“ಈ ಪ್ರೀತಿ ಒಂಥರಾ…… ಕಚಗುಳಿ”…..

ಪ್ರೀತಿ ಎಂಬ ಪದವೇ ಅಮೋಘ. ಆ ಶಬ್ದ ಕಿವಿಗೆ ಬೀಳುತ್ತಲೆ ನಮಗರಿವಿಲ್ಲದೆ ಅದೇಷ್ಟೋ ಭಾವಗಳು ಎದೆಯೊಳಗೆ ಒಮ್ಮೆ ಸುಳಿದಾಡಿಬಿಡುತ್ತವೆ. ಪ್ರೀತಿಯ ಮಧುರತೆಯೆ ಹಾಗೇ. ಅದರಲ್ಲಿ ಯಾವುದೇ ಸ್ವಾರ್ಥವಿಲ್ಲ ಪ್ರೀತಿಸುವ ಹೃದಯ ಸದಾ ಜೊತೆಯಿರಬೇಕು ಎಂಬುದೇ ಅದರ ಬಯಕೆ. ಇಲ್ಲಿ ಸಿರಿವಂತ-ಬಡವ, ಮೇಲು-ಕೀಳು ಎಂಬ ಮಾತೆ ಬರಲ್ಲ. ಯಾಕೆಂದರೆ ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ. ಜಾತಿ, ಧರ್ಮ, ಅಂದ-ಚಂದ, ಮೇಲು-ಕೀಳು ದೊಡ್ಡಸ್ತಿಕೆ ಅದೆಲ್ಲವನ್ನು ಮೆಟ್ಟಿ ಏರಿರುವುದು ಪ್ರೀತಿ. ಪ್ರೇಮದಲ್ಲಿರುವುದು ಹೃದಯಗಳ ಪಿಸುಮಾತುಗಳು, ಭಾವನೆಗಳ ಸಮಾಗಮ.
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸುವ ಪ್ರೇಮಿ ನಾವಾಗಬೇಕು. ಅವರು ಪ್ರೀತಿಸದಿದ್ದರೂ ನಾವು ಅವರ ಪ್ರೀತಿಯನ್ನು ಪೂಜಿಸಬೇಕು. ಪ್ರೀತಿಯ ಕದ ತಟ್ಟಿದ ಪ್ರೇಮಿಯನ್ನು ಅಜರಾಮರವಾಗಿ ನೆನಪಿಟ್ಟುಕೊಳ್ಳುವ ಅಂತಹ ಪ್ರೇಯಸಿ ನಾವಾಗಬೇಕು. ಪ್ರೀತಿಸುವ ಹೃದಯಕ್ಕೆ ಪ್ರೀತಿಯೇ ಜಗತ್ತು. ಆ ಪ್ರೀತಿ ಎಂಬ ಜಗತ್ತಿನಲ್ಲಿ ಪ್ರೇಮಿಗಳಿಬ್ಬರೆ ರಾಜ ರಾಣಿ. ಪ್ರೀತಿಯಲ್ಲಿ ಸಕ್ಕರೆಯ ಸಿಹಿ ಮಾತುಗಳಿಗೆ ಮಾತ್ರ ಅವಕಾಶ ಇರಲಿ, ಜೇನಿನಂತಹ ಸವಿ ನುಡಿಗಳಿಗೆ ಮಾತ್ರ ಜಾಗವಿರಲಿ.
ಪ್ರೀತಿ ಎಂದರೆ ಅದು ಉತ್ತರವಿಲ್ಲದ ಭಾವ. ಅದನೇನಿದ್ದರು ಅನುಭವಿಸಬೇಕು ಅಷ್ಟೇ ಹೆಚ್ಚೇನಿಲ್ಲ. ಪ್ರೀತಿ ಎಂದರೆ ಸುಮಧುರ ಸೌಗಂಧ ಸೂಸುವ ಸುಮವಿದ್ದಂತೆ. ಪ್ರೀತಿಯ ನೆರಳಲ್ಲಿ ಮನಸ್ಸು ಸ್ವಚ್ಚಂದವಾಗಿ ವಿಹರಿಸುತ್ತದೆ. ಮನಸ್ಸು ಮನಸ್ಸು ಬೆರೆತು, ಸವಿಭಾವನೆಗಳು ಬೆಸೆದುಕೊಂಡಾಗಲೆ ಪ್ರೀತಿ ಎಂಬ ಸವಿ ರಾಗ ಲಹರಿ ಅಲೆ ಅಲೆಯಲ್ಲಿ ಸುಸ್ವರ ಚೆಲ್ಲಿ ನಿತ್ಯವೂ ಸೊಬಗನ್ನೆರೆಯುವುದು. ಕಪ್ಪೆ ಚಿಪ್ಪಿನಲ್ಲಿ ಅಡಗಿರುವ ಕಡಲ ಮುತ್ತು ಈ ಪ್ರೀತಿ. ಒಲವಿನ ಕಾಣಿಕೆಯದು ನೀ ಕೊಟ್ಟ ನೆನಪಿನ ಗರಿಗಳು ಇಂದಿಗೂ ನನ್ನ ಬಾಳ ಪುಟದಲಿ ಯಾವಾಗಲೂ ಅಮರ. ಪ್ರೀತಿಯೊಂದು ಸವಿ ಬಂಧನ ಆ ಸವಿಯನ್ನು ಉಳಿಸಿಕೊಳ್ಳೋಣ.
