ಭಕ್ತರ ಆರಾಧ್ಯ ದೈವ ಖಜಗಲ್ಲ ಮಡ್ಡಿ ಬಸವಣ್ಣನ ಆಧುನಿಕ ವಿಸ್ತ್ರತ ನಿರೂಪಣೆ – ಕೊಟ್ಟ ಡಾ. ಎ.ಎಂ. ಗೊರಚಿಕ್ಕನವರ.

ಕೂಡಲ ಸಂಗಮ ಜು.30

ಆರು ಸಾವಿರ ಜಂಗ ಮೂರು ಸಾವಿರ ಗಂಟಿದೂರ ಕೇಳ್ಯಾವೋ ಗಗನಕ| ನಂ ಬಸವಧೂಳ ಎಬ್ಬಿಸ್ಯಾನೊ ಶಿವನಿಗೆ||

ಬಸವಣ್ಣ ನಿನಪಾದ ಹಸನಾಗಿ ತೊಳಿದೇನಹಸರ ಗಲ್ಲೀಪ ಹೋಲಸೀನ | ಬಸವಣ್ಣಹಸನುಳ್ಳ ದನಿಯ ಕೊಡ ನನಗ||

ಜನಪದರು ಬಸವಣ್ಣನನ್ನು ಹಾಡಿ ಹೊಗಳಿದ ಪರಿ ಕೃಷಿ ಸಂಸ್ಕೃತಿಯಲ್ಲಿ ಎತ್ತುಗಳಿಗೆ ದೈವ ಸ್ವರೂಪಿ ನಂದಿ ಬಸವಣ್ಣನಿಗೆ ಕೊಡಮಾಡಿದ ಸ್ಥಾನಮಾನ ಎಂತಹದ್ದು ಎಂದು ತಿಳಿಯಲು ನೆರವಾಗುತ್ತದೆ. ಗ್ರಾಮೀಣ ಜನರ ಬದುಕಿನೊಟ್ಟಿಗೆ ಹಾಸುಹೊಕ್ಕಾದ ದೇವರು ದೈವಗಳ ಪೈಕಿ ನಂದಿ ಬಸವಣ್ಣ, ಹಣಮಂತ ದೇವರಿಗೆ ವಿಶೇಷ ಸ್ಥಾನಮಾನ ಇರಲಾಗಿದ್ದು ಅಂತೆಯೇ ಪ್ರತಿಯೊಂದು ಊರಲ್ಲಿ ಬಸವಣ್ಣನ ಹಾಗೂ ಆಂಜನೇಯನ ಗುಡಿಗಳಿರುವದನ್ನು ಕಾಣುತ್ತೇವೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸಣ್ಣ ಗ್ರಾಮ ಖಜಗಲ್ಲ ರೈತಾಪಿ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಗ್ರಾಮ ಕೂಡಲಸಂಗಮದಿಂದ ೪ ಕಿ. ಮೀ ಅಂತರದಲ್ಲಿರುವ ಈ ಊರಿನ ಮಡ್ಡಿ ಬಸವಣ್ಣನ ಗುಡಿಯು ಭಕ್ತ ಸಮೂಹದ ಮೂಲಕ ತನ್ನದೆಯಾದ ನಂಬಿಕೆ, ಆಚರಣೆ ಉತ್ಸವಗಳನ್ನು ಹೊಂದಿದ್ದು ಪ್ರತಿ ವರ್ಷ ಶ್ರಾವಣದ ಎರಡನೇ ಸೋಮವಾರ ಜಾತ್ರೆ ನಡೆದು ಕಳಸದ ಮೆರವಣಿಗೆ ಸಾಗಿ ಬಸವಣ್ಣದೇವರಿಗೆ ನಾನಾ ವಿಧದಲ್ಲಿ ಭಕ್ತಿ ಸಮರ್ಪಣೆಗೊಳ್ಳುತ್ತದೆ.ಪ್ರಸ್ತುತ ಲೇಖನದ ಮೂಲಕ ಭಕ್ತರ ಆರಾಧ್ಯ ದೈವ ಖಜಗಲ್ಲ ಬಸವಣ್ಣನ ಬಗ್ಗೆ ಮಹತ್ವದ ಸಂಗತಿಗಳನ್ನು ಅವಲೋಕಿಸೋಣ.

ಖಜಗಲ್ಲ ಗ್ರಾಮದ ಹಿನ್ನಲೆ:-

ಕರ್ನಾಟಕ ಗ್ರಾಮ ಚರಿತ್ರೆ ಕೋಶ ಬಾಗಲಕೋಟೆ ಜಿಲ್ಲಾ ಸಂಪುಟದ ಮಾಹಿತಿ ಆಧಾರಿತವಾಗಿ ಹೇಳುವದಾದರೆ ಕೆಂಪು ಚಿಂಚಕಲ್ಲಿನ ಬಂಡೆಗಳಿರುವದರಿಂದ ಖಜ+ಗಲ್ಲು= ಖಜಗಲ್ಲು ಶಿಲಾವಾಚಿ ನಾಮ ಈ ಊರಿಗಿದೆ. ಅಂತೆಯೇ ಅಕ ಪಕ್ಕದ ಕೆಂಗಲ್, ಬೆಳಗಲ್ ಶಿಲಾವಾಚಿ ಊರುಗಳು ಇದ್ದರಿವುದನ್ನು ಕಾಣುತ್ತೇವೆ.ಸ್ಥಳೀಯರ ಹೇಳಿಕೆ ಪ್ರಕಾರ ಊರಿನ ಹತ್ತಿರದ ಎತ್ತರದ ದೊಡ್ಡ ಕಲ್ಲುಬಂಡೆ ಇತ್ತಂತೆ ಆ ಕಲ್ಲಿನ ಮೂಲಕ ವೈರಿಗಳ ವೀಕ್ಷಣೆ ಮಾಡಲಾಗುತ್ತಿತ್ತು ಅಲ್ಲಿ ಖಾಜಿ ಹೆಸರಿನ ಕಾವಲುಗಾರ ಸೈನಿಕ ನಿದ್ದ ಖಾಜಿ+ಕಲ್ಲು= ಖಜಗಲ್ಲು ವ್ಯಕ್ತಿವಾಚಕ ಗ್ರಾಮನಾಮ ಕೂಡಾ ಈ ಊರಿನ ಹಿನ್ನಲೆಯಲ್ಲಿ ಕಾಣುತ್ತೇವೆ. ಬಸವಣ್ಣ, ಮಾರುತೇಶ್ವರ, ದ್ಯಾಮವ್ವ, ದುರಗವ್ವ, ಭರಮದೇವರು, ಲಗಮವ್ವ, ಜುಮ್ಮನಾಳ ಸಿದ್ದಪ್ಪ ಮುತ್ಯಾನ ಕಟ್ಟೆ, ಧಾರ್ಮಿಕ ಸಾಮರಸ್ಯದ ಮಸೀದಿ ಈ ಊರಲ್ಲಿ ಕಾಣುತ್ತೇವೆ. ಶತಮಾನದಷ್ಟು ಹಳೆಯದಾದ ಬಸವಣ್ಣ ದೇವರ ಗುಡಿ ಖಜಗಲ್ಲ ಭಕ್ತ ಪರಂಪರೆಯ ಧಾರ್ಮಿಕ ಆರಾಧನೆಯ ಮಹತ್ವದ ಸ್ಥಳವಾಗಿ ಕಂಡುಬರುತ್ತದೆ.

ಮಡ್ಡಿ ಬಸವಣ್ಣನೆಂಬ ಹೆಸರು:-

ಶಿವನ ವಾಹನ ನಂದಿ ಬಸವಣ್ಣ ಪ್ರತಿಷ್ಠಾಪನೆಗೊಂಡು ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ವಾಡಿಕೆಯನ್ನು ಕಾಣುತ್ತೇವೆ. ಸ್ಥಳನಾಮಗಳಿಂದ ಹೆಸರುವಾಸಿಯಾದ ಬಾಗೇವಾಡಿ ಬಸವಣ್ಣ, ಕುಂಟೋಜಿ ಬಸವಣ್ಣ, ಹಳ್ಳೂರ ಬಸವಣ್ಣ, ಕರಡಿ ಬಸವಣ್ಣ, ಯರಝೇರಿ ಬಸವಣ್ಣ ಹೀಗೆ ಮುಂತಾದ ದೇವಾಲಯಗಳು ಈ ಭಾಗದ ಭಕ್ತ ಪರಂಪರೆಯಿಂದ ಪೂಜ್ಯಣೀಯ ಸ್ಥಾನ ಪಡೆದಿವೆ. ಅಂತೆಯೇ ಕೆಲವು ಗ್ರಾಮಗಳಲ್ಲಿ ಕಟ್ಟೆ ಹೆಸರುಗಳಿಂದ, ಗಿಡಮರಗಳ ಹೆಸರುಗಳಿಂದ, ಬಸವಣ್ಣ ದೇವರ ಪೂಜಾ ಸ್ಥಳ ಕಾಣುವಂತೆ ಖಜಗಲ್ ಬಸವಣ್ಣನ ಗುಡಿಗೆ ಮಡ್ಡಿ ಬಸವಣ್ಣ ಎಂಬ ಹೆಸರು ಬಂದಿದೆ. ಮಡ್ಡಿ ಹೊಲಗಳು, ಮಸಾರಿ ಹೊಲಗಳು ಈ ಭಾಗದಲ್ಲಿ ಕಾಣುತ್ತೇವೆ. ಶಬ್ದಕೋಶದ ಹಿನ್ನೆಲೆಯಲ್ಲಿ ಮಳೆ ಅಥವಾ ನೀರಿನಿಂದ ತೇವವಾದ ಮಣ್ಣಿಗೆ ಮಡ್ಡಿ ಎನ್ನುತ್ತಾರೆ. ಹೊಲದ ಮಡ್ಡಿಭಾಗದಲ್ಲಿ ಈ ಬಸವಣ್ಣನ ಗುಡಿ ಇದ್ಧಿರುವದಕ್ಕೆ ಮಡ್ಡಿ ಬಸವಣ್ಣ ಎಂಬ ಹೆಸರು ರೂಢಿಯಲ್ಲಿದೆ. ಮಡ್ಡಿಹೊಲದಲ್ಲಿ ನಂದಿಬಸವಣ್ಣನ ಗುಡಿ ಸ್ಥಾಪನೆಗೊಂಡ ಕಾರಣಕ್ಕೆ ಈ ಹೆಸರು ಬಳಕೆಯಲ್ಲಿರುವುದನ್ನು ಕಾಣುತ್ತೇವೆ.

ಕೂಡಲಸಂಗಮದ ಪಾಟೀಲ ಮನೆತನದವರು ಕಟ್ಟಿಸಿದ್ದು:-

೧೬ ಹಳ್ಳಿಗಳ ಗೌಡಕಿಯನ್ನು ಮಾಡಿದ ಕೂಡಲಸಂಗಮದ ಪಾಟೀಲ ಮನೆತನದ ಹಿರಿಯರಿಂದ ಈ ದೇವಾಲಯ ಕಟ್ಟಿಸಿದ ಬಗ್ಗೆ ಮಾಹಿತಿ ದೊರೆಯುತ್ತದೆ. ಅಯ್ಯನಗುಡಿ ಗಂಗಪ್ಪಯ್ಯ , ಸಂಗಮನಾಥನನಲ್ಲಿ ಪರಮ ಭಕ್ತಿ ಹೊಂದಿದ ಶೈವ ಸಂಸ್ಕೃತಿಯ ಆರಾಧಕರು ಶರಣ ಸಂಸ್ಕೃತಿ ಬಗ್ಗೆ ಅಪಾರವಾದ ಒಲವುಳ್ಳ ಈ ಮನೆತನದವರು ಧಾರ್ಮಿಕವಾಗಿ ಈ ಭಾಗದಲ್ಲಿ ಸಾಕಷ್ಟು ಸೇವೆಗಳನ್ನು ಮಾಡಿರುವುದನ್ನು ಕಾಣುತ್ತೇವೆ. ಹೆಚ್ಚು ಕಡಿಮೆ ಈ ಭಾಗದ ಅನೇಕ ಹಳ್ಳಿಗಳಲ್ಲಿ ಸರಹದ್ದಿನಲ್ಲಿ ಈ ಮನೆತನದ ವಾರಸುದಾರರಿಗೆ ಸಂಬಂಧಿಸಿದ ಹೊಲಗಳಿರುವಂತೆ ಖಜಗಲ್ಲ ಸೀಮಿಯಲ್ಲಿಯು ಇವರ ಭೂಮಿಗಳು ಇರಲಾಗಿದ್ದು ಹಿಂದಿನಕಾಲದಲ್ಲಿ ಅನೇಕ ಆಯಗಾಗರಿಗೆ ಕತ್ತಿ ಕಾರಬಾರಿನ ಸೇವೆಯ ವಾಲೀಕಾರರಿಗೆ ಭೂಮಿಗಳನ್ನು ಇನಾಂ ಉಂಬಳಿ ಹಾಕಿಕೊಟ್ಟಿರುವುದನ್ನು ಕಾಣುತ್ತೇವೆ. ವಂಶಾವಳಿ ಹೆಳವರ ದಾಖಲೆಯಲ್ಲಿ ಮನೆತನದ ಹಳಬಕಿ ಚಾಕರಿ ಮಾಡುವವರಿಗೆ ೧೨ ಕೂರಿಗೆ ಜಮೀನು ಉಂಬಳಿ ಕೊಟ್ಟ ಉಲ್ಲೇಖ ಕಾಣುತ್ತೇವೆ. ಅಂತೆಯೇ ಕೂಡಲ ಸಂಗಮನಾಥನ ೬೩ ಅರ್ಚಕ ಮನೆತನಗಳ ಪೈಕಿ ಒಂದಾದ ಕೋಟೂರ ಕುಟುಂಬದವರಿಗೆ ನಾಲ್ಕಾರು ಎಕರೆಗಳಷ್ಟು ಹೊಲವನ್ನು ಭಕ್ತಿಯಿಂದ ಇನಾಂ ಆಗಿ ಕೊಡಮಾಡಿ ದೇವಸ್ಥಾನದ ನಿತ್ಯ ಪೂಜಾದಿ ಜಾತ್ರಾ ಕೈಂಕರ್ಯಗಳು ನೇಮ ನಿತ್ಯದಿಂದ ನಡೆದುಕೊಂಡು ಬರುವಂತೆ ಮಾಡಿದ್ದು ಈ ಮನೆತನದವರ ಧಾರ್ಮಿಕ ಶ್ರದ್ಧೆ ದಾನ ಪರಂಪರೆ ಹಾಗೂ ಬಸವಣ್ಣ ದೇವರ ಬಗ್ಗೆ ಹೊಂದಿದ ನಿಲವನ್ನು ಎತ್ತಿ ತೋರಿಸುತ್ತದೆ.

