊಂಡರು.