ಬೇವೂರು ಭಕ್ತರು ಹಾಗೂ – ಗ್ವಾದಲೆಪ್ಪ ದೇವರು.

ಬೇವೂರ ಜು.15

ಬಾಗಲಕೋಟೆ ತಾಲೂಕಿನ ಬೇವೂರ ಗ್ರಾಮ ಹಲವು ವೈಶಿಷ್ಟ್ಯತೆಗಳನ್ನು ತನ್ನ ಮಡಿಲಲ್ಲಿ ಹೊಂದಿದ ಸ್ಥಳವಾಗಿದೆ. ಚಾಲುಕ್ಯರಾದಿಯಾಗಿ ವಿಜಯನಗರ ಪೂರ್ವ, ವಿಜಯನಗರೋತ್ತರ ಕಾಲಘಟ್ಟದ ಅಪರೂಪದ ಕಲಾ ಶ್ರೀಮಂತಿಕೆ ಹೊಂದಿದ ಅನೇಕ ದೇವಾಲಯಗಳು, ಸ್ಮಾರಕಗಳು, ವೀರಗಲ್ಲುಗಳು, ಮೂರ್ತಿ ಶಿಲ್ಪಗಳು ಇಲ್ಲಿ ಕಂಡು ಬರುತ್ತವೆ.

ಬೇವೂರು ಗ್ರಾಮ ಹಲವು ಐತಿಹಾಸಿಕ ಸಂಗತಿಗಳನ್ನು ತನ್ನ ಗರ್ಭದಲ್ಲಿ ಇರಿಸಿ ಕೊಂಡಿದೆ ಎಂಬ ನೆಲೆಯಲ್ಲಿ ಚಾರಿತ್ರಿಕ ಅಂಶಗಳನ್ನು ಗುರುತಿಸುವಾಗ ಈ ಗ್ರಾಮದ ಕೆಲವು ದೇವಾಲಯಗಳ ಬಗ್ಗೆ ಇರಲಾದ ನಂಬಿಕೆ, ಐತಿಹ್ಯ, ಪವಾಡ ಲೀಲೆಗಳ ನೆಲೆಯ ಕಥನಗಳು, ವಿಶಿಷ್ಟ ಪೂರ್ಣ ಆಚರಣೆಗಳು ಬೆರಗು ಮೂಡಿಸುವಂತಹದ್ದಾಗಿವೆ.

ಸ್ಥಳೀಯ ಜನ ಸಮುದಾಯ ಭಕ್ತ ಪರಂಪರೆ ಯಿಂದ ಗ್ವಾದಲೆಪ್ಪನ ಗುಡಿ ಎಂದು ಕರೆಯಿಸಿ ಕೊಳ್ಳುವ ಧಾರ್ಮಿಕ ಹಿನ್ನಲೆಯ ಮಹತ್ವದ ಆಚರಣೆ ನಂಬಿಕೆಗಳನ್ನು ಹೊಂದಿರುವ ಗ್ವಾದಲೆಪ್ಪನ ಬಗ್ಗೆ ಅನೇಕ ಮಹತ್ವದ ಸಂಗತಿಗಳನ್ನು ಗುರುತಿಸುತ್ತೇವೆ. ಬೇವೂರು ಭಕ್ತರು ಹಾಗೂ ಗ್ವಾದಲೆಪ್ಪ ದೇವರ ಬಗ್ಗೆ ಚಾರಿತ್ರಿಕ ಸಾಂಸ್ಕೃತಿಕ ನೆಲೆಯ ಅವಲೋಕನ ಮಾಡುವುದು ಅವಶ್ಯಕ ಎನಿಸುತ್ತದೆ.

ಗ್ವಾದಲೆಪ್ಪನ ಗುಡಿ ಇರುವದೆಲ್ಲಿ? :

ಬೇವೂರ ಗ್ರಾಮದ ಪೂರ್ವಕ್ಕೆ ದೇವಲಾಪೂರ ರಸ್ತೆಯ ಬಲ ಭಾಗಕ್ಕೆ ಈ ಹಳೆಯ ದೇವಾಲಯ ಇಡಲಾಗಿದೆ. ಪ್ರಸ್ತುತ ಮೂಲ ದೇವಾಲಯವನ್ನು ಸ್ಥಳೀಯ ಭಕ್ತ ವೃಂದ ಕಮೀಟಿಯವರು ಜೀರ್ಣೋದ್ಧಾರ ಮಾಡುತಿದ್ದು ನೂತನ ದೇವಾಲಯ ನಿರ್ಮಾಣದ ಹಂತದಲ್ಲಿದೆ. ಈ ಗುಡಿಯ ಮುಂಭಾಗದಲ್ಲಿ ರುದ್ರಭೂಮಿ ಇಡಲಾಗಿದೆ. ಮೂಲ ಗುಡಿಯ ಮುಂಭಾಗದಲ್ಲಿ ಮಾಲ ಗಂಭ ಇಡಲಾಗಿದ್ದು ಸುಣ್ಣವನ್ನು ಹಚ್ಚಿರುವುದನ್ನು ಕಾಣುತ್ತೇವೆ. ಈ ಕಂಭದ ಸುತ್ತ ಮುತ್ತಲಿನಲ್ಲಿ ಕೆಲವು ಅಪರೂಪದ ಶಿಲ್ಪ, ಪ್ರತಿಮೆಗಳನ್ನು ಕಾಣುತ್ತೇವೆ. ಇದರಲ್ಲಿನ ವೀರ ಸಹಿತ ಸತಿಗಲ್ಲು ಇತಿಹಾಸ ಆಸಕ್ತರ ಗಮನ ಸೆಳೆಯುತ್ತದೆ. ಜೋಡಿ ನಾಗಶಿಲ್ಪ ಕಲ್ಲು, ಆಂಜನೇಯ ಮೂರ್ತಿ ಇರುವುದನ್ನು ಗಮನಿಸುತ್ತೇವೆ. ದೇವಾಲಯದ ವಿವಿಧ ಭಾಗಗಳಿಗೆ ಸಂಬಂಧಿಸಿದ ಬಿಡಿ ಭಾಗಗಳನ್ನು ಗಮನಿಸುವಾಗ ಅಂದಾಜು ೧೪-೧೫ ನೇ. ಶತಮಾನದ ನಂತರದಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದೆ ಎಂದು ತಿಳಿಯುತ್ತೇವೆ.

ಗ್ವಾದಲೆಪ್ಪ ಮೂರ್ತಿಯ ಕುರಿತು :-

ಗ್ವಾದಲೆಪ್ಪ ದೇವರ ಮೂರ್ತಿ ಕಪ್ಪು ಶಿಲೆಯಲ್ಲಿ ರಚನೆ ಗೊಂಡಿದೆ. ಏಕ ವ್ಯಕ್ತಿಯ ಮೂರ್ತಿ, ಶಿಲಾ ಪ್ರಭಾವಳಿಗೆ ಹೊಂದಿ ಕೊಂಡಂತೆ ರಚನೆ ಗೊಂಡಿದ್ದು ನೋಡುಗರಿಗೆ ಅರ್ಧ ಲಿಂಗಾಕೃತಿಯಲ್ಲಿ ಶಿಲ್ಪ ಮೂಡಿ ಬಂದಂತೆ ತೋರುತ್ತದೆ. ಮೂಲ ಶಿಲ್ಪಕ್ಕೆ ಇತ್ತೀಚೀನ ಅವಧಿಯಲ್ಲಿ ಕಪ್ಪು ಪೆಂಟ್ ಹಚ್ಚಿದ್ದು ಗಮನಕ್ಕೆ ಬರಲಾಗಿ ಸಂಶೋಧಕರಿಗೆ ಇತಿಹಾಸಕಾರರಿಗೆ ಅಧ್ಯಯನಕ್ಕೆ ಅಡಚಣೆ ಎನಿಸಿದೆ. ಮೂರ್ತಿಯು ನಿಂತಿರುವ ಭಂಗಿಯಲ್ಲಿದ್ದು ಬಲ ಭಾಗದಲ್ಲಿ ಬೆತ್ತ ಹಾಗೂ ಕಮಂಡಲ ಕಾಣುತ್ತೇವೆ. ಸ್ಥಳೀಕರು ಗೋಪಾಳ ಪುಟ್ಟಿ ಎಂದು ಕಮಂಡಲಕ್ಕೆ ಕರೆಯುವರು. ಅಭಯ ಹಸ್ತದ ಈ ಶಿಲ್ಪವು ಮುಡಿಯನ್ನು ಕಟ್ಟಿರುವುದನ್ನು ಕಾಣುತ್ತೇವೆ. ಶಿಲ್ಪಕ್ಕೆ ಹೊಂದಿ ಕೊಂಡಂತೆ ಇತ್ತಿಚೀಗೆ ಗ್ರಾನೈಟ್ ಕಲ್ಲು ಜೋಡಿಸುರುವುದನ್ನು ಗಮನಿಸುವಾಗ ಕೆಳಭಾಗ ಈ ನವೀಕೃತ ಗ್ರಾನೈಟ್ ನಲ್ಲಿ ಸೇರ್ಪಡೆ ಯಾಗಿದ್ದು ಕೆಳಭಾಗದ ಅಪರೂಪದ ರಚನೆ ಕಾಣದಂತಾಗಿದೆ. ಮೂರ್ತಿಯ ರೂಪವು ಶಾಂತ ಭಂಗಿಯಲ್ಲಿರುವದನ್ನ ಕಾಣುತ್ತೇವೆ. ಬೆಳ್ಳಿಯ ಕಣ್ಣು ಬೊಟ್ಟುಗಳ ಅಳವಡಿಕೆ ಇತ್ತಿಚೀನ ವರ್ಷಗಳಲ್ಲಿ ಮಾಡಿರುತ್ತಾರೆ.

ಕೊರಳಲ್ಲಿ ಲಿಂಗ :-

ಗ್ವಾದಲೆಪ್ಪ ದೇವರ ಮೂರ್ತಿಯ ಮೇಲೆ ಲಿಂಗವನ್ನು ಕೊರಳಲ್ಲಿ ಕಟ್ಟಿರುವದನ್ನು ಗುರುತಿಸುತ್ತೇವೆ. ಕಟ್ಟಿದ ಲಿಂಗವು ಸ್ಪಷ್ಟವಾಗಿ ಶಿಲ್ಪದ ಎದೆಯ ಭಾಗದಲ್ಲಿ ಕಂಡು ಬರುತ್ತದೆ. ಕರಡಿಗಿ ಗುಂಡ ಗಡಗಿ ಯಾಗಿರದೆ ವಸ್ತ್ರದಲ್ಲಿ ಕಟ್ಟಿದ ಲಿಂಗವನ್ನು ಗುರುತಿಸುತ್ತೇವೆ. ಲಿಂಗವನ್ನು ಗುರುತಿಸುವಾಗ ೧೨ ನೇ. ಶತಮಾನದ ನಂತರದ ಸಾಧಕ ಮಹನೀಯರ, ತಪಸ್ವಿಗಳ, ಈ ಭಾಗದಲ್ಲಿ ಧಾರ್ಮಿಕ ಸಂಸ್ಕಾರ ಮೂಡಿಸಿದ ಜ್ಞಾನ ವೃದ್ಧರ ಮೂರ್ತಿ ಇದಾಗಿರ ಬಹುದೆಂದು ತಿಳಿಯುತ್ತೇವೆ. ಶರಣ ಸಂಸ್ಕೃತಿಯ ನೆಲೆಯಲ್ಲಿ ಈ ಮೂರ್ತಿಯು ಅಧ್ಯಯ ನಾಸಕ್ತರ ಗಮನ ಸೆಳೆಯುತ್ತದೆ.