ಗಂಗಪ್ಪಗೌಡಾ ಪಾಟೀಲರ ಹೆಸರಿನ ನಾಮಫಲಕ:-

ಸ್ಥಳೀಯ ಭಕ್ತ ಪರಂಪರೆಯ ನೆನಪಿನಾಳದಲ್ಲಿ ಮೌಖಿಕ ಪರಂಪರೆಯಲ್ಲಿ ಕೂಡಲಸಂಗಮದ ಪಾಟೀಲರ ಹಿರಿಯರು ಕಟ್ಟಿಸಿದ ದೇವಾಲಯ ಇದೆಂದು ತಿಳಿದುಬರುತ್ತದೆಯಾದರೂ ಸಹ ಇದಕ್ಕೆ ಪುಷ್ಠಿಕರಣ ಕೊಡುವಂತೆ ದೇವಾಲಯದ ಗರ್ಭ ಗುಡಿಯ ಹೊರಭಾಗದ ಎಡ ಭಾಗದ ಕಪ್ಪು ಶಿಲಾ ಫಲಕಗಳಲ್ಲಿನ ಮಾಹಿತಿ ನಮಗೆ ಅಧಿಕೃತ ಮಾಹಿತಿ ಒದಗಿಸುತ್ತದೆ. ಕನ್ನಡ ಹಾಗೂ ಹಿಂದಿ ಬಳಕೆಯ ಫಲಕಗಳಲ್ಲಿ ದೇವಸ್ಥಾನದ ನಿರ್ಮಾಣದ ಕಾಲಘಟ್ಟ ೧೯೧೪ ಎಂದು ಸ್ಪಷ್ಟಪಡಿಸಿದೆ ಈ ದೇವಾಲಯ ೧೧೨ ವರ್ಷಗಳ ಹಿಂದೆ ಕಟ್ಟಿದ ದೇವಾಲಯ ಎಂದು ತಿಳಿಯಲು ನೆರವಾಗಿದೆ. ಹೊಸಗನ್ನಡದ ಆರು ಸಾಲಿನ ಈ ಫಲಕದಲ್ಲಿ “ಶ್ರೀ ಬಸವೇಶ್ವರ ಪ್ರಸನ್ನ ಗಂಗಪ್ಪಗೌಡಾ ಸಂಗನಬಸಪ್ಪ ಗೌಡಾ ಪಾಟೀಲ ಸಂಗಮಕರ ಇವರಿಂದ ನಿರ್ಮಿಸಲ್ಪಟ್ಟಿದೆ. ಸನ್ ೧೯೧೪ ಇಸ್ವಿ” ಎಂದು ಇದರ ಭಾಷಾಂತರ ರೂಪವೇ ಪಕ್ಕದ ಫಲಕದಲ್ಲಿ ಕಾಣುತ್ತೇವೆ. ಅದೇ ರಿತಿ ಗರ್ಭ ಗುಡಿಯ ಪ್ರವೇಶದ್ವಾರದ ಮೇಲ್ಬಾಗದಲ್ಲಿ ಆಂಗ್ಲಭಾಷೆಯಲ್ಲಿ ಜಿ.ಎಸ್. ಪಾಟೀಲ ಸಂಗಮ ಎಂಬ ಶಿಲಾಫಲಕ ಕಾಣುತ್ತೇವೆ. ಸಂಗಮಕರ ಹೆಸರಿನ ಹಿನ್ನಲೆ ಅವಲೋಕಿಸುವಾಗ ಆ ಕಾಲಘಟ್ಟದಲ್ಲಿ ಈ ಭಾಗದಲ್ಲಿ ಮರಾಠಿ ಭಾಷೆಯ ಪ್ರಭಾವ ಇತ್ತೆಂದು ಸಂಗಮದ ಪಾಟೀಲ ಮನೆತನದ ಹಿರಿಯರಾದ ಜಿ.ಜಿ ಪಾಟೀಲರು ತಿಳಿಸುತ್ತಾರೆ. ಈ ಬಸವಣ್ಣನ ಗುಡಿಯ ಬಗ್ಗೆ ಅವರ ಹಿರಿಯರು ಹೇಳಿದಂತೆ ತಮ್ಮ ಸಹೋದರ ಸಂಬಂಧಿ ಕುಟುಂಬದ ಶ್ರೀ ಎಲ್.ಎಮ್ ಪಾಟೀಲ ಅವರ ಮಾತ್ರೋಶ್ರೀ ಸೋನಾಬಾಯಿ ಗೌಡತಿಯವರು ದಿ. ಮಲಕಾಜಪ್ಪಗೌಡರ ಧರ್ಮಪತ್ನಿ ಸೋನವ್ವ ಗೌಡತಿಯವರು ಈ ಮಡ್ಡಿ ಬಸವಣ್ಣನನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿ ಹರಕೆ ಹೊತ್ತು ಬಹುಕಾಲದ ವರೆಗೆ ಮಕ್ಕಳ ಭಾಗ್ಯ ಇರದ ಇವರಿಗೆ ಈ ಬಸವಣ್ಣನ ಪೂಜೆ ಹರಕೆಯ ಫಲವಾಗಿ ಮಕ್ಕಳಭಾಗ್ಯ ಲಭಿಸಿ ಈ ದೈವದ ಶಕ್ತಿ ಶ್ರೇಷ್ಠ ಎಂದು ಎಲ್ಲರೂ ನಂಬುವಂತಾಗಿತ್ತೆಂದು ಇವರ ಹೇಳಿಕೆಯಿಂದ ತಿಳಿದುಬರುತ್ತದೆ. ಹಿರಿಯರಾದ ಬಸಯ್ಯನವರು ಕೋಟೂರ ಇವರ ಪೂರ್ವಜರ ಕಾಲದಿಂದಲೂ ಬಸವಣ್ಣಗುಡಿಯ ಪೂಜೆ ಪುನಸ್ಕಾರ ಯಶಸ್ವಿಯಾಗಿ ನಡೆದುಕೊಂಡು ಬಂದಿರುವದು ಅಭಿಮಾನದ ಸಂಗತಿಯಾಗಿದ್ದು ಎಲ್ಲರಿಗೂ ಒಳಿತಾಗಿದೆ ಎಂದು ಜಿ.ಜಿ.ಪಾಟೀಲ ಹಿರಿಯರು ಹೇಳುತ್ತಾರೆ. ಇಂದಿಗೂ ಪ್ರತಿ ವರ್ಷ ಜಾತ್ರೆಯ ಅವಧಿಯಲ್ಲಿ ಪಾಟೀಲ ಮನೆತನದ ಸದಸ್ಯರು ಭಕ್ತಿಯಿಂದ ಪಾಲ್ಗೊಳ್ಳುತ್ತಾ ಬಂದಿದ್ದಾರೆ.

