ಉಡುಪಿ ಜಿಲ್ಲಾ ಪಂಚಾಯತ್ನಲ್ಲಿ – ವ್ಯಾಪಕ ಭ್ರಷ್ಟಾಚಾರ !!!
ಉಡುಪಿ ಆ.03

ಕರ್ನಾಟಕ ಗ್ರಾಮ ಸ್ವರಾಜ್ & ಪಂಚಾಯತ್ ರಾಜ್ ಪರಿಕಲ್ಪನೆ ಗ್ರಾಮೀಣಾಭಿವೃದ್ದಿ. ಹಳ್ಳಿಗಳು ಉದ್ದಾರವಾದರೆ ದೇಶ ಉದ್ದಾರವಾದಂತೆ ಎಂಬ ಮಹಾತ್ಮ ಗಾಂಧಿಯವರ ಆಶಯವನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ 2009 ರಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತ ಗಳಲ್ಲಿ ಡೆಪ್ಯುಟಿ ತಹಶೀಲ್ದಾರ್ ದರ್ಜೆಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಹುದ್ದೆಯನ್ನು ಸೃಜನೆ ಮಾಡಲಾಯಿತು.ಆದರೆ ಕೈ ತುಂಬಾ ಸಂಬಳ ಪಡೆಯುತ್ತಿರುವ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಗ್ರಾಮಗಳಲ್ಲಿ ಜನರ ಸೇವೆ ಮಾಡದೇ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಡೆಪ್ಯುಟಿ ತಹಶೀಲ್ದಾರ್ ದರ್ಜೆಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸುಮಾರು 80 ಸಾವಿರದಿಂದ 1 ಲಕ್ಷ ದವರೆಗೆ ಸರ್ಕಾರದಿಂದ ವೇತನ ಪಡೆಯುತ್ತಿದ್ದು, ದ್ವಿ.ದ.ಸ / ಪ್ರ.ದ.ಸ ನೌಕರರು ನಿರ್ವಹಿಸುವ ಕರ್ತವ್ಯವನ್ನು ಮಾಡುತ್ತಾ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಸೀಲ್ ಗುದ್ದುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಗ್ರಾಮ ಪಂಚಾಯತ್ ಆಡಳಿತವನ್ನು ಸಂಪೂರ್ಣವಾಗಿ ಕುಸಿದು ಬೀಳುವಂತೆ ಮಾಡಿದೆ.ಗ್ರಾಮಾಭಿವೃದ್ದಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕಾದ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಸಿ.ಇ.ಓ ರವರಿಗೆ ಬಕೆಟ್ ಹಿಡಿದುಕೊಂಡು ಕಾಲಹರಣ ಮಾಡುತ್ತಿದ್ದಾರೆ ಮತ್ತು ಗ್ರಾಮ ಪಂಚಾಯತಗಳಲ್ಲಿ ರಾಜಕೀಯ, ಇನ್ನಿತರ ಒತ್ತಡದಲ್ಲಿ ಸೇವೆ ಸಲ್ಲಿಸುತ್ತಿರುವ ಪಿ.ಡಿ.ಓ ಮತ್ತು ನೌಕರರ ವಿರುದ್ದ ಇಲ್ಲಸಲ್ಲದ ಚಾಡಿಯನ್ನು ಸಿ.ಇ.ಓ ಕಿವಿಯಲ್ಲಿ ಹೇಳುತ್ತಾ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದು, ಜಿ.ಪಂ. ಸಿ.ಇ.ಓ ಪ್ರತೀಕ್ ಬಾಯಲ್ ರವರು ಸರ್ಕಾರದ ಆದೇಶ / ನಿಯಮಗಳನ್ನು ಪರಿಶೀಲೀಸದೇ ಕೇವಲ ಗೂಗಲ್ ನಲ್ಲಿ ಮಾಹಿತಿ ಪಡೆದುಕೊಂಡು ಜಿ.ಪಂ. ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಡಿ.ಓ ಗಳು ಹೇಳಿದ್ದನ್ನೇ ವೇದವಾಕ್ಯ ಎಂಬಂತೆ ಚಾಚೂ ತಪ್ಪದೇ ಕೇಳಿ ಉಡುಪಿ ಜಿಲ್ಲಾ ಪಂಚಾಯತನಲ್ಲಿ ಗೂಗಲ್ ಸಿ.ಇ.ಓ ಎಂದೇ ಪ್ರಸಿದ್ದರಾಗಿದ್ದಾರೆ.ಗ್ರಾಮ ಪಂಚಾಯತಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಪಿ.ಡಿ.ಓ ಗಳನ್ನು ಕಾನೂನು ಬಾಹಿರವಾಗಿ ಜಿಲ್ಲಾ ಪಂಚಾಯತಗೆ ನಿಯೋಜನೆ ಮಾಡಿ ಇತ್ತ ಗ್ರೇಡ್ – 2 ಕಾರ್ಯದರ್ಶಿಗಳಿಗೆ ಪಿ.ಡಿ.ಓ ಪ್ರಭಾರ ವಹಿಸುವುದು ಹಾಸ್ಯಾಸ್ಪದವಾಗಿದೆ. ಸರ್ಕಾರದ ನಿಯಮಗಳ ಪ್ರಕಾರ ಗ್ರಾಮ ಪಂಚಾಯತಗಳಲ್ಲಿ ಗ್ರೇಡ್ – 2 ಕಾರ್ಯದರ್ಶಿಗಳನ್ನು ಪಿ.ಡಿ.ಓ ಹುದ್ದೆಯ ಪ್ರಭಾರ ವಹಿಸುವಂತಿಲ್ಲ. ಆದರೆ ಜಿಲ್ಲೆಯ ಕೆಲವು ಗ್ರೇಡ್ -2 ಕಾರ್ಯದರ್ಶಿಗಳು ಆಯಕಟ್ಟಿನ ಜಾಗದಲ್ಲಿ ಹಲವಾರು ವರ್ಷಗಳ ಕಾಲ ಪಿ.ಡಿ.ಓ ಹುದ್ದೆಯ ಪ್ರಭಾರ ನಿರ್ವಹಿಸಿ ಲಕ್ಷಾಂತರ ರೂಪಾಯಿಗಳ ಸಾರ್ವಜನಿಕ ಹಣವನ್ನು ನುಂಗಿ ನೀರು ಕುಡಿದು ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ. ಸದರಿ ಗ್ರೇಡ್ -2 ಕಾರ್ಯದರ್ಶಿಗಳಿಗೆ ಕಾನೂನು ಬಾಹಿರವಾಗಿ ಲಕ್ಷಾಂತರ ರೂಪಾಯಿ ಪ್ರಭಾರ ಭತ್ಯೆಯನ್ನು ಪಾವತಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಲಾಗಿದೆ. ಜೇಷ್ಠತೆ ಪ್ರಕಾರ ಅಧೀಕ್ಷಕ ಅಥವಾ ವ್ಯವಸ್ಥಾಪಕರ ಹುದ್ದೆಗೆ ಸರ್ಕಾರದ ಅನುಮೋದನೆಯೊಂದಿಗೆ ಮೀಸಲಾತಿ ಪ್ರಕಾರ ನೇಮಕ ಮಾಡ ಬೇಕಾಗಿರುತ್ತದೆ. ಆದರೆ ಜಿಲ್ಲಾ ಪಂಚಾಯತ್ ಸಿ.ಇ.ಓ ಕಾನೂನು ಉಲ್ಲಂಘಸಿ ರಾಜಕೀಯ ಪ್ರಭಾವ ಇರುವವರಿಗೆ ಮಣೆ ಹಾಕಿ ಲೇಡಿ ಪಿ.ಡಿ.ಓ ಅವರನ್ನೇ ನಿಯೋಜನೆ ಮಾಡಿ ಕೊಂಡಿರುವುದರ ಹಿಂದಿನ ಮರ್ಮವೇನು ? ಜಿಲ್ಲಾ ಪಂಚಾಯತ್ ಅಧೀನದಲ್ಲಿ ಸುಮಾರು 42 ಇಲಾಖೆಗಳು ಇದ್ದು ಸದರಿ ಇಲಾಖೆಗಳಲ್ಲಿ ಹೆಚ್ಚಿನ ಕೆಲಸ ಇಲ್ಲದೇ ಇರುವ ಹಲವಾರು ಸಿಬ್ಬಂದಿಗಳಿದ್ದು ಅಂತಹ ಸಿಬ್ಬಂದಿಗಳನ್ನು ಜಿಲ್ಲಾ ಪಂಚಾಯತಗೆ ನಿಯೋಜನೆ ಮಾಡಿಕೊಳ್ಳಲು ಅವಕಾಶವಿದ್ದರೂ ಸಹ ಕೇವಲ ಅಭಿವೃದ್ಧಿ ಅಧಿಕಾರಿಗಳನ್ನೇ ಕಾನೂನು ಬಾಹಿರವಾಗಿ ಜಿಲ್ಲಾ ಪಂಚಾಯತಿಗೆ ನಿಯೋಜನೆ ಮಾಡಿಕೊಳ್ಳಲು ಇರುವ ಉದ್ದೇಶವಾದರೂ ಏನಿರಬಹುದೆಂದು ಗ್ರಾಮೀಣಾಭಿವೃದ್ದಿ ಸಚಿವರೇ ಉತ್ತರಿಸಬೇಕು.