ಗ್ರಾಹಕರ ಕಾಮಧೇನು ಶ್ರೀ ಸಿದ್ದೇಶ್ವರ ಮೆಗಾ ಮಾರ್ಕೆಟ್ ಜುಲೈ 14 ರಂದು – ಸಿ.ಎಂ ರವರಿಂದ ಲೋಕಾರ್ಪಣೆಗೆ ಸಿದ್ದಗೊಂಡಿದೆ.

ಇಂಡಿ ಜು.06

ಒಂದು ಯೋಜಿತ ನಗರದಲ್ಲಿ ಮುಖ್ಯವಾಗಿ ಮೂರು ಭಾಗಗಳಿರುತ್ತವೆ. ವಸತಿ, ವಾಣಿಜ್ಯ ಹಾಗೂ ಕೈಗಾರಿಕೆ. ಇವು ಒಂದು ನಗರವು ಸುವ್ಯವಸ್ಥಿತವಾಗಿ ಭವಿಷ್ಯಕ್ಕೆ ತೆರೆದು ಕೊಂಡು ಬೆಳೆಯುತ್ತಿದೆ ಎಂಬುದರ ಧ್ಯೋತಕವಾಗಿರುತ್ತವೆ. ಅದರಲ್ಲೂ ಕರ್ನಾಟಕದಂತಹ ಪ್ರಗತಿಶೀಲ ರಾಜ್ಯದ ನಗರ ಪಟ್ಟಣಗಳಲ್ಲಿ ವ್ಯಾಪಾರ, ವ್ಯವಹಾರ, ಉತ್ಕೃಷ್ಟ ಮಾರುಕಟ್ಟೆ ಸೌಲಭ್ಯವುಳ್ಳ ವಾಣಿಜ್ಯ ಸಂಕೀರ್ಣಗಳಿಗೆ ಅತ್ಯಂತ ಬೇಡಿಕೆ ಇದೆ. ಏಕೆಂದರೆ ಗ್ರಾಹಕ ವ್ಯಾಪಾರದ ಅತ್ಯಂತ ಅವಶ್ಯಕವಾದ ಭಾಗ, ಗ್ರಾಹಕರ ತೃಪ್ತಿಯೇ ಉತ್ತಮ ವ್ಯಾಪಾರದ ಲಕ್ಷಣ. ಈಗಿನ ಎಲ್ಲವೂ ಖಾಸಗಿಮಯವಾದ ದಿನ ಮಾನಗಳಲ್ಲಿ ವ್ಯಾಪಾರ ಕೇಂದ್ರಗಳು, ವಾಣಿಜ್ಯ ಮಳಿಗೆಗಳು ಹೆಚ್ಚಿನವು ಖಾಸಗಿ ಒಡೆತನದಲ್ಲಿರುತ್ತವೆ ಮತ್ತು ಅವು ಕೇವಲ ಲಾಭ ಕೇಂದ್ರಿತವಾಗಿರುತ್ತವೆ. ಆದರೆ ತಾನು ಪ್ರತಿ ನಿಧಿಸುವ ಇಂಡಿ ನಗರದ ವಾಣಿಜ್ಯ ಮಳಿಗೆಯು ಅಲ್ಲಿನ ಸ್ಥಳೀಯ ಸರ್ಕಾರದ ಏಕಮಾತ್ರ ಒಡೆತನ ಹೊಂದಿರಲಿ ಮತ್ತು ಅದು ಸ್ಥಳೀಯ ಸರ್ಕಾರದಿಂದಲೇ ಪರಿಣಾಮಕಾರಿಯಾಗಿ ನಿರ್ವಹಿಸಲ್ಪಡಲಿ ಎಂಬ ಸದುದ್ದೇಶದಿಂದ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲರು ಕಂಡ ಸುಂದರ ಕನಸಿನಂತೆ ಇಂಡಿ ನಗರದ ಹೃದಯ ಭಾಗದಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸುಸಜ್ಜಿತ “ಶ್ರೀ ಸಿದ್ದೇಶ್ವರ ಮೆಗಾ ಮಾರ್ಕೆಟ್” ತಲೆ ಎತ್ತಿ ನಿಂತಿದೆ. ಈ ಮಾರ್ಕೆಟ್ ಇದೆ ಜುಲೈ 14 ರಂದು ರಾಜ್ಯದ ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ಧರಾಮಯ್ಯ ಅವರಿಂದ ಲೋಕಾರ್ಪಣೆಗೆ ನವ ವಧುವಿನಂತೆ ಸಿದ್ಧಗೊಂಡಿದೆ. ಇದು ಬರೀ ವ್ಯಾಪಾರಿ ಕೇಂದ್ರವಾಗದೇ ಇಲ್ಲಿನ ಪುರ ಸಭೆಗೆ (ಭವಿಷ್ಯದ ನಗರ ಸಭೆ) ಆದಾಯ ತಂದು ಕೊಡುವ ಕಾಮಧೇನು ಆಗುವುದರಲ್ಲಿ ಸಂದೇಹವಿಲ್ಲ. ಒಂದು ಆಸ್ತಿಯ ಸೃಷ್ಟಿಯು ಸ್ವಂತದ್ದಾಗುವದಕ್ಕೂ, ಸಾರ್ವಜನಿಕವಾಗುವದಕ್ಕೂ ಬಹಳ ವ್ಯತ್ಯಾಸವಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿ ಕೊಟ್ಟಿದ್ದಾರೆ ಇಲ್ಲಿಯ ಶಾಸಕರು, ಅವರು ತಮ್ಮ ಬೌದ್ಧಿಕತೆ ಯಿಂದ ಇಂಡಿ ನಗರದ ಜನತೆಗೆ ಶಾಸ್ವತ ಭೌತಿಕ ಆಸ್ತಿಯನ್ನು ಸೃಜಿಸಿದ್ದಾರೆ. ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಭೌತಿಕವಾಗಿ ನಮ್ಮಿಂದ ದೂರಾದ ನಂತರ ಅವರ ಹೆಸರಿನಲ್ಲಿ ಸರ್ಕಾರಿ ಒಡೆತನದಲ್ಲಿ ಸೃಜನೆಯಾಗುತ್ತಿರುವ ಎರಡನೇ ಆಸ್ತಿ ಇದು. (ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ ಮೊದಲ ನೇಯದು) ಸಂಪೂರ್ಣ ಇಲ್ಲಿನ ಸ್ಥಳೀಯ ಪುರ ಸಭೆಯ ಆಸ್ತಿಯಾಗಿರುವ ಈ ವಾಣಿಜ್ಯ ಸಂಕೀರ್ಣದ ನೆಲ ಮಾಳಿಗೆಯಲ್ಲಿ 100 ಅಂಗಡಿಗಳು, ಮೊದಲನೇ ಮಹಡಿಯಲ್ಲಿ 107 ಅಂಗಡಿಗಳು, ಎರಡನೇ ಮಹಡಿಯಲ್ಲಿ 26 ಅಂಗಡಿಗಳು ಸೇರಿದಂತೆ ಒಟ್ಟು 233 ಸುಸಜ್ಜಿತ ಅಂಗಡಿಗಳಿವೆ. ವರ್ತಕರು ಹಾಗೂ ಗ್ರಾಹಕರಿಗೆ ಅನುಕೂಲವಾಗಲು ಮಹಡಿಗಳಿಗೆ ಹತ್ತಲು ಸ್ವಯಂ ಚಾಲಿತ ಲಿಫ್ಟ್ ವ್ಯವಸ್ಥೆ ಇದೆ, ಗ್ರಾಹಕರ ವಾಹನಗಳ ನಿಲುಗಡೆಗೆ ತಳ ಅಂತಸ್ತಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ. ಖಂಡಿತ ನಮ್ಮ ಇಂಡಿ ನಗರ ಜಿಲ್ಲೆಯಾಗಲು ಇಂತಹ ಸಾರ್ವಜನಿಕ ಆದಾಯ ಸೃಷ್ಟಿಸುವ ಮೂಲಗಳು ಬೇಕು, ಇದರಿಂದ ಸೃಜನೆಯಾದ ಆದಾಯದಿಂದ ಅಭಿವೃದ್ಧಿ ಯೋಜನೆಗಳು ಹಾಗೂ ನಾಗರಿಕ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಕೊನೆಯಲ್ಲಿ ಎಲ್ಲಾ ವ್ಯವಹಾರದ ಕಾರ್ಯಾಚರಣೆಗಳನ್ನು ಮೂರು ಪದಗಳಿಗೆ ಇಳಿಸಬಹುದು. ಜನರು, ಉತ್ಪನ್ನ ಮತ್ತು ಲಾಭ” ಲೀ ಐಕೋಕಾ (ಪಾಶ್ಚಾತ್ಯ ವಿದ್ವಾಂಸ) ರವರ ನುಡಿಯಿದು. ದೈನಂದಿನ ಜನರ ಬೇಡಿಕೆ, ಸಮಸ್ಯೆಗಳನ್ನು ಪರಿಗಣಿಸಿ ಅದನ್ನು ಸಮಾಜೋತ್ಪಾದಕ, ಸಾರ್ವಜನಿಕ ಲಾಭದಾಯಕ ವ್ಯವಹಾರವಾಗಿ ಪರಿವರ್ತಿಸಿದ್ದಾರೆ ಇಲ್ಲಿನ ಶಾಸಕರು. ಇವರಂತೆ ಪ್ರತಿಯೊಬ್ಬ ಜನ ಪ್ರತಿನಿಧಿಯೂ ಸರ್ಕಾರದ ಅನುದಾನಗಳನ್ನು ಜನಾದಾಯ ಸೃಷ್ಟಿಸುವ ಸಂಸ್ಥೆಗಳ ರಚನೆಗೆ ಬಳಸಿದಾಗ ಮಾತ್ರ ಬಡತನ, ನಿರುದ್ಯೋಗ ಸಮಸ್ಯೆ ಹೇಳ ಹೆಸರಿಲ್ಲದಂತೆ ಓಡಬಹುದು. ಮತ್ತು ಸರ್ಕಾರಗಳಿಗೆ ರಾಜ ಧನದ ಮೂಲಗಳಾಗಬಹುದು. ತನ್ನ ಜನರಿಗೆ ಏನು ಬೇಕು ಎಂದು ಕೇಳಿ ನಂತರ ಅದನ್ನು ನೀಡಲು ಪ್ರಯತ್ನಿಸುವುದು ಕ್ಕಿಂತ, ಮೊದಲು ತಾವು ಅದನ್ನು ಸೃಷ್ಟಿಸ ಬೇಕು ಮತ್ತು ತನ್ನ ಜನರು ಅದರ ಸದುಪಯೋಗ ಪಡೆದು ಕೊಳ್ಳಲು ಪ್ರೇರೇಪಿಸಬೇಕು. ಈ ರೀತಿಯ ಪ್ರೋತ್ಸಾಹ ಈಗ ಇಂಡಿ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿದೆ. ಬದಲಾವಣೆಯನ್ನು ಬೆದರಿಕೆಯಾಗಿ ಅಲ್ಲ, ಅವಕಾಶವಾಗಿ ಬಳಸಿ ಕೊಳ್ಳುವ ಅವಕಾಶ ಈಗ ಇಂಡಿ ನಗರದ ಜನತೆಯ ಮೇಲಿದೆ. ಈ ವಾಣಿಜ್ಯ ಮಳಿಗೆಗಳ ಪ್ರಯೋಜನ ಪಡೆದು ತಾಲ್ಲೂಕಿನ ಜನತೆ ತಾವೂ ಉದ್ಯೋಗಸ್ಥರಾಗಿ, ಇಲ್ಲಿನ ಪುರಸಭೆಗೂ ಆದಾಯ ತಂದು ಕೊಡುವ ಮಹತ್ಕಾರ್ಯ ಮಾಡಲಿ ಎಂಬುದೇ ಶಾಸಕರ ಸದಾಶಯ. ನಾವು ದುಡ್ಡು ಖರ್ಚಾಗುವುದರ ಬಗ್ಗೆ ಮಾತನಾಡುತ್ತೇವೆ, ಆದರೆ ಗ್ರಾಹಕರು ತಮ್ಮ ಶಾಪಿಂಗ್ ಬಗ್ಗೆ ಕಾಳಜಿವಹಿಸುತ್ತಾರೆ” ಎನ್ನುತ್ತಾರೆ ಇಂಡಿ ಪಟ್ಟಣದಲ್ಲಿನ ಪಾನ್ ಬೀಡಾ ವ್ಯಾಪಾರಸ್ಥರಾಗಿರುವ ಭೀಮಾಶಂಕರ ಪ್ರಚಂಡಿ ಅವರ ಮಾತಿನಂತೆ ಭವಿಷ್ಯದಲ್ಲಿ ಗ್ರಾಹಕ ಕೇಂದ್ರಿತ ವ್ಯವಹಾರಗಳು ಈ ಶ್ರೀ ಸಿದ್ದೇಶ್ವರ ಮೆಗಾ ಮಾರ್ಕೆಟ್ ನಲ್ಲಿ ನಡೆಯಲಿ ಈ ಭಾಗದ ವರ್ತಕರ, ಗ್ರಾಹಕರ ಕೊಡು, ಕೊಳ್ಳುವ ಆಸೆ ತಣಿಸಲಿ ಎಂಬುದು ಎಲ್ಲರ ಸದಾಶಯ.

ಲೇಖನ:ಧನರಾಜ್ ಮುಜಗೊಂಡ.

ಅರಣ್ಯ ಇಲಾಖೆಯ ಅಧಿಕಾರಿ.

ಹವ್ಯಾಸಿ ಬರಹಗಾರ ಲಚ್ಯಾಣ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button