ಕೋಟೂರ ಅರ್ಚಕ ಪರಿವಾರದವರ ಭಕ್ತಿ ಸೇವೆ:-

ಮೂಲತಃ ಕೊಟ್ಟೂರ ಭಾಗದಿಂದ ಸಂಗಮಕ್ಕೆ ಆಗಮಿಸಿ ಸಂಗಮನಾಥನ ಪೂಜಾ ಹಾಗೂ ಇನಾಂ ಭೂಮಿಗಳಿಸಿದ ಪ್ರಸ್ತುತ ಸಂಗಮದ ಅರ್ಚಕರ ಕಾಲೋನಿಯಲ್ಲಿ ವಾಸಿಸುತ್ತಿರುವ ಕೋಟೂರ ಎಂಬ ಜಂಗಮ ಮನೆತನದವರಿಗೆ ಖಜಗಲ್ಲ ಬಸವಣ್ಣ ದೇವರ ಗುಡಿಯ ಪೂಜಾರಿಕೆ ಇದ್ದಿರುವುದು ಕಂಡು ಬರುತ್ತದೆ. ಕೋಟೂರ ಎಂಬ ಮನೆತನದ ಹೆಸರಿನೊಟ್ಟಿಗೆ ಈ ಮನೆತನದ ಹಿರಿಯರಾದ ಬಸಯ್ಯನವರು ಖಜಗಲ್ಲ ಬಸಯ್ಯನವರೆಂದು ಇವರ ಧರ್ಮಪತ್ನಿ ಸಾವಿತ್ರಮ್ಮ ಖಜಗಲ್ಲ ಶಾವಂತ್ರಮ್ಮ ಎಂದು ಜನರ ಮನದಾಳದಲ್ಲಿ ಉಳಿದಿದ್ದಾರೆ. ಇದು ಈ ಊರಿನೊಟ್ಟಿಗೆ ಇವರ ಮನೆತನ ಹೊಂದಿದ ಪಾರಂಪರಿಕ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಪ್ರತಿ ನಿತ್ಯ ಬೆಳಗಿನ ಜಾವಾ ಈ ಮನೆತನದವರು ದೇವಾಲಯವನ್ನು ಜಲದಿಂದ ಶುಚಿಗೊಳಿಸಿ ಪೂಜೆ ನೇರವೇರಿಸುತ್ತಾರೆ. ಪ್ರತಿ ಸೋಮವಾರದಂದು ವಿಶೇಷ ಅಲಂಕಾರ ಪೂಜೆ ನಡೆಯುತ್ತದೆ. ಶ್ರಾವಣದ ಮಾಸದ ಜಾತ್ರಾ ಸಂದರ್ಭಕ್ಕೆ ಅಭಿಷೇಕ ಪೂಜೆ ನಾನಾವಿಧದ ಅಲಂಕಾರ ಬಸವಣ್ಣನಿಗೆ ಸಮರ್ಪಿತ ಗೊಳ್ಳುತ್ತದೆ. ಮಡ್ಡಿ ಬಸವಣ್ಣನ ಗುಡಿ ಇರುವ ಹೊಲ ಈ ಮನೆತನದ ವರಿಗೆ ಉಂಬಳಿಯಾಗಿ ಪಾಟೀಲ ಮನೆತನದವರಿಂದ ದೊರೆತಿದ್ದು ಈ ಮನೆತನದವರೆ ಸಾಗುವಳಿ ಮಾಡುತ್ತಾ ಹೊಲವನ್ನು ಉಪಭೋಗಿಸುತ್ತಾ ಬಸವಣ್ಣನ ಗುಡಿಯ ಧಾರ್ಮಿಕ ಕಾರ್ಯಗಳನ್ನು ನಿರಂತರವಾಗಿ ಮನ್ನಡೆಸಿ ಕೊಂಡು ಬಂದಿದ್ದಾರೆ. ಅಮರಯ್ಯ.ಬ ಕೋಟೂರ, ಸಂಗಯ್ಯ.ಬ ಕೋಟೂರ, ಪ್ರಭುನಂದಯ್ಯಾ ಬ. ಕೋಟೂರ ಸೇರಿದಂತೆ ಇತ್ತಿಚೀನ ತಲೆಮಾರಿನವರಾದ ಕುಮಾರ ಅಮರಯ್ಯ ಕೋಟೂರು, ಬಸಯ್ಯಾ ಅಮರಯ್ಯ ಕೋಟೂರ, ನಿರಂಜನ ಸಂಗಯ್ಯ ಕೋಟೂರ ಸೇರಿದಂತೆ ದಿ. ಕೆ.ಬಿ ಕೋಟೂರ ಅವರ ಸುಪುತ್ರರಾದ ಶಿವನಂಜಯ್ಯ ಕೂ. ಕೋಟೂರ. ಓಂಕಾರ ಕೂ.ಕೋಟೂರ ಇವರೆಲ್ಲರೂ ಭಕ್ತಿ,ನಿಷ್ಠೆ ಶ್ರದ್ಧೆಯಿಂದ ಅವರ ಹಿರಿಯರು ಹಾಕಿ ಕೊಟ್ಟ ಸನ್ಮಾರ್ಗದಂತೆ ಮಡ್ಡಿ ಬಸವಣ್ಣ ದೇವರ ಪೂಜೆ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ಬೇಡಿಬಂದ ಭಕ್ತರಿಗೆ ಮಡ್ಡಿ ಬಸವಣ್ಣ ಸಕಲ ಇಷ್ಟಾರ್ಥಗಳನ್ನು ಇಡೇರಿಸುತ್ತಾ ಖಜಗಲ್ ಭಕ್ತರ ಸುತ್ತಮುತ್ತಲ ಗ್ರಾಮದ ಭಕ್ತರ ಆರಾಧ್ಯ ದೈವ ಎನಿಸಿದ್ದು ನಮ್ಮ ಮನೆತನದ ಸರ್ವರೂ ಒಗ್ಗೂಡಿ ಸಂಭ್ರಮದಿಂದ ಜಾತ್ರೆ, ಅನ್ನಪ್ರಸಾದ, ಕಳಸೋತ್ಸವ ನೇರವೇರಿಸುತ್ತೇವೆ ಎಂದು ಅರ್ಚಕರಾದ ಶ್ರೀ ಕುಮಾರ ಅಮರಯ್ಯಾ ಕೋಟೂರ ಹೇಳುತ್ತಾರೆ.