ಜಿಲ್ಲಾ ಪಂಚಾಯತಗೆ ಸಾರ್ವಜನಿಕರು ಅರ್ಜಿ ನೀಡಿದರೆ ಯಾವುದೇ ಕ್ರಮವಿಲ್ಲ, ಅರ್ಜಿದಾರರೇ ಬಸ್ ಚಾರ್ಜ್ ಖರ್ಚು ಮಾಡಿ ದೂರದ ಜಿಲ್ಲಾ ಪಂಚಾಯತಗೆ ಹೋಗಿ ತಮ್ಮ ತಮ್ಮ ಅರ್ಜಿಯ ಸ್ಥಿತಿ ಗತಿಯನ್ನು ವಿಚಾರಿಸಬೇಕು. ಅಲ್ಲಿಯೂ ಕೂಡ ನಿಯೋಜಿತ ಪಿ.ಡಿ.ಓ ಗಳು ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಉಡುಪಿ ಜಿ.ಪಂ. ಅವ್ಯವಸ್ಥೆಗೆ ಸಿ.ಇ.ಓ ಅವರ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ. ಜಿಲ್ಲಾ ಪಂಚಾಯತಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು ಇದ್ದಿದ್ದರೆ ಸಿ.ಇ.ಓ ಅವರು ಇಂತ ದರ್ಪ ತೋರಿಸುತ್ತಿರಲಿಲ್ಲ, ಜನ ಪ್ರತಿನಿಧಿಗಳು ಇಲ್ಲದಿರುವುದನ್ನೇ ಬಂಡವಾಳ ಮಾಡಿ ಕೊಂಡಿರುವ ಜಿ.ಪಂ. ಸಿ.ಇ.ಓ ರವರು ಗೂಗಲ್ ನೋಡಿ ಕೊಂಡು ಮತ್ತು ಜಿ.ಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಯೋಜಿತ ಪಿ.ಡಿ.ಓಗಳ ಚಾಡಿ ಮಾತು ಕೇಳಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಜೇಷ್ಟತೆಯಲ್ಲಿ ಹಲವಾರು ಹಿರಿಯ ಪಿ.ಡಿ.ಓಗಳು ಇದ್ದರೂ ಸಹ ಸಿ.ಇ.ಓ ರವರು ಇವರಿಗೆ ಮದ್ಯವರ್ತಿಯಾಗಿ ಕೆಲಸ ಮಾಡುವ ಪಿ.ಡಿ.ಓ ಗಳನ್ನೇ ನಿಯಮ ಬಾಹಿರವಾಗಿ ಸರ್ಕಾರದಿಂದ ಅನುಮೋದನೆ ಪಡೆಯದೇ ನಿಯೋಜಿಸಿ ಕೊಂಡಿರುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ಜಿ.ಪಂ ಆಡಳಿತ ಮಾಡುವುದು ಹೇಗೆಂದು ನನಗೆ ತಿಳಿದಿದೆ, ನಾನೇ ಜಿಲ್ಲಾ ಪಂಚಾಯತ್ ಆಡಳಿತ ನಡೆಸುವವನು, ನನ್ನದೇ ಕೊನೆಯ ತೀರ್ಮಾನ” ಎಂಬ ಸಿ.ಇ.ಓ ರವರ ವರ್ತನೆಯನ್ನು ಸಾರ್ವಜನಿಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ಪಂಚಾಯತ್ ರಾಜ್ ಇಲಾಖೆ ಸಚಿವರಾದ ಶ್ರೀ. ಪ್ರಿಯಾಂಕ ಖರ್ಗೆ ಅವರು ಉಡುಪಿ ಜಿಲ್ಲಾ ಪಂಚಾಯತ್ ನತ್ತ ಮುಖ ಮಾಡದಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಬೇಸರಕ್ಕೆ ಕಾರಣವಾಗಿದೆ. ಜಿಲ್ಲಾ ಪಂಚಾಯತ್ ನಲ್ಲಿ ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಸಹ ಉಡುಪಿ ಲೋಕಾಯುಕ್ತ ಪೋಲೀಸರು ಕುಂಭಕರ್ಣ ನಿದ್ರೆ ಮಾಡುತ್ತಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಜಿಲ್ಲಾ ಪಂಚಾಯತ್ ಅಕ್ರಮಗಳನ್ನು ದಾಖಲೆ ಸಮೇತ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಆರತಿ.ಗಿಳಿಯಾರು.ಉಡುಪಿ