ಎತ್ತುಗಳನ್ನು ಕಟ್ಟುವ ಗ್ವಾದಲಿ :-

ಉತ್ತರ ಕರ್ನಾಟಕದಲ್ಲಿ ದನಕರುಗಳನ್ನು ಕಟ್ಟುವ ಜಾಗವನ್ನು ಗ್ವಾದಲಿ, ಇದು ದನ ಕರುಗಳಿಗೆ ಮೇವು ಹಾಕುವ ಜಾಗ ಕಟ್ಟೆಯಾಗಿರುತ್ತದೆ. ೨,೪,೮,೧೨,೧೬ ಹೀಗೆ ಸಾಕಷ್ಟು ಸಂಖ್ಯಾ ಮೀತಿಯ ಗ್ವಾದಲಿಗಳ ಬಳಕೆ ಒಕ್ಕಲುತನ ಸಂಸ್ಕೃತಿಯ ಭಾಗವಾಗಿತ್ತು. ಸ್ಥಳೀಯರ ಪೈಕಿ ಕೆಲವರು ಹೇಳುವಂತೆ ಎತ್ತುಗಳನ್ನು ಕಟ್ಟುವ ಗ್ವಾದಲಿಯಲ್ಲಿ ಈ ಮೂರ್ತಿ ಉದ್ಬವ ಗೊಂಡ ಕಾರಣ ಗ್ವಾದಲೆಪ್ಪ, ಗ್ವಾದಲೆಪ್ಪ ಎಂದು ಕರೆಯುತ್ತಾರೆ. ಈ ಭಾಗದ ಹಳ್ಳಿಗಳಲ್ಲಿ ದನ ಕಟ್ಟುವ ಗೋದಲಿಗೆ ಹೊಂದಿ ಕೊಂಡಂತೆ ಭರಮಪ್ಪನ ಕಲ್ಲು, ಲಕ್ಷ್ಮೀ ಹೆಸರಿನ ಕಲ್ಲು ಗ್ವಾದಲಿ ಸಮೀಪದ ಮಾಡ ಕಿಟಕಿಯಲ್ಲಿ ಪೂಜೆ ಗೊಳ್ಳುವುದನ್ನು ಕಾಣುತ್ತೇವೆ. ಒಂದು ತಾರ್ಕಿಕ ನೆಲೆಯ ಪ್ರಕಾರ ಗ್ವಾದಲಿ ಸ್ಥಳಕ್ಕೂ ಈ ಮೂರ್ತಿಗೂ ಸಂಬಂಧ ಇದ್ದಿರುವುದನ್ನು ಇನ್ನಷ್ಟು ಚರ್ಚಿತ ನೆಲೆಯಲ್ಲಿ ತಿಳಿಯುವ ಅಗತ್ಯತೆ ಇರಲಾಗಿದೆ. ಕೃಷಿ ಸಂಸ್ಕೃತಿಯಲ್ಲಿ ಎತ್ತುಗಳ ಕಟ್ಟುವ ಗ್ವಾದಲಿಗೆ ಪೂಜ್ಯಣೀಯ ಸ್ಥಾನ ಹಿಂದಿನಿಂದಲೂ ಇಡಲಾಗಿದೆ.

ಗೊಲ್ಲರ ಮನೆತನ ದವರ ಪೂಜಾರಿಕೆ:-

ಬೇವೂರು ಗ್ರಾಮದಲ್ಲಿ ಕ್ಷೇತ್ರ ಕಾರ್ಯ ಕೈಗೊಂಡಾಗ ಈ ಗುಡಿಯ ಪೂಜಾರಿಕೆ ಇರುವುದು ಗೊಲ್ಲರ ಎಂಬ ಪರಿವಾರದ ವರಿಗೆ ಎಂದು ತಿಳಿದು ಬಂದಿದೆ. ಬಹುತೇಕ ಕೆಲವು ಊರುಗಳಲ್ಲಿ ಈ ಸಮುದಾಯದವರಿಗೆ ಊರಹೊರಗಿನ ಬೇರೆ ಬೇರೆ ದೇವರುಗಳ ಪೂಜಾರಿಕೆ ಇದ್ದಿರುವುದನ್ನು ಗಮನಿಸುತ್ತೇವೆ. ಪ್ರಸ್ತುತ ವೆಂಕಪ್ಪ ಗೊಲ್ಲರ ಎಂಬುವರು ಇದರ ಪೂಜಾದಿ ಕಾರ್ಯಗಳನ್ನು ಮುಂದುವರೆಸಿಕೊಂಡುಬರುತ್ತಿದ್ದಾರೆ. ಜಾತ್ರಾ ಸಂದರ್ಭದಲ್ಲಿ ವಿಶೇಷ ಪೂಜೆ ನೇರವೇರುತ್ತದೆ. ಎಲೆಪೂಜೆಯ ಆಚರಣೆ ಈ ಗ್ವಾದಲೆಪ್ಪ ದೇವರಿಗೆ ಇರಲಾಗಿದೆ ಎಂದು ಸ್ಥಳಿಯರು ಹೇಳುತ್ತಾರೆ. ಗ್ರಾಮದ ಸಮುದಾಯಗಳ ಸಮೀಕ್ಷೆ ಪ್ರಕಾರ ಗೊಲ್ಲರ ಮನೆತನಗಳು ಕಡಿಮೆ ಇರಲಾಗಿದೆ. ಈ ಸಮೂಹದವರ ಧಾರ್ಮಿಕ ನಿಷ್ಠೆ ತಲೆಮಾರಿನಿಂದ ನಡೆದು ಕೊಂಡು ಬಂದ ಸಂಪ್ರದಾಯಗಳನ್ನು ಪಾಲಿಸುತ್ತಿರುವ ಅವರ ಸೇವಾ ಮನೋಭಾವಕ್ಕೆ ಪ್ರಶಂಸಿಸ ಬೇಕಾಗುತ್ತದೆ.