ಶ್ರೀ ಬಸವಣ್ಣ ದೇವರ ಗುಡಿ:-

ಕೂಡಲಸಂಗಮ ಮುಖ್ಯ ರಸ್ತೆಗೆ ಹೊಂದಿ ಕೊಂಡಿರುವ ಬಲ ಭಾಗದ ಹೊಲದಲ್ಲಿ ಆಕರ್ಷಕವಾಗಿ ನಿರ್ಮಾಣ ಗೊಂಡಿರುವ ಈ ದೇವಾಲಯ ಹೊಲದ ಎತ್ತರದ ಭಾಗದಲ್ಲಿ ನಿರ್ಮಾಣ ಗೊಂಡಿದೆ. ಪೂರ್ವಕ್ಕೆ ಅಭಿಮುಖವಾಗಿ ನಿರ್ಮಾಣಗೊಂಡ ಈ ದೇವಾಲಯದ ಬಸವಣ್ಣ ದೇವರಿಗೆ ಸೂರ್ಯರಶ್ಮಿಯ ಆರತಿ ನಿತ್ಯ ಕಂಡು ಬರುತ್ತದೆ. ಹೊರ ಭಾಗದಲ್ಲಿ ಎಂಟು ಕಲ್ಲಿನ ಕಂಬಗಳು, ಗರ್ಭಗುಡಿ ಪಾರ್ಶ್ವಕ್ಕೆ ನಾಲ್ಕು ಕಲ್ಲಿನ ಕಂಬಗಳು, ಕಲ್ಲಿನ ಮಾದರಿಯ ತೊಲೆಗಳಿಗೆ ಹೊಂದಿಕೊಂಡಂತೆ ಇರಲಾಗಿದ್ದು ದೇವಾಲಯದ ಆಧಾರ ಸ್ಥಂಬಗಳಾಗಿ ಕಂಡುಬರುತ್ತವೆ. ಆಕರ್ಷಕ ಮಾಡಗಳ ಬಹುತೇಕ ದೀಪ ಬೆಳಗಿಸಲು ಪೂಜಾ ಪರಿಕರಗಳನ್ನು ಇಡಲು ನಿರ್ಮಿಸಿದಂತೆ ತೋರುತ್ತದೆ.ಎರಡಂಕಣದ ದೇವಾಲಯ ಇದಾಗಿದ್ದು ಹೊರಭಾಗದಲ್ಲಿ ಕಮಾನು ಮಾಧರಿಯ ದ್ವಾರ ಗುರುತಿಸುವಾಗ ಇಸ್ಲಾಂ ಶೈಲಿಯ ಪ್ರಭಾವ ಕಂಡುಬರುತ್ತದೆ. ದೇವಾಲಯದ ಮೇಲ್ಛಾವಣಿಗೆ ಹೊಂದಿಕೊಂಡಂತೆ ಕಂಡು ಬರುವ ಕಲ್ಲಿನ ಚಿಕ್ಕ ಚಿಕ್ಕ ಒಂಬತ್ತು ಮಾಡಗಳು ಎಡ ಬಲದ ಮುಂಭಾಗದ ಗೋಡೆಗೆ ಹೂವಿನಾಕಾರದ ಕೆತ್ತನೆ ನೋಡುಗರನ್ನು ಆಕರ್ಷಿಸುತ್ತವೆ. ಸಂಪೂರ್ಣ ದೇವಾಲಯ ಕಲ್ಲಿನಿಂದ ನಿರ್ಮಾಣಗೊಂಡಿದ್ದು ಸುಣ್ಣವನ್ನು ಕಂಬಗಳಿಗೆ ಗೋಪುರಕ್ಕೆ ತೆಳು ಹಳದಿ ಬಣ್ಣವನ್ನು ಹಚ್ಚಿದ್ದಾರೆ. ಕಟ್ಟಿಗೆ ಬಾಗಿಲು ಹಾಗೂ ಚೌಕಟ್ಟಿನ ಭಾಗ ಕಿರು ಮಾಡಗಳಿಗೆ ಕಂದು ಕೆಂಪುವರ್ಣದ ಬಳಕೆ ಕಾಣುತ್ತೇವೆ. ದೇವಾಲಯದ ಮೇಲ್ಬಾಗದ ಎಡ ಬಲದಲ್ಲಿ ಬಸವಣ್ಣನ ವಿಗ್ರಹಗಳಿದ್ದು ದೈವಿ ಸ್ವರೂಪವನ್ನು ಹೊಂದಿವೆ. ಗೋಪುರದ ಮೇಲ್ಭಾಗದಲ್ಲಿಯು ಬಸವಣ್ಣನ ಕಿರು ವಿಗ್ರಹ ಇರಲಾಗಿವೆ. ಅಲ್ಲಲ್ಲಿ ಕಬ್ಬಿಣದ ಕಿರು ಬಳೆಗಳು ಇರಲಾಗಿದ್ದು ತಳಿರು ತೋರಣ ಕಟ್ಟಲು ನೆರವಾಗುತ್ತವೆ.ದೇವಾಲಯದ ಕಳಸ ಸಹಿತ ಗೋಪುರ ಭಕ್ತ ಮನಗಳಿಗೆ ಆನಂದವನ್ನು ಉಂಟು ಮಾಡುತ್ತದೆ. ದೇವಾಲಯದ ಬಲಭಾಗಕ್ಕೆ ಜಲಧಾರೆ ಕಲ್ಲಿನಿಂದ ನಿರ್ಮಾಣವಾಗಿದೆ. ದೇವಾಲಯದ ಪೂಜೆ ಅಭಿಷೇಕದ ಜಲ ಈ ಜಲಧಾರೆಯ ಮೂಲಕ ಹೊರಬಂದು ಹೂವಿನ ಸಸಿಗಳಿಗೆ ಸೇರುತ್ತದೆ. ಆಧುನಿಕ ಶೈಲಿಯ ಹೊರ ರಕ್ಷಾ ಗೋಡೆ ಕಂಪೌಡ ದೇವಾಲಯದ ವ್ಯಾಪ್ತಿಯನ್ನು ನಿಗದಿಗೊಳಿಸಲು ನೆರವಾಗಿದೆ. ಮುಂಭಾಗದ ಕಂಬದ ಮೇಲಿನ ಭಾಗದಲಿನ ಅಡ್ಡ ಶಿಲೆಯಲ್ಲಿ ಶ್ರೀ ಮಡ್ಡಿ ಬಸವೇಶ್ವರ ಪ್ರಸನ್ನ ಎಂದು ಕುಂಚ ಕಲಾವಿದರಿಂದ ಬರೆಯಿಸಿದ್ದನ್ನು ಕಾಣುತ್ತೇವೆ. ಶತಮಾನದಷ್ಟು ಹಿಂದಿನ ದೇಗುಲ ತನ್ನ ಮೂಲ ಸ್ವರೂಪವನ್ನು ಕಾಪಾಡಿಕೊಂಡು ಬಂದಿರುವುದನ್ನು ಕಾಣುತ್ತೇವೆ.

