“ಪವಿತ್ರ ಬಂಧ ಸ್ನೇಹ”…..

ಸ್ನೇಹ ಜೀವನದ ಅಮೂಲ್ಯ ಸಂಬಂಧ ಸ್ನೇಹವು ಮಾನವ ಜೀವನದ ಅತ್ಯಂತ ಸುಂದರ ಮತ್ತು ಅಮೂಲ್ಯ ಸಂಬಂಧಗಳಲ್ಲಿ ಒಂದಾಗಿದೆ. ಇದು ನಮ್ಮ ಜೀವನವನ್ನು ಸಂತೋಷ, ಪ್ರೀತಿ ಮತ್ತು ಬೆಂಬಲದಿಂದ ತುಂಬಿಸುತ್ತದೆ. ಸ್ನೇಹಿತರು ನಮ್ಮ ಜೀವನದಲ್ಲಿ ಅನೇಕ ಪಾತ್ರಗಳನ್ನು ವಹಿಸುತ್ತಾರೆ, ನಮ್ಮ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳುತ್ತಾರೆ, ನಮಗೆ ಸಲಹೆ ಮತ್ತು ಪ್ರೋತ್ಸಾಹ ನೀಡುತ್ತಾರೆ ಮತ್ತು ನಮ್ಮನ್ನು ಬೆಂಬಲಿಸುತ್ತಾರೆ.
ಇಂದಿನ ದಿನಗಳಲ್ಲಿ ಉತ್ತಮ ಸ್ನೇಹಿತರನ್ನು ಪಡೆಯುವುದು ಎಂದರೆ ಅದಕ್ಕೂ ಪುಣ್ಯ ಬೇಕು ಎಂಬ ಮಾತೊಂದಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸ್ನೇಹ, ಸ್ನೇಹಿತರು ತಮ್ಮ ಮಹತ್ವ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಪರಿಸ್ಥಿತಿ ಬಂದೊದಗಿದೆ. ದುಡ್ಡು, ಅಧಿಕಾರವಿದ್ದಲ್ಲಿ ಮಾತ್ರ ಸ್ನೇಹ ಎಂಬ ಆಧುನೀಕರಣವು ಸ್ನೇಹವನ್ನೂ ಆವಿಸಿಕೊಂಡುಬಿಟ್ಟಿದೆ. ಇತಿಹಾಸವನ್ನು ಕೆದಕುತ್ತಾ ಹೋದರೆ ಅಲ್ಲಿ ಸ್ನೇಹಕ್ಕಿದ್ದ ಬೆಲೆಯನ್ನು ನಾವು ಕಾಣಬಹುದಾಗಿದೆ. ಕೃಷ್ಣ ಸುಧಾಮ, ದುರ್ಯೋಧನ ಕರ್ಣ, ಅರ್ಜುನ ಕೃಷ್ಣ, ಹೀಗೆ ಪುರಾಣಗಳಿಂದಲೇ ಸ್ನೇಹ ಮತ್ತು ಸ್ನೇಹಕ್ಕಿದ್ದ ಬಾಂಧವ್ಯವನ್ನು ಕಾಣಬಹುದು.
ಸ್ನೇಹ ಅಂದರೆ ಸುಂದರ ಸಂಬಂಧ ಅಷ್ಟೇ ಅಲ್ಲ, ಸ್ನೇಹವೆಂದರೆ ಭರವಸೆ, ನಂಬಿಕೆ ಮತ್ತು ನಿಷ್ಠೆ. ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು ನಿಷ್ಠೆಯಿಂದ ಇರುವುದು ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳುವುದೇ ಸ್ನೇಹ. ಸ್ನೇಹ ಎಂಬುದು ಎಂದೆಂದಿಗೂ ಬಿಡಿಸಲಾರದ ನಂಟು. ವ್ಯಕ್ತಿಯೋರ್ವನ ಜೀವನದ ಎಲ್ಲಾ ಹಂತಗಳಲ್ಲೂ ಸ್ನೇಹಿತರ ಪಾತ್ರ ಪ್ರಮುಖವಾದದ್ದು. ಸ್ನೇಹಿತರ ಮುಂದೆ ಮನಸ್ಸು ಹಕ್ಕಿಯಾಗುತ್ತದೆ. ಮನಸ್ಸಿನಲ್ಲಿರುವ ಭಾವನೆಗಳೆಲ್ಲಾ ಹೊರಗೆ ಬರುತ್ತದೆ.