ಗಂಗಾ ಮತಸ್ಥರ ಅಂಬಿಗರ ಸಮಾಜದವರ ಪಾರಂಪರಿಕ ಒಡನಾಟ:-

ಬೇವೂರ ಗ್ರಾಮದ ಅಂಬಿಗರ ಸಮುದಾಯ ಬಾರಕೇರ ಸಮೂದಾಯದವರು ತಲೆ ತಲಾಂತರಗಳಿಂದಲೂ ಈ ಗ್ವಾದಲೆಪ್ಪ ದೇವರನ್ನು ಕುಲ ದೇವರೆಂದು ತಿಳಿದು ಪೂಜೆ ಪುನಸ್ಕಾರ ಹರಕೆಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಬೇವೂರಿನ ವಿಠಲ್ ಬಸಪ್ಪ ಬಾರಕೇರ ಎಂಬುವರನ್ನು ಈ ಗುಡಿಯ ಕುರಿತು ಮಾಹಿತಿ ಪಡೆಯಲು ಸಂಪರ್ಕಿಸಿದಾಗ ಅನೇಕ ವಿಷಯಗಳು ಗಮನಕ್ಕೆ ಬಂದವು. ಇವರೂ ಕೂಡಾ ಹೇಳುವಂತೆ ಹಿಂದಿನ ಕಾಲದಲ್ಲಿ ಬೇವೂರ ಗ್ರಾಮದಿಂದ ಸಂತೆಗೆ ಒಯ್ಯುವ, ತರಲಾಗುವ ದನ ಕರುಗಳನ್ನು ಎತ್ತುಗಳನ್ನು ಕಟ್ಟುವ ಗ್ವಾದಲಿಯಲ್ಲಿ ಈ ಮೂರ್ತಿ ಸ್ವಯಂ ಉದ್ಬವಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಬಹುತೇಕ ಇವರ ಹೇಳಿಕೆಯಂತೆ ಉದ್ಬವ ರೂಪದ ಲಿಂಗ ಗುಂಡುಕಲ್ಲು ಆರಂಭದಲ್ಲಿ ಇರಲಾಗಿದ್ದು ನಂತರದಲ್ಲಿ ಈ ಗ್ವಾದಲೆಪ್ಪ ಮೂರ್ತಿ ಪ್ರತಿಷ್ಠಾಪನೆ ಗೊಂಡಿರುವ ಸಾಧ್ಯತೆಗಳು ಕೂಡಾ ಇರಲಾಗಿವೆ. ಬಸಪ್ಪ ಗೋವಿಂದಪ್ಪ ಬಾರಕೇರ ಎಂಬುವವರ ಮನೆಯಲ್ಲಿ ಗೋಪಾಳ ಹಾಗೂ ಬೆತ್ತ ಇರುವುದನ್ನು ಕಾಣುತ್ತೇವೆ. ಪ್ರತಿ ಶನಿವಾರ ಇವರೂ ಕೂಡಾ ಇಲ್ಲಿಗೆ ಭೇಟಿ ನೀಡಿ ಪೂಜೆ ಭಕ್ತಿ ಸಲ್ಲಿಸುತ್ತಾರೆ.ಗೋಪಾಳಪುಟ್ಟಿಯಲ್ಲಿ ರೈತರು ಬೆಳೆದ ದವಸ ಧಾನ್ಯಗಳನ್ನು ದಾನವಾಗಿ ಕೊಡುವ ಪದ್ದತಿ ಇಡಲಾಗಿದೆ. ಈ ಗೋಪಾಳದಲ್ಲಿನ ಜಲವನ್ನು ಹಿಂದೆ ಅನೇಕ ಕಾರ್ಯಗಳಿಗೆ ಬಳಸುತ್ತಿದ್ದರು. ರೋಗ ರುಜಿನಗಳು ಪ್ರೇತ ಬಾಧೆಗಳು ದೂರವಾಗುತ್ತಿದ್ದವೆಂಬ ಪ್ರತೀತಿ ಈ ಗೋಪಾಳ ಪುಟ್ಟಿಗೆ ಸಂಬಧಿಸಿದಂತೆ ಇಡಲಾಗಿದೆ. ವಿಠಲ್ ಬಾರಕೇರ ಅವರು ಹೇಳುವಂತೆ ಅನೇಕ ಗಂಗಾಮತಸ್ಥ ಕುಟುಂಬದವರಿಗೆ ಗ್ವಾದಲೆಪ್ಪ ಎಂದು ನಾಮಕರಣ ಮಾಡಿದ್ದರಿಂದ ಈ ಹೆಸರಿನ ಅನೇಕರು ಈ ಭಾಗದಲ್ಲಿ ಇರುವರೆಂದು ತಿಳಿಸಿದ್ದಾರೆ. ಇತ್ತೀಚಿಗೆ ದೇವಾಲಯದ ಕಮೀಟಿ ಪುನರ್ ನಿರ್ಮಾಣ ಜಾತ್ರೆ ಮುಂತಾದ ಕಾರ್ಯಗಳನ್ನು ನಡೆಸುವಾಗ ಈ ಸಮೂದಾಯದವರು ಸಹ ತಮ್ಮ ಕುಲದೈವ ಎಂದು ಆರಾಧಿಸುವ ಗ್ವಾದಲೆಪ್ಪನ ಗುಡಿಯ ಧಾರ್ಮಿಕ ಕಾರ್ಯಗಳಲ್ಲಿ ಸರ್ವ ಜನಾಂಗದವ ರೊಟ್ಟಿಗೆ ಸಾಮರಸ್ಯ ಸಂಹಿಷ್ಣುತಾ ಭಾವನೆಯಿಂದ ಭಾಗಿಯಾಗುತ್ತಾ ಬಂದಿರುವುದನ್ನು ಕಾಣುತ್ತೇವೆ.

ಉಡುಪಿರಾವ್ ಕುಲಕರ್ಣಿಯವರ ಅಭಿಪ್ರಾಯ:-

ಮೂಲತಃ ಬೇವೂರಿನವರಾದ ನಿವೃತ್ತ ಶಿಕ್ಷಕರು, ಹಿರಿಯ ಸಾಹಿತಿಗಳು ಚಿತ್ರ ಕಲಾವಿದರಾದ ಯು.ಜೆ ಕುಲಕರ್ಣಿಯವರು ಈ ಗ್ವಾದಲೆಪ್ಪ ಗುಡಿಯ ಬಗ್ಗೆ ಒಂದಷ್ಟು ಚಾರಿತ್ರಿಕ ಐತಿಹ್ಯಗಳ ನೆಲೆಯ ಅಂಶಗಳನ್ನು ವ್ಯಕ್ತಪಡಿಸುತ್ತಾ ಈ ಬೇವೂರು ಬೇಹುಗಾರಿಕೆ ಎಂಬ ಹೆಸರಿನ ನೆಲೆಯಲ್ಲಿ ಇಡಲಾಗಿದ್ದು ಈ ಗ್ರಾಮದಲ್ಲಿ ಬೇಡ ಸಮುದಾಯದ ದೇಸ್ಗತಿ ಪರಂಪರೆ ಇಡಲಾಗಿದ್ದು ವಿಜಯನಗರ ಅರಸ ರೊಟ್ಟಿಗೆ ಉತ್ತಮ ಒಡನಾಟ ಸಂಬಂಧ ಹೊಂದಿದ್ದರು. ಈ ಗ್ರಾಮದಲ್ಲಿ ಪಡಗೇರಿ ಎಂಬ ಓಣಿ ಇಡಲಾಗಿದೆ. ಪಡೆ ಎಂದರೆ ಸೇನಾ ಸಮೂಹ ಎಂಬರ್ಥ ಬರುತ್ತದೆ. ಬೇವೂರಿನ ಪೂರ್ವಕ್ಕೆ ದೇವಲಾಪೂರ ರಸ್ತೆಗೆ ಹೊಂದಿ ಕೊಂಡಂತೆ ಹಿಂದಿನ ಕಾಲದಲ್ಲಿ ದಂಡಿನ ದಾರಿ ಎಂಬ ಹಾದಿ ಇಡಲಾಗಿದೆ. ಹಿಂದಿನ ಕಾಲದಲ್ಲಿ ಸೈನ್ಯ ಇಲ್ಲಿ ಬೀಡು ಬಿಟ್ಟಿತ್ತು. ಈ ಹಾದಿಗೆ ಸಮೀಪದಲ್ಲಿ ಗ್ವಾದಲೆಪ್ಪ ಗುಡಿ ಇದ್ದು ಗ್ವಾದಲೆಪ್ಪ ಎಂದರೆ ಅನ್ನದ ಜಾಗ ಸೈನಿಕರಿಗೆ, ದನ ಕರುಗಳಿಗೆ ಆಹಾರ ಒದಗಿಸುವ ಸ್ಥಳ ವಸತಿ ಇರುವ ಜನರಿಗೆ ಅನ್ನ ಊಟದ ವ್ಯವಸ್ಥೆ ಒದಗಿಸುವ ಜಾಗ ಇಲ್ಲಿ ಇರುವ ದೇವರಿಗೆ ಗ್ವಾದಲೆಪ್ಪ ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಉತ್ತರ ಕರ್ನಾಟಕದ ಹಿರಿಯರ ವಾಡಿಕೆ ಮಾತಿನಂತೆ ಒಳ್ಳೆಯ ಸುಸಜ್ಜಿತ ಕುಟುಂಬಗಳಿಗೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟರೆ ಉಡಲು ಉಣ್ಣಲು ಅನೂಕೂಲ ಮನೆತನಕ್ಕೆ ಮಗಳನ್ನು ಕೊಟ್ಟಿರಿ ಎಂಬ ಮಾತು ಹೇಳುವಾಗ ಮಗಳನ್ನು “ಅನ್ನ ಇದ್ದ ಗ್ವಾದಲಿಗೆ ಹೋಗಿಸಿದಿರಿ” ನೆಮ್ಮದಿಯಿಂದ ಇರುತ್ತಾಳೆ ಎಂಬ ಮಾತು ಸಾಂಧರ್ಭಿಕವಾಗಿ ಅವಲೋಕಿಸಲೆ ಬೇಕಾಗುತ್ತದೆ. ಜ್ಞಾನ ವೃದ್ಧರು ವಯೋ ವೃದ್ಧರು ಆದ ಉಡುಪಿರಾವ್ ಅವರು ಬೇವೂರಿನ ಒಡನಾಟದ ನೆಲೆಯಲ್ಲಿ ತಮ್ಮ ಹಿರಿಯರಿಂದ ತಿಳಿದುಕೊಂಡ ಮಾಹಿತಿ ನೆಲೆಯಲ್ಲಿ ತಿಳಿಸಲಾದ ಅಭಿಪ್ರಾಯಗಳು ಈ ದೇವಾಲಯ ವಿಜಯನಗರ ಅರಸರ ಸಮಕಾಲೀನ ಅವಧಿಯಲ್ಲಿ ನಿರ್ಮಾಣ ಗೊಂಡ ಬಗ್ಗೆ, ಬೀಡು ಬಿಟ್ಟ ಸೈನಕ್ಕೆ ಅನ್ನ ಆಹಾರಾದಿ ಅನೂಕೂಲವನ್ನು ಬೇವೂರಲ್ಲಿ ಸ್ಥಳೀಯ ದೇಸ್ಗತಿ ಆಡಳಿತದವರು ಮಾಡುತ್ತಿದ್ದ ಕುರಿತು ಸಂಗತಿಗಳು ತಿಳಿದು ಬರುತ್ತವೆ. ಈ ಬಗೆಯ ಅಂಶಗಳನ್ನು ಶ್ರೀಯುತರು ಬೇವೂರಿನ ಐತಿಹಾಸಿಕ ಸಂಗತಿಗಳನ್ನು ಖಾಸಗಿ ಚಾನೆಲ್ಗೆ ಅಭಿಪ್ರಾಯ ಹಂಚಿ ಕೊಳ್ಳುವಾಗ ಕೆಲವು ಪೂರಕ ಅಂಶಗಳನ್ನು ತಿಳಿಸಿರುವುದನ್ನು ಕೂಡಾ ಗಮನಿಸುತ್ತೇವೆ.

ಸಂಶೋಧಕರಾದ ಡಾ, ರೇವಣಸಿದ್ದಪ್ಪ ಎಸ್ ಅವರ ವಿಚಾರಗಳು :