ಗರ್ಭ ಗುಡಿಯಲ್ಲಿ ಪ್ರತಿಷ್ಠಾಪಿತ ಬಸವಣ್ಣ:-

ಖಜಗಲ್ಲ ಮಡ್ಡಿ ಬಸವಣ್ಣ ದೇವರು ಗರ್ಭಗುಡಿಯಲ್ಲಿ ಪ್ರಶಾಂತವಾದ ಮುಖಭಾವ ಅಲಂಕೃತ ದೇಹಹೊಂದಿ ದ್ಯಾನಸ್ಥ ಸ್ಥಿತಿಯಲ್ಲಿ ಪ್ರತಿಷ್ಠಾಪಿತ ಬಸವಣ್ಣನ ಮೂರ್ತಿಶಿಲ್ಪವನ್ನು ಕಾಣುತ್ತೇವೆ. ಎತ್ತು ಅಥವಾ ಗೂಳಿಯ ರೂಪದ ಮಡ್ಡಿ ಬಸವಣ್ಣ ಬಲ ಶಕ್ತಿಯ ಸ್ವರೂಪವಾಗಿ ಇಲ್ಲಿ ನೆಲೆನಿಂತಿದ್ದಾನೆ. ಗರ್ಭಗುಡಿಯ ಬಾಗಿಲು ಚಿಕ್ಕದಾಗಿದ್ದು ಪುಷ್ಪದ ಕೆತ್ತನೆ ಸೂರ್ಯ ಚಂದ್ರ ಕೆತ್ತನೆ ಅಲಂಕಾರಿಕ ಬಾಗಿಲು ಚೌಕಟ್ಟು ಕಾಣುತ್ತೇವೆ. ಬಸವಣ್ಣ ವಿಗ್ರಹ ಪ್ರತ್ಯೇಕ ಪೀಠದ ಮೇಲೆ ಕೆತ್ತಲ್ಪಟ್ಟಿದೆ. ಕೊರಳ ಘಂಟೆ ಸರ ಹಣೆಕಟ್ಟು ಬಾಸಿಂಗ ಕಾಲುಗಡಗ ಅಲಂಕಾರಿಕ ಕೆಲವು ರಚನೆಗಳನ್ನು ಗಮನಿಸುವಾಗ ಕೈಲಾಸದಲ್ಲಿ ಶಿವನ ಮುಂದೆ ಕುಳಿತ ನಂದಿಯ ಚಿತ್ರಣ ನೆನೆಪಿಗೆ ಬರುತ್ತದೆ. ನೆಲಹಾಸಾಗಿ ಇತ್ತೀಚೀನ ವರ್ಷಗಳಲ್ಲಿ ಗ್ರಾನೈಟ ಬಳಸಿದ್ದನ್ನು ಗರ್ಭಗುಡಿಯಲ್ಲಿ ಕಾಣುತ್ತೇವೆ. ಹಿಂಭಾಗದಲ್ಲಿ ಪ್ರಭಾವಳಿ ಮಾಧರಿಯ ಅಲಂಕಾರಿಕ ಮಾಧರಿ ಗುರುತಿಸುತ್ತೇವೆ. ಘಂಟೆ, ಜಾಗಟೆ, ಶಂಖ, ದೂಪಾರತಿ ಪಂಚಲೋಹದ ಕಿರು ಬಸವಣ್ಣ ಗರ್ಭಗುಡಿಯ ಒಳಗಡೆ ಕಾಣುತ್ತೇವೆ. ಜಾತ್ರೆಯ ಸಂಧರ್ಭದಲ್ಲಿ ಅರ್ಚಕರು ಈ ಮಡ್ಡಿ ಬಸವಣ್ಣನಿಗೆ ಬೆಳ್ಳಿಯ ಮಗಡ, ಕಣ್ಣುಬೊಟ್ಟು, ಹೊಸ ವರ್ಣಮಯ ಗಲ್ಲೀಪುಗಳು ಕೋಮ್ಮನಸು ಹಾರ, ಬಾಸಿಂಗಗಳನ್ನು ಹಾಕುವ ವಾಡಿಕೆಯನ್ನು ಕಾಣುತ್ತೇವೆ. ಅಭಿಷೇಕ ಪೂಜೆ ಸಂಪನ್ನಗೊಂಡು ಭಸ್ಮ ಗಂಧ ಚಂಧನ ಕುಂಕುಮ ಬಿಲ್ವಪತ್ರೆ ಮುಂತಾದವುಗಳಿಂದ ಅಲಂಕೃತಗೊಳುವ ಬಸವಣ್ಣನ ಮೂರ್ತಿಯನ್ನು ಕಂಡು ಸಂಭ್ರಮಿಸುವದೇ ಭಕ್ತ ಮನಗಳಿಗೆ ಆನಂದವನ್ನುಂಟು ಮಾಡುತ್ತವೆ.

