ಪರಿಸರ ಜಾಗೃತಿಯ ಸಂಸ್ಕೃತಿ ಬೆಳೆಸೋಣ – ಸಂತೋಷ ಬಂಡೆ.
ನಾಗಠಾಣ ಏ.26

ಭೂ ದಿನವು ಎಲ್ಲರಲ್ಲಿ ಪರಿಸರ ಜಾಗೃತಿಯ ಸಂಸ್ಕೃತಿಯನ್ನು ಬೆಳೆಸುತ್ತದೆ. ಭೂಮಿಯು ಮನುಕುಲ ಮತ್ತು ಜೀವ ಸಂಕುಲಕ್ಕೆ ಸೇರಿದ್ದು. ಅದನ್ನು ಪರಿಸರಾತ್ಮಕ ಸಮಸ್ಯೆಗಳಿಂದ ಸಂರಕ್ಷಿಸುವ ಗುರುತರ ಜವಾಬ್ದಾರಿ ಎಲ್ಲರದ್ದು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಮಂಗಳವಾರ ದಂದು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ವಿಶ್ವ ಭೂ ದಿನ’ ಕ್ಕೆ ಚಾಲನೆ ನೀಡಿ ಮಾತನಾಡಿದರು.’ವೇದಗಳ ಕಾಲದಿಂದ ಭೂಮಿಗೆ ಪೂಜ್ಯನೀಯ ಸ್ಥಾನವಿದೆ. ಭೂಮಿಯ ಬಳಕೆಯಿಂದ ಅಭಿವೃದ್ಧಿ ಆಗಬೇಕೇ ಹೊರತು ಅವನತಿ ಅಲ್ಲ. ನಮ್ಮ ನಿತ್ಯ ಜೀವನದಲ್ಲಿ ಪರಿಸರಕ್ಕೆ ಪೂರಕವಾದ ಕೆಲಸ ಮಾಡಿ ಭೂಮಿಯನ್ನು ಸಮತೋಲನದಲ್ಲಿ ಇಟ್ಟು ರಕ್ಷಿಸೋಣ’ ಎಂದರು. ಹಿಂದಿನಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಯೇ ದೇವರೆಂದು ಭಾವಿಸಲಾಗಿದೆ. ನಗರೀಕರಣದ ನೆಪದಲ್ಲಿ ಅಗತ್ಯಕ್ಕೂ ಮೀರಿ ಗಣಿಗಾರಿಕೆ, ಅರಣ್ಯ ನಾಶ ಮಾಡಿ ಭೂಮಿಗೆ ದಾಳಿ ಮಾಡಬಾರದು ಎಂದರು. ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಮಿತಿ ಮೀರಿದ ಜನಸಂಖ್ಯೆ, ಜೀವವೈವಿಧ್ಯತೆಯ ನಷ್ಟ, ಹೆಚ್ಚುತ್ತಿರುವ ಮಾಲಿನ್ಯದಂತಹ ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು, ಎಲ್ಲರೂ ಜವಾಬ್ದಾರಿಯಿಂದ ವರ್ತಿಸ ಬೇಕಾಗಿದೆ. ಭೂಮಿಗೆ ಉತ್ತಮ, ಆರೋಗ್ಯಕರ ನಾಳೆಯನ್ನು ರೂಪಿಸಿ, ಭವಿಷ್ಯದ ಪೀಳಿಗೆಗೆ ಸುಂದರ ಭೂಮಿಯನ್ನು ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ಬಸವರಾಜ ಸಾರವಾಡ, ಆನಂದ ಗಂಗನಳ್ಳಿ, ಸಿದ್ಧಾರೂಢ ಬಂಡೆ, ಜಟಿಂಗರಾಯ ಕಕ್ಕೇರಗೊಳ ಸೇರಿದಂತೆ ಅನೇಕ ಮಕ್ಕಳು ಭಾಗವಹಿಸಿದ್ದರು.