ಈ ಭಾವುಕ ಲೋಕದಿಂದ ಸ್ವಲ್ಪ ಇಣುಕಿ, ಗೂಡಿನೊಳಗೆ ಅವಿತಿರುವ ಪ್ರೀತಿ ಎನ್ನುವ ಪುಟ್ಟ ಹಕ್ಕಿಯನ್ನು ಹತ್ತಿರದಿಂದ ಸಹಜವಾಗಿ ಗಮನಿಸಿ, ಅದನ್ನು ಬದುಕಿಗೆ ಅನ್ವಯಿಸಿಕೊಂಡರೆ ಈ ಪ್ರೀತಿ-ಪ್ರೇಮಗಳಿಗೆ ಬದುಕಿನಲ್ಲಿ ಒಂದು ನೆಲೆ ಇದೆ ಅನಿಸುತ್ತದೆ. ಪ್ರೀತಿಯೆನ್ನುವುದು ನಿರ್ಮಲ ಕೊಳದಲ್ಲಿ ಕಾಣುವ ಒಂದು ನಿಶ್ಚಲ ಪ್ರತಿಬಿಂಬವಿದ್ದಂತೆ. ಆ ಪ್ರತಿಬಿಂಬವನ್ನು ಅಷ್ಟೇ ನಿಶ್ಚಲತೆಯಿಂದ ಪಡೆಯುವ ಶಕ್ತಿ ನಮಗಿಲ್ಲವಾದಲ್ಲಿ ನಮಗೆ ಸಿಗುವುದು ಕೇವಲ ಚದುರಿದ ಪ್ರತಿಬಿಂಬ. ದೀಪದಂತೆ ಪಸರಿಸುವ ಬೆಳಕಿನಲ್ಲಿ ಅಲ್ಪ ಸ್ವಲ್ಪ ಪ್ರೀತಿಯನ್ನು ನಾವು ರೂಢಿಸಿಕೊಂಡರೆ ಕನಿಷ್ಠಪಕ್ಷ ಜೀವನದ ಒಂದು ಪಾಲಿನ ಪ್ರೀತಿಯಾದರೂ ನಾವು ಜೀವಂತವಾಗಿರುವವರೆಗೆ ನಮಗೆ ಸಿಗುತ್ತದೆ.
ಪ್ರೀತಿ ಎಲ್ಲರಿಗೂ ಬೇಕು. ನಮ್ಮನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರಿಗಾಗಿ ಈ ಹೃದಯ ಸದಾ ಮಿಡಿಯುತ್ತಿರುತ್ತದೆ. ಆದರೆ ಒಂದೊಂದು ಸಲ ಪ್ರೀತಿಯೇ ನಮ್ಮ ಬದುಕನ್ನು ಕಿತ್ತುಕೊಳ್ಳುವುದರ ಜತೆಗೆ ನಮ್ಮ ಮೇಲೆ ಅಗಾಧವಾದ ಪ್ರೀತಿ, ಆಸೆ, ಕನಸು ಕಟ್ಟಿಕೊಂಡವರಿಗೆ ನೋವು, ದುಃಖ ತರುತ್ತದೆ. ಪ್ರೀತಿ ಎಂಬ ಮಾಯೆ ಬದುಕಿನ ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರಿಗೂ ಕಾಡಿರುತ್ತೆ. ಪ್ರೀತಿ ಕುರುಡು, ಅದಕ್ಕೆ ಕಣ್ಣಿಲ್ಲ. ಮುಕ್ತ ಮನಸ್ಸಿನಿಂದ ಚಿಗುರಿದ ಪ್ರೀತಿಯನ್ನು ಯಾವುದೇ ಒತ್ತಡವಿಲ್ಲದೆ ಹೇಳಿಬಿಡಬೇಕು ಆಗ ಮನಸ್ಸಿನಲ್ಲಿ ನಿರಾಳಭಾವವೊಂದು ಮೈದೆಳೆದು ವಿಶೇಷ ಅನುಭವ ಪಡೆದುಕೊಳ್ಳಬಹುದು. ಎರಡು ಮನಸ್ಸುಗಳು ಪ್ರೀತಿಗೆ ಪರಸ್ಪರ ಒಪ್ಪಿಗೆ ಸೂಚಿಸಿ ಮಿಲನವಾಗುವುದು ಪ್ರೀತಿಯ ಪರಿಕಲ್ಪನೆಗೆ ವಿಶೇಷ ಅರ್ಥಬಂದಂತೆ.