ಮಡ್ಡಿ ಬಸವಣ್ಣ ಮಂದಹಾಸ ಸುರಿದಾನೋ..!

ಕವನ ರಚನೆ:ಶ್ರೀಮತಿ ಪ್ರತಿಭಾ.ಭೀಮು ವಾಲಿಕಾರ

ಯುವ ಲೇಖಕಿ,ಕವಯಿತ್ರಿ

ಖಜಗಲ್ಲ, ಬಾಗಲಕೋಟೆ ಜಿಲ್ಲೆ ಖಜಗಲ್ಲ ಗ್ರಾಮಕ್ಕೆ ಒಲಿದು ಬಂದಾನೋ…ಜನರ ಮನಸ್ಸು ಕದ್ದಾನೋಮನಸ್ಸಿನ ಚಿಂತಿ ಅರಿತಾನತಂದಾನ ಹರುಷ ಜನರಿಗೆ ||೧||

ನಾಡಿನ ಒಡೆಯನಿಗೆ ನಂದಿಯಾಗಿ ದುಡಿದಾನೊ…ಭೂಮಿತಾಯಿ ಒಲಿದಾಳೋ ಬಸವಣ್ಣಗನಂದಿಯ ಘಂಟೆ ಸದ್ದಾಗಿ ಶಿವನ ಪೂಜೆಗೆ ಶೋಭೆಯಾಗಿವೆ.ಹಸಿವಿನ ಹಂಗು ತೊರೆದಾನ ಈ ಬಸವಣ್ಣ ||೨||

ಶಿವ ಮೆಚ್ಚ್ಯಾನ ಬಸವಣ್ಣಗಬಸವಣ್ಣ ಮಾಡ್ಯಾನ ಶಿವನ ಸೇವಾಹೌದ್ ಹೌದ್ ಎಂದು ಹಣೆಮನೆದು ನಂದಿಯ ಪಾದ ತೋಳಿಯ್ಯೋರಭಕ್ತರ ಮನೆಯಲ್ಲಿ ನೆನದಾನ ||೩||

ಬಸವಣ್ಣನ ಮೆಚ್ಚಿ ಮಾಡ್ಯಾರ ಭಕ್ತಿಯ ಜಾತ್ರೆಸ್ವಾಮಾರ ಸಡಗರ ನೋಡಿರಿ..ಶ್ರಾವಣ ಮಾಸದಾಗ ಮಿಂಚ್ಯಾಣ ಮಡ್ಡಿ ಬಸವಣ್ಣಮಲ್ಲಿಗೆ ಹೂ ಭಾಗ್ಯಾವ ಲಿಂಗಕ್ಕೆ ||೪||

ಮ-ಮಡ್ಡಿ ಬಸವಣ್ಣ ಮಂದಹಾಸ ಸುರಿದಾನೋ…

ಡ್ಡಿ-ಡೊಳ್ಳಿನನಾದ ಬಂದಾವ ಬಸವಗಬ-ಬಂಗಾರದ ದಂಡಿ-ಬಾಸಿಂಗ ಮುಡಿದಾನಸ-ಸಂಸಾರದ ಬಂಡಿ ಸಾಗಿಸ್ಯಾನೋವ-ವಕ್ಕಲಿಗನ ಕೈಯಾಗ ಎತ್ತಾಗಿ ಆಡ್ಯಾನಣ್ಣ- ಹುಣ್ಣಿಮೆ ಬೆಳಕು ಇನಿವುಳ್ಳ ಮಡ್ಡಿ ಬಸವಣ್ಣ. ||೫||

ಸಕಲ ಭಕ್ತರ ಕೂಡಿ ಮಾಡುವ ಸಂಭ್ರಮದ ಜಾತ್ರೆ:-

ಖಜಗಲ್ಲ ಮಡ್ಡಿ ಬಸವಣ್ಣನ ಜಾತ್ರೆ ಕಳಸೋತ್ಸವ ಪ್ರತಿ ವರ್ಷ ಶ್ರಾವಣ ಎರಡನೇ ಸೋಮವಾರ ನಡೆಸಿಕೊಂಡು ಬರುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೂಡಲಸಂಗಮ- ಖಜಗಲ್ಲ ಸುತ್ತಲಿನ ಭಕ್ತ ವೃಂದ ನೇಮ ನಿತ್ಯದಿ ಪೂಜೆ, ಭಜನೆ ಮಹಾ ಪ್ರಸಾದ ಏರ್ಪಡಿಸಿ ಜಾತ್ರೆ ನಡೆಸುತ್ತಾರೆ. ಅಂದು ದೇವಾಲಯ ತಳಿರು ತೋರಣ ಫಲ ಪುಷ್ಪಗಳಿಂದ ಅಲಂಕಾರಗೊಂಡಿರುತ್ತದೆ. ಕೋಟೂರ ಪರಿವಾರದ ಅರ್ಚನೆ ಪೂಜೆಗಳು, ಹರಕೆ ಹೊತ್ತ ಭಕ್ತರ ಭಕ್ತಿ ಸಮರ್ಪಣೆನಡೆದು ಸರ್ವಧರ್ಮಿಯರು ಬಸವಣ್ಣನ ಅಂಗಳದಲ್ಲಿ ಕುಳಿತು ಅನ್ನ ಪ್ರಸಾದ ಸೇವಿಸಿ ಬಸವಣ್ಣನ ಕೃಪೆಗೆ ಪಾತ್ರರಾಗುತ್ತಾ ಬಂದಿದ್ದಾರೆ. ಆಬಾಲ ವೃದ್ಧರಾದಿಯಾಗಿ ಎಲ್ಲರೂ ಬಸವಣ್ಣನ ಜಾತ್ರೆಯಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ಮುಂಬರುವ ವರ್ಷಗಳಲ್ಲಿ ಈ ಜಾತ್ರೆಗೆ ಮತ್ತಷ್ಟು ಸಾಂಸ್ಕೃತಿಕ ಧಾರ್ಮಿಕ ಮನ್ನಣೆ ದೊರೆಯಲಿ ಎಂಬುದು ಈ ಭಾಗದ ಭಕ್ತರ ಆಶಯವಾಗಿದೆ.

