“ಶಿಕ್ಷಣದ ದೇವಾಲಯ ನನ್ನ ಸರ್ಕಾರಿ ಶಾಲೆ”…..

ಶಾಲೆಗೆ ಬಂದ ಮೊದಲ ದಿನವೇ ಕಂಡೆ ಭೂಲೋಕದ ಸ್ವರ್ಗ ಕಪ್ಪುಹಲಿಗೆಯಲ್ಲಿ ಕಂಡೆ ಭವಿಷ್ಯದ ಜ್ಞಾನದ ಸನ್ಮಾರ್ಗ ಮಾತನಾಡಲಿಲ್ಲ ದೇವರು ಬಾರಿಸಿದರು ಗುಡಿಯ ಗಂಟೆ ಗುರುವೇ ದೇವರಾದರು ಬಾರಿಸಿದಾಗ ಶಾಲೆಯ ಗಂಟೆ. ನನ್ನ ಶಾಲೆ ನನ್ನ ಜೀವನದ ಒಂದು ಅತ್ಯಂತ ಮುಖ್ಯ ಭಾಗ ಅದು ನನಗೆ ಶಿಕ್ಷಣದ ಮೂಲಭೂತ ಹಾಗೂ ನೈತಿಕ ಮೌಲ್ಯಗಳನ್ನು ಕೊಟ್ಟಿದೆ. ಅನುಭವವು ಸವಿಯಲ್ಲ ಆದರೆ ನೆನಪೇ ಸವಿಯು ಎಂಬ ಮಾತಿದೆ. ಗತಿಸಿ ಹೋದ ಆ ದಿನಗಳು ಆ ದಿನಗಳಲ್ಲಿನ ಅನುಭವ ಮತ್ತು ಆ ಅನುಭವದ ಹಿಂದಿನ ಸನ್ನಿವೇಶಗಳು ಮತ್ತು ಅದರ ಸುತ್ತಮುತ್ತ ಜರುಗುವ ವಿವಿಧ ಚಟುವಟಿಕೆಗಳು ಅವುಗಳ ಕುರಿತಂತೆ ನಾವು ಮಾಡುವ ಕಲ್ಪನೆಗಳು ಮತ್ತು ಗ್ರಹಿಕೆಗಳು ಇತರರಿಂದ ಕೇಳಿಸಿಕೊಳ್ಳುವ ಪ್ರಶಂಸನೀಯ ಮಾತುಗಳು ಅಥವಾ ಕೆಣಕುವ ಬಿಚ್ಚು ನುಡಿಗಳು ಇವೆಲ್ಲರ ಅನುಭವದಿಂದ ನಾವು ಕಲಿಯುವ ಅಥವಾ ಕಲಿಯದ ಪಾಠಗಳು ನಮ್ಮ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಗಾಢವಾದ ಮತ್ತು ಮಹತ್ತರವಾದ ಪರಿಣಾಮ ಬೀರುತ್ತವೆ ಕಹಿ ಅನುಭವವನ್ನು ಮರೆತು ಸಿಹಿ ಅನುಭವವನ್ನು ಮೆಲುಕು ಹಾಕುತ್ತಾ ಬಾಳುವುದೇ ಜೀವನದ ಸಾರ್ಥಕತೆ. ಶಾಲೆಯು ನಾವು ಕಲಿಯುವ ಮತ್ತು ಬೆಳೆಯುವ ಸ್ಥಳವಾಗಿದೆ ಶಾಲೆಯು ನಾವು ನಾವೇ ಆಗಿರುವ ಮತ್ತು ಜಗತ್ತಿನಲ್ಲಿ ನಮ್ಮ ಸ್ಥಾನವನ್ನು ಕಂಡುಕೊಳ್ಳುವ ಸ್ಥಳವಾಗಿದೆ. ನನ್ನ ಶಾಲೆಯ ಬಗ್ಗೆ ಯೋಚಿಸಿದಾಗಲೆಲ್ಲ ಅದು ಶಿಕ್ಷಣದ ದೇವಾಲಯ ಎಂದು ನಾನು ಭಾವಿಸುತ್ತೇನೆ. ನನ್ನ ಶಾಲೆಯು ನನ್ನಲ್ಲಿ ಶಿಕ್ಷಣ ಮತ್ತು ಇತರ ಅಗತ್ಯ ಗುಣಗಳನ್ನು ನೀಡಿ ನನ್ನನ್ನು ಹೆಚ್ಚು