ರಕ್ತ ಸಂಬಂಧವಿಲ್ಲದೆ ಪರಿಚಿತರಲ್ಲದೇ ಹೇಗೋ ಸ್ನೇಹವಾಗಿ ಅದು ಸಂಬಂಧವಾಗಿ ಎಲ್ಲಕ್ಕೂ ಮೀರಿದ ಆತ್ಮೀಯತೆ ಮೂಡಿ ಸಾಯುವವರೆಗೂ ನೆನಪಾಗಿ ಮನದಲ್ಲೇ ಉಳಿಯುವುದು ನಿಜವಾದ ಸ್ನೇಹ ಆದರೆ ಅಂತ ಸ್ನೇಹ ಸಿಗುವುದು ಬಹಳ ಅಪರೂಪ. ಸುತ್ತುತ್ತಿರುವ ಈ ಭೂಮಿಯಲ್ಲಿ ಸತ್ತು ಹೋಗುವವರು ನಾವೆಲ್ಲ ಹೊತ್ತು ತಂದಿಲ್ಲ ಏನನ್ನು ಒಯ್ಯುವುದಿಲ್ಲ ಯಾವುದನ್ನು ಇದ್ದಷ್ಟು ದಿನ ಗಳಿಸಬೇಕು ಸಾವಿಲ್ಲದ ಸ್ನೇಹವನ್ನು. ದೂರ ಮಾಡುವ ಬನ್ನಿ ದ್ವೇಷ ಹಗೆತನ ಪಸರಿಸೋಣ ಜಗಕೆಲ್ಲ ನಿಷ್ಕಲ್ಮಶ ಗೆಳೆತನ.
ಸ್ನೇಹ ಒಂದು ಸುಂದರ ಕವನ ನೂರೊಂದು ಭಾವನೆಗಳ ಮಿಲನ ಬದುಕಿನ ಜಂಜಾಟದಲ್ಲಿ ಬೇಸತ್ತ ಮುಗ್ಧ ಮನಸ್ಸಿಗೆ ಸಂಚಲನ ಈ ಸ್ನೇಹ. ಇರಬೇಕು ಬಾಳಲಿ ಮಧುರ ಗೆಳೆತನವೊಂದು ಮರುಭೂಮಿಯಲಿ ಅದುವೇ ಅಮೃತಬಿಂದು ಪ್ರೀತಿ ಮಧುರ ಸುಂದರ ಸ್ನೇಹ ಅಮರ ಕಷ್ಟ ಸುಖಗಳ ಹಂಚಿ ನಡೆವ ಸ್ನೇಹವು ಸಾಗರ. ಅಪರಿಚಿತರಾಗಿ ಕೂಡಿ ಪರಿಚಿತರಾಗಿ ವಿಭಿನ್ನ ಹೃದಯಗಳು ಆಕಸ್ಮಿಕವಾಗಿ ಬೆರೆತು ಶಾಶ್ವತವಾಗಿ ನಮ್ಮೊಡನೆ ನೆನಪಾಗಿರೋ ಸುಮಧುರವಾದ ಅನುಬಂಧವೇ ಸ್ನೇಹ. ಸ್ನೇಹದಲ್ಲಿ ಬರಬಾರದು ಮನಸ್ತಾಪ, ಸ್ನೇಹದಲ್ಲಿ ಇರಬಾರದು ಸಿರಿವಂತಿಕೆಯ ತಾರತಮ್ಯತೆ, ಸಾಗರದಂತೆ ಸದಾ ಸಾಗುತ್ತಿರಲಿ ಈ ಸ್ನೇಹ ಆಕಾಶದಂತೆ ವಿಶಾಲವಾಗಿರಲಿ ಈ ಸ್ನೇಹ. ಹೃದಯದಲ್ಲಿ ಅಮರವಾಗಲಿ ಈ ಸ್ನೇಹ ಸದಾ ಮಿನುಗುತ್ತಿರಲಿ ಆಕಾಶದ ನಕ್ಷತ್ರದಂತೆ ನಮ್ಮ ಈ ಸ್ನೇಹ. ಒಟ್ಟಾರೆಯಾಗಿ, ಸ್ನೇಹವು ಜೀವನದಲ್ಲಿ ಬಹಳ ಮುಖ್ಯವಾದ ಸಂಬಂಧವಾಗಿದೆ. ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ.
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ

