“ತಾಯಂದಿರ ಸಭೆ” ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಶ್ರಮಶೀಲ ವ್ಯಕ್ತಿ – ಪರಶುರಾಮ ಕುಂಬಾರ.
ನಾಗಠಾಣ ಜು.05

ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹು ಮುಖ್ಯ ತನ್ನ ಮಕ್ಕಳನ್ನು ಜಗತ್ತಿಗೆ ಬೆಳಕನ್ನು ನೀಡುವ ಆದರ್ಶ ಪುರುಷರನ್ನಾಗಿ ಮಾಡುವ ಕನಸನ್ನು ನನಸನ್ನಾಗಿಸುವ ಪ್ರವೃತ್ತಿ ಪ್ರಯತ್ನ ಸದಾ ತಾಯಿಯಲ್ಲಿರ ಬೇಕು ಎಂದು ಕೆ.ಪಿ.ಎಸ್ ಪ್ರೌಢ ಶಾಲೆಯ ಇಂಗ್ಲೀಷ್ ಶಿಕ್ಷಕ ಪರಶುರಾಮ ಕುಂಬಾರ ಹೇಳಿದರು. ಶನಿವಾರ ದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ‘ತಾಯಂದಿರ ಸಭೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುಟ್ಟ ಮಕ್ಕಳು ಮಾನವ ಜನಾಂಗದ ಬೀಜಗಳು. ಅವರ ಮೃದುವಾದ ಹೃದಯಗಳಲ್ಲಿ ಸುಸಂಸ್ಕೃತಿಯ ಹಾಗೂ ಸಚ್ಚಾರಿತ್ರ್ಯದ ಬೀಜಗಳನ್ನು ಬಿತ್ತುವ ಸಂಸ್ಕಾರವನ್ನು ನೀಡಿದರೆ ಮಾನವ ಜಗತ್ತು ನಂದನ ವನವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿ ಸಂತೋಷ ಬಂಡೆ ಮಾತನಾಡಿ, ಮನೆ ಮೊದಲ ಪಾಠ ಶಾಲೆ, ತಾಯಿ ಆದರ್ಶ ಗುರುವಾಗಿ ಮಕ್ಕಳಿಗೆ ಪ್ರೀತಿ, ಸಂಸ್ಕಾರ, ಮಾರ್ಗದರ್ಶನ ನೀಡುವ ಜತೆಗೆ ಸಮರ್ಪಕ ಕುಟುಂಬ ನಿರ್ವಹಣೆ ಕೌಶಲ್ಯ ರೂಢಿಸಬೇಕು. ಮಕ್ಕಳನ್ನು ಸಮಾಜ ಮುಖಿ ಜೀವನ ಮುಖಿಯನ್ನಾಗಿಸಿ ಬೆಳೆಸಬೇಕು ಎಂದು ಹೇಳಿದರು. ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಮಾತನಾಡಿ, ‘ಪ್ರತಿಯೊಬ್ಬರ ಜೀವನದಲ್ಲಿ ತಾಯಿ ಅತ್ಯಂತ ಪ್ರಭಾವಶಾಲಿ ಮತ್ತು ಶ್ರಮಶೀಲ ವ್ಯಕ್ತಿ. ಮಕ್ಕಳ ಉಜ್ವಲ ಭವಿಷ್ಯಕ್ಕೆ ತಾಯಿ, ತಂದೆ ಮತ್ತು ಪರಿಸರ ಕಾರಣವಾಗಿದೆ’ ಎಂದರು.ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ತಾಯಂದಿರ ಪ್ರತಿ ನಿಧಿಗಳಾದ ಕಮಲಾಬಾಯಿ ಬಿರಾದಾರ, ಆಯುಷ್ ಬೆನಕನಹಳ್ಳಿ, ಕಾರ್ಯದರ್ಶಿ ಸುನಂದಾ ಹುಣಶ್ಯಾಳ ಹಾಗೂ ಶಿಕ್ಷಕರಾದ ಸಚೀನ ಅವಟಿ, ನವೀನ ಬಂಡೆನ್ನವರ, ಜಯಶ್ರೀ ಬಂಗಾರಿ, ರೇಣುಕಾ ಭಜಂತ್ರಿ, ಸಿದ್ದು ರತ್ನಾಕರ, ರಾಜಶೇಖರ ಶಿರಶ್ಯಾಡ, ಅಲ್ಲಾಭಕ್ಷ ಇನಾಮದಾರ ಸೇರಿದಂತೆ ನೂರಾರು ತಾಯಂದಿರು ಮತ್ತು ಮಕ್ಕಳು ಭಾಗವಹಿಸಿದ್ದರು. ಶಿಕ್ಷಕಿ ಶೃತಿ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ರಾಘು ಮೊಗಳ ನಿರೂಪಿಸಿದರು. ಶಿಕ್ಷಕಿ ಲಕ್ಷ್ಮೀ ಮಸೂತಿ ವಂದಿಸಿದರು ಎಂದು ವರದಿಯಾಗಿದೆ.