ಆತ್ಮವಿಶ್ವಾಸ ಮತ್ತು ಶಕ್ತಿಯುತವಾಗಿಸಿದೆ. ನನ್ನ ಶಿಕ್ಷಣಕ್ಕೆ ನನ್ನ ಶಾಲೆಯು ಪ್ರಾಥಮಿಕವಾಗಿ ಕಾರಣವಾಗಿದೆ. ಶೈಕ್ಷಣಿಕ ದೃಷ್ಟಿಕೋನದಿಂದ ಇದು ನನ್ನ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಸವಾಲಿನ ಸಂದರ್ಭಗಳಲ್ಲಿ ಶಾಂತವಾಗಿರುವುದು ಮತ್ತು ಇತರರಿಗೆ ಸಹಾಯ ಮಾಡುವಂತೆ ಎಲ್ಲಾ ಅಗತ್ಯ ಜೀವನದ ಕೌಶಲ್ಯಗಳನ್ನು ನಾನು ಕಲಿತ ಶಾಲೆಯಿಂದ ತಿಳಿದುಕೊಂಡಿರುವ ಅಂಶಗಳು. ನಮ್ಮ ಜೀವನದಲ್ಲಿ ನಮಗೆ ಕುಟುಂಬ ಎಷ್ಟು ಮುಖ್ಯವಾಗುತ್ತದೆಯೇ ಅದರಷ್ಟೇ ಶಾಲೆಯು ಮುಖ್ಯವಾಗುತ್ತದೆ ಏಕೆಂದರೆ ಕುಟುಂಬವು ನಮಗೆ ಪ್ರೀತಿ ಕಾಳಜಿ ಮತ್ತು ಪ್ರೀತಿಯನ್ನು ನೀಡುತ್ತದೆ ಮತ್ತು ನಮ್ಮೆಲ್ಲ ಅಗತ್ಯಗಳನ್ನು ಒದಗಿಸುತ್ತದೆ ಆದರೆ ಇವೆಲ್ಲವೂ ನಮ್ಮನ್ನು ಉತ್ತಮ ಮನುಷ್ಯನನ್ನಾಗಿ ಮಾಡಲು ಮತ್ತು ಜೀವನದಲ್ಲಿ ಯಶಸ್ವಿಯಾಗಲು ಸಾಕಾಗುವುದಿಲ್ಲ. ಜೀವನದಲ್ಲಿ ಯಶಸ್ಸಿಗೆ ಶಿಕ್ಷಣ ಅಗತ್ಯ. ಈ ರೀತಿಯ ಶಿಕ್ಷಣವನ್ನು ಜೀವನದಲ್ಲಿ ಶಾಲೆಗಳು ಒದಗಿಸುತ್ತವೆ. ಶಿಕ್ಷಣವನ್ನು ಪಡೆಯುವ ಮತ್ತು ಜೀವನದ ಗುರಿಗಳತ್ತ ಪ್ರಗತಿ ಸಾಧಿಸುವ ಸಂಸ್ಥೆ ಶಾಲೆಯಾಗಿದೆ. ಶಾಲೆ ಎಂದರೆ ಶಿಸ್ತು ಶಿಕ್ಷಣ ಶಿಕ್ಷಕರು ಗೆಳೆಯರು ಮುಂತಾದ ಚಿತ್ರಣ ಕಣ್ಮುಂದೆ ಬರುತ್ತದೆ ಮಕ್ಕಳ ಸರ್ವಾoಗೀಣ ಬೆಳವಣಿಗೆಯಲ್ಲಿ ಶಾಲೆಯ ಪಾತ್ರ ಅತ್ಯಂತ ದೊಡ್ಡದು. ಪ್ರತಿಯೊಂದು ಮಕ್ಕಳಿಗೂ ತಮ್ಮ ತಮ್ಮ ಶಾಲೆಯ ಬಗ್ಗೆ ಹೆಮ್ಮೆ. ನಾನು ಕಲಿತ ಶಾಲೆಯಲ್ಲಿ ಒಳ್ಳೆಯ ಹಾಗೂ ನುರಿತ ಶಿಕ್ಷಕರಿದ್ದರು ನಮಗೆ ಅರ್ಥವಾಗುವ ಹಾಗೆ ಉದಾಹರಣೆಗಳೊಂದಿಗೆ ಪಾಠ ಮಾಡುತ್ತಿದ್ದರು ಓದುವುದರ ಜೊತೆಗೆ ರಸಪ್ರಶ್ನೆ,ಪ್ರತಿಭಾ ಕಾರಂಜಿ, ಹಾಡಿನ ಸ್ಪರ್ಧೆ, ಕ್ರೀಡೆ ಮಾತ್ರವಲ್ಲದೆ ಮಕ್ಕಳ ಕೌಶಲ್ಯಾಭಿವೃದ್ಧಿಗೂ ಕೂಡ ಹಲವು ಚಟುವಟಿಕೆಗಳನ್ನು ಹೇಳಿಕೊಡುತ್ತಿದ್ದರು. ನಮ್ಮ ಶಾಲೆಯೇ ನಮಗೆ ನೆಚ್ಚಿನ ತಾಣ. ಶಾಲೆಗೆ ಹೋಗಲು ನಮಗೆ ಹೆಮ್ಮೆ ಇರುತ್ತಿತ್ತು. ನನ್ನ ಶಿಕ್ಷಕರು ಜ್ಞಾನ ಮತ್ತು ತಾಳ್ಮೆಯ ಪ್ರತಿರೂಪದವರು. ನನ್ನ ಶಾಲೆಯ ಶಿಕ್ಷಕರ ಬಗ್ಗೆ ಹೇಳುವುದಾದರೆ ಶಾಲೆ ಒಂದು ದೇವಾಲಯ ಗುರುವೇ ಅಲ್ಲಿರುವ ಬ್ರಹ್ಮ ಕಣ್ಮುಚ್ಚಿ ಬೇಡಿಸುವಾತ ಆ ಬ್ರಹ್ಮ ಕಣ್ತೆರೆಸಿ ನಡೆಸುವಾತ ಗುರು ಬ್ರಹ್ಮ. ತಾನರಿತು, ಅರಿತು, ನುರಿತು ಏನನ್ನು ಅರಿಯದ ಮನಸುಗಳಿಗೆ ಬೆತ್ತದಿ ಬಡೆದು ಬಳಪದಿ ಬರೆದು ಅಕ್ಷರವ ಕಲಿಸುವ ಗುರು ಬ್ರಹ್ಮ. ಮಕ್ಕಳ ಮನವ ಅರಿತು ಏಳಿಗೆಯ ಪಥವ ತೋರಿಸಿ ಅಕ್ಷರ ಜ್ಞಾನವನ್ನು ನೀಡಿ ಅಂದಕಾರದ ಕತ್ತಲೆಯನ್ನು ಅಳಿಸಿದವರು ಶಿಕ್ಷಕರು. ಮನದ ಗುಡಿಯೊಳಗೆ ಗುರುವೆಂಬ ದೈವವು ಅಕ್ಷರಗಳ ದೀಪ ಹಚ್ಚಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕ ನೀಡಿ ಶಿಸ್ತು ಸಹನೆ ನಂಬಿಕೆ ಪ್ರಾಮಾಣಿಕತೆ ಎಂಬ ಜೀವನದ ಮೂಲಗಳ ಕಲಿಸಿ ನಡೆ-ನುಡಿಗಳ ಬಗೆಗೆ ತಿಳಿಸಿ ಗುರಿ ಸಾಧನೆಯ ದಾರಿಯ ಬಗ್ಗೆ ಉತ್ತಮ ಮಾರ್ಗದರ್ಶನ ನೀಡಿ ಬದುಕಿಗೆ ಶಕ್ತಿಯಾಗಿ ಜೀವಕ್ಕೆ ಉಸಿರಾಗಿ ಒಬ್ಬ ವಿದ್ಯಾರ್ಥಿಗೆ ತಂದೆಯಾಗಿ ತಾಯಿಯಾಗಿ ಗುರುವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಇರುವುದು ಒಬ್ಬ ಶಿಕ್ಷಕನಿಗೆ ಮಾತ್ರ. ಇದು ಬರೀ ಶಾಲೆ ಅಲ್ಲ ಸಂಬಂಧಗಳ ನೆಲೆ ಜೊತೆಗೆ ಕೊಂಡೊಯ್ಯುವೆವು ಶಿಕ್ಷಕರಿಂದ ಪಡೆದ ಸ್ಪೂರ್ತಿಯ ಸೆಲೆ. ಒಟ್ಟಿನಲ್ಲಿ ಇದು ನನ್ನ ಹೆಮ್ಮೆಯ ಶಾಲೆ.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