ಸಮರ್ಥ ವ್ಯಕ್ತಿತ್ವ ನಿರ್ಮಾಣದಲ್ಲಿ ವೈಯಕ್ತಿಕ ಶಿಸ್ತಿನ ಪಾತ್ರ ಹಿರಿದಾಗಿದೆ – ಯತೀಶ್.ಎಂ ಸಿದ್ದಾಪುರ ಅಭಿಮತ.
ಚಳ್ಳಕೆರೆ ಜು.25

ಸಮರ್ಥ ವ್ಯಕ್ತಿತ್ವ ನಿರ್ಮಾಣದಲ್ಲಿ ವೈಯಕ್ತಿಕ ಶಿಸ್ತಿನ ಪಾತ್ರ ಹಿರಿದಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಹಾಗೂ ಲೇಖಕ ಯತೀಶ್.ಎಂ ಸಿದ್ದಾಪುರ ಹೇಳಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ದಲ್ಲಿ ಪಾಲ್ಗೊಂಡು ಅವರು “ನನ್ನ ಏಳ್ಗೆಗೆ ನಾನೇ ಶಿಲ್ಪಿ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣದಲ್ಲಿ ವೈಯಕ್ತಿಕ ಶಿಸ್ತು, ಆತ್ಮಗೌರವ, ಆತ್ಮವಿಶ್ವಾಸ, ಶ್ರದ್ಧೆ ಹಾಗೂ ಕಾರ್ಯಾಸಕ್ತಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಆದ್ದರಿಂದ ಇವುಗಳನ್ನು ಅನುಸರಿಸ ಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಈ ಶಿಬಿರದ ಆರಂಭದಲ್ಲಿ ಪ್ರಣಾಮ ಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಭಜನೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರದ ಪಠಣ ನಡೆಯಿತು.

ಕಾರ್ಯಕ್ರಮದ ಕೊನೆಯಲ್ಲಿ ಸಂತೋಷಕುಮಾರ ಅಗಸ್ತ್ಯ ಅವರು ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿ ಮನ ರಂಜಿಸಿದರು. ಈ ಶಿಬಿರದಲ್ಲಿ ಹೂವಿನ ಲಕ್ಷ್ಮೀದೇವಮ್ಮ, ಜಾಹ್ನವಿ, ಸಿದ್ದಾರ್ಥ, ಕರುಣಾ, ಪುಷ್ಪಲತಾ, ಹರ್ಷಿತಾ, ಯಶಸ್ವಿ, ಸಾಯಿ ಸಮರ್ಥ್, ಕೋಮಲಸಿರಿ, ವಿವಿಕ್ತ, ಸೂರ್ಯಪ್ರಕಾಶ್, ಪ್ರಣಾಮ್ಯ, ಭೂಮಿಕ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.