ಸಾಕಷ್ಟು ಸಂಶೋಧನಾ ಲೇಖನಗಳ ಮೂಲಕ ಪರಿಚಿತರಾಗಿರುವ ಚಿತ್ರದುರ್ಗದ ಸರ್ಕಾರಿ ಕಲಾ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಪಕರಾದ ಡಾ, ರೇವಣಶಿದ್ದಪ್ಪ ಅವರು ಗ್ವಾದಲೆಪ್ಪ ಮೂರ್ತಿಯ ಬಗ್ಗೆ ತಮ್ಮ ಸಂಶೋಧನಾ ನೆಲೆಯ ಗ್ರಹಿಕೆ ಅನುಭವದ ನೆಲೆಯಲ್ಲಿ ಹಂಚಿಕೊಂಡ ಸಂಗತಿಗಳು ಈ ಮೂರ್ತಿ ಒಬ್ಬ ಸಾಧಕ ಪೂಜ್ಯರ ಮೂರ್ತಿ ಯಾಗಿದೆ. ಕಮಂಡಲ, ಬೆತ್ತ ಇವರು ಧಾರ್ಮಿಕ ಹಿನ್ನಲೆಯ ವ್ಯಕ್ತಿ ಎಂದು ತಿಳಿಸುತ್ತದೆ. ಮೂರ್ತಿಗೆ ಇತ್ತಿಚೀಗೆ ಕಪ್ಪು ಪೆಂಟ್ ಬಳಸಿದ್ದರಿಂದ ಕಾಲಘಟ್ಟ ನಿಖರವಾಗಿ ಹೇಳಲು ಬರುವುದಿಲ್ಲ ವಾದರು ರಚನೆ ಹಿಂಬಾಗದ ಪ್ರಭಾವಳಿ ಗಮನಿಸಿ ವಿಜಯನಗರ ಅಥವಾ ವಿಜನಗರೋತ್ತರ ಕಾಲದ ಶಿಲ್ಪ ಇದಾಗಿದೆ. ಸ್ಥಳಿಯ ಶಿಲ್ಪಿಯ ಕಲಾ ಅನುಭವ ಇಲ್ಲಿ ಮೂಡಿ ಬಂದಿದೆ. ಉದ್ಬವ ಮೂರ್ತಿ ಎಂದು ಸ್ಥಳೀಯರು ನಂಬಿದ್ದಾರೆ ಯಾದರೂ ಸಹ ಶಿಲ್ಪಿಯ ಕರ ಕೌಶಲ್ಯ ಶಿಲ್ಪಶಾಸ್ತ್ರದ ಪ್ರಭಾವ ಅಚ್ಚಳಿಯದೆ ಉಳಿದಿದ್ದು ಮಾನವ ನಿರ್ಮಿತ ಶಿಲ್ಪ ಇದೆಂದು ಹೇಳುತ್ತಾರೆ. ಬಹುತೇಕ ಈ ಮೂರ್ತಿ ಇರುವ ಜಾಗದಲ್ಲಿ ಉದ್ಬವ ಆರಾಧನಾ ಕುರುಹುಗಳು ಹಿಂದೆ ಇಧ್ದಿರುವದರಿಂದ ಸ್ಥಳೀಯರು ಉದ್ಬವಮೂರ್ತಿ ಎಂದು ಕಂಠಸ್ಥ ಸಂಪ್ರದಾಯದಲ್ಲಿ ಹೇಳಿಕೊಂಡು ಬಂದಿದ್ದಾರೆ ಎನ್ನುತ್ತಾರೆ. ಗ್ವಾದಲೆಪ್ಪ ಗುಡಿಯ ಮುಂಬಾಗದ ಶಿಲ್ಪಗಳಲ್ಲಿ ಇಬ್ಬರೂ ಪತ್ನಿಯರು ವೀರ ಸಹಿತ ಸತಿ ಹೊಂದುವ ಕಲ್ಲು ಇದ್ದಿದನ್ನು ಗುರುತಿಸುತ್ತಾ ಇತರೆ ಶಿಲ್ಪಗಳನ್ನು ಗುರುತಿಸಿ ಇದು ಅಂದಾಜು ೬೦೦ ರಿಂದ ೮೦೦ ವರ್ಷಗಳಷ್ಟು ಹಳೆಯ ದೇವಾಲಯ ಆಗಿರುವ ಸಾಧ್ಯತೆ ಇದೆ ಎನ್ನುತ್ತಾರೆ. ಶ್ರೀಯುತರು ಗೋಲ್ಲಾಳೇಶ್ವರ ಬಗ್ಗೆ ಅಧ್ಯಯನ ಕೈಗೊಂಡು ಕೆಲವು ಮಾಹಿತಿ ಸಂಗ್ರಹಿಸಿದ ನೆಲೆಯಲ್ಲಿ ಗೊಲ್ಲಾಳೇಶ್ವರ ಶರಣರ ಹೆಸರು ಅಪಭ್ರಂಶವಾಗಿ ಗ್ವಾದಲೆಪ್ಪ ಎಂಬ ಹೆಸರು ಬಳಕೆಯಾಗಿರುವ ಸಾಧ್ಯತೆ ಇದ್ದು ಇನ್ನಷ್ಟು ಅಧ್ಯಯನದ ನೆಲೆಯಲ್ಲಿ ಸ್ಪಷ್ಟತೆ ಒದಗಿಸುವ ಕಾರ್ಯ ಈ ಭಾಗದ ಅಧ್ಯಯನಕಾರರು ಮಾಡ ಬೇಕೆನ್ನುತ್ತಾರೆ. ಕೊರಳ ಲಿಂಗ ಶರಣ ಸಂಸ್ಕೃತಿಯ ಸಾಧಕ ಪೂಜ್ಯರದ್ದೆ ಎಂದು ಅರಿಯಲು ನೆರವಾಗಿದೆ ಎನ್ನುತ್ತಾರೆ. ಈ ಭಾಗದ ಅಪರೂಪದ ಈ ಶಿಲ್ಪ ಸೇರಿದಂತೆ ಈ ಗುಡಿಯ ಆವರಣದಲ್ಲಿನ ಐತಿಹಾಸಿಕ ಎಲ್ಲಾ ಕುರುಹಗಳ ಸಂರಕ್ಷಣೆಗೆ ಸ್ಥಳೀಯರು ಆಸಕ್ತಿವಹಿಸ ಬೇಕೆಂಬುದು ಇವರ ಅಭಿಮತವಾಗಿದೆ.

ಗ್ವಾಲಗೇರಿ ಗೋಲ್ಲಾಳೇಶ್ವರ :-

ತನ್ನ ಮುಗ್ದ ಭಕ್ತಿಯಿಂದ ದೇವರ ಸ್ವರೂಪದಲ್ಲಿ ಕಾಣಿಸಿ ಕೊಂಡ ಶರಣ ಗೊಲ್ಲಾಳ. ಇಂದಿಗೂ ಜನತೆ ಗೊಲ್ಲಾಳೇಶ್ವರ ಅವತಾರಿ ಪುರುಷನೆಂದು ನಂಬುತ್ತಾರೆ. ಜನ ಪದದ ನೆಲೆಯಲ್ಲಿ ಅವಲೋಕಿಸುವಾಗ ಈ ಬಗೆಯ ಹಾಡುಗಳನ್ನು ಗಮನಿಸುತ್ತೇವೆ. ಗ್ವಾಲಗೇರಿ ಅಂಬುದು| ಗೊಲ್ಲನ ಕುರಿ ದೊಡ್ಡಿ|ಅಲ್ಲಿ ನಿಂಗಯ್ಯ ನೆನದಾನ| ಕಾರಣದಿಂದ|ಗ್ವಾಲಗೇರಿ ಅಂಬ ಹೆಸರಾಗಿ||

ಆಡಿನ ಹಿಕ್ಕಿಯ ತಂದು| ತೀಡಿ ಲಿಂಗವ ಮಾಡಿ|ನೋಡಿರಿ ಶಿವನ ಮಹಿಮವ| ಗೋಲಗೇರಿ ನಿಂಗ|ಆಡಿನ ಹಿಕ್ಯಾಗ ನೆನದಾನ||

