ಆತ್ಮಶಕ್ತಿ ಜಾಗೃತಿಯ ಕೇಂದ್ರ ಚಳ್ಳಕೆರೆಯ – ಶ್ರೀಶಾರದಾಶ್ರಮ.

ಚಳ್ಳಕೆರೆ ಏ.17

ಶ್ರೀಶಾರದಾಶ್ರಮವು ಆತ್ಮಮೋಕ್ಷ ಮತ್ತು ಜಗದ್ಧಿತ ಸಂಕಲ್ಪ ದೊಂದಿಗೆ ಹಾಗೂ ದಿವ್ಯತ್ರಯರ ಜೀವನ-ಸಂದೇಶಗಳ ಪ್ರಸಾರದ ಗುರಿಯೊಂದಿಗೆ ೧೮ ನೇ. ಜೂನ್ ೨೦೦೯ ರಂದು ನಗರದ ಬಿ.ಡಿ.ಓ ಕಛೇರಿಯ ಹಿಂಭಾಗದ ಒಂದು ಬಾಡಿಗೆ ಮನೆಯಲ್ಲಿ ಆರಂಭವಾಯಿತು. ಡಿಸೆಂಬರ್ ೧೯, ೨೦೦೯ ರಂದು ಶ್ರೀಶಾರದಾಶ್ರಮದ ಉದ್ಘಾಟನೆಯನ್ನು ಪೂಜ್ಯ ಸ್ವಾಮಿ ರಾಘವೇಶಾನಂದಜೀ ಹಾಗೂ ಪೂಜ್ಯ ಸ್ವಾಮಿ ನಿತ್ಯಾಸ್ಥಾನಂದಜೀಯವರು ವಿದ್ಯುಕ್ತವಾಗಿ ನಡೆಸಿ ಕೊಟ್ಟರು. ಶ್ರೀಶಾರದಾಶ್ರಮಕ್ಕೆ ಸದ್ಭಕ್ತರೊಬ್ಬರು ಉದಾರವಾಗಿ ಸ್ಥಳವನ್ನು ನೀಡಿದೆಡೆಯಲ್ಲಿ ೨೦೧೨ ರ ಜೂನ್ ೪ ರಂದು ಬೆಂಗಳೂರಿನ ಬಸವನಗುಡಿಯ ಶ್ರೀರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದ ಸ್ವಾಮಿ ಹರ್ಷಾನಂದಜೀ ಮಹಾರಾಜ್ ಅವರು ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಹಾಕಿ ಆಶೀರ್ವಾದಿಸಿದರು.