ಹೂವು ಅರುಳುವಷ್ಟೇ ಸಹಜ ಹರೆಯದಲ್ಲಿ ಪ್ರೀತಿ ಅರಳುವುದು. ಪ್ರೀತಿಯ ಬಗ್ಗೆ ಏನು ಬರೆಯುತ್ತೀರಿ, ಎಷ್ಟು ಬರೆಯುತ್ತೀರಿ ಅಗೆದಷ್ಟು, ಬಗೆದಷ್ಟು ಬತ್ತದ ಝರಿಯಂತೆ ಅದು ಹರಿಯುತ್ತಲೇ ಇರುತ್ತದೆ. ಬೇಡಿಕೊಳ್ಳುವೆ ಜೀವನದುದ್ದಕ್ಕೂ ಕೈ ಹಿಡಿದು ನಡೆಸುವ ನಾವಿಕನಾಗು ಎಂದು ಮುಗಿದರು ಮರೆಯಲಾಗದ ಪ್ರೇಮ ನಮ್ಮದು. ನೀನೆಂದರೆ ಆಸೆಯೂ ಅಲ್ಲಾ ಆಕರ್ಷಣೆಯೂ ಅಲ್ಲಾ ಮನದೊಳಗೆ ಮೂಡಿದ ಮಧುರವಾದ ಭಾವನೆ. ಮನಸ್ಸಪೂರ್ವಕವಾಗಿ ನಿಷ್ಕಲ್ಮಶ ಮನಸಿನಿಂದ ಪ್ರೀತಿಯಿಂದ ಬೇಡಿಕೊಳ್ಳುವೆ ಕಡಲಾಚೆ, ಮುಗಿಲಾಚೆ, ಭುವಿಯಾಚೆ, ಬಾನಾಚೆ, ಸಾಗರದಾಳದಲ್ಲಿ ಅವಿತಿದೆ ನಮ್ಮ ಪ್ರೀತಿ. ಅದು ಹಾಗೇ ಇರಲಿ ಜೊತೆಗಿರು ನೀ ನನ್ನ ಕೊನೆಯುಸಿರಿರೋ ತನಕ. ಪ್ರೀತಿಯ ಭಾವನೆಗಳು ಸದಾ ಮಳೆ ಹನಿಯಂತೆ ಜಿನುಗುತ್ತಿರಬೇಕು, ಸಾಗರದ ಆಳದಲ್ಲಿ ಇರುವ ಮುತ್ತಿನಂತೆ ಮಿಂಚುತ್ತಿರಲಿ, ಆಕಾಶದಲ್ಲಿ ಇರುವ ನಕ್ಷತ್ರಗಳಂತೆ ಹೊಳೆಯುತ್ತಿರಲಿ, ಸಾಗರದ ಅಲೆಗಳಂತೆ ಸದಾ ಸಂತೋಷದಿಂದ ಇರಬೇಕು, ಇಬ್ಬನಿ ಮಂಜಿನಂತೆ ಸದಾ ಸ್ಪಷ್ಟವಾಗಿರಲಿ. ಚಿರಕಾಲದ ಬಾಂಧವ್ಯಕ್ಕೆ ನಿನ್ನ ಹೂ ಮನಸು ಜೊತೆಗಿದೆ. ನಿತ್ಯವೂ ಕನವರಿಸುವ ಇಬ್ಬರ ಪ್ರೀತಿ ಚಿರಕಾಲ ಉಳಿಯಲಿ. ಪ್ರೀತಿಯ ಕಡಲಿನಲ್ಲಿ ಲೀನವಾಗಿರುವಳು ಜ್ಯೋತಿ ಎಂದೆಂದು.
ಕುಮಾರಿ ಜ್ಯೋತಿ ಆನಂದ ಚಂದುಕರ
ಬಾಗಲಕೋಟ – 9980180487