ಬಹಿರಂಗದ ಸ್ನಾನಕ್ಕಿಂತ ಅಂತರಂಗದ ಸ್ನಾನ ಬಹಳ ಮುಖ್ಯ – ಯತೀಶ್.ಎಂ ಸಿದ್ದಾಪುರ ಅನಿಸಿಕೆ.
ಚಳ್ಳಕೆರೆ ಜು.20

ಬಹಿರಂಗದ ಸ್ನಾನಕ್ಕಿಂತ ಅಂತರಂಗದ ಸ್ನಾನ ಬಹಳ ಮುಖ್ಯವಾಗುತ್ತದೆ ಎಂದು ಚಳ್ಳಕೆರೆ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಲೇಖಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು. ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ಪಂಕಜ ಚೆನ್ನಪ್ಪ ಅವರ ವಿದ್ಯಾಶ್ರೀ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ ಆಯೋಜಿಸಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು “ಶ್ರೀಶಾರದಾದೇವೀ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು. ಶ್ರೀಮಾತೆ ಶಾರದಾದೇವಿಯವರು ತಮ್ಮ ಬಳಿಗೆ ಬಂದ ಭಕ್ತರ ‘ಶುದ್ಧಭಕ್ತಿ’ ಮತ್ತು ‘ವ್ಯಾಕುಲತೆ’ ಯನ್ನು ಗುರುತಿಸಿ ಯಾವುದೇ ಕ್ರಮ ನಿಯಮಗಳನ್ನು ಅನುಸರಿಸಿದೆ ಮಂತ್ರ ದೀಕ್ಷೆ ಕೊಟ್ಟು ಬಿಡುತ್ತಿದ್ದರು.

ಶಾರದಾದೇವಿಯವರು ಸಾಕ್ಷಾತ್ ಸೀತಾಮಾತೆ ಎಂದು ಅವರ ಸಮಗ್ರ ಜೀವನವನ್ನು ಅಧ್ಯಯನ ಮಾಡಿದಾಗ ತಿಳಿದು ಬರುತ್ತದೆ. ಇಂತಹ ಅನೇಕ ಮಹತ್ವದ ವಿಷಯಗಳನ್ನು ಸ್ವಾಮಿ ಪುರುಷೋತ್ತಮಾನಂದಜೀ ಬರೆದಿರುವ “ಶ್ರೀಶಾರದಾದೇವೀ ಜೀವನಗಂಗಾ” ಗ್ರಂಥ ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನಾ ಕಾರ್ಯಕ್ರಮ ಹಾಗೂ ಬಸವಣ್ಣನವರ ಭಕ್ತರಾದ ಶ್ರೀಮತಿ ವರಲಕ್ಷ್ಮೀ ಈಶ್ವರಪ್ಪ ಅವರು ವಚನಗಳನ್ನು ಹಾಡಿದರು. ಸತ್ಸಂಗದಲ್ಲಿ ಶ್ರೀಮತಿ ಪಂಕಜ ಚೆನ್ನಪ್ಪ, ಎಂ ಗೀತಾ ನಾಗರಾಜ್, ಸೌಮ್ಯ ಪ್ರಸಾದ್,ಅಕ್ಷಯ್ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.