ಕರ್ನಾಟಕದಾದ್ಯಂತ ಸದ್ಭಕ್ತರ ಅದರಲ್ಲೂ ಚಳ್ಳಕೆರೆಯ ಭಕ್ತವೃಂದದ ಉದಾರ ದೇಣಿಗೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ಅವರ ಸಕ್ರಿಯ ಸಹಕಾರದಿಂದ ಎರಡು ವರ್ಷಗಳಲ್ಲಿ ಸಾಧು ನಿವಾಸ ಮತ್ತು ದೇವಸ್ಥಾನ ನಿರ್ಮಾಣವಾಯಿತು. ಜನವರಿ ೨೬ ರ ೨೦೧೫ ರಂದು ರಥ ಸಪ್ತಮಿಯ ಶುಭ ಪರ್ವ ದಿನದಂದು ಮೂರು ದಿನಗಳ ಅದ್ಧೂರಿಯ ಕಾರ್ಯಕ್ರಮದೊಂದಿಗೆ ದೇವಸ್ಥಾನದ ಪ್ರತಿ ಷ್ಠಾಪನೆಯನ್ನು ಮಾಡಲಾಯಿತು. ಆಶ್ರಮದಲ್ಲಿ ದಿವ್ಯತ್ರಯರ ಜಯಂತಿಗಳನ್ನು ಒಳಗೊಂಡು ಪ್ರತಿಯೊಂದು ಹಬ್ಬಗಳನ್ನೂ ಆಚರಿಸಲಾಗುತ್ತದೆ. ಪೂಜ್ಯರಾದ ಸ್ವಾಮಿ ರಾಘವೇಶಾನಂದಜೀ, ಸ್ವಾಮಿ ನಿತ್ಯಸ್ಥಾನಂದಜೀ, ಸ್ವಾಮಿ ಮುಕ್ತಿದಾನಂದಜೀ, ಸ್ವಾಮಿ ಜಿತಕಾಮಾನಂದಜೀ, ಸ್ವಾಮಿ ತತ್ತ್ವರೂಪಾನಂದಜೀ, ಸ್ವಾಮಿ ವೀತಭಯಾನಂದಜೀ, ಸ್ವಾಮಿ ಪರಮಸುಖಾನಂದಜೀ, ಸ್ವಾಮಿ ನಿರ್ಭಯಾ ನಂದಜೀ, ಸ್ವಾಮಿ ವೀರೇಶಾನಂದಜೀ, ಸ್ವಾಮಿ ತ್ಯಾಗೀಶ್ವರಾನಂದಜೀ ಹಾಗೂ ಮತ್ತಿತರ ಹಿರಿಯ ಸಾಧು ಸಂನ್ಯಾಸಿಗಳು ಮತ್ತು ಪೂಜ್ಯ ಮಾತಾಜೀ ಅಮೃತಮಯೀ, ಮಾತಾಜೀ ಯೋಗಾನಂದಮಯೀ, ಮಾತಾಜೀ ವಿವೇಕಮಯೀ, ಮಾತಾಜೀ ತೇಜೋಮಯೀ, ಮಾತಾಜೀ ಬ್ರಹ್ಮಮಯೀ, ಮಾತಾಜೀ ಚೈತನ್ಯ ಮಯೀ, ಮಾತಾಜೀ ಅಮೂಲ್ಯಮಯೀ, ಮಾತಾಜೀ ಜೋತ್ಸ್ನಮಯೀ, ಮಾತಾಜೀ ಅನನ್ಯಮಯೀ ಹಾಗೂ ಡಾ, ಕೆ.ಅನಂತರಾಮು, ಡಾ, ಕೆ.ಎಲ್ ಪ್ರಸನ್ನಾಕ್ಷಿ, ಶ್ರೀ ಇಬ್ರಾಹಿಂ ಸುತಾರ್, ಡಾ, ಗುರುರಾಜ ಕರ್ಜಗಿ, ಶ್ರೀ ಟಿ.ಎನ್ ಪ್ರಭಾಕರ್, ವೈ ರಾಜಾರಾಮ್, ವೈ ರಘುರಾಮ ಶಾಸ್ತ್ರೀ, ಡಾ, ನಾರಾಯಣರೆಡ್ಡಿ, ಶ್ರೀಚಕ್ರವರ್ತಿ ಸೂಲಿಬೆಲೆ, ಸೋದರಿ ರಮ್ಯ ಕಲ್ಲೂರು,ನಿತ್ಯಾನಂದ ವಿವೇಕವಂಶಿ ಹಾಗೂ ಮತ್ತಿತರ ಗಣ್ಯರನ್ನು ಆಶ್ರಮಕ್ಕೆ ಆಮಂತ್ರಿಸಿ ಸತ್ಸಂಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶ್ರೀಶಾರದಾಶ್ರಮವು ಮೂರು ಬಾರಿ ಜಾಗೋ ಭಾರತ್ ಕಾರ್ಯಕ್ರಮವನ್ನು ಹಾಗೂ ಒಂದು ಬಾರಿ ಅಷ್ಟಾವಧಾನ ಕಾರ್ಯಕ್ರಮವನ್ನು ಆಯೋಜಿಸಿದೆ‌. ದಿವ್ಯತ್ರಯರ ಜಯಂತಿ ಸಂದರ್ಭದಲ್ಲಿ ಮೂರು ದಿನ, ಐದು ದಿನ, ಏಳು ದಿನಗಳ ಕಾಲ ಅವರ ಜೀವನ ಮತ್ತು ಸಂದೇಶಗಳನ್ಯು ಕುರಿತು ಉಪನ್ಯಾಸಗಳನ್ನು ಪ್ರತಿ ವರ್ಷವೂ ನಡೆಸಿ ಕೊಂಡು ಬರಲಾಗುತ್ತಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಸು ಪಾಸಿನಲ್ಲಿ ಭಾಗವತ ಸಪ್ತಾಹವನ್ನು, ಗೀತಾ ಜಯಂತಿಯ ಸಂದರ್ಭದಲ್ಲಿ ಭಗವದ್ಗೀತಾ ಸಪ್ತಾಹವನ್ನು, ಧ್ಯಾನಾಭ್ಯಾಸ ಸಪ್ತಾಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಮಾಡಲಾಗುತ್ತದೆ. ಚಳ್ಳಕೆರೆ ಸಹೋದರರು ಹಾಗೂ ವೇದ ವಿದ್ವಾಂಸರಾದ ಶ್ರೀನಾಗಶಯನ ಗೌತಮ್ ಹಲವು ಬಾರಿ ಚಂಡಿಕಾ ಹೋಮವನ್ನೊಳ ಗೊಂಡು ಹಲವು ಹೋಮಗಳನ್ನು ನಡೆಸಿ ಕೊಟ್ಟರುವರು.

