ಅಕ್ರಮ ಕಟ್ಟಡ ವಿವಾದ, ಅಧ್ಯಕ್ಷ ಕೆ.ಮೋಹನ್ ದಾಸ್ ಶೆಣೈ ಅವರ ಆಡಳಿತಾವಧಿಯಲ್ಲೇ – ಕಾನೂನು ಉಲ್ಲಂಘನೆ? ಸಾರ್ವಜನಿಕರ ಪ್ರಶ್ನೆ….!
ಕುಂದಾಪುರ ಸ.06





ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷರ ವಾರ್ಡ್‌ನಲ್ಲಿ, ಪುರಸಭೆಯ ಕಚೇರಿಯ ಕಣ್ಣ ಮುಂದೆಯೇ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ‘ಭ್ರಷ್ಟಾಚಾರ ರಹಿತ’ ಮತ್ತು ‘ಪಾರದರ್ಶಕ ಆಡಳಿತ’ ದ ಬಗ್ಗೆ ಭರವಸೆ ನೀಡಿದ್ದ ಪುರಸಭಾ ಅಧ್ಯಕ್ಷ ಕೆ. ಮೋಹನ್‌ದಾಸ್ ಶೆಣೈ ಅವರ ಬೆಂಬಲಿಗರಿಂದಲೇ ಈ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪಗಳು ನಾಗರಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಪುರಸಭೆಯ ಸದಸ್ಯರಿಂದಲೇ ಇಂತಹ ಅಸಹಕಾರ ಮತ್ತು ನಿರ್ಲಕ್ಷ್ಯವು ಅವರ ಪ್ರಾಮಾಣಿಕತೆಗೆ ಭಂಗ ತಂದಿದೆ ಎಂದು ಸಾರ್ವಜನಿಕರು ಮಾತನಾಡಿ ಕೊಳ್ಳುತ್ತಿದ್ದಾರೆ.ಈ ಅಕ್ರಮ ಕಟ್ಟಡಕ್ಕೆ ಪುರಸಭೆಯ ಮುಖ್ಯ ಅಧಿಕಾರಿ ಯಿಂದ ಹಿಡಿದು ಇತರ ಅಧಿಕಾರಿ ವರ್ಗಗಳ ತನಕ ಸಂಪೂರ್ಣ ಬೆಂಬಲ ದೊರೆತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಅಕ್ರಮ ನಿರ್ಮಾಣದ ಗುತ್ತಿಗೆದಾರರು ಪುರಸಭಾ ಅಧ್ಯಕ್ಷರ ಆತ್ಮೀಯ ಸ್ನೇಹಿತರಾಗಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದ್ದು, ಇದು ಪ್ರಭಾವಿಗಳಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಮತ್ತೊಂದು ಕಾನೂನು ಎಂಬ ತಾರತಮ್ಯವನ್ನು ತೋರಿಸುತ್ತಿದೆ.
ಪುರಸಭಾ ಮುಖ್ಯಾಧಿಕಾರಿಯ ಗೊಂದಲಮಯ ಹೇಳಿಕೆ:
ಮಾಧ್ಯಮದವರು ಪುರಸಭಾ ಮುಖ್ಯ ಅಧಿಕಾರಿಯನ್ನು ಸಂಪರ್ಕಿಸಿದಾಗ, ಅವರು ನೀಡಿದ ಗೊಂದಲಮಯ ಹೇಳಿಕೆ ಯಿಂದಲೇ ಕಟ್ಟಡಕ್ಕೆ ಅನುಮತಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕರು ತಕ್ಷಣವೇ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಅಧಿಕಾರಿಗಳು ಅಕ್ರಮ ಕಟ್ಟಡದ ಮಾಲೀಕರೊಂದಿಗೆ ಯಾವುದೋ ಒಂದು ವ್ಯವಸ್ಥೆಗೆ ಒಳ ಪಟ್ಟಿರುತ್ತಾರೆ ಎಂಬ ಗಂಭೀರ ಸಂಶಯಗಳು ಕಾಡುತ್ತಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಬಿ,ಖಾತೆ ಬಗ್ಗೆ ವಿವಾದ ಮತ್ತು ಕಾನೂನು ಸ್ಪಷ್ಟೀಕರಣ:
ಕಟ್ಟಡದ ಮಾಲೀಕರು ಅಕ್ರಮ ಕಟ್ಟಡದ ಬಗ್ಗೆ ಪ್ರಶ್ನಿಸಿದಾಗ, “ಸರ್ಕಾರ ಬಿ,ಖಾತೆ ಕಾಯ್ದೆ ಜಾರಿಗೆ ಮಾಡಿದೆ, ಈ ಮೂಲಕ ನಾನು ಬಿ,ಖಾತೆ ಪಡೆಯುತ್ತೇನೆ” ಎಂದು ನಿರ್ಲಕ್ಷ್ಯದ ಮಾತುಗಳನ್ನು ಆಡಿದ್ದಾರೆ. ಆದರೆ, ಈ ಹೇಳಿಕೆಯು ಕಾನೂನು ಬಾಹಿರ ಮತ್ತು ತಪ್ಪು ಮಾಹಿತಿಯನ್ನು ಆಧರಿಸಿದೆ. ಬಿ,ಖಾತೆ ಎಂದರೆ ಕೇವಲ ಕಂದಾಯ ದಾಖಲೆಗೆ ಸಂಬಂಧಿಸಿದ್ದಾಗಿದೆ, ಇದು ಕಟ್ಟಡ ನಿರ್ಮಾಣಕ್ಕೆ ಕಾನೂನು ಬದ್ಧ ಅನುಮತಿಯಲ್ಲ. ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳಿಗೆ ಬಿ,ಖಾತೆ ನೀಡುವುದು ನಿಯಮ ಬಾಹಿರ. ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿಗಳು ಪತ್ರಿಕಾ ಗೋಷ್ಠಿ ಕರೆದು ಸ್ಪಷ್ಟೀಕರಣ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾನೂನು ಉಲ್ಲಂಘಿಸಿದವರ ಮತ್ತು ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ:
ನಿಯಮದ ಪ್ರಕಾರ, ಇಂತಹ ಕಾನೂನು ಉಲ್ಲಂಘನೆಗಳು ಸಂಭವಿಸಿದಾಗ ಈ ಕೆಳಗಿನ ಕ್ರಮಗಳನ್ನು ತೆಗೆದು ಕೊಳ್ಳಬಹುದು:
ಕಟ್ಟಡ ಮಾಲೀಕರ ಮೇಲೆ ಕ್ರಮ:
ಪುರಸಭೆಯು ನಿರ್ಮಾಣವನ್ನು ತಕ್ಷಣವೇ ನಿಲ್ಲಿಸಲು ಆದೇಶ ಹೊರಡಿಸ ಬೇಕು, ನೋಟಿಸ್ ನೀಡಿ ಕಟ್ಟಡವನ್ನು ಕೆಡವಲು ಸೂಚಿಸ ಬೇಕು. ಮಾಲೀಕರು ಸ್ಪಂದಿಸದಿದ್ದರೆ, ಪುರಸಭೆಯೇ ಸ್ವತಃ ಕಟ್ಟಡವನ್ನು ಕೆಡವಿ, ಆ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಬಹುದು. ಕಾನೂನು ಉಲ್ಲಂಘನೆಗೆ ದಂಡ ಕೂಡ ವಿಧಿಸಬಹುದು.
ಕರ್ತವ್ಯ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ಮೇಲೆ ಕ್ರಮ:
ಕಾನೂನು ಉಲ್ಲಂಘನೆಗಳನ್ನು ತಡೆಯುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು. ಇದರಲ್ಲಿ ಪುರಸಭಾ ಮುಖ್ಯಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಸೇರಿದ್ದಾರೆ. ನಿಯಮ ಉಲ್ಲಂಘನೆಗೆ ಬೆಂಬಲ ನೀಡಿರುವುದು ಸಾಬೀತಾದರೆ, ಅವರನ್ನು ಸೇವೆಯಿಂದ ಅಮಾನತ್ ಗೊಳಿಸಬಹುದು ಅಥವಾ ವಜಾ ಮಾಡಬಹುದು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಕೂಡ ಹೂಡಬಹುದು.
ನ್ಯಾಯ ಬದ್ಧ ಕಟ್ಟಡಕ್ಕೆ ಅಗತ್ಯ ದಾಖಲೆಗಳು:
ನ್ಯಾಯ ಬದ್ಧವಾಗಿ ಮೊದಲ ಮಹಡಿಯ ಕಟ್ಟಡ ನಿರ್ಮಾಣಕ್ಕೆ ಈ ಕೆಳಗಿನ ದಾಖಲೆಗಳು ಅಗತ್ಯವಾಗಿವೆ:
ಸಿಂಗಲ್ ಲೇಔಟ್ ಪ್ಲಾನಿಂಗ್, ಇ-ಖಾತೆಯ ಯಥಾಪ್ರತಿ, ಕಟ್ಟಡ ನಿರ್ಮಾಣ ಭೂ ಪರಿವರ್ತನಾ ಪ್ರತಿ, ಏಕ ನಕ್ಷೆ, ಇಂಜಿನಿಯರ್ ನೀಡಿದ ಅಂದಾಜು ನಕ್ಷೆ, ಕಟ್ಟಡ ಪೂರ್ಣ ಗೊಂಡಿರುವ ಇಂಜಿನಿಯರ್ ನೀಡುವ ದೃಢೀಕೃತ ಪ್ರತಿ, ನಗರ ಪ್ರಾಧಿಕಾರದ ಅನುಮತಿ ನೀಡಿದ ಪ್ರತಿ, ವಾಸ್ತವ ಕಟ್ಟಡ ನಂಬರ್ ಪ್ರತಿ, ಮತ್ತು ಕುಂದಾಪುರ ಪುರಸಭೆ ನೀಡಿದ ಪರವಾನಿಗೆ ಪ್ರತಿ. ಈ ಮೇಲಿನ ಯಾವುದೇ ದಾಖಲೆಗಳನ್ನು ಬಹಿರಂಗ ಗೊಳಿಸದಿದ್ದಲ್ಲಿ, ಈ ಅಕ್ರಮವು ಯಾವುದೋ ಒಂದು ವ್ಯವಸ್ಥೆಗೆ ಒಳ ಪಟ್ಟಿರುತ್ತದೆ ಎಂಬ ಗಂಭೀರ ಪ್ರಶ್ನೆ ಕುಂದಾಪುರದ ಪ್ರಜ್ಞಾವಂತ ನಾಗರಿಕರಿಗೆ ಕಾಡುತ್ತದೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನ ಅಭಿಪ್ರಾಯ ವ್ಯಕ್ತಪಡಿಸಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