ಬಸವಣ್ಣ ದೇವರ ಕಳಸ ಮೆರವಣಿಗೆ:-

ಜಾತ್ರೆ ಅಂಗವಾಗಿ ಎಲ್ಲ ಧಾರ್ಮಿಕ ಸ್ಥಳ ದೇವಾಲಯಗಳಲ್ಲಿ ಕಳಸ ಪೂಜೆ ಸಲ್ಲಿಸುವ ಸಂಪ್ರದಾಯ ಇರುವಂತೆ ಪಂಚಭೂತಗಳ ಪ್ರತೀಕದಂತಿರುವ ಮಡ್ಡಿ ಬಸವಣ್ಣನ ಕಳಸ ವರ್ಷ ಪರ್ಯಂತರ ದೇವಾಲಯದ ಶಿಖರವನ್ನು ಅಲಂಕರಿಸಿರುತ್ತದೆ. ಜಾತ್ರೆಯ ಅವಧಿಗೆ ಕಳಸವನ್ನು ಬೆಳಗಿ ಆರಂಭದಲ್ಲಿ ದೇವಾಲಯದ ಬಲಭಾಗದಲ್ಲಿ ಕಂಬಳಿ ಹಾಸಿ ಪ್ರತಿಷ್ಠಾಪಿಸಿರುತ್ತಾರೆ. ಖಜಗಲ್ಲ ಹಾಗೂ ಸುತ್ತಮುತ್ತಲಿನ ಭಕ್ತರ ಉದ್ಘಾರ ಘೋಷ, ಮಂಗಲವಾದ್ಯಮೇಳಗಳ ನಾದ ನಿನಾದ ಮುತ್ತೈದೆಯರ ಕಳಸ ಕನ್ನಡಿ ವೈಭವದೊಂದಿಗೆ ಕಳಸವನ್ನು ತಲೆಯ ಮೇಲೆ ಹೊತ್ತು ದೇವಾಲಯದ ಪ್ರದಕ್ಷಿಣ ಪಥವನ್ನು ಸುತ್ತು ಹೊಡೆಯುವದು ಗ್ರಾಮದ ತುಂಬೆಲ್ಲಾ ಮೆರವಣಿಗೆ ಹೊಂಡುವದು ಊರ ಗೌಡರು ಸೇರಿದಂತೆ ಪಾರಂಪರಿಕ ಮನೆತನದವರ ಭಕ್ತರ ಪೂಜೆ ಪುನಸ್ಕಾರ ಕಾಯಿ ಕರ್ಪೂರ ನೈವೇದ್ಯ ಕುಲಾಯಿ ಹೊದಿಸುವ ಸಂಪ್ರದಾಯ ಜರುಗಿ ಪುನಃ ದೇವಾಲಯವನ್ನು ಪ್ರವೇಶಿಸಿ ದೇವಾಲಯದ ಶಿಖರವನ್ನು ಏರುವ ವೈಭವದ ದೃಶ್ಯವನ್ನುಕೊಂಡು ಕಾಣುವಾಗ ಭಕ್ತರ ಹೃನ್ಮನಗಳು ಸಂತಸಗೊಳ್ಳುತ್ತವೆ. ಜಾತ್ರೆ ಸಂಪನ್ನ ಗೊಳ್ಳುವ ಕಾಲಕ್ಕೆ ಸಾಮೂಹಿಕವಾಗಿ ಆರತಿ, ಕಾಯಿ ಕರ್ಪೂರ ಹಿಡಿದು ಘಂಟನಾದ ಮೊಳಗಿಸುತ್ತಾ ಮಂಗಳಾರತಿ ನೇರವೇರಿಸುವಾಗ ಶಿವನ ಕೈಲಾಸದಲ್ಲಿರುವ ನಂದಿ ಬಸವಣ್ಣನಿಗೆ ಭಕ್ತಿ ಪೂಜೆ ನೇರವೇರುವಂತಹ ದೃಶ್ಯ ವೈಭವ ಮರಕಳಿಸುತ್ತದೆ.

ಶತಮಾನದಷ್ಟು ಹಳೆಯದಾದ ಮಡ್ಡಿ ಬಸವಣ್ಣನ ದೇವಾಲಯ ಜಾತ್ರಾ ವೈಭವ ತನ್ನದೇಯಾದಂತಹ ವೈಶಿಷ್ಟ್ಯತೆಗಳನ್ನು ಹೊಂದಿ ಈ ಭಾಗದಲ್ಲಿ ಧಾರ್ಮಿಕ ಸಂಸ್ಕಾರಗಳು ಅರ್ಥಪೂರ್ಣ ಆಚರಣೆಗಳು ಮುಂದುವರೆದುಕೊಂಡು ಬರಲು ನೆರವಾಗಿವೆ. ಭವಿತವ್ಯದ ವರ್ಷಗಳಲ್ಲಿ ಈ ದೇವಾಲಯ ಮತ್ತಷ್ಟು ಜೀರ್ಣೊದ್ಧಾರ ಅಭಿವೃದ್ಧಿ ಕಾಣುವಂತಾಗಲಿ ಸಂಗಮಕ್ಷೇತ್ರಕ್ಕೆ ಆಗಮಿಸುವಂತಹ ಭಕ್ತರಿಗೆ ಸಮೀಪದಲ್ಲಿನ ಖಜಗಲ್ಲ ಗ್ರಾಮದಲ್ಲಿ ನೆಲೆ ನಿಂತ ಈ ಅಪರೂಪದ ನಂದಿ ಬಸವಣ್ಣನನ ದರ್ಶನ ಭಾಗ್ಯ ದೊರೆಕುವಂತಾಗಲಿ ಕಾಲ ಕಾಲಕ್ಕೂ ಜಾತ್ರೆ ಉತ್ಸವ ಆಚರಣೆಗಳು ವಿಜೃಂಣೆಯಿಂದ ನಡೆದು ನಾಡಿನ ಭಕ್ತ ಸಮೂಹಕ್ಕೆ ಸನ್ಮಂಗಲವನ್ನುಂಟುಮಾಡಲಿ ಮಡ್ಡಿ ಬಸವಣ್ಣನ ಕಾರುಣ್ಯ ಆಶೀರ್ವಾದ ಸರ್ವರಿಗೂ ಒಳಿತನ್ನು ಕರುಣಿಸಲಿ.

ಲೇಖನ ಮಾಹಿತಿ ಕೃಪೆ:ಶ್ರೀಮತಿ ಪ್ರತಿಭಾ.

ಭೀಮು ವಾಲಿಕಾರ.ಖಜಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button