ಬೇವೂರಿನ ಗ್ವಾದಲೆಪ್ಪನ ಮೂರ್ತಿ ಗೋಲಗೇರಿ ಗೊಲ್ಲಾಳೇಶ್ವರ ಮೂರ್ತಿ ಎಂಬುದು ಕೆಲವು ಭಕ್ತರ ಅಭಿಮತ ಅಂತೆಯೇ ಜಾತ್ರಾ ಅವಧಿಯಲ್ಲಿ ಗೋಲ್ಲಾಳೇಶ್ವರನ ಪೋಟೋ ಮೆರವಣಿಗೆ ಮಾಡುವದು. ಗ್ವಾಲಗೇರಿ ಜಾತ್ರಾ ಅವಧಿಯ ಕಾಲಕ್ಕೆ ಅಂದರೆ ಯುಗಾದಿ ಪಾಡ್ಯದ ನಂತರ ಬರುವ ದವನದ ಹುಣ್ಣಿಮೆ ದಿನ ಗೊಲ್ಲಾಳೇಶ್ವರ ತೇರು ಎಳೆಯವ ಮಿತಿಯಲ್ಲಿ ಈ ಗ್ವಾದಲೆಪ್ಪ ಗುಡಿ ಜಾತ್ರೆ ಮಾಡುತ್ತಾ ಬಂದಿದ್ದಾರೆ. ಅನೇಕ ಆಚರಣೆ ನಂಬಿಕೆ ಹಿರಿಯರ ಹೇಳೀಕೆಗಳ ನೆಲೆಯಲ್ಲಿ ಗಮನಿಸುವಾಗ ಈ ಗುಡಿ ಗೊಲ್ಲಾಳೇಶ್ವರ ಶರಣರ ಆಚರಣೆಗಳ ಪ್ರಭಾವಕ್ಕೆ ಇರುವುದನ್ನು ಗಮನಿಸುತ್ತೇವೆ. ಬೇವೂರ ಭಕ್ತರು ಶ್ರೀಶೈಲ ಮಲ್ಲಯ್ಯನ ಬಗ್ಗೆ ಅಪಾರ ಭಕ್ತಿ ಉಳ್ಳವರಾಗಿದ್ದಾರೆ. ಅಂತೆಯೇ ಗ್ರಾಮದಲ್ಲಿ ಪ್ರಾಚೀನ ಪರ್ವತ ಮಲ್ಲಯ್ಯನ ಗುಡಿ ಸಹ ಇದ್ದಿರುವುದನ್ನು ಕಾಣುತ್ತೇವೆ. ಮಲ್ಲಯ್ಯನ ಗುಡಿ, ಕಂಬಿಗಳ ಪೂಜೆ, ಶ್ರೀಶೈಲ ಪಾದಯಾತ್ರೆ ಇಂತಹ ಸಂಗತಿಗಳನ್ನು ಅವಲೋಕಿಸುವಾಗ ಶ್ರೀಶೈಲ ಮಲ್ಲಯ್ಯನ ಪರಮ ಭಕ್ತ ಗೊಲ್ಲಾಳೇಶ್ವರನ ಗುಡಿ ನಿರ್ಮಾಣ ಗೊಂಡು ಜನರಾಡುವ ಬಳಕೆಯ ಭಾಷೆಯಲ್ಲಿ ಗ್ವಾದಲೆಪ್ಪ ಎಂದು ಉಳಿದಿರುವ ಸಾಧ್ಯತೆಗಳನ್ನು ಇಲ್ಲಿ ಗುರುತಿಸುತ್ತೇವೆ. ಮಲ್ಲಯ್ಯನ ಗುಡಿಯ ಕೂಗಳತೆಯ ದೂರದಲ್ಲಿ ಗ್ವಾದಲೆಪ್ಪ ಗುಡಿ ಇರುವುದು ಚಿಂತನೆಗೆ ಅವಕಾಶ ಮಾಡಿ ಕೊಡುತ್ತದೆ. ನಾಡಿನ ಹಿರಿಯ ಸಂಶೋಧಕರು ಈ ಸ್ಥಳಕ್ಕೆ ಭೇಟಿ ನೀಡಿ ಮತ್ತಷ್ಟು ಆಯಾಮಗಳ ನೆಲೆಯಲ್ಲಿ ಅಧ್ಯಯನ ಕೈಗೋಂಡು ಗೊಲ್ಲಾಳೇಶ್ವರ ಹಾಗೂ ಗ್ವಾದಲೆಪ್ಪ ಈ ಪೂಜ್ಯರ ನಡುವಿನ ಧಾರ್ಮಿಕ ಸಾಂಸ್ಕೃತಿಕ ಐತಿಹಾಸಿಕ ನೆಲೆಯ ಅಂಶಗಳ ಮೇಲೆ ಬೆಳಕು ಚೆಲ್ಲುವ ಅವಶ್ಯಕತೆ ಇಡಲಾಗಿದೆ.