ಆಶ್ರಮವು ಬಾಪೂಜಿ ಆಯುರ್ವೇದ ಕಾಲೇಜು ಹಾಗೂ ಚಳ್ಳಕೆರೆಯ ಎಲ್ಲಾ ವಿದ್ಯಾಸಂಸ್ಥೆಗಳು, ನೃತ್ಯ ನಿಕೇತನದಂತಹ ಸಾಂಸ್ಕೃತಿಕ ಸಂಸ್ಥೆಗಳನ್ನು ಹಾಗೂ ಶ್ರೀ ಬ್ರಹ್ಮ ಚೈತನ್ಯ ಮಂದಿರ, ಶ್ರೀನರಹರಿ ಸದ್ಗುರು ಆಶ್ರಮ, ಸಾಯಿ ಸೇವಾ ಸಂಸ್ಥೆ, ಆರ್ಯ ವೈಶ್ಯ ಸಂಘ ಹಾಗೂ ಇನ್ನಿತರ ಆಧ್ಯಾತ್ಮಿಕ, ಧಾರ್ಮಿಕ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕವನ್ನು ಇಟ್ಟು ಕೊಂಡಿದೆ. ಸ್ಥಳೀಯ ಭಜನಾ ಮಂಡಳಿಗಳಿಗೆ ಪ್ರೋತ್ಸಾಹ ನೀಡಲು ಅವರನ್ನು ಶ್ರೀಶಾರದಾಶ್ರಮಕ್ಕೆ ಆಮಂತ್ರಿಸಿ ಭಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಆಧ್ಯಾತ್ಮಿಕ ಸಾಧಕರು, ಉತ್ತಮ ಲೇಖಕರು, ಅನುವಾದಕರು ಮತ್ತು ಖ್ಯಾತ ಪ್ರವಚನ ಕಾರರಾಗಿದ್ದು ಅವರ ಹಲವಾರು ಲೇಖನಗಳು ವಿವೇಕ ಪ್ರಭ, ವಿವೇಕ ಹಂಸ, ನರಹರಿ ವಾಣಿ, ಸೇರಿದಂತೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.

ಮಾತಾಜೀ ಅವರು ಕನ್ನಡಕ್ಕೆ ಅನುವಾದಿಸಿದ “ಚೈತನ್ಯ ಮಹಾಪ್ರಭು”, ಶ್ರೀರಾಮಕೃಷ್ಣ ಭಾವ ಸಂಗಮ, ಆನಂದದ ಹುಡುಕಾಟ, ಮಾತೆಯ ಮಡಿಲು, ಮಹತ್ಸಾಧನೆ, ದಿವ್ಯಾತ್ಮರೊಡನೆ,‌ ನಮ್ಮ ಹೆಮ್ಮೆಯ ಪರಂಪರೆ, ಕಥಾ ಚಿಂತನ ಮನೋಮಂಥನ, ನಮ್ಮ ಋಷಿಮುನಿಗಳು, ದಿವ್ಯ ಜೀವನ ಪುಸ್ತಕ ಮಾಲಿಕೆ ಸೇರಿದಂತೆ ಹಲವಾರು ಮೌಲ್ಯಯುತ ಗ್ರಂಥಗಳನ್ನು ಹಾಗೂ ಅನುವಾದಿತ ಕೃತಿಗಳನ್ನು ಮೈಸೂರಿನ ಶ್ರೀರಾಮಕೃಷ್ಣ ಆಶ್ರಮ ಹಾಗೂ ಬೆಂಗಳೂರಿನ ವಿವೇಕ ಹಂಸ ಸೇರಿದಂತೆ ಇನ್ನಿತರ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿವೆ. ಅಲ್ಲದೆ ನಾಡಿನ ಹೆಸರಾಂತ ಕನ್ನಡ ವಾಹಿನಿ ಚಂದನ ವಾಹಿನಿಯಲ್ಲಿ ಮಾತಾಜೀ ತ್ಯಾಗಮಯೀ ಅವರ ಅನೇಕ ಪುಸ್ತಕಗಳು ಪರಿಚಯ ಗೊಂಡಿವೆ. ಆಶ್ರಮದ ಸಂನ್ಯಾಸಿನಿಯರು ನಾಡಿನ ವಿವಿಧ ಕಡೆಗಳಿಗೆ ಸಂಚರಿಸಿ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಉಪನ್ಯಾಸಗಳನ್ನು ನೀಡಿರುವರು. ಈ ಹದಿನಾರು ವರ್ಷಗಳಲ್ಲಿ ಆಶ್ರಮದ ಸಂಪರ್ಕಕ್ಕೆ ಬಂದ ಹಲವಾರು ಸದ್ಭಕ್ತರು ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮಕ್ಕೆ ಹೋಗಿ ಮಂತ್ರ ದೀಕ್ಷೆಯನ್ನು ಪಡೆದಿರುವರು ಹಾಗೂ ತನ್ಮೂಲಕ ದಿವ್ಯತ್ರಯರಲ್ಲಿ ಆಳವಾದ ಶ್ರದ್ಧೆ ಭಕ್ತಿಯನ್ನು ತಳೆದು ಅವರು ಪ್ರತಿಪಾದಿಸಿದ ಸಾಧನಾ ಮಾರ್ಗದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಚಳ್ಳಕೆರೆಯ ಶ್ರೀಶಾರದಾಶ್ರಮವು ಕರ್ನಾಟಕ ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ ಸದಸ್ಯ ಸಂಸ್ಥೆಯಾಗಿದೆ.

ಶ್ರೀಶಾರದಾಶ್ರಮದ ಕಾರ್ಯ ಚಟುವಟಿಕೆಗಳು:-

1) ದಿವ್ಯತ್ರಯರಿಗೆ ನಿತ್ಯ ಠಖಪೂಜೆ ಮತ್ತು ಸಾಯಂ ಪ್ರಾರ್ಥನೆ, ಆರಾತ್ರಿಕ ಮತ್ತು ಗ್ರಂಥ ಪಾರಾಯಣ.

2) ಪ್ರತಿ ಗುರುವಾರ ಸಂಜೆ 5.30 ರಿಂದ ಭಜನೆ ಮತ್ತು ಪ್ರವಚನ ಕಾರ್ಯಕ್ರಮ.

3) ಪ್ರತಿ ಶನಿವಾರ ಸಂಜೆ ಯುವಕ ಯುವತಿಯರಿಗಾಗಿ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ.

4) ಪ್ರತಿ ಭಾನುವಾರ ರಾತ್ರಿ ಗೂಗಲ್ ಮೀಟ್ ನಲ್ಲಿ “ಶ್ರೀರಾಮಕೃಷ್ಣ ವಚನ ವೇದದ ಬೆಳಕಿನಲ್ಲಿ ಸಾಧನೆ” ಎಂಬ ವಿಷಯವಾಗಿ ಪ್ರವಚನ ಮಾಲಿಕೆ.

5) ಪ್ರತಿ ಮಂಗಳವಾರ ಸಂಜೆ 5.30ರಿಂದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ನಿವಾಸದಲ್ಲಿ ಸತ್ಸಂಗ.

6) ಪ್ರತಿ ಬುಧವಾರ ಬೆಳಗ್ಗೆ 11 ಗಂಟೆಯಿಂದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ಶಿವ ನಗರದ ಜಿ.ವಿ.ಎಸ್ ನಿವಾಸದಲ್ಲಿ ಸತ್ಸಂಗ ಕಾರ್ಯಕ್ರಮ.

7) ಪ್ರತಿ ತಿಂಗಳ ಕೊನೆಯ ಭಾನುವಾರ ಸಂಜೆ ಚಳ್ಳಕೆರೆ ತಾಲೂಕಿನ ದೇವರಹಟ್ಟಿ ಗ್ರಾಮದಲ್ಲಿ ಶ್ರೀಶಾರದಾಶ್ರಮದ ಸ್ವಯಂ ಸೇವಕರಿಂದ ಶ್ರೀಮತಿ ಲಕ್ಷ್ಮೀ ಚೆನ್ನಕೇಶವ ಅವರ ನಿವಾಸದಲ್ಲಿ ಸತ್ಸಂಗ ಕಾರ್ಯಕ್ರಮ.

8) ಶ್ರೀಶಾರದಾಶ್ರಮದ ವತಿಯಿಂದ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಸಾಯಿ ಬಾಬಾ ಮಂದಿರ, ಗಣೇಶ ದೇವರ ಸನ್ನಿಧಿ, ಬನಶ್ರೀ ವೃದ್ಧಾಶ್ರಮ ಸೇರಿದಂತೆ ವಿವಿಧ ಕಡೆಗಳಲ್ಲಿ ಭಜನೆ, ಪಾರಾಯಣ ಮತ್ತು ಪ್ರವಚನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

9) ಶ್ರೀಶಾರದಾಶ್ರಮದ ಕಡೆಯಿಂದ ಶ್ರೀಶಾರದಾದೇವಿ ಜೀವನಗಂಗಾ, ಯುಗಾವತಾರ ಶ್ರೀರಾಮಕೃಷ್ಣ , ಶ್ರೀರಾಮಕೃಷ್ಣ ವಚನ ವೇದ, ಭಗವದ್ಗೀತೆ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಸೇರಿದಂತೆ ವಿವಿಧ ಸದ್ಗ್ರಂಥಗಳ ಮೇಲೆ ಲಿಖಿತ ಮತ್ತು ಆನ್ಲೈನ್ ಪರೀಕ್ಷೆ ಮಾಡಲಾಗಿದೆ.

10) ಚಳ್ಳಕೆರೆ ತಾಲೂಕಿನ ನೇರಲಗುಂಟೆ ಸಮೀಪದ ಕಾಟವ್ವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮಗಳು.

11) ಪ್ರತಿ ವರ್ಷ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನೋಟ್ ಬುಕ್ ವಿತರಣಾ ಕಾರ್ಯಕ್ರಮ ನಡೆಯುತ್ತದೆ.

12) ಹುತಾತ್ಮ ಸೈನಿಕರ ಕುಟುಂಬದ ಸದಸ್ಯರಿಗೆ ಸನ್ಮಾನ ಮತ್ತು ಆರ್ಥಿಕ ಸಹಾಯ ಧನವನ್ನು ವಿತರಿಸಲಾಗುತ್ತದೆ.

ಚಳ್ಳಕೆರೆ ಬರ ಪೀಡಿತ ತಾಲೂಕಾದರೂ ಆಧ್ಯಾತ್ಮಿಕವಾಗಿಯೂ ಸಾಕಷ್ಟು ಧಾರ್ಮಿಕ ಸಂಸ್ಥೆಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡು ಪಾಲನೆ ಮತ್ತು ಪೋಷಣೆ ಮಾಡುತ್ತ ಬರುತ್ತಿದೆ. ಈ ನಿಟ್ಟಿನಲ್ಲಿ ಚಳ್ಳಕೆರೆಯ ಶ್ರೀಶಾರದಾಶ್ರಮವು ಆತ್ಮಶಕ್ತಿ ಜಾಗೃತಿಯ ಕೇಂದ್ರವಾಗಿ ಯಾವುದೇ ಸದ್ದು ಗದ್ದಲ ವಿಲ್ಲದೆ ಮೌನವಾಗಿ ತನ್ನ ಕಾರ್ಯ ಚಟುವಟಿಕೆಗಳನ್ನು ಮಾಡುತ್ತ ಬರುತ್ತಿದೆ. ದಿವ್ಯತ್ರಯರು ಮತ್ತು ಹಿರಿಯ ಸಾಧು ಸಂತರ ಆಶೀರ್ವಾದ ಹಾಗೂ ಸದ್ಭಕ್ತ ವೃಂದದ ನಿರಂತರ ಸಹಾಯ ಸಹಕಾರ ಮತ್ತು ಸತ್ ಸಂಕಲ್ಪಗಳೊಂದಿಗೆ ಚಳ್ಳಕೆರೆಯ ಶ್ರೀಶಾರದಾಶ್ರಮವು ತನ್ನ ಆಧ್ಯಾತ್ಮಿಕ ಹೋರಾಟದ ಹೆಜ್ಜೆಗಳನ್ನು ಹಾಕುತ್ತಲಿದೆ‌. ಮಾಹಿತಿ ಮತ್ತು ಭಾವ ಚಿತ್ರಗಳ ವಿಷಯ ಸಂಗ್ರಹಿಸಿ ಕ್ರೀಯಾಶೀಲ & ಅತ್ಯಂತ ಅಚ್ಚುಕಟ್ಟಾಗಿ ರಚನಾತ್ಮಕ ವರದಿ ಆಗಿದೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.

ಯತೀಶ್.ಎಂ ಸಿದ್ದಾಪುರ, ಲೇಖಕರು ಮತ್ತು ಸ್ವಯಂ ಸೇವಕರು, ಶ್ರೀಶಾರದಾಶ್ರಮ, ಚಳ್ಳಕೆರೆ. ದೂರವಾಣೆ ೭೨೦೪೩೫೧೯೦೩.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button