ಸಾಮರಸ್ಯದ ಗ್ವಾದಲೆಪ್ಪನ ಜಾತ್ರಾ : –

ಸರ್ವಧರ್ಮ ಜಾತಿ ಜನಾಂಗದವರು ಕರುಳ ಬಳ್ಳಿಯ ಸಹೋದರರಂತೆ ಬಾಳುತ್ತಿರುವ ಬೇವೂರ ಗ್ರಾಮದ ಜಾತ್ರಾ ವೈಭವಗಳು ಈ ಭಾಗದ ಧರ್ಮ ನಿಷ್ಠೆಯನ್ನು ಎತ್ತಿ ಹಿಡಿಯುತ್ತದೆ. ಗ್ವಾದಲೆಪ್ಪನ ಜಾತ್ರೆ ಪ್ರತಿ ವರ್ಷ ದವನದ ಹುಣ್ಣಿಮೆ ದಿನದಂದು ನಡೆಯವ ವಾಡಿಕೆ ನಡೆದು ಕೊಂಡು ಬರಲಾಗಿದೆ. ಅಂದು ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಮಂಗಲವಾದ್ಯ, ಕಳಸ ಕನ್ನಡಿಯೊಂದಿಗೆ ಗ್ರಾಮದ ತುಂಬೆಲ್ಲಾ ಗ್ವಾಲಗೇರಿ ಗೊಲ್ಲಾಳೇಶ್ವರನ ಭಾವಚಿತ್ರ ಮೆರವಣಿಗೆ ಹೊರಡಿ ದೇವಾಲಯ ತಲುಪತ್ತದೆ. ಹಿಂದಿನ ದಿವಸ ನಾಡಿನ ಬೇರೆ ಬೇರೆ ಭಾಗಗಳಿಂದ ಹಾಗೂ ಸ್ಥಳೀಯ ಬೇವೂರ ಭಜನಾ ಕಲಾವಿದರಿಂದ ಭಜನಾ ಹಾಡುಗಳು ಆಯೋಜನೆ ಗೊಂಡಿರುತ್ತವೆ. ಡೊಳ್ಳಿನ ಮೇಳದವರ ಮೆರಗು ವಿಶೇಷ ಕಳೆಯನ್ನು ತಂದಿರುತ್ತದೆ. ಜಾತ್ರಾ ನಿಮಿತ್ಯ ಏರ್ಪಡಿಸಲಾಗುವ ಅನ್ನ ಪ್ರಸಾದದ ವ್ಯವಸ್ಥೆ ಗ್ವಾದಲೆಪ್ಪನ ಭಕ್ತರ ದಾಸೋಹ ಸಂಸ್ಕೃತಿಯನ್ನು ಪ್ರತಿ ನಿಧಿಸುತ್ತದೆ. ಇನ್ನೂ ನವಿಕೃತ ಗುಡಿ ನಿರ್ಮಾಣದ ಹಂತದಲ್ಲಿದ್ದು ಮುಂಬರುವ ವರ್ಷಗಳಲ್ಲಿ ಜಾತ್ರೆಗೆ ಮತ್ತಷ್ಟು ಸಾಂಸ್ಕೃತಿಕ ಮೆರಗು ಬಂದು ಈ ಭಾಗದ ಜನರ ಧಾರ್ಮಿಕ ಆಚರಣೆಗಳ ಅನಾವರಣಕ್ಕೆ ಹೊಸ ಸ್ಪರ್ಶ ಸಿಗಲಿದೆ. ಹಿರಿಯರ ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ಯುವ ತಲೆಮಾರು ಮುಂದುವರೆದು ಕೊಂಡು ಹೋಗುವ ದೊಡ್ಡ ಜವಾಬ್ಧಾರಿ ಸಹ ಈ ಭಾಗದ ಜನರ ಮೇಲಿದೆ. ಐತಿಹಾಸಿಕ ಹಿನ್ನಲೆಯ ಬೇವೂರ ಗ್ರಾಮದ ಗ್ವಾದಲೆಪ್ಪ ದೇವರ ಮೂರ್ತಿಯ ಬಗ್ಗೆ ಹತ್ತು ಹಲವಾರು ವಿಚಾರಗಳನ್ನು ಅವಲೋಕಿಸುವಾಗ ಜನಪದ ಸಂಸ್ಕೃತಿ, ಶರಣ ಸಂಸ್ಕೃತಿಯ ಗಟ್ಟಿ ಬೇರುಗಳನ್ನು ಇಲ್ಲಿ ಗುರುತಿಸುತ್ತೇವೆ. ಭಕ್ತಿ, ನಂಬಿಕೆ, ಸಾಮರಸ್ಯ, ಸೌಹಾರ್ಧತೆಯ ಪ್ರತೀಕವಾಗಿ ಪೂಜಿಸಲ್ಪಡುವ ಗ್ವಾದಲೆಪ್ಪ ದೇವರ ಗುಡಿ ಹಾಗೂ ಈ ದೇವರ ಹಿನ್ನಲೆಯಲ್ಲಿನ ಆಚರಣೆಗಳನ್ನು ಕಳೆದ ಹತ್ತಾರು ವರ್ಷಗಳಿಂದ ಗಮನಿಸುತ್ತಾ ಬಂದಿರುವ ಸಮೀಪದ ಸಂಗಾಪೂರದವರಾದ ಬೇವೂರಿನ ಪಿ.ಎಸ್.ಎಸ್ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಜಿ.ಎಸ್ ಗೌಡರ ರೈತಾಪಿ ವರ್ಗದ ಆರಾಧ್ಯ ದೈವ ಎನಿಸಿ ಗ್ರಾಮದ ಜನರ ಸಂಕಷ್ಟಗಳನ್ನು ದೂರ ಮಾಡುವ ಗ್ವಾದಲೆಪ್ಪ ದೇವರ ಬಗ್ಗೆ ಬಹುಮುಖ ಆಯಾಮದ ಅಧ್ಯಯನಗಳು ನಡೆದು ಹೊಸ ಹೊಸ ವಿಚಾರಗಳು ಜನತೆಗೆ ತಿಳಿಯುವ ಅವಶ್ಯಕತೆ ಇಡಲಾಗಿದೆ ಎನ್ನುತ್ತಾರೆ. ಗ್ರಾಮೀಣ ಜನರ ನಿಜ ಸೊಬಗು ಅಡಗಿರುವುದು ಅವರ ತಲೆಮಾರಿನ ಹಿರಿಯರು ಬಿಟ್ಟು ಕೊಟ್ಟ ನಂಬಿಕೆ, ಸಂಪ್ರದಾಯ, ಆಚರಣೆಗಳ ಭುತ್ತಿಯಲ್ಲಿದೆ. ಆ ಭುತ್ತಿಯನ್ನು ಸಮಕಾಲೀನ ತಲೆಮಾರಿನವರು ಕೂಡಾ ಉಂಡು ಬಹಳ ಜತನದಿಂದ ಮುಂದಿನ ಪೀಳಿಗೆಗೆ ತಲುಪಿಸ ಬೇಕಾದ ಗುರುತರ ಹೊಣೆಗಾರಿಕೆಯ ಭಾಗವಾಗಿ ಬೇವೂರಿನ ಗ್ವಾದಲೆಪ್ಪ ದೇವರ ಗುಡಿಯ ಸಂರಕ್ಷಣೆ ಈ ದೈವದ ನೆಲೆಯಲ್ಲಿನ ಆಚರಣೆ ಪದ್ದತಿ ನಂಬಿಕೆಗಳ ಪೋಷಣೆಗೆ ಸರ್ವರೂ ಕೈಜೋಡಿಸ ಬೇಕು ಎಂದು ಇವರು ಹೇಳುತ್ತಾರೆ. ಗ್ವಾದಲೆಪ್ಪ ಗುಡಿಯ ಧಾರ್ಮಿಕ ವೈಭವ ಮತ್ತೆ ಮರುಕಳಸಲಿ ಬೇವೂರಿನ ಭಕ್ತರ ಭಾಗ್ಯದ ದೈವವಾಗಿ ಬೆಳಗುತಿರಲಿ ಎಂಬ ಸದಾಶಯಗಳನ್ನು ಅಭಿವ್ಯಕ್ತಪಡಿಸುತ್ತಾ ಲೇಖನಕ್ಕೆ ಪೂರ್ಣವಿರಾಮ ನೀಡುತ್ತೇನೆ.

ಲೇಖನ:- ಡಾ, ಆದಪ್ಪ ಮ. ಗೊರಚಿಕ್ಕನವರ

(ಕೂಡಲಸಂಗಮ) ಇತಿಹಾಸ ಉಪನ್ಯಾಸಕರು

ಶ್ರೀ ಪಿ.ಎಸ್.ಎಸ್ ಕಾಲೇಜು ಬೇವೂರು.

ಇಮೇಲ್ : adappamg@